ಶುಕ್ರವಾರ, ಜೂನ್ 25, 2021
27 °C
ಯುಎಇಗೆ ಇಂದು ತೆರಳಲಿರುವ ರಾಯಲ್‌ ಚಾಲೆಂಜರ್ಸ್‌ ತಂಡ: ಸಂಜೀವ್ ಚೂರಿವಾಲಾ

ಐಪಿಎಲ್‌ನತ್ತ ವಿರಾಟ್ ಪಡೆಯ ಪಯಣ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಟಿ20 ಕ್ರಿಕೆಟ್ ಟೂರ್ನಿಯ ಇತಿಹಾಸದಲ್ಲಿ ಶ್ರೇಷ್ಠ ಆಟಗಾರರು ತಂಡದಲ್ಲಿದ್ದರೂ ಪ್ರಶಸ್ತಿ ಜಯಿಸಲು ಸಾಧ್ಯವಾಗದಿರುವುದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಳಗಕ್ಕೆ.

ಪ್ರಸ್ತುತ ವಿಶ್ವಶ್ರೇಷ್ಠ ಬ್ಯಾಟ್ಸ್‌ಮನ್‌ ಗಳಲ್ಲಿ ಪ್ರಮುಖರಾಗಿರುವ ವಿರಾಟ್ ಕೊಹ್ಲಿ ನೇತೃತ್ವದ ತಂಡವು ಈ ಬಾರಿ ಪ್ರಶಸ್ತಿ ಜಯಿಸುವ ಕನಸಿನೊಂದಿಗೆ  ಯುನೈಟೆಡ್ ಅರಬ್ ಎಮಿರೇಟ್ಸ್‌ಗೆ ತೆರಳಲಿದೆ.

ಶುಕ್ರವಾರ ಬೆಂಗಳೂರಿನಿಂದ ಯುಎಇಗೆ ಪ್ರಯಾಣ ಬೆಳೆಸಲಿದೆ. ಟೂರ್ನಿಯಲ್ಲಿ ಆಡಲಿರುವ  ಎಂಟೂ ತಂಡಗಳ ಆಟಗಾರರಲ್ಲಿ ಬಹುತೇಕರು ಕಳೆದ ನಾಲ್ಕು ತಿಂಗಳಲ್ಲಿ ಕ್ರಿಕೆಟ್ ಆಡಿಲ್ಲ. ಈಗ ಮತ್ತೆ ಕಣಕ್ಕಿಳಿಯುತ್ತಿದ್ದಾರೆ. ಕೊರೊನಾ ಕಾಲಘಟ್ಟದ ಹೊಸ ನಿಯಮಗಳ ಪಾಲನೆಯೊಂದಿಗೆ ಕ್ರಿಕೆಟ್‌ ಅಂಗಳಕ್ಕೆ ಕಾಲಿಡಲಿದ್ದಾರೆ.

ಆದ್ದರಿಂದ ಎಲ್ಲ ಆಟಗಾರರಿಗೂ ಇದೊಂದು ರೀತಿಯಲ್ಲಿ ದೈಹಿಕ ಮತ್ತು ಮಾನಸಿಕ ಕ್ಷಮತೆಯ ಸತ್ವಪರೀಕ್ಷೆಗೂ ಒಡ್ಡಿಕೊಳ್ಳಲಿದ್ದಾರೆ. ಆದರೆ ಫ್ರ್ಯಾಂಚೈಸ್ ಮುಖ್ಯಸ್ಥ ಸಂಜಯ್ ಚೂರಿವಾಲಾ ಅವರು ಪ್ರಶಸ್ತಿ ಜಯಕ್ಕಿಂತ ಆಟಗಾರರ ಸುರಕ್ಷತೆಗೆ ಹೆಚ್ಚು ಒತ್ತು ಕೊಡುವುದಾಗಿ ಹೇಳಿದ್ದಾರೆ.

’ನಮ್ಮ ತಂಡವು ಎಂದಿನಂತೆ ಸಮತೋಲನದಿಂದ ಕೂಡಿದೆ. ಎಲ್ಲರೂ ಉತ್ತಮ ಫಿಟ್‌ನೆಸ್ ಕಾಯ್ದುಕೊಂಡಿದ್ದಾರೆ. ಯುಎಇಯಲ್ಲಿ ಉತ್ತಮ ವಾತಾವರಣ ಇದ್ದು, ಜೀವ ಸುರಕ್ಷಾ ವಾತಾವರಣದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಇದೆ. ಈ ಬಾರಿ ಎಲ್ಲರಿಗೂ ಸಮಾನ ಅವಕಾಶ ಸೃಷ್ಟಿಯಾಗಿದ್ದು, ತಾಳ್ಮೆ ಮತ್ತು ಮಾನಸಿಕ ಸಾಮರ್ಥ್ಯವನ್ನು ಕಾಪಾಡಿಕೊಂಡು ಆಡುವವರಿಗೆ ಯಶಸ್ಸು ಸಾಧ್ಯ‘ ಎಂದು ಆರ್‌ಸಿಬಿ ಫ್ರ್ಯಾಂಚೈಸ್ ಮುಖ್ಯಸ್ಥ ಸಂಜೀವ್ ಚೂರಿವಾಲಾ ಗುರುವಾರ ಆನ್‌ಲೈನ್‌ ಮಾತುಕತೆಯಲ್ಲಿ ಹೇಳಿದರು.

ಈ ಸಲ ತಂಡದಲ್ಲಿ ದಕ್ಷಿಣ ಆಫ್ರಿಕಾದ ಎಬಿ ಡಿವಿಲಿಯರ್ಸ್‌,  ಆಸ್ಟ್ರೇಲಿಯಾದ ಆ್ಯರನ್ ಫಿಂಚ್, ಇಂಗ್ಲೆಂಡ್‌ನ ಮೋಯಿನ್ ಅಲಿ ಮತ್ತು ಶ್ರೀಲಂಕಾದ ಇಸುರು ಉಡಾನ ಅವರಿದ್ದಾರೆ.  ಇದ ರಿಂದಾಗಿ ತಂಡದ ಬಲ ಹೆಚ್ಚಿದೆ.

’ವಿದೇಶಿ ಆಟಗಾರರು ನೇರವಾಗಿ ಯುಎಇಗೆ ಬರಲಿದ್ದಾರೆ.  ಆಸ್ಟ್ರೇಲಿಯಾ ಆಟಗಾರರು ಸೆಪ್ಟೆಂಬರ್‌ನಲ್ಲಿ ಇಂಗ್ಲೆಂಡ್ ಎದುರು ನಡೆಯುವ ಸರಣಿಯನ್ನು ಮುಗಿಸಿ ಬರಲಿದ್ದಾರೆ. ಆ ಎರಡೂ ತಂಡಗಳ ಆಟಗಾರರಿಗೆ ಯುಎಇಯಲ್ಲಿ ಪ್ರತ್ಯೇಕವಾಸಕ್ಕೆ ಒಳಪಡಿಸುವುದು ಬೇಕಿಲ್ಲವೆನಿಸುತ್ತದೆ. ಆದರೆ ಅವರಿಗೆ ಕೋವಿಡ್ ಪರೀಕ್ಷೆ ಕಡ್ಡಾ.  ಉಳಿದಂತೆ ಬಿಸಿಸಿಐ ರೂಪಿಸಿರುವ ಬಯೋ ಸೆಕ್ಯೂರ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಕಡ್ಡಾಯ‘ ಎಂದು ಸಂಜೀವ್ ವಿವರಿಸಿದರು.

ತಂಡದಲ್ಲಿರುವ ದಕ್ಷಿಣ ಆಫ್ರಿಕಾದ  ಎಬಿ ಡಿವಿಲಿಯರ್ಸ್, ಕ್ರಿಸ್ ಮಾರಿಸ್ ಮತ್ತು ಡೇಲ್ ಸ್ಟೇಯ್ನ್ ಆಗಸ್ಟ್ 22 ರಂದು, ಶ್ರೀಲಂಕಾದವರು ಸೆಪ್ಟೆಂಬರ್ ಒಂದರಂದು ಯುಎಇಗೆ ತೆರಳುವರು. ಆರ್‌ಸಿಬಿಯ ಆಟಗಾರರು ಹೋದ 14ರಿಂದ ಬೆಂಗಳೂರಿನ ಪಂಚತಾರಾ ಹೋಟೆಲ್‌ನಲ್ಲಿ ಪ್ರತ್ಯೇಕವಾಸದಲ್ಲಿದ್ದರು.

ದುಬೈನ ಹೋಟೆಲ್‌ನಲ್ಲಿ 155 ಕೋಣೆ ಬುಕ್!
ಆರ್‌ಸಿಬಿ ಆಟಗಾರರಿಗಾಗಿ ದುಬೈನಲ್ಲಿರುವ ವಾಲ್ಡಾರ್ಫ್‌ ಹೋಟೆಲ್‌ನಲ್ಲಿ ಕೋಣೆಗಳನ್ನು ಕಾಯ್ದಿರಿಸಲಾಗಿದೆ. ಒಟ್ಟು 155 ಕೋಣೆಗಳನ್ನೂ ಐಪಿಎಲ್‌ ಆಟಗಾರರಿಗಾಗಿ ಕಾಯ್ದಿರಿಸಲಾಗಿದೆ. ಅಲ್ಲಿಯೇ ಜಿಮ್, ಊಟದ ಕೋಣೆ ಮತ್ತಿತರ ಸೌಲಭ್ಯಗಳು ಇವೆ. ಹೋಟೆಲ್ ಸಿಬ್ಬಂದಿಯನ್ನೂ ಎಲ್ಲ ಪರೀಕ್ಷೆಗೆ ಮತ್ತು ಜೀವ ಸುರಕ್ಷಾ ನಿಯಮಗಳಿಗೆ ಒಳಪಡಿಸಲಾಗಿದೆ‘ ಎಂದು ಸಂಜಯ್ ಚೂರಿವಾಲಾ ತಿಳಿಸಿದ್ದಾರೆ.

‘ಆಟಗಾರರು ತಮ್ಮ ಕುಟುಂಬದ ಸದಸ್ಯರನ್ನು ಕರೆತರಲು ತಡೆಯೊಡ್ಡಿಲ್ಲ. ಆದರೆ ಅವರು ಕೂಡ ನಿಯಮಾವಳಿಗೆ ಒಳಪಡಲೇಬೇಕು. ಆದ್ದರಿಂದ ಬಹಳಷ್ಟು ಆಟಗಾರರು ತಮ್ಮ ಕುಟುಂಬ ಸದಸ್ಯರೊಂದಿಗೆ ಪ್ರಯಾಣಿಸುತ್ತಿಲ್ಲ‘ ಎಂದು ಸ್ಪಷ್ಟಪಡಿಸಿದರು. 

ಯುಎಇಗೆ ತೆರಳಿದ ರಾಹುಲ್ ಬಳಗ
ಕೆ.ಎಲ್. ರಾಹುಲ್ ನಾಯಕತ್ವದ ಕಿಂಗ್ಸ್‌ ಇಲೆವನ್ ಪಂಜಾಬ್ ತಂಡವು ಗುರುವಾರ ಬೆಂಗಳೂರಿನಿಂದ ಯುಎಗೆ ಪ್ರಯಾಣಿಸಿತು.

ಮುಖ್ಯ ಕೋಚ್ ಅನಿಲ್ ಕುಂಬ್ಳೆ, ರಾಹುಲ್, ಮಯಂಕ್ ಅಗರವಾಲ್, ಕೆ. ಗೌತಮ್, ಕರುಣ್ ನಾಯರ್ ಮತ್ತು ಜೆ. ಸುಚಿತ್ ಅವರು ತಂಡದಲ್ಲಿರುವ ಕರ್ನಾಟಕದವರು.

ಇವರೆಲ್ಲರೂ ಕಳೆದ ಐದು ದಿನಗಳಿಂದ ಬೆಂಗಳೂರಿನಲ್ಲಿಯೇ ನೆಟ್ಸ್‌ ಅಭ್ಯಾಸ ನಡೆಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು