ಐಸಿಸಿ ಪ್ರಶಸ್ತಿ ಗಳಿಕೆಯಲ್ಲೂ ವಿರಾಟ್ ದಾಖಲೆ!

7
ರಿಷಭ್ ಪಂತ್‌ಗೆ ಉದಯೋನ್ಮುಖ ಆಟಗಾರ ಗೌರವ

ಐಸಿಸಿ ಪ್ರಶಸ್ತಿ ಗಳಿಕೆಯಲ್ಲೂ ವಿರಾಟ್ ದಾಖಲೆ!

Published:
Updated:

ದುಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ಮಂಗಳವಾರ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ)ಯ ಮೂರು ಪ್ರಶಸ್ತಿಗಳನ್ನು ಗೆದ್ದು ದಾಖಲೆ ನಿರ್ಮಿಸಿದರು.

ಟೆಸ್ಟ್, ಏಕದಿನ ಮಾದರಿಯಲ್ಲಿ ಶ್ರೇಷ್ಠ ಮತ್ತು ವರ್ಷದ ಆಟಗಾರ ಸಮಗ್ರ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂರು ಪ್ರಶಸ್ತಿಗಳನ್ನು ಏಕಕಾಲಕ್ಕೆ ಪಡೆದ ಪ್ರಥಮ ಕ್ರಿಕೆಟಿಗನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

2018ರಲ್ಲಿ ಅವರು ಮಾಡಿದ ಸಾಧನೆಗೆ ಸರ್ ಗ್ಯಾರಿಫೀಲ್ಡ್ ಸೋಬರ್ಸ್ ಟ್ರೋಫಿಯನ್ನು ಗೆದ್ದಿದ್ದಾರೆ. ಈ ಪ್ರಶಸ್ತಿಯನ್ನು ಸತತ ಎರಡನೇ ಬಾರಿ ಗಳಿಸಿದ್ದಾರೆ.

‘ಕೊಹ್ಲಿ ಈ ಮೂರು ಪ್ರಶಸ್ತಿಗಳನ್ನು ಒಂದೇ ವರ್ಷದಲ್ಲಿ ಗೆದ್ದಿದ್ದು ಮಾತ್ರವಲ್ಲದೇ ಐಸಿಸಿಯ ಕ್ರಿಕೆಟ್ ತಂಡಗಳಿಗೆ ನಾಯಕರಾಗಿಯೂ ಆಯ್ಕೆಯಾಗಿದ್ದಾರೆ. ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾಡುತ್ತಿರುವ ಸಾಧನೆಯ ಫಲ ಇದಾಗಿದೆ’ ಎಂದು ಐಸಿಸಿಯ ಪ್ರಕಟಣೆಯಲ್ಲಿ ಹೇಳಲಾಗಿದೆ.

‘ವಿಶ್ವಮಟ್ಟದಲ್ಲಿ ಈ ಗೌರವ ಪಡೆಯಲು ಇಡೀ ವರ್ಷ ಮಾಡಿದ ಪರಿಶ್ರಮ ಮತ್ತು ಸಾಧನೆಯು ಕಾರಣವಾಗಿದೆ. ಐಸಿಸಿಯ ಗೌರವ ಪಡೆಯಲು ಹೆಮ್ಮೆಯೆನಿಸುತ್ತಿದೆ. ಮುಂದೆಯೂ ಇನ್ನೂ ಹೆಚ್ಚು ಸಾಧನೆ ಮಾಡಲು ಇದು ಪ್ರೇರಣೆಯಾಗಿದೆ’ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಯುವ ವಿಕೆಟ್‌ಕೀಪರ್ ರಿಷಭ್ ಪಂತ್ ಅವರು ಉದಯೋನ್ಮುಖ ಆಟಗಾರ ಪ್ರಶಸ್ತಿ ಗಳಿಸಿದ್ದಾರೆ.

ಐಸಿಸಿ ತಂಡಗಳಿಗೆ ಕೊಹ್ಲಿ ನಾಯಕ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಐಸಿಸಿ ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಎರಡೂ ಮಾದರಿಗಳಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿರುವ ಕೊಹ್ಲಿಗೆ ಐಸಿಸಿಯು ಈ ಶ್ರೇಷ್ಠ ಗೌರವವನ್ನು ನೀಡಿದೆ. 2018ರಲ್ಲಿ ಅವರು ಬ್ಯಾಟಿಂಗ್ ಮತ್ತು ನಾಯಕತ್ವದಲ್ಲಿ ಅಗ್ರಸಾಧನೆ ಮಾಡಿದ್ದಾರೆ ಎಂದು ಐಸಿಸಿ ತಿಳಿಸಿದೆ.

ಟೆಸ್ಟ್ ತಂಡದಲ್ಲಿ ಭಾರತದ ಯುವ ವಿಕೆಟ್‌ಕೀಪರ್ ರಿಷಭ್ ಪಂತ್, ಬೌಲರ್‌ ಜಸ್‌ಪ್ರೀತ್ ಬೂಮ್ರಾ ಕೂಡ ಸ್ಥಾನ ಗಳಿಸಿದ್ದಾರೆ. ಏಕದಿನ ತಂಡದಲ್ಲಿ ರೋಹಿತ್ ಶರ್ಮಾ, ಬೂಮ್ರಾ ಮತ್ತು ಕುಲದೀಪ್ ಯಾದವ್ ಇದ್ದಾರೆ. ಈ ತಂಡದಲ್ಲಿ ಇಂಗ್ಲೆಂಡ್‌ನ ನಾಲ್ವರು ಇದ್ದಾರೆ.

***

ತಂಡಗಳು ಇಂತಿವೆ

ಐಸಿಸಿ ಟೆಸ್ಟ್ ತಂಡ: ವಿರಾಟ್ ಕೊಹ್ಲಿ (ಭಾರತ–ನಾಯಕ), ಟಾಮ್ ಲಥಾಮ್ (ನ್ಯೂಜಿಲೆಂಡ್), ದಿಮುತ ಕರುಣಾರತ್ನೆ (ಶ್ರೀಲಂಕಾ), ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್), ಹೆನ್ರಿ ನಿಕೊಲ್ಸ್‌ (ನ್ಯೂಜಿಲೆಂಡ್), ರಿಷಭ್ ಪಂತ್ (ಭಾರತ–ವಿಕೆಟ್‌ಕೀಪರ್), ಜೇಸನ್ ಹೋಲ್ಡರ್ (ವೆಸ್ಟ್ ಇಂಡೀಸ್), ಕಗಿಸೊ ರಬಾಡಾ (ದಕ್ಷಿಣ ಆಫ್ರಿಕಾ), ನೇಥನ್ ಲಯನ್ (ಆಸ್ಟ್ರೇಲಿಯಾ), ಜಸ್‌ಪ್ರೀತ್ ಬೂಮ್ರಾ (ಭಾರತ), ಮೊಹಮ್ಮದ್ ಅಬ್ಬಾಸ್ (ಪಾಕಿಸ್ತಾನ)

ಏಕದಿನ ತಂಡ: ವಿರಾಟ್ ಕೊಹ್ಲಿ (ಭಾರತ–ನಾಯಕ), ರೋಹಿತ್ ಶರ್ಮಾ(ಭಾರತ), ಜಾನಿ ಬೆಸ್ಟೊ, ಜೋ ರೂಟ್, ಜಾಸ್ ಬಟ್ಲರ್ (ವಿಕೆಟ್‌ಕೀಪರ್),  ಬೆನ್ ಸ್ಟೋಕ್ಸ್‌ (ನಾಲ್ವರೂ ಇಂಗ್ಲೆಂಡ್), ರಾಸ್ ಟೇಲರ್( ನ್ಯೂಜಿಲೆಂಡ್), ಮುಸ್ತಫಿಜರ್ ರೆಹಮಾನ್ (ಬಾಂಗ್ಲಾದೇಶ), ರಶೀದ್ ಖಾನ್ (ಆಫ್ಗಾನಿಸ್ತಾನ), ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ (ಇಬ್ಬರೂ ಭಾರತ)

***

2018ರಲ್ಲಿ ಕೊಹ್ಲಿ ಸಾಧನೆ

ಟೆಸ್ಟ್: 13

ರನ್: 1322

ಶತಕ: 05

ಸರಾಸರಿ; 55.08

–––

ಏಕದಿನ: 14

ರನ್: 1202

ಶತಕ: 06

ಸರಾಸರಿ: 133.55

–––

ಟ್ವೆಂಟಿ–20: 10

ರನ್: 211

 

 

 

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !