ಸೋಮವಾರ, ಏಪ್ರಿಲ್ 6, 2020
19 °C

ಕೊಹ್ಲಿ ಭಾರತ ಕ್ರಿಕೆಟ್ ಪಾಲಿನ ದುರದೃಷ್ಟ; ಟೀಂ ಇಂಡಿಯಾ ನಾಯಕನ ವಿರುದ್ಧ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಮಾಜಿ ಸ್ಫೋಟಕ ಬ್ಯಾಟ್ಸ್‌ಮನ್‌ ವೀರೇಂದ್ರ ಸೆಹ್ವಾಗ್‌ ಅವರು ದೇಶದ ಕ್ರಿಕೆಟ್‌ ಪಾಲಿಗೆ ದುರದೃಷ್ಟ ತರುವ ವ್ಯಕ್ತಿಗಳಾಗಿದ್ದು, ಈ ಇಬ್ಬರೂ ಐಸಿಸಿ ಟೂರ್ನಿಗಳಲ್ಲಿ ಟೀಂ ಇಂಡಿಯಾಕ್ಕೆ ಶುಭ ಹಾರೈಸಬಾರದು ಎಂಬ ಅಭಿಯಾನವೊಂದು ಆರಂಭವಾಗಿದೆ.

ಅಭಯ್‌ ಟಾಕೂರ್‌ ಎನ್ನುವವರು Change.org_india ಹೆಸರಿನ ತಾಣದಲ್ಲಿ ಸಹಿ ಅಭಿಯಾನ ಆರಂಭಿಸಿದ್ದಾರೆ. ಆ ಮೂಲಕ, ಒಂದು ವೇಳೆ ಕೊಹ್ಲಿ ಮತ್ತು ಸೆಹ್ವಾಗ್‌ ಸಾಮಾಜಿಕ ತಾಣಗಳಲ್ಲಿ ಅಭಿನಂದನೆಯ ಸಂದೇಶಗಳನ್ನು ಹರಿಬಿಟ್ಟರೆ, ಅವರನ್ನು ನಿರ್ಬಂಧಿಸುವಂತೆ ಮನವಿ ಮಾಡಿದ್ದಾರೆ.

ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ಸೋಲು ಕಂಡ ಬಳಿಕ ಈ ಅಭಿಯಾನ ಆರಂಭಿಸಲಾಗಿದ್ದು, ಒಂದು ಸಾವಿರ ಜನರಿಂದ ಸಹಿ ಸಂಗ್ರಹಿಸುವ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೇ 770 ಜನರು ಸಹಿ ಮಾಡಿದ್ದಾರೆ.

ಟೂರ್ನಿಯುದ್ದಕ್ಕೂ ಅಜೇಯ ಜಯದ ಓಟ ಮುಂದುವರಿಸಿದ್ದ ಭಾರತ, ಫೈನಲ್‌ನಲ್ಲಿ ಆಸಿಸ್‌ ವಿರುದ್ಧ 85 ರನ್‌ಗಳ ಅಂತರದಿಂದ ಮುಗ್ಗರಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ್ದ ಆಸಿಸ್‌, 185 ರನ್‌ ಪೇರಿಸಿತ್ತು. ಈ ಮೊತ್ತವನ್ನು ಬೆನ್ನಟ್ಟಿದ ಟೀಂ ಇಂಡಿಯಾ ಕೇವಲ 99 ರನ್‌ಗಳಿಗೆ ಆಲೌಟ್‌ ಆಗಿತ್ತು.

ಲೀಗ್ ಹಂತದಲ್ಲಿ ಆಸ್ಟ್ರೇಲಿಯಾ ಎದುರು ಭಾರತ 17 ರನ್‌ ಅಂತರದಿಂದ ಗೆಲುವು ಸಾಧಿಸಿತ್ತು ಎಂಬುದು ವಿಶೇಷ.

ಅಭಿಯಾನ ಸಂಬಂಧ Change.org_india  ತಾಣದಲ್ಲಿ, ‘ ವಿರಾಟ್‌ ಕೊಹ್ಲಿ ಮತ್ತು ಸೆಹ್ವಾಗ್‌, ಐಸಿಸಿ ಟೂರ್ನಿಗಳ ಸಂದರ್ಭದಲ್ಲಿ, ಅದರಲ್ಲೂ ಸೆಮಿಫೈನಲ್‌ ಮತ್ತು ಫೈನಲ್‌ ಪಂದ್ಯಗಳ ವೇಳೆ ಭಾರತ ತಂಡಕ್ಕೆ ಶುಭಕೋರುವುದನ್ನು ನಿಲ್ಲಿಸಬೇಕು. ಈ ಇಬ್ಬರೂ ನಮ್ಮ ಗೆಲುವುಗಳ ಪಾಲಿಗೆ ದುರದೃಷ್ಟದ ವ್ಯಕ್ತಿಗಳು. ಒಂದು ವೇಳೆ ಅವರು ಶುಭಕೋರುವುದನ್ನು ನಿಲ್ಲಿಸದಿದ್ದರೆ, ಅವರ ಖಾತೆಗಳನ್ನು ನಿರ್ಬಂಧಿಸಿ’ ಎಂದು ಪ್ರಕಟಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿರುವ ಶಕ್ತಿ ದಯಾಳನ್‌ ಎನ್ನುವವರು, ‘ಈ ವ್ಯಕ್ತಿ (ಕೊಹ್ಲಿ) ಸಾಕಷ್ಟು ನಕಾರಾತ್ಮಕತೆಯನ್ನು ಹೊಂದಿದ್ದಾರೆ’ ಎಂದು ಕಾಮೆಂಟ್ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ನಡೆದ ಮಹಿಳಾ ವಿಶ್ವಕಪ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಸೆಣಸಬೇಕಿದ್ದ ಸೆಮಿಫೈನಲ್‌ ಪಂದ್ಯವು ಮಳೆಯಿಂದಾಗಿ ರದ್ದಾಗಿತ್ತು. ಆದರೆ, ಗುಂಪು ಹಂತದಲ್ಲಿ ಹೆಚ್ಚು ಅಂಕಗಳನ್ನು ಹೊಂದಿದ್ದರಿಂದಾಗಿ ಭಾರತ ಫೈನಲ್‌ಗೆ ಪ್ರವೇಶ ಪಡೆದಿತ್ತು. ಅದಾದ ನಂತರ ಕೊಹ್ಲಿ ಮತ್ತು ಸೆಹ್ವಾಗ್‌ ಮಹಿಳಾ ತಂಡಕ್ಕೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿ ಶುಭಕೋರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು