ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA | ಆಲ್‌ರೌಂಡ್‌ ಆಟದ ಹುಮ್ಮಸ್ಸು, ಸೆಂಚುರಿಯನ್ ಯಶಸ್ಸು: ವಿರಾಟ್ ಕೊಹ್ಲಿ

Last Updated 31 ಡಿಸೆಂಬರ್ 2021, 13:52 IST
ಅಕ್ಷರ ಗಾತ್ರ

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್ ಸರಣಿಯ ಮೊದಲ ‍ಪಂದ್ಯದ ಗೆಲುವು ಭಾರತ ತಂಡದ ಆಲ್‌ರೌಂಡ್ ಆಟದ ಬಲವನ್ನು ಸಾಬೀತುಪಡಿಸಿದೆ ಎಂದು ನಾಯಕ ವಿರಾಟ್ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.

ಸೂಪರ್‌ ಸ್ಪೋರ್ಟ್‌ ಪಾರ್ಕ್‌ನಲ್ಲಿ ಗುರುವಾರ ಮುಕ್ತಾಯಗೊಂಡ ಪಂದ್ಯದಲ್ಲಿ ಭಾರತ 113 ರನ್‌ಗಳಿಂದ ಜಯ ಗಳಿಸಿತ್ತು. ಈ ಮೂಲಕ ಭಾರತ ತಂಡ ಸೆಂಚುರಿಯನ್‌ನಲ್ಲಿ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿತ್ತು. ಇದು ಭಾರತಕ್ಕೆ ವರ್ಷಾಂತ್ಯದಲ್ಲಿ ಸಂಭ್ರಮ ತಂದಿತ್ತು.

‘ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್ ಪಂದ್ಯ ಮತ್ತು ಸರಣಿ ಗೆಲ್ಲುವುದು ಸುಲಭವಲ್ಲ. ಸೆಂಚುರಿಯನ್‌ ಕ್ರೀಡಾಂಗಣವಂತೂ ಅತ್ಯಂತ ಕಠಿಣ ಸವಾಲಿನ ತಾಣ. ಮೊದಲ ಪಂದ್ಯದಲ್ಲಿ ಮಳೆಯಿಂದಾಗಿ ಒಂದು ದಿನದ ಆಟ ನಡೆದಿರಲಿಲ್ಲ. ಆದ್ದರಿಂದ ನಾವು ನಾಲ್ಕೇ ದಿನಗಳಲ್ಲಿ ಗೆಲುವು ಸಾಧಿಸಿದ್ದೇವೆ. ವೇಗದ ಬೌಲರ್‌ಗಳು ದಕ್ಷಿಣ ಆಫ್ರಿಕಾ ಬ್ಯಾಟಿಂಗ್ ವಿಭಾಗವನ್ನು ದೂಳೀಪಟ ಮಾಡಿದ್ದು ಒಟ್ಟು 18 ವಿಕೆಟ್‌ಗಳು ವೇಗಿಗಳ ಪಾಲಾಗಿವೆ’ ಎಂದು ಬಿಸಿಸಿಐ ಡಾಟ್ ಟಿವಿ ಜೊತೆ ಮಾತನಾಡಿದ ಕೊಹ್ಲಿ ಹೇಳಿದರು.

‘ಈ ವರ್ಷ ಭಾರತದ ಸಾಧನೆ ಶ್ಲಾಘನೀಯ. ಆಸ್ಟ್ರೇಲಿಯಾದಲ್ಲಿ ಸರಣಿ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿರುವ ತಂಡ ಇಂಗ್ಲೆಂಡ್‌ ಎದುರಿನ ಅಪೂರ್ಣ ಸರಣಿಯಲ್ಲಿ ಮೇಲುಗೈ ಸಾಧಿಸಿದೆ. ಹೊಸ ವರ್ಷದಲ್ಲಿ ಹೆಚ್ಚು ಸಾಮರ್ಥ್ಯ ತೋರಲು ಈ ಸಾಧನೆಗಳು ನೆರವಾಗಲಿವೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.‌

ಕೊಹ್ಲಿ ‘ವಿಜಯ’ದಲ್ಲಿ ಮೈಲುಗಲ್ಲು
ಸೆಂಚುರಿಯನ್‌ನಲ್ಲಿ ಭಾರತಕ್ಕೆ ಮೊದಲ ಜಯ ಗಳಿಸಿಕೊಟ್ಟ ನಾಯಕ ಎಂಬ ಖ್ಯಾತಿಗೆ ಒಳಗಾಗಿರುವ ವಿರಾಟ್ ಕೊಹ್ಲಿ ಒಟ್ಟಾರೆ ಟೆಸ್ಟ್‌ ಗೆಲುವಿನಲ್ಲಿ ಅಪರೂಪದ ಮೈಲುಗಲ್ಲು ಸ್ಥಾಪಿಸಿದ್ದಾರೆ. ನಾಯಕನಾಗಿ 40ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದ ನಾಲ್ಕನೇ ಆಟಗಾರ ಆಗಿದ್ದಾರೆ ಅವರು. ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್‌, ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಮತ್ತು ಸ್ಟೀವ್ ವಾ ಅವರ ಸಾಲಿಗೆ ಅವರು ಸೇರಿದ್ದಾರೆ.

ಸೆಂಚುರಿಯನ್‌ನಲ್ಲಿ ಟೆಸ್ಟ್ ಪಂದ್ಯ ಗೆದ್ದ ಒಟ್ಟಾರೆ ಮೂರನೇ ಹಾಗೂ ಏಷ್ಯಾದ ಮೊದಲ ನಾಯಕ ಎಂಬ ದಾಖಲೆಯೂ ಕೊಹ್ಲಿ ಮುಡಿಗೇರಿದೆ. ಇಂಗ್ಲೆಂಡ್‌ನ ನಾಸಿರ್ ಹುಸೇನ್ ಮತ್ತು ಆಸ್ಟ್ರೇಲಿಯಾದ ಮೈಕೆಲ್ ಕ್ಲಾರ್ಕ್‌ ಈ ಸಾಧನೆ ಮಾಡಿರುವ ಇತರ ನಾಯಕರು. 18 ಮಂದಿ ನಾಯಕರು ಈ ವರೆಗೆ 50ಕ್ಕೂ ಹೆಚ್ಚು ಪಂದ್ಯಗಳನ್ನು ಗೆದ್ದುಕೊಂಡಿದ್ದು ಈ ಪಟ್ಟಿಯಲ್ಲಿ ಕೊಹ್ಲಿ ಆರನೇ ಸ್ಥಾನದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT