ಗುರುವಾರ , ಆಗಸ್ಟ್ 11, 2022
21 °C

ಟೀಂ ಇಂಡಿಯಾ ನಾಯಕತ್ವ ಬದಲಾವಣೆ ಬಗ್ಗೆ ಯೋಚಿಸುವ ಅಗತ್ಯವಿಲ್ಲ: ಲಕ್ಷ್ಮಣ್‌

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ನವದೆಹಲಿ: ನಿಗದಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಭಾರತ ಕ್ರಿಕೆಟ್‌ ತಂಡದ ನಾಯಕತ್ವವನ್ನು ವಿರಾಟ್‌ ಕೊಹ್ಲಿ ಅವರ ಬದಲು ರೋಹಿತ್‌ ಶರ್ಮಾಗೆ ವಹಿಸಬೇಕು ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿವೆ. ಆದರೆ, ಈ ಬಗ್ಗೆ ಯೋಚಿಸುವ ಅಗತ್ಯವಿಲ್ಲ ಎಂದು ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅವರು ಅಭಿಪ್ರಾಯಪಟ್ಟಿದ್ದಾರೆ.

ಐಪಿಎಲ್‌ನಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಮುಂಬೈ ಇಂಡಿಯನ್ಸ್‌ ತಂಡ ಐದನೇ ಬಾರಿಗೆ ಪ್ರಶಸ್ತಿ ಜಯಿಸಿದ ಬಳಿಕ ಕೆಲ ಕ್ರಿಕೆಟ್‌ ಪಂಡಿತರು ಹಾಗೂ ಅಭಿಮಾನಿಗಳು ನಾಯಕತ್ವ ಬದಲಾವಣೆ ವಿಚಾರವನ್ನು ಪ್ರಸ್ತಾಪಿಸಿದ್ದರು. ಈ ಬಗ್ಗೆ ಮಾತನಾಡಿರುವ ಲಕ್ಷ್ಮಣ್‌, ನಿಗದಿತ ಓವರ್‌ಗಳ ಟೂರ್ನಿಯಲ್ಲಿ ಕೊಹ್ಲಿ ಭಾರತ ತಂಡವನ್ನು ತುಂಬಾ ಚೆನ್ನಾಗಿ ಮುನ್ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಬದಲಾವಣೆಯನ್ನು ಮಾಡುವ ಅಗತ್ಯವಿಲ್ಲ ಎಂದಿದ್ದಾರೆ.

ವಿಜಯ್‌ ಲೋಕಪಲ್ಲಿ ಮತ್ತು ಜಿ.ಕೃಷ್ಣ ಅವರು ಬರೆದಿರುವ ‘ದಿ ಹಿಟ್‌ಮ್ಯಾನ್‌: ದಿ ರೋಹಿತ್‌ ಶರ್ಮಾ ಸ್ಟೋರಿ’ ಪುಸ್ತಕವನ್ನು ವರ್ಚುವಲ್‌ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿ ಮಾತನಾಡಿದ ಲಕ್ಷ್ಮಣ್‌, ‘ಅವರು (ರೋಹಿತ್‌) ಅತ್ಯುತ್ತಮ ನಾಯಕ ಎಂಬುದರಲ್ಲಿ ಅನುಮಾನವೇ ಇಲ್ಲ. ವಿರಾಟ್‌ ಅನುಪಸ್ಥಿತಿಯಲ್ಲಿ ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಒಂದು ಪ್ರಾಂಚೈಸ್‌ಗೆ ಐದು ಬಾರಿ ಪ್ರಶಸ್ತಿ ಗೆದ್ದುಕೊಡುವುದು ಸುಲಭದ ವಿಚಾರವಲ್ಲ. ಅವರು ತಂಡವನ್ನು (ಮುಂಬೈ) ಕಟ್ಟಿದ ರೀತಿ ಮತ್ತು ಒತ್ತಡವನ್ನು ನಿಭಾಯಿಸುವ ರೀತಿ ಅದ್ಭುತ’

‘ಭಾರತ ತಂಡದ ಯಶಸ್ವಿ ನಾಯಕನಾಗುವ ಎಲ್ಲ ಅರ್ಹತೆ ಅವರಲ್ಲಿದೆ. ಆದರೆ, ಸದ್ಯ ಬದಲಾವಣೆಯನ್ನು ಎದುರುನೋಡುವ ಅಗತ್ಯಯಿಲ್ಲ. ವಿರಾಟ್‌ ಅದ್ಭುತ ಯಶಸ್ಸು ಸಾಧಿಸಿದ್ದಾರೆ ಮತ್ತು ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಬದಲಾವಣೆ ಮಾಡುವ ಅವಶ್ಯಕತೆ ಇದೆ ಎಂದು ನನಗನಿಸುತ್ತಿಲ್ಲ’ ಎಂದು ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು