ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND VS WI| ಭಾರತಕ್ಕೆ ಸರಣಿಯ ‘ಫೈನಲ್’ ಜಯಿಸುವ ಛಲ

ಟ್ವೆಂಟಿ–20 ಕ್ರಿಕೆಟ್: ಭಾರತ–ವೆಸ್ಟ್ ಇಂಡೀಸ್ ನಡುವಣ ಮೂರನೇ ಪಂದ್ಯ ಇಂದು
Last Updated 10 ಡಿಸೆಂಬರ್ 2019, 20:00 IST
ಅಕ್ಷರ ಗಾತ್ರ

ಮುಂಬೈ: ‘ಬ್ಯಾಟ್ಸ್‌ಮನ್‌ ಗಳು ಎಷ್ಟೇ ಗಳಿಸಿದ ಮೊತ್ತವನ್ನು ಬೌಲರ್‌ ಗಳು ರಕ್ಷಿಸಿಕೊಳ್ಳಬೇಕಾದರೆ ಉತ್ತಮ ಫೀಲ್ಡಿಂಗ್ ಬೇಕು. ಕ್ಯಾಚ್‌ಗಳನ್ನು ಹಿಡಿ ತಕ್ಕೆ ಪಡೆಯುವ ಚುರುಕುತನ ಬೇಕು’–

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರ ಕಿಡಿನುಡಿಗಳು ಇವು. ವಾಂಖೆಡೆ ಕ್ರೀಡಾಂಗಣದಲ್ಲಿ ಬುಧವಾರ ನಡೆಯಲಿರುವ ವೆಸ್ಟ್ ಇಂಡೀಸ್ ವಿರು ದ್ಧದ ಟ್ವೆಂಟಿ–20 ಸರಣಿಯ ಮೂರನೇ ಮತ್ತು ನಿರ್ಣಾಯಕ ಪಂದ್ಯದಲ್ಲಿಯೂ ಫೀಲ್ಡರ್‌ಗಳು ಕ್ಯಾಚ್‌ಗಳನ್ನು ಕೈಚೆಲ್ಲಿದರೆ ಸರಣಿ ಸೋಲುವುದು ಖಚಿತ.

ತಿರುವನಂತಪುರದಲ್ಲಿ ನಡೆದಿದ್ದ ಎರಡನೇ ಪಂದ್ಯದಲ್ಲಿ ಭುವನೇಶ್ವರ್ ಕುಮಾರ್ ಅವರ ಒಂದೇ ಓವರ್‌ನಲ್ಲಿ ಲೆಂಡ್ಲ್ ಸಿಮನ್ಸ್‌ ಮತ್ತು ಎವಿನ್ ಲೂಯಿಸ್ ಅವರಿಗೆ ಫೀಲ್ಡರ್‌ಗಳು ‘ಜೀವ ದಾನ’ ಕೊಟ್ಟಿದ್ದರು. ಅದು ವಿರಾಟ್ ಪಡೆಯ ಸೋಲಿಗೆ ಕಾರಣವಾಗಿತ್ತು. ಅದರಿಂದಾಗಿ ಸರಣಿ 1–1ರಿಂದ ಸಮ ಬಲವಾಗಿತ್ತು. ಹೈದರಾಬಾದ್‌ನಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿಯೂ ಭಾರತದ ಫೀಲ್ಡಿಂಗ್ ಉತ್ತಮ
ವಾಗಿರಲಿಲ್ಲ. ‌

ಆ ಎರಡು ಕ್ಯಾಚ್‌ಗಳಲ್ಲಿ ಒಂದನ್ನು ಕೈಚೆಲ್ಲಿದ್ದ ರಿಷಭ್ ಪಂತ್ ಅವರಿಗೆ ಮುಂಬೈನಲ್ಲಿ ಬಹುಶಃ ‘ಬೆಂಚ್’ ಸಿಕ್ಕರೂ ಅಚ್ಚರಿಯೇನಿಲ್ಲ. ಅವರು ಬ್ಯಾಟಿಂಗ್‌ನಲ್ಲಿಯೂ ಕೂಡ ಲಯಲದಲ್ಲಿಲ್ಲ. ಕಳೆದ ಆರು ಪಂದ್ಯಗಳಲ್ಲಿ (ಔಟಾಗದೆ 33, 18, 6,27,19, 4) ರನ್‌ಗಳು ಹರಿದಿಲ್ಲ. ಅದರಿಂದ ಕೇರಳದ ಸಂಜು ಸ್ಯಾಮ್ಸನ್‌ಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ಮೊದಲ ಪಂದ್ಯದಲ್ಲಿ ಮಿಂಚಿದ್ದ ವಿರಾಟ್ ಮತ್ತು ರಾಹುಲ್ ನಂತರದ ಪಂದ್ಯದಲ್ಲಿ ರನ್‌ಗಳನ್ನು ಪೇರಿಸಲಿಲ್ಲ. ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಆದರೆ, ‘ಮುಂಬೈ’ ಹುಡುಗ ಶಿವಂ ದುಬೆ ತಮಗೆ ಕ್ರಮಾಂಕದಲ್ಲಿ ಲಭಿಸಿದ ಬಡ್ತಿಯನ್ನು ಸಮರ್ಥಿಸಿಕೊಂಡಿದ್ದರು. ಚುಟುಕು ಕ್ರಿಕೆಟ್‌ನಲ್ಲಿ ಅರ್ಧಶತಕ ಹೊಡೆದಿದ್ದ ಆರಡಿ ಬ್ಯಾಟ್ಸ್‌ಮನ್ ತಮ್ಮ ತವರಿನಂಗಳದಲ್ಲಿ ಮಿಂಚುವ ವಿಶ್ವಾಸದಲ್ಲಿದ್ದಾರೆ.

ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ ಕೂಡ ನಿರೀಕ್ಷಿತ ಆಟವಾಡಿಲ್ಲ. ಆದ್ದರಿಂದ ಕನ್ನಡಿಗ ಮನೀಷ್ ಪಾಂಡೆ ಕಣಕ್ಕಿಳಿಯುವ ಸಾಧ್ಯತೆ ದಟ್ಟವಾಗಿದೆ. ವಾಂಖೆಡೆಯಲ್ಲಿ ಮಂಗಳವಾರ ಅವರು ಬಹಳ ಹೊತ್ತು ಅಭ್ಯಾಸ ಕೂಡ ನಡೆಸಿದರು. ವಿಜಯ್ ಹಜಾರೆ ಮತ್ತು ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಗಳಲ್ಲಿ ಅವರ ನಾಯಕತ್ವದ ಕರ್ನಾಟಕ ತಂಡವು ಚಾಂಪಿಯನ್ ಆಗಿತ್ತು. ಅವರೂ ಅಮೋಘ ಬ್ಯಾಟಿಂಗ್ ಮಾಡಿದ್ದ್ರರು.

ಬೌಲಿಂಗ್‌ನಲ್ಲಿಯೂ ಕೆಲವು ಬದಲಾವಣೆಗಳಿಗೆ ಒತ್ತು ಕೊಡುವ ನಿರೀಕ್ಷೆ ಇದೆ. ದುಬಾರಿಯಾಗಿರುವ ದೀಪಕ್ ಚಾಹರ್ ಬದಲು ಅನುಭವಿ ಮೊಹಮ್ಮದ್ ಶಮಿಗೆ ಅವಕಾಶ ಸಿಗಬಹುದು. ಜಸ್‌ಪ್ರೀತ್ ಬೂಮ್ರಾ ಅವರಿಲ್ಲದ ಕಾರಣ ‘ಡೆತ್‌ ಓವರ್‌’ಗಳು ದುಬಾರಿಯಾಗುತ್ತಿವೆ. ಆದಕ್ಕೆ ಶಮಿ, ಪರಿಹಾರ ನೀಡುವ ವಿಶ್ವಾಸವಿದೆ.

ಯಾವುದೇ ಸಂದರ್ಭದಲ್ಲಿಯೂ ಲವಲವಿಕೆ ಮತ್ತು ಚೇಷ್ಟೆಗಳ ಮೂಲಕ ಗಮನ ಸೆಳೆಯುವ ವಿಂಡೀಸ್ ತಂಡದ ಆಟಗಾರರ ಆತ್ಮವಿಶ್ವಾಸ ಈಗ ದುಪ್ಪಟ್ಟಾಗಿದೆ. ಸರಣಿ ಜಯದ ಕನಸು ಮೂಡಿದೆ. ಮೊದಲ ಪಂದ್ಯದಲ್ಲಿ ಕೊಹ್ಲಿಯನ್ನು ಕೆಣಕಿ ದಂಡ ತೆತ್ತಿದ್ದ ಕೆರಿಬಿಯನ್ ಬೌಲರ್‌ಗಳು, ಎರಡನೇ ಪಂದ್ಯದಲ್ಲಿ ಆ ತಪ್ಪು ಮಾಡಲಿಲ್ಲ. ಆದರೆ, ವೈಡ್ ಮತ್ತು ನೋಬಾಲ್‌ಗಳ ಮೂಲಕ ಹೆಚ್ಚು ರನ್‌ಗಳನ್ನು ಕೊಡುತ್ತಿದ್ದಾರೆ.

ಮೊದಲ ಎಂಟು ಕ್ರಮಾಂಕದ ಬ್ಯಾಟ್ಸ್‌ಮನ್‌ಗಳೂ ರನ್‌ ಗಳಿಸುವ ಸಮರ್ಥರಾಗಿದ್ದಾರೆ. ಆದರೆ ವಾಂಖೆಡೆ ಪಿಚ್‌ನಲ್ಲಿ ಯಾರು ಮೊದಲು ಬ್ಯಾಟಿಂಗ್ ಮಾಡುತ್ತಾರೆ ಎನ್ನುವುದೇ ಮುಖ್ಯ ಪ್ರಶ್ನೆ. ಆದ್ದರಿಂದ ಟಾಸ್ ಗೆಲುವು ಕೂಡ ಪ್ರಮುಖವಾಗಲಿದೆ.

ಪಂದ್ಯ ಆರಂಭ: ರಾತ್ರಿ 7

ನೇರಪ್ರಸಾರ: ಸ್ಟಾರ್ ನೆಟ್‌ವರ್ಕ್.

ಮನೀಷ್ ಪಾಂಡೆಗೆ ಕಣಕ್ಕಿಳಿ ಯುವ ಅವಕಾಶ ಸಾಧ್ಯತೆ

ಮುಂಬೈ ಪಂದ್ಯಕ್ಕೆ ಫ್ಯಾಬಿಯನ್ ಅಲೆನ್ ಅಲಭ್ಯ

ಸರಣಿಯು 1–1ಯಿಂದ ಸಮಬಲವಾಗಿದೆ

***

ಮುಂಬೈ ಇಂಡಿಯನ್ಸ್‌ಗೆ ಆಡುವ ಕೀರನ್‌ ಪೊಲಾರ್ಡ್‌ಗೆ ವಾಂಖೆಡೆ ಬಗ್ಗೆ ಚೆನ್ನಾಗಿ ಗೊತ್ತಿದೆ. ಇದು ನಮ್ಮ ತಂಡಕ್ಕೆ ನೆರವಾಗಲಿದ್ದು, ಸರಣಿ ಜಯಿಸುವ ಅವಕಾಶ ನಮಗಿದೆ.
– ಫಿಲ್ ಸಿಮನ್ಸ್, ವಿಂಡೀಸ್‌ ಕೋಚ್

***

ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಬಹಳಷ್ಟು ಸಮಯ ಇದೆ. ಆದರೆ ಈಗ ನಮ್ಮ ಗಮನ ಇರುವುದು ಆಡುವ ಸರಣಿಗಳನ್ನು ಗೆಲ್ಲುವುದರ ಮೇಲೆ ಮಾತ್ರ. –ರೋಹಿತ್ – ಶರ್ಮಾ, ಭಾರತದ ಆಟಗಾರ

***

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಕೆ.ಎಲ್. ರಾಹುಲ್. ರಿಷಭ್ ಪಂತ್, ಮನೀಷ್ ಪಾಂಡೆ, ಶ್ರೇಯಸ್ ಅಯ್ಯರ್, ಶಿವಂ ದುಬೆ, ರವೀಂದ್ರ ಜಡೇಜ, ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹರ್, ಕುಲದೀಪ್ ಯಾದವ್, ದೀಪಕ್ ಚಾಹರ್, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ಸಂಜು ಸ್ಯಾಮ್ಸನ್.

ವೆಸ್ಟ್ ಇಂಡೀಸ್: ಕೀರನ್ ಪೊಲಾರ್ಡ್ (ನಾಯಕ), ಬ್ರೆಂಡನ್ ಕಿಂಗ್, ದಿನೇಶ್ ರಾಮ್ದಿನ್, ಶೆಲ್ಡನ್ ಕಾಟ್ರೆಲ್, ಎವಿನ್ ಲೂಯಿಸ್, ಶೆರ್ಫೆನ್ ರುದರ್‌ಫೋರ್ಡ್, ಶಿಮ್ರೊನ್ ಹೆಟ್ಮೆಯರ್, ಖಾರಿ ಪೀಯರ್, ಲೆಂಡ್ಲ್ ಸಿಮನ್ಸ್, ಜೇಸನ್ ಹೋಲ್ಡರ್, ಹೇಡನ್ ವಾಲ್ಶ್ (ಜೂನಿಯರ್), ಕೀಮೊ ಪಾಲ್, ಕೆಸ್ರಿಕ್ ವಿಲಿಯಮ್ಸ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT