ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ – ಆಸ್ಟ್ರೇಲಿಯಾ ಎರಡನೇ ಟೆಸ್ಟ್‌: ಬಲ ತುಂಬಿದ ವಿರಾಟ್‌, ಅಜಿಂಕ್ಯ ಛಲ

ನಾಲ್ಕು ವಿಕೆಟ್ ಉರುಳಿಸಿದ ವೇಗಿ ಇಶಾಂತ್ ಶರ್ಮಾ; ಮುರಳಿ, ರಾಹುಲ್ ಬ್ಯಾಟಿಂಗ್ ವೈಫಲ್ಯ
Last Updated 15 ಡಿಸೆಂಬರ್ 2018, 18:01 IST
ಅಕ್ಷರ ಗಾತ್ರ

ಪರ್ತ್‌: ನಾಯಕ ವಿರಾಟ್ ಕೊಹ್ಲಿ ಮತ್ತೊಮ್ಮೆ ರಕ್ಷಕನ ಪಾತ್ರದಲ್ಲಿ ಮಿಂಚಿದರು. ಉಪನಾಯಕನ ಜೊತೆಗೂಡಿ ಅವರು ಕಟ್ಟಿದ ಇನಿಂಗ್ಸ್ ಭಾರತ ತಂಡಕ್ಕೆ ಚೇತರಿಗೆ ತುಂಬಿತು.

ಇಲ್ಲಿನ ಆಪ್ಟಸ್ ಅಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ಎದುರಿನ ಎರಡನೇ ಟೆಸ್ಟ್ ಕ್ರಿಕೆಟ್ ಪಂದ್ಯದ ಎರಡನೇ ದಿನ ಕೊಹ್ಲಿ (ಅಜೇಯ 82; 181 ಎಸೆತ, 9 ಬೌಂಡರಿ) ಮತ್ತು ರಹಾನೆ (ಅಜೇಯ 51; 103 ಎ, 1 ಸಿಕ್ಸರ್‌, 6 ಬೌಂ) ಅರ್ಧಶತಕಗಳೊಂದಿಗೆ ಮಿಂಚಿದರು. ಅವರ ಅಮೋಘ ಆಟದ ನೆರವಿನಿಂದ ಭಾರತ ಉತ್ತಮ ಸ್ಥಿತಿಯಲ್ಲಿದೆ.

ಆತಿಥೇಯರನ್ನು 326 ರನ್‌ಗಳಿಗೆ ಆಲೌಟ್ ಮಾಡಿದ ಕೊಹ್ಲಿ ಬಳಗ ದಿನದಾಟದ ಮುಕ್ತಾಯಕ್ಕೆ ಮೂರು ವಿಕೆಟ್‌ಗಳ ನಷ್ಟಕ್ಕೆ 172 ರನ್‌ ಗಳಿಸಿದೆ. ಏಳು ವಿಕೆಟ್‌ಗಳು ಭಾರತ ತಂಡದ ಬಳಿ ಇದ್ದು ಎದುರಾಳಿಗಳ ಮೊದಲ ಇನಿಂಗ್ಸ್ ಮೊತ್ತವನ್ನು ಚುಕ್ತಾಗೊಳಿಸಲು 154 ರನ್‌ ಗಳಿಸಬೇಕಾಗಿದೆ.

ಭಾರತ ತಂಡ ಆರಂಭದಲ್ಲೇ ಸಂಕಷ್ಟಕ್ಕೆ ಈಡಾಗಿತ್ತು. ಮೂರನೇ ಓವರ್‌ನಲ್ಲಿ ಮಿಷೆಲ್ ಸ್ಟಾರ್ಕ್‌ ಎಸೆತದಲ್ಲಿ ಮುರಳಿ ವಿಜಯ್‌ ಬೌಲ್ಡ್ ಆದರು. ಈ ಆಘಾತದಿಂದ ಚೇತರಿಸಿಕೊಳ್ಳುವಷ್ಟರಲ್ಲಿ ಎದುರಾಳಿಗಳು ಮತ್ತೊಂದು ಪೆಟ್ಟು ನೀಡಿದರು. ಆರನೇ ಓವರ್‌ನಲ್ಲಿ ಹ್ಯಾಜಲ್‌ವುಡ್ ಅವರ ಯಾರ್ಕರ್‌ ಎಸೆತವನ್ನು ರಕ್ಷಣಾತ್ಮವಾಗಿ ಆಡಲು ಮುಂದಾದ ಕೆ.ಎಲ್‌.ರಾಹುಲ್‌ ಅವರ ಸ್ಟಂಪ್ ಕೂಡ ಉರುಳಿತು. ಎಂಟು ರನ್‌ಗಳಿಗೆ ಎರಡು ವಿಕೆಟ್‌ ಕಳೆದುಕೊಂಡಿದ್ದ ಸಂದರ್ಭದಲ್ಲಿ ಕ್ರೀಸ್‌ಗೆ ಬಂದ ಕೊಹ್ಲಿ ‘ಗೋಡೆ’ ಖ್ಯಾತಿಯ ಪೂಜಾರ ಅವರೊಂದಿಗೆ 74 ರನ್‌ಗಳ ಜೊತೆಯಾಟವಾಡಿದರು.

ಆದರೆ 39ನೇ ಓವರ್‌ನಲ್ಲಿ ಪೂಜಾರ, ಮಿಷೆಲ್ ಸ್ಟಾರ್ಕ್‌ಗೆ ವಿಕೆಟ್ ಒಪ್ಪಿಸಿದರು. ಲೆಗ್‌ ಸ್ಟಂಪ್‌ನಿಂದ ಹೊರಹೋಗುತ್ತಿದ್ದ ಚೆಂಡನ್ನು ಕೆಣಕಿದ ಪೂಜಾರ ಬೆಲೆ ತೆತ್ತರು. ಚೆಂಡು ಅವರ ಬ್ಯಾಟಿನ ಅಂಚಿಗೆ ಸವರಿ ವಿಕೆಟ್ ಕೀಪರ್‌ ಟಿಮ್ ಪೇನ್‌ ಅವರ ಗವಸಿನೊಳಗೆ ಸೇರಿತು.

ನಾಯಕ–ಉಪನಾಯಕನ ಬ್ಯಾಟಿಂಗ್ ಸೊಗಸು: ಪತನದ ಹಾದಿ ಹಿಡಿದಿದ್ದ ಭಾರತದ ಇನಿಂಗ್ಸ್‌ಗೆ ಕೊಹ್ಲಿ ಮತ್ತು ರಹಾನೆ ಜೀವ ತುಂಬಿದರು. ಮೋಹಕ ಬ್ಯಾಟಿಂಗ್ ಮೂಲಕ ರಂಜಿಸಿದ ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ ಜೊತೆಯಾಟದಲ್ಲಿ 90 ರನ್ ಸೇರಿಸಿದರು.

59 ರನ್‌ಗಳ ಜೊತೆಯಾಟ: ಶುಕ್ರವಾರದ ಮೊತ್ತಕ್ಕೆ 49 ರನ್ ಸೇರಿಸುವಷ್ಟರಲ್ಲಿ ಶನಿವಾರ ಆಸ್ಟ್ರೇಲಿಯಾ ತಂಡ ಆಲೌಟ್ ಆಯಿತು. ಶುಕ್ರವಾರ ಅಜೇಯರಾಗಿದ್ದ ಟಿಮ್ ಪೇನ್ ಮತ್ತು ಪ್ಯಾಟ್‌ ಕಮಿನ್ಸ್‌ ಎಂಟನೇ ವಿಕೆಟ್‌ಗೆ 59 ರನ್‌ಗಳ ಜೊತೆಯಾಟವಾಡಿದರು. ಇವರಿಬ್ಬರ ವಿಕೆಟ್ ಕಬಳಿಸಿದ ನಂತರ ಬಾಲಂಗೋಚಿಗಳು ಸುಲಭವಾಗಿ ಭಾರತದ ಬೌಲರ್‌ಗಳಿಗೆ ಮಣಿದರು.

ವಿರಾಟ್ ಕೊಹ್ಲಿ
ರನ್‌ 82
ಎಸೆತ 181
ಬೌಂಡರಿ 9
ಸ್ಟ್ರೈಕ್ ರೇಟ್‌ 45.3

ಅಜಿಂಕ್ಯ ರಹಾನೆ
ರನ್‌ 51
ಎಸೆತ 103
ಸಿಕ್ಸರ್‌ 1
ಬೌಂಡರಿ 6
ಸ್ಟ್ರೈಕ್ ರೇಟ್‌ 49.51

ವಿರಾಟ್‌ – ಅಜಿಂಕ್ಯ ರಹಾನೆ ಜೊತೆಯಾಟ
90* ರನ್‌ ಕಾಣಿಕೆ
ವಿರಾಟ್‌ 39 (81)–ಅಜಿಂಕ್ಯ 51 (103)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT