ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್–ಶ್ರೇಯಸ್‌ ಆಟಕ್ಕೆ ತಲೆಬಾಗಿದ ‘ಡಕ್ವರ್ಥ್–ಲೂಯಿಸ್’

ವೆಸ್ಟ್ ಇಂಡೀಸ್ ಎದುರಿನ ಏಕದಿನ ಸರಣಿಯನ್ನು 2–0ಯಿಂದ ಗೆದ್ದ ಭಾರತ
Last Updated 15 ಆಗಸ್ಟ್ 2019, 14:25 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್: ಬುಧವಾರ ತಡರಾತ್ರಿ ಆತಿಥೇಯ ತಂಡದ ವಿಕೆಟ್‌ಕೀಪರ್ ಶಾಯ್ ಹೋಪ್ ಕ್ಯಾಚ್ ಕೈಚೆಲ್ಲಿದಾಗಲೇ ಸರಣಿ ಸಮಬಲ ಮಾಡಿಕೊಳ್ಳುವ ವಿಂಡೀಸ್ ಕನಸು ಕೂಡ ಮಣ್ಣುಪಾಲಾಯಿತು. ಏಕೆಂದರೆ, ಅವರು ಕೈಬಿಟ್ಟ ಕ್ಯಾಚ್‌ ವಿರಾಟ್ ಕೊಹ್ಲಿಯದ್ದು!

ಈ ಜೀವದಾನದ ಲಾಭ ಪಡೆದ ವಿರಾಟ್ 43ನೇ ಶತಕ ಗಳಿಸಿದರು. ಅದರೊಂದಿಗೆ ಪಂದ್ಯದಲ್ಲಿ ಭಾರತ ತಂಡಕ್ಕೆ 6 ವಿಕೆಟ್‌ಗಳ ಜಯದ ಕಾಣಿಕೆ ನೀಡಿದರು. ಇದರಿಂದಾಗಿ ತಂಡವು 2–0ಯಿಂದ ಸರಣಿ ಗೆದ್ದು ಬೀಗಿತು. ಆದರೆ ಭಾರತಕ್ಕೆ ಜಯದ ಹಾದಿ ಸುಲಭವಾಗಿರಲಿಲ್ಲ. ಏಕೆಂದರೆ ಪಂದ್ಯದ ಬಹುಪಾಲು ಸಮಯದಲ್ಲಿ ಮಳೆಯದ್ದೇ ಆಟ ನಡೆದಿತ್ತು. ಅದರಿಂದಾಗಿ ಡಕ್ವರ್ಥ್ ಲೂಯಿಸ್ ನಿಯಮದ ಅನ್ವಯ ಭಾರತಕ್ಕೆ ಕಠಿಣ ಗುರಿ ಲಭಿಸಿತ್ತು.

ಕ್ರಿಸ್ ಗೇಲ್ ಮತ್ತು ಎವಿನ್ ಲೂಯಿಸ್ ಅವರ ಅಬ್ಬರದ ಆರಂಭದ ಬಲದಿಂದ ವಿಂಡೀಸ್ 35 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 240 ರನ್ ಗಳಿಸಿತು. ಆದರೆ ನಿಯಮದ ಪ್ರಕಾರ ಭಾರತಕ್ಕೆ 35 ಓವರ್‌ಗಳಲ್ಲಿ 255 ರನ್‌ಗಳ ಗುರಿ ನೀಡಲಾಯಿತು. ಆದರೆ ವಿರಾಟ್ ಶತಕ ಮತ್ತು ಶ್ರೇಯಸ್ ಅರ್ಧಶತಕಗಳ ಭರಾಟೆಯಿಂದಾಗಿ ಭಾರತವು ಗೆಲುವಿನ ಗುರಿ ಮುಟ್ಟಿದಾಗ ಇನ್ನೂ 15 ಎಸೆತಗಳು ಬಾಕಿ ಇದ್ದವು!

ಇನಿಂಗ್ಸ್‌ನ ಮೂರನೇ ಓವರ್‌ನಲ್ಲಿ ರೋಹಿತ್ ಶರ್ಮಾ ರನ್‌ಔಟ್ ಆದರು. ಶಿಖರ್ ಧವನ್ ಲಯಕ್ಕೆ ಮರಳಲು ಪರದಾಡುತ್ತಿದ್ದರು. ಕ್ರೀಸ್‌ಗೆ ಬಂದ ವಿರಾಟ್ ಆರನೇ ಓವರ್‌ನಲ್ಲಿ ಕೀಮೊ ಪಾಲ್ ಎಸೆತವನ್ನು ಫ್ಲಿಕ್ ಮಾಡುವ ಭರದಲ್ಲಿ ಎಡವಿದರು. ಬ್ಯಾಟ್‌ ಅಂಚು ಸವರಿದ ಚೆಂಡು ಹಿಂದೆ ಹಾರಿತು. ಆದರೆ, ಹೋಪ್ ವಿಫಲರಾದರು. ಇದರಿಂದಗಿ ವಿರಾಟ್ ಮತ್ತು ಶಿಖರ್ 65 ರನ್‌ಗಳನ್ನು ಸೇರಿಸಿದರು. 13ನೇ ಓವರ್‌ನಲ್ಲಿ ಶಿಖರ್ ವಿಕೆಟ್ ಗಳಿಸಿದ ಫ್ಯಾಬಿಯಾನ್ ಅಲೆನ್ ಜೊತೆಯಾಟವನ್ನು ಮುರಿದರು. ರಿಷಭ್ ಪಂತ್ ತಾವೆದುರಿಸಿದ ಮೊದಲ ಎಸೆತದಲ್ಲಿಯೇ ಅಲೆನ್‌ ವಿಕೆಟ್ ಒಪ್ಪಿಸಿದರು.

ಈ ಹಂತದಲ್ಲಿ ವಿರಾಟ್ ಜೊತೆಗೂಡಿದ ಶ್ರೇಯಸ್ ಆಯ್ಯರ್ (65; 41ಎಸೆತ, 3ಬೌಂಡರಿ, 5ಸಿಕ್ಸರ್) ಮತ್ತೊಂದು ಅಮೋಘ ಅರ್ಧಶತಕ ದಾಖಲಿಸಿದರು. ಹೋದ ಪಂದ್ಯದಲ್ಲಿಯೂ ಅವರು ಅರ್ಧಶತಕ ಗಳಿಸಿದ್ದರು. ಇಬ್ಬರ ಅಬ್ಬರಕ್ಕೆ ವಿಂಡೀಸ್ ಬೌಲರ್‌ಗಳು ದಿಕ್ಕು ತಪ್ಪಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 120 ರನ್‌ಗಳನ್ನು ಪೇರಿಸಿದರು. ಇದರಿಂದಾಗಿ ಜಯದ ಹಾದಿ ಸುಲಭವಾಯಿತು.

ವಿಂಡೀಸ್ ಎದುರಿನ ಎರಡನೇ ಪಂದ್ಯದಲ್ಲಿ ಶತಕ ಬಾರಿಸಿದ್ದ ವಿರಾಟ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್‌ ಸೊಬಗನ್ನು ಉಣಬಡಿಸಿದರು. ಒಟ್ಟು 14 ಬೌಂಡರಿಗಳನ್ನು ಬಾರಿಸಿದರು. 99 ಎಸೆತಗಳನ್ನು ಎದುರಿಸಿ 114 ರನ್‌ ಗಳಿಸಿ ಅಜೇಯರಾಗುಳಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 43ನೇ ಶತಕ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿ ಹತ್ತು ವರ್ಷಗಳಲ್ಲಿ 20 ಸಾವಿರ (ಮೂರು ಮಾದರಿ ಸೇರಿ) ರನ್‌ಗಳನ್ನು ಗಳಿಸಿದ ದಾಖಲೆಯನ್ನೂ ಬರೆದರು.

ಸಂಕ್ಷಿಪ್ತ ಸ್ಕೋರು:ವೆಸ್ಟ್ ಇಂಡೀಸ್: 35 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 240 (ಕ್ರಿಸ್ ಗೇಲ್ 72, ಎವಿನ್ ಲೂಯಿಸ್ 43, ಶಾಯ್ ಹೋಪ್ 24, ಶಿಮ್ರೊನ್ ಹೆಟ್ಮೆಯರ್ 25, ನಿಕೊಲಸ್ ಪೂರನ್ 30, ಜೇಸನ್ ಹೋಲ್ಡರ್ 14, ಕಾರ್ಲೋಸ್ ಬ್ರಾಥ್‌ವೇಟ್ 16, ಮೊಹಮ್ಮದ್ ಶಮಿ 50ಕ್ಕೆ2, ಖಲೀಲ್ ಅಹಮದ್ 58ಕ್ಕೆ3, ಯಜುವೇಂದ್ರ ಚಾಹಲ್ 32ಕ್ಕೆ1, ರವೀಂದ್ರ ಜಡೇಜ 26ಕ್ಕೆ1) ಭಾರತ: 32.3 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 256 (ರೋಹಿತ್ ಶರ್ಮಾ 10, ಶಿಖರ್ ಧವನ್ 36, ವಿರಾಟ್ ಕೊಹ್ಲಿ ಔಟಾಗದೆ 114, ಶ್ರೇಯಸ್ ಅಯ್ಯರ್ 65, ಕೇದಾರ್ ಜಾಧವ್ ಔಟಾಗದೆ 19, ಕೆಮರ್ ರೋಚ್ 53ಕ್ಕೆ1, ಫ್ಯಾಬಿಯನ್ ಅಲೆನ್ 40ಕ್ಕೆ2) ಫಲಿತಾಂಶ: ಭಾರತಕ್ಕೆ 6 ವಿಕೆಟ್‌ಗಳಿಂದ ಜಯ ಮತ್ತು ಸರಣಿಯಲ್ಲಿ 2–0 ಗೆಲುವು. ಪಂದ್ಯ ಮತ್ತು ಸರಣಿಶ್ರೇಷ್ಠ: ವಿರಾಟ್ ಕೊಹ್ಲಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT