ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್‌ ಸೂಪರ್‌ ಹಿಟ್‌: ಭಾರತಕ್ಕೆ ಅಲ್ಪ ಹಿನ್ನಡೆ

ಇಂಗ್ಲೆಂಡ್ ಎದುರಿನ ಟೆಸ್ಟ್‌
Last Updated 2 ಆಗಸ್ಟ್ 2018, 19:53 IST
ಅಕ್ಷರ ಗಾತ್ರ

ಬರ್ಮಿಂಗ್‌ಹ್ಯಾಮ್: ಇಂಗ್ಲೆಂಡ್ ನೆಲದಲ್ಲಿ ಶತಕ ದಾಖಲಿಸುವ ವಿರಾಟ್ ಕೊಹ್ಲಿಯ ಕನಸು ಗುರುವಾರ ನನಸಾಯಿತು. ಇದರಿಂದಾಗಿ ಪ್ರಥಮ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಭಾರಿ ಮುನ್ನಡೆಯ ಕನಸು ಕಾಣುತ್ತಿದ್ದ ಇಂಗ್ಲೆಂಡ್‌ಗೆ ನಿರಾಸೆಯಾಯಿತು.

ಎಜ್‌ಬಾಸ್ಟನ್ ಅಂಗಳದಲ್ಲಿ ಆತಿಥೇಯ ಬಳಗವು ಮೊದಲು ಬ್ಯಾಟಿಂಗ್ ಮಾಡಿ ಗಳಿಸಿದ್ದ 287 ರನ್‌ಗಳಿಗೆ ಉತ್ತರವಾಗಿ ಭಾರತ ತಂಡವು 76 ಓವರ್‌ಗಳಲ್ಲಿ 274 ರನ್‌ ಗಳಿಸಿತು. 13 ರನ್‌ಗಳ ಅಲ್ಪ ಹಿನ್ನಡೆ ಅನುಭವಿಸಿತು. ಆದರೆ, ಈ ಹಂತಕ್ಕೆ ತಲುಪಿದ ಹಾದಿ ಸುಲಭವಾಗಿರಲಿಲ್ಲ. ಆತಿಥೇಯ ಬೌಲರ್‌ಗಳ ಬೆಂಕಿ ಚೆಂಡುಗಳನ್ನು ಎದುರಿಸುವಲ್ಲಿ ಭಾರತದ ಪ್ರಮುಖ ಬ್ಯಾಟ್ಸ್‌ಮನ್‌ಗಳು ವಿಫಲರಾದರು. ಅದೇ ದಾಳಿಯನ್ನು ದಿಟ್ಟತನದಿಂದ ಎದುರಿಸಿ, ಏಕಾಂಗಿ ಹೋರಾಟ ನಡೆಸಿದ ವಿರಾಟ್ ಕೊಹ್ಲಿ (149; 225 ಎಸೆತ, 22ಬೌಂಡರಿ, 1ಸಿಕ್ಸರ್) ಶತಕ ಬಾರಿಸಿದರು.

ಇಂಗ್ಲೆಂಡ್ ಅಂಗಳದಲ್ಲಿ ಶತಕ ದಾಖಲಿಸಿದ ಭಾರತ ತಂಡದ ಎರಡನೇ ನಾಯಕನೆಂಬ ಹೆಗ್ಗಳಿಕೆಗೆ ಪಾತ್ರರಾದರು. 65ನೇ ಓವರ್‌ನಲ್ಲಿ ಶತಕ ಪೂರೈಸಿದ ಅವರು ತಮ್ಮ ಕೊರಳಲ್ಲಿದ್ದ ಚೈನ್‌ನಲ್ಲಿ ಅಳವಡಿಸಿಕೊಂಡಿರುವ ತಮ್ಮ ‘ಮದುವೆ ಉಂಗುರ’ಕ್ಕೆ ಮುತ್ತು ಕೊಟ್ಟು. ಪತ್ನಿ ಅನುಷ್ಕಾ ಶರ್ಮಾ ಆವರಿಗೆ ಶತಕವನ್ನು ಅರ್ಪಿಸಿದರು.

ವಿರಾಟ್ ಅವರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಇದು 22ನೇ ಶತಕ. ಲಭಿಸಿದ ಎರಡು ಜೀವದಾನಗಳನ್ನು (ಓವರ್: 46.4 ಮತ್ತು 64.5)ಯಶಸ್ಸಿನ ಮೆಟ್ಟಿಲುಗಳನ್ನಾಗಿ ಮಾಡಿಕೊಂಡ ಅವರು ತಂಡಕ್ಕೆ ಆಸರೆಯಾದರು. ಅವರು ಕ್ರೀಸ್‌ಗೆ ಬರುವ ಮುನ್ನ ಮುರಳಿ ವಿಜಯ್, ಕೆ.ಎಲ್. ರಾಹುಲ್ ಪೆವಿಲಿಯನ್‌ಗೆ ಮರಳಿದ್ದರು. ಆಗ ತಂಡವು 13.6 ಓವರ್‌ಗಳಲ್ಲಿ 54 ರನ್‌ ಗಳಿಸಿತ್ತು. ಸ್ಯಾಮ್ ಕರನ್ ಅವರು ಇಬ್ಬರ ವಿಕೆಟ್‌ಗಳನ್ನೂ ಕಬಳಿಸಿದ್ದರು. 16ನೇ ಓವರ್‌ನಲ್ಲಿ ಶಿಖರ್ ಧವನ್‌ಗೂ ಪೆವಿಲಿಯನ್ ದಾರಿ ತೋರಿಸಿದ್ದ ಸ್ಯಾಮ್ ಸಂಭ್ರಮಿಸಿದ್ದರು. ಆದರೆ ವಿರಾಟ್ ಮಾತ್ರ ದಿಟ್ಟವಾಗಿ ಆಡುತ್ತಿದ್ದರು. ಇನ್ನೊಂದಡೆ ಆಡುತ್ತಿದ್ದ ಅಜಿಂಕ್ಯ ರಹಾನೆ (15 ರನ್) ಅವರು ಬೆನ್ ಸ್ಟೋಕ್ಸ್‌ ಹಾಕಿದ 28ನೇ ಓವರ್‌ನಲ್ಲಿ ಔಟಾದ ನಂತರ ಮಧ್ಯಮ ಕ್ರಮಾಂಕದ ಕುಸಿತ ಆರಂಭವಾಯಿತು. ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿದರು. ಹಾರ್ದಿಕ್ ಪಾಂಡ್ಯ, ಆರ್. ಅಶ್ವಿನ್ ಕೂಡ ನಿರೀಕ್ಷೆಯ ಭಾರವನ್ನು ಸಮರ್ಥವಾಗಿ ನಿರ್ವಹಿಸಲಿಲ್ಲ. ಆದರೂ ಕೊಹ್ಲಿಯ ದಿಟ್ಟ ಆಟವನ್ನು ತಡೆಯಲು ಇಂಗ್ಲೆಂಡ್ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ.

ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳೊಂದಿಗೆ ಅಮೂಲ್ಯವಾದ ಜೊತೆಯಾಟವನ್ನು ಕೊಹ್ಲಿ ಆಡಿದರು. ಅದರಲ್ಲೂ ಕೊನೆಯ ವಿಕೆಟ್‌ ಜೊತೆಯಾಟ ವಿಶೇಷವಾಗಿತ್ತು. ವಿರಾಟ್ ಅವರು ಉಮೇಶ್ ಯಾದವ್ ಅವರೊಂದಿಗೆ 57 ರನ್‌ ಸೇರಿಸಿದರು. ಇದರಲ್ಲಿ ಉಮೇಶ್ ಕಾಣಿಕೆ ಕೇವಲ 1 ರನ್. ಆದರೆ, 16 ಎಸೆತಗಳನ್ನು ಎದುರಿಸಿದ ಅವರು ತಮ್ಮ ನಾಯಕನಿಗೆ ಉತ್ತಮ ಬೆಂಬಲ ನೀಡಿದರು.

ಎರಡನೇ ಇನಿಂಗ್ಸ್‌ ಆರಂಭಿಸಿರುವ ಆತಿಥೇಯ ತಂಡವು 3.4 ಓವರ್‌ಗಳಲ್ಲಿ 1 ವಿಕೆಟ್‌ಗೆ 9 ರನ್ ಗಳಿಸಿದೆ. ಆರ್. ಅಶ್ವಿನ್ ಒಂದು ವಿಕೆಟ್ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT