ಗುರುವಾರ , ನವೆಂಬರ್ 14, 2019
19 °C
ಟೆಸ್ಟ್‌ ಕ್ರಿಕೆಟ್‌

497ಕ್ಕೆ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡ ಭಾರತ: ಪ್ಲೆಸಿ ಪಡೆಗೆ ಆರಂಭಿಕ ಆಘಾತ

Published:
Updated:

ರಾಂಚಿ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿರುವ ಭಾರತ ತಂಡ 9 ವಿಕೆಟ್‌ ನಷ್ಟಕ್ಕೆ 497 ರನ್‌ ಗಳಿಸಿ ಮೊದಲ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿದೆ. ಇದಕ್ಕುತ್ತರವಾಗಿ ಇನಿಂಗ್ಸ್‌ ಆರಂಭಿಸಿರುವ ಫಾಫ್ ಡು ಪ್ಲೆಸಿ ಬಳಗ ಕೇವಲ 9 ರನ್‌ ಗಳಾಗುವಷ್ಟರಲ್ಲಿ ಎರಡು ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಜಾರ್ಖಂಡ್ ಕ್ರಿಕೆಟ್ ಸಂಸ್ಥೆ (ಜೆಕೆಸಿಎ) ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾದ ಪಂದ್ಯದಲ್ಲಿ ಟಾಸ್‌ ಗೆದ್ದ ನಾಯಕ ವಿರಾಟ್‌ ಕೊಹ್ಲಿ ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದರು. ಆದರೆ, ಆರಂಭ ಚೆನ್ನಾಗಿರಲಿಲ್ಲ. ಆರಂಭಿಕ ಬ್ಯಾಟ್ಸ್‌ಮನ್‌ ಮಯಾಂಕ್‌ ಅಗರವಾಲ್‌(12) ಹಾಗೂ ಟೆಸ್ಟ್‌ ಪರಿಣತ ಚೇತೇಶ್ವರ ಪೂಜಾರ(0) ಅಲ್ಪಮೊತ್ತಕ್ಕೆ ಪೆವಿಲಿಯನ್‌ ಸೇರಿಕೊಂಡರು. ಬಳಿಕ ಬಂದ ನಾಯಕ ಕೊಹ್ಲಿಯೂ ಹೆಚ್ಚು ಹೊತ್ತು ನಿಲ್ಲಲಿಲ್ಲ. 22 ಎಸೆತಗಳಲ್ಲಿ ಎರಡು ಬೌಂಡರಿ ಸಹಿತ 12 ರನ್‌ ಗಳಿಸಿದ್ದ ಅವರು ವೇಗಿ ಎನ್ರಿಚ್ ನೋರ್ಟೆ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಆಗ ತಂಡದ ಮೊತ್ತ ಕೇವಲ 39.

ಈ ವೇಳೆ ರೋಹಿತ್‌ ಶರ್ಮಾ ಹಾಗೂ ಉಪನಾಯಕ ಅಜಿಂಕ್ಯ ರಹಾನೆ ತಂಡಕ್ಕೆ ಆಸರೆಯಾದರು. ನಾಲ್ಕನೇ ವಿಕೆಟ್‌ಗೆ ಈ ಜೋಡಿ 267 ಸೇರಿಸಿತು. 192 ಎಸೆತಗಳನ್ನು ಎದುರಿಸಿದ ರಹಾನೆ 17 ಬೌಂಡರಿ ಹಾಗೂ ಒಂದು ಸಿಕ್ಸರ್‌ ಸಹಿತ 115 ರನ್‌ ಗಳಿಸಿ ಔಟಾದರು. ರಹಾನೆ ವಿಕೆಟ್‌ ಪತನದ ಬಳಿಕವೂ ಲೀಲಾಜಾಲವಾಗಿ ಬ್ಯಾಟ್‌ ಬೀಸಿದ ರೋಹಿತ್‌ ವೃತ್ತಿ ಬದುಕಿನ ಚೊಚ್ಚಲ ದ್ವಿಶತಕ ಸಿಡಿಸಿ ಸಂಭ್ರಮಿಸಿದರು. 255 ಎಸೆತಗಳಲ್ಲಿ 212ರನ್‌ ಗಳಿಸಿದ ಅವರ ಬ್ಯಾಟ್‌ನಿಂದ 28 ಬೌಂಡರಿ ಹಾಗೂ 6 ಭರ್ಜರಿ ಸಿಕ್ಸರ್‌ ಮೂಡಿ ಬಂದವು. ಮೊದಲ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಶತಕ ಗಳಿಸಿ ಮಿಂಚಿದ್ದ ರೋಹಿತ್‌, ಎರಡನೇ ಪಂದ್ಯದಲ್ಲಿ ಕೇವಲ 14 ರನ್‌ಗೆ ಔಟಾಗಿದ್ದರು.

ಸರಣಿಯಲ್ಲಿ ಎರಡನೇ ಅರ್ಧಶತಕ ಬಾರಿಸಿದ ರವೀಂದ್ರ ಜಡೇಜಾ(51) ತಂಡದ ಮೊತ್ತ 450 ದಾಟುವಂತೆ ನೋಡಿಕೊಂಡರು. ಕೊನೆಯಲ್ಲಿ ಬಿರುಸಿನ ಆಟವಾಡಿದ ಉಮೇಶ್‌ ಯಾದವ್‌, ಕೇವಲ 10 ಎಸೆತಗಳಲ್ಲಿ 5 ಸಿಕ್ಸರ್‌ ಸಹಿತ 31 ರನ್‌ ಸಿಡಿಸಿ ಅಭಿಮಾನಿಗಳನ್ನು ರಂಜಿಸಿದರು. ಅಂತಿಮವಾಗಿ 116.3 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 497ರನ್‌ ಗಳಿಸಿದ್ದಾಗ ಇನಿಂಗ್ಸ್‌ ಡಿಕ್ಲೇರ್‌ ಮಾಡಿಕೊಳ್ಳಲಾಯಿತು.

ಬಳಿಕ ಇನಿಂಗ್ಸ್‌ ಆರಂಭಿಸಿದ ದಕ್ಷಿಣ ಆಫ್ರಿಕಾ ತಂಡಕ್ಕೆ ಮೊಹಮದ್‌ ಶಮಿ ಹಾಗೂ ಉಮೇಶ್‌ ಯಾದವ್‌ ಆರಂಭಿಕ ಪೆಟ್ಟು ನೀಡಿದರು. ಆರಂಭಿಕ ಡೀನ್‌ ಎಲ್ಗರ್‌ ವೇಗಿ ಶಮಿ ಬೌಲಿಂಗ್‌ನಲ್ಲಿ ಸೊನ್ನೆ ಸುತ್ತಿದರೆ, ಕ್ವಿಂಟನ್‌ ಡಿ ಕಾಕ್‌ ನಾಲ್ಕು ರನ್‌ಗಳಿಸಿ ಉಮೇಶ್‌ಗೆ ವಿಕೆಟ್‌ ಒಪ್ಪಿಸಿದರು. ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ವಿಕೆಟ್‌ ಕೀಪರ್‌ ವೃದ್ದಿಮಾನ್‌ ಶಾ ಅವರಿಗೆ ಕ್ಯಾಚಿತ್ತರು.

ತಂಡದ ಮೊತ್ತ 5 ಓವರ್‌ಗಳಲ್ಲಿ 9ರನ್‌ ಆಗಿದ್ದಾಗ ಮಂದ ಬೆಳಕಿನ ಕಾರಣ ಎರಡನೇ ದಿನದಾಟವನ್ನು ಮುಕ್ತಾಯಗೊಳಿಸಲಾಯಿತು. ಸದ್ಯ ಜುಬೇರ್ ಹಮ್ಜಾ(0) ಮತ್ತು ನಾಯಕ ಪ್ಲೆಸಿ(0) ಕ್ರೀಸ್‌ನಲ್ಲಿದ್ದು ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)