ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಕಮಲ ಅರಳಲು ಶ್ರಮಿಸಬೇಕು: ಪ್ರಧಾನಿ ಮೋದಿ

Last Updated 26 ಏಪ್ರಿಲ್ 2018, 6:24 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ಕಮಲ ಅರಳಲು ಕಾರ್ಯಕರ್ತರು ಶ್ರಮಿಸಬೇಕು. ಬೂತ್ ಮಟ್ಟದಲ್ಲಿ ಜನರನ್ನು ಗೆದ್ದರೆ, ಚುನಾವಣಾ ಸಮರ ಜಯಿಸಿದಂತೆ. ರಾಜ್ಯದ ವಿಕಾಸಕ್ಕಾಗಿ ನಿಮ್ಮೊಟ್ಟಿಗೆ ನಾನೂ ಹೆಗಲು ಕೊಡುತ್ತೇನೆ. ಏನೇ ಆದರೂ ಈ ಬಾರಿ ಸ್ಪಷ್ಟ ಬಹುಮತ ಸಿಗಲೇಬೇಕು...’

ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಪಕ್ಷದ ಅಭ್ಯರ್ಥಿಗಳೊಂದಿಗೆ ‘ನಮೋ ಆ್ಯಪ್’ ಮೂಲಕ ವಿಡಿಯೊ ಸಂವಾದ ನಡೆಸಿ ಹೇಳಿದ ಮಾತುಗಳಿವು.

ಕನ್ನಡದಲ್ಲೇ ಮಾತು ಆರಂಭಿಸಿದ ಮೋದಿ: ‘ಕರ್ನಾಟಕದ ಎಲ್ಲ ಭಾಗಗಳಲ್ಲೂ ಕಾರ್ಯನಿರತರಾಗಿರುವ ಕಾರ್ಯಕರ್ತ ಬಂಧುಗಳಿಗೆ ನಮಸ್ಕಾರ. ತಾಂತ್ರಿಕ ಮಾಧ್ಯಮದ ಮೂಲಕ ತಮ್ಮೊಡನೆ ಚರ್ಚೆ ನಡೆಸುವ ಅವಕಾಶ ನನಗೆ ದೊರಕಿದೆ. ಎಲ್ಲರಿಗೂ ಸ್ವಾಗತ’ ಎಂದು ಕನ್ನಡದಲ್ಲೇ ಹೇಳುತ್ತ ಮೋದಿ ಸಂವಾದ ಪ್ರಾರಂಭಿಸಿದರು.

‘ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಸೋಲಿನ ಭಯ ಎದುರಾಗಿದೆ. ಹೀಗಾಗಿಯೇ, ‘ಅತಂತ್ರ ವಿಧಾನಸಭೆ’ ಎಂದು ಹೇಳಿಕೊಂಡು ತಿರುಗಾಡುತ್ತಿದೆ. ಆದರೆ, ರಾಜ್ಯದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ.  2014ರಲ್ಲೂ ಕಾಂಗ್ರೆಸ್ ಇದೇ ರೀತಿ ಹೇಳಿತ್ತು. ಪೂರ್ಣ ಬಹುಮತದೊಂದಿಗೆ ಎನ್‌ಡಿಎ ಅಧಿಕಾರಕ್ಕೆ ಬಂತು. ಆ ಮೂಲಕ ಕಾಂಗ್ರೆಸ್‌ ರಾಜನೀತಿಗೆ ತೆರೆ ಎಳೆಯಿತು’ ಎಂದು ಮೋದಿ ಹೇಳಿದರು.

ನನ್ನನ್ನೂ ಕನ್ನಡಿಗ ಎಂದು ಪರಿಗಣಿಸಿ’: ‘ಕಾರ್ಯಕರ್ತರೇ.. ನನ್ನನ್ನೂ ಕನ್ನಡಿಗ ಎಂದೇ ಪರಿಗಣಿಸಿ. ರಾಜ್ಯದ ವಿಕಾಸಕ್ಕಾಗಿ ನಿಮ್ಮೊಟ್ಟಿಗೆ ನಾನೂ ಹೆಗಲು ಕೊಡುತ್ತೇನೆ. ಚೀನಾ ಪ್ರವಾಸ ಮುಗಿಸಿಕೊಂಡು ರಾಜ್ಯಕ್ಕೆ ಬರುತ್ತೇನೆ. ಅಭಿವೃದ್ಧಿ ಮಂತ್ರ ಹಾಗೂ ಸಂಘಟನಾ ಶಕ್ತಿಯಿಂದ ಜನರ ಮನಸ್ಸನ್ನು ಗೆಲ್ಲೋಣ’ ಎಂದು ಹೇಳಿದರು.

* ‘ಚುನಾವಣೆ ಗೆಲ್ಲಲು ಕಾರ್ಯಕರ್ತರ ಮಂತ್ರ ಏನಾಗಿರಬೇಕು? – ಕಾರ್ಕಳ ಶಾಸಕ ವಿ.ಸುನೀಲ್‌ ಕುಮಾರ್ ಪ್ರಶ್ನೆ

ಮೋದಿ ಉತ್ತರ: ‘ಪುರುಷ ಕಾರ್ಯಕರ್ತರ ಸಂಖ್ಯೆ ಎಷ್ಟಿರುತ್ತದೆಯೋ, ಅಷ್ಟೇ ಸಂಖ್ಯೆಯಲ್ಲಿ ಮಹಿಳೆಯರೂ ಇರಬೇಕು. ಪ್ರತಿಯೊಬ್ಬ ಕಾರ್ಯಕರ್ತ 10 ರಿಂದ 15 ಮನೆಗಳಿಗೆ ಹೋಗಿ, ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ತಿಳಿಸಬೇಕು. ನಾವು ಅಧಿಕಾರಕ್ಕೆ ಬಂದರೆ ಏನು ಮಾಡುತ್ತೇವೆ ಎಂಬುದನ್ನು ‌ಹೇಳಬೇಕು. ರ‍್ಯಾಲಿಗಳಿಂದ ಪಕ್ಷದ ಪರವಾದ ವಾತಾವರಣ ನಿರ್ಮಿಸಬಹುದೇ ಹೊರತು, ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ರಾಜ್ಯದಲ್ಲಿ ಕಮಲ ಅರಳಬೇಕೆಂದರೆ ಕಾರ್ಯಕರ್ತರು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು‌’.

* ‘ರೈತರ ಆತ್ಮಹತ್ಯೆ ತಡೆಯಲು ಏನು ಮಾಡಬೇಕು? – ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ ಪ್ರಶ್ನೆ

ಮೋದಿ ಉತ್ತರ: ‘ರೈತರು ನಮ್ಮ ಆಸ್ತಿ. ಅವರು ಚೆನ್ನಾಗಿದ್ದರೆ, ದೇಶ ಚೆನ್ನಾಗಿರುತ್ತದೆ. ಸರ್ಕಾರದ ಯೋಜನೆಗಳು ಅವರನ್ನು ತಲುಪಿದರೆ ಅನಾಹುತಗಳನ್ನು ತಪ್ಪಿಸಬಹುದು. ಬೆಳೆಗೆ ಕನಿಷ್ಠ ಬೆಲೆ ಸಿಕ್ಕರೆ ಸಾಕು; ಅವರ ಸಮಸ್ಯೆಗಳು ಪರಿಹಾರವಾಗುತ್ತವೆ. ಫಸಲ್ ಬಿಮಾ ಯೋಜನೆ ರೈತರಿಗೆ ನೆರವಾಗುತ್ತಿದೆ. ಆದರೆ, ಇಂಥ ಯೋಜನೆಗಳ ಬಗ್ಗೆ ಅವರಿಗೆ ಜ್ಞಾನವಿಲ್ಲ. ಯೋಜನೆಗಳ ಕುರಿತು ಅರಿವು ಮೂಡಿಸುವ ಕೆಲಸ ಮಾಡಬೇಕು’.

* ‘ನಮಸ್ಕಾರ ಮೋದಿ ಅವರೇ... ಕರ್ನಾಟಕದಿಂದ ಕನ್ನಡದಲ್ಲೇ ಸ್ವಾಗತ ಮಾಡ್ತಿದ್ದೀನಿ’ ಎಂದು ಹೇಳಿ ಮಾತು ಪ್ರಾರಂಭಿಸಿದ ಬಿಜೆಪಿ ಮುಖಂಡ ಸುರೇಶ್‌ ಕುಮಾರ್, ‘ಬೆಂಗಳೂರಿಗೆ ಬ್ರ್ಯಾಂಡ್ ಇಮೇಜ್ ಇದೆ. ಆದರೆ, ಸರಿಯಾದ ಸೌಲಭ್ಯಗಳು ಸಿಗದೆ ನಗರ ಸೌಂದರ್ಯ ಕಳೆದುಕೊಳ್ಳುತ್ತಿದೆ. ಅಪರಾಧ ಪ್ರಮಾಣ ಹೆಚ್ಚಾಗಿದೆ. ಸಂಚಾರ ದಟ್ಟಣೆಯಿಂದ ಜನ ಬೇಸತ್ತಿದ್ದಾರೆ. ಮಳೆ ಅನಾಹುತದಿಂದ ಜೀವ ಹಾನಿ ಸಂಭವಿಸುತ್ತಿದೆ. ನೀವು ಗುಜರಾತನ್ನು ಮಾದರಿ ರಾಜ್ಯ ಮಾಡಿದವರು. ಬೆಂಗಳೂರನ್ನೂ ಯಾವ ರೀತಿ ಮಾದರಿ ನಗರವನ್ನಾಗಿ ಮಾಡಬಹುದು ಎಂಬ ಬಗ್ಗೆ ಸಲಹೆ ಕೊಡಿ’ ಎಂದರು.

ಅದಕ್ಕೆ ಉತ್ತರಿಸಿದ ಮೋದಿ, ‘ಹಿಂದೆ ನಾನು ಕಾರ್ಯಕರ್ತನಾಗಿ ದುಡಿಯುತ್ತಿದ್ದಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದೆ. ನಾನು ಅಲ್ಲಿನ ದೌರ್ಭಾಗ್ಯದ ದಿನಗಳನ್ನು ನೋಡಿದ್ದೇನೆ. ಬೆಂಗಳೂರು ಅಂದರೆ, ಬರೀ ಕರ್ನಾಟಕ ಅಲ್ಲ. ಅದು ಹಿಂದೂಸ್ತಾನದ ಪ್ರತಿನಿಧಿ. ಇಡೀ ವಿಶ್ವದ ಕಣ್ಣು ಬೆಂಗಳೂರಿನ ಮೇಲಿದೆ. ಇಂಥ ಮಹಾನಗರದ ಅಭಿವೃದ್ಧಿ ನಮ್ಮ ಮಂತ್ರವಾಗಬೇಕು.’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT