ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಕೊಹ್ಲಿ 186; ಭಾರತ 571, ಮೊದಲ ಇನಿಂಗ್ಸ್‌ನಲ್ಲಿ 91 ರನ್ ಮುನ್ನಡೆ

Last Updated 12 ಮಾರ್ಚ್ 2023, 18:30 IST
ಅಕ್ಷರ ಗಾತ್ರ

ಅಹಮದಾಬಾದ್: ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿಯ ಅಭಿಮಾನಿಗಳ ದೀರ್ಘ ಕಾಯುವಿಕೆ ಭಾನುವಾರ ಸುಖಾಂತ್ಯವಾಯಿತು. ಸುಮಾರು ಮೂರೂವರೆ ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಶತಕ ದಾಖಲಿಸಿದರು.

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಾರ್ಡರ್–ಗಾವಸ್ಕರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಕೊನೆಯ ಪಂದ್ಯದ ನಾಲ್ಕನೇ ದಿನ ಕೊಹ್ಲಿಯ ಅಮೋಘ ಶತಕದ (186; 364ಎ, 4X15) ಬಲದಿಂದ ಭಾರತ ತಂಡವು ಆಸ್ಟ್ರೇಲಿಯಾ ಎದುರು ಮೊದಲ ಇನಿಂಗ್ಸ್‌ನಲ್ಲಿ 91 ರನ್‌ಗಳ ಮುನ್ನಡೆ ಸಾಧಿಸಿತು. ನಾಲ್ಕು ಸಿಕ್ಸರ್ ಸಿಡಿಸಿದ ಅಕ್ಷರ್ ಪಟೇಲ್ (79; 113ಎ) ಕೂಡ ತಂಡವು 178.5 ಓವರ್‌ಗಳಲ್ಲಿ 571 ರನ್‌ ಗಳಿಸಲು ಕಾಣಿಕೆ ನೀಡಿದರು. ಆಸ್ಟ್ರೇಲಿಯಾ ಮೊದಲ ಇನಿಂಗ್ಸ್‌ನಲ್ಲಿ 480 ರನ್ ಗಳಿಸಿತ್ತು.

ಎರಡನೇ ಇನಿಂಗ್ಸ್ ಆರಂಭಿಸಿರುವ ಪ್ರವಾಸಿ ಬಳಗವು ದಿನದಾಟದ ಕೊನೆಗೆ 6 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೇ 3 ರನ್ ಗಳಿಸಿದೆ. ಪಂದ್ಯದಲ್ಲಿ ಇನ್ನೊಂದು ದಿನ ಬಾಕಿಯಿದೆ. ಪಂದ್ಯ ಡ್ರಾ ಆದರೂ ಕೂಡ ಭಾರತವು 2–1ರಿಂದ ಸರಣಿ ಜಯಿಸಲಿದೆ.

ವಿರಾಟ್ ವಿಶೇಷ: ಬಿರುಬಿಸಿಲಿನಲ್ಲಿ ಇಡೀ ದಿನ ಮೆರೆದ ಕೊಹ್ಲಿಯ ಬ್ಯಾಟಿಂಗ್‌ ವಿಭಿನ್ನವಾಗಿತ್ತು. ಅವರು ತಮ್ಮ ಆಕ್ರಮಣಕಾರಿ ಶೈಲಿಯ ಬದಲಿಗೆ ತಾಳ್ಮೆ, ಏಕಾಗ್ರಚಿತ್ತದ ಆಟಕ್ಕೆ ಒತ್ತುಕೊಟ್ಟರು. ಅದರ ಫಲವಾಗಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅವರ 28ನೇ ಶತಕ ದಾಖಲಾಯಿತು. 2019ರ ನವೆಂಬರ್‌ನಲ್ಲಿ ಅವರು ಶತಕ ಗಳಿಸಿದ್ದರು. ಅದರ ನಂತರ ರೆಡ್‌ಬಾಲ್ ಕ್ರಿಕೆಟ್‌ನಲ್ಲಿ ಮೂರಂಕಿ ಗಳಿಸಿರಲಿಲ್ಲ. ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದು ಅವರ 75ನೇ ಶತಕವೂ ಹೌದು.

ಮೂರನೇ ದಿನದಾಟದಲ್ಲಿ 59 ರನ್ ಗಳಿಸಿ ಕ್ರೀಸ್‌ನಲ್ಲಿದ್ದ ಕೊಹ್ಲಿ ಭಾನುವಾರ ಇಡೀ ದಿನ ಆಡಿದರು. 2004ರಲ್ಲಿ ಸಿಡ್ನಿಯಲ್ಲಿ ಸಚಿನ್ ತೆಂಡೂಲ್ಕರ್ ಗಳಿಸಿದ್ದ 241ರನ್‌ಗಳ ಇನಿಂಗ್ಸ್‌ನಂತೆಯೇ ಇಲ್ಲಿ ವಿರಾಟ್ ಆಟವಿತ್ತು.

ಆಫ್‌ಸ್ಟಂಪ್ ಆಚೆ ಹೋಗುವ ಎಸೆತಗಳನ್ನು ಎದುರಿಸುವಲ್ಲಿ ಅವರಿಗೆ ಈ ಬಾರಿ ತೊಂದರೆಯಾಗಲಿಲ್ಲ. ಚೆಂದದ ಡ್ರೈವ್‌ಗಳನ್ನು ಪ್ರಯೋಗಿಸಿದರು. ಸ್ವೀಪ್, ಸ್ಕ್ವೇರ್ ಕಟ್‌ಗಳೂ ಹೊರಹೊಮ್ಮಿದವು. ಕೊಹ್ಲಿ 84 ಸಿಂಗಲ್ಸ್, 18 ಡಬಲ್ ಹಾಗೂ ಎರಡು ಬಾರಿ ಮೂರು ರನ್‌ ಗಳಿಸಿದರು. ಅವರ ಚುರುಕಾದ ಓಟದಿಂದಾಗಿ ಫೀಲ್ಡರ್‌ಗಳೂ ಗಲಿಬಿಲಿಗೊಂಡ ಪ್ರಸಂಗಗಳಿದ್ದವು.

ಶ್ರೇಯಸ್ ಅಯ್ಯರ್ ಬೆನ್ನಿನ ಗಾ ಯದಿಂದಾಗಿ ಬ್ಯಾಟಿಂಗ್‌ಗೆ ಬರಲಿಲ್ಲ. ದಿನದಾಟದ ಮುಕ್ತಾಯಕ್ಕೆ ಇನ್ನೂ 25 ನಿಮಿಷಗಳು ಬಾಕಿಯಿದ್ದಾಗ ಕೊಹ್ಲಿಯ ವಿಕೆಟ್ ಗಳಿಸುವಲ್ಲಿ ಸ್ಪಿನ್ನರ್ ಟಾಡ್ ಮರ್ಫಿ ಯಶಸ್ವಿಯಾದರು. ಲಾಬು ಷೇನ್‌ಗೆ ಕ್ಯಾಚಿತ್ತ ಕೊಹ್ಲಿ 9ನೇ ಹಾಗೂ ಕೊನೆಯ ವಿಕೆಟ್‌ ಆದರು.

ಗ್ಯಾಲರಿಯಲ್ಲಿದ್ದ 15 ಸಾವಿರಕ್ಕೂ ಹೆಚ್ಚು ಪ್ರೇಕ್ಷಕರು ಚಪ್ಪಾಳೆ ತಟ್ಟಿ ಕೊಹ್ಲಿಯನ್ನು ಅಭಿನಂದಿಸಿದರು. ಆಸ್ಟ್ರೇ ಲಿಯಾದ ಆಟಗಾರರು ಕೊಹ್ಲಿ ಬಳಿಗೆ ಹೋಗಿ ಕೈಕುಲುಕಿ ಶುಭಕೋರಿದರು.

ಅಕ್ಷರ್ ಅಬ್ಬರ: ಗುಜರಾತಿ ಹುಡುಗ ಅಕ್ಷರ್ ಪಟೇಲ್ ತಮ್ಮ ತವರಿನಲ್ಲಿ ಮಿಂಚಿದರು. ರವೀಂದ್ರ ಜಡೇಜ (28) ಹಾಗೂ ಶ್ರೀಕರ್ ಭರತ್ (44 ರನ್) ಔಟಾದ ನಂತರ ಕ್ರೀಸ್‌ಗೆ ಬಂದ ಅಕ್ಷರ್ ಆಟ ರಂಗೇರಿತು. ಒಂದೆಡೆ ಕೊಹ್ಲಿ ತಾಳ್ಮೆಯಿಂದ ಆಡುತ್ತಿದ್ದರೆ, ಇನ್ನೊಂದೆಡೆ ಫ್ರಂಟ್‌ಫೂಟ್ ಶಾಟ್ ಹಾಗೂ ಸ್ಲಾಗ್‌ ಸ್ವೀಪ್‌ಗಳ ಮೂಲಕ ನಾಲ್ಕು ಸಿಕ್ಸರ್ ಸಿಡಿಸಿದ ಅಕ್ಷರ್ ಬೌಲರ್‌ಗಳ ಬೆವರಿಳಿಸಿದರು. ಶತಕ ಗಳಿಸುವ ಭರವಸೆಯನ್ನೂ ಮೂಡಿಸಿದ್ದರು.

ಆದರೆ ಮಿಚೆಲ್ ಸ್ಟಾರ್ಕ್ ಎಸೆತವನ್ನು ಆಡುವ ಯತ್ನದಲ್ಲಿ ಚೆಂಡು ಬ್ಯಾಟಿನ ಒಳ ಅಂಚು ಸವರಿ ಮಿಡ್ಲ್‌ ಸ್ಟಂಪ್‌ಗೆ ಅಪ್ಪಳಿಸಿತು. ಕೊಹ್ಲಿ ಹಾಗೂ ಅಕ್ಷರ್ ಆರನೇ ವಿಕೆಟ್ ಜೊತೆಯಾಟದಲ್ಲಿ 162 ರನ್ ಸೇರಿಸಿದರು. ‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT