ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಂಡಾನೆ ಸೆರೆಗೆ ವರುಣ ಅಡ್ಡಿ

ಮೂರು ಆನೆಗಳಿಗೆ ರೇಡಿಯೊ ಕಾಲರ್ ಅಳವಡಿಸಲು ಅನುಮತಿ
Last Updated 9 ಜೂನ್ 2018, 10:55 IST
ಅಕ್ಷರ ಗಾತ್ರ

ಹಾಸನ: ಜಿಲ್ಲೆಯಲ್ಲಿ ಬೆಳೆ ನಷ್ಟ ಮತ್ತು ಜೀವ ಹಾನಿ ಮಾಡುತ್ತಿರುವ ಎರಡು ಪುಂಡಾನೆ ಸೆರೆಗೆ ಮಳೆ ಅಡ್ಡಿಯಾಗಿದೆ. ವಾರದ ಹಿಂದೆಯಷ್ಟೇ ಆನೆ ಸೆರೆಗೆ ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಿತ್ತಾದರೂ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕಾರ್ಯಾಚರಣೆ ವಿಳಂಬವಾಗುತ್ತಿದೆ.

ಸಕಲೇಶಪುರ, ಆಲೂರು ಭಾಗದಲ್ಲಿ ಕಾಫಿ, ಭತ್ತ, ಬಾಳೆ, ಅಡಿಕೆ ತೋಟಕ್ಕೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದವು. ಅಲ್ಲದೇ ಹಲವು ಬಾರಿ ಅಮಾಯಕರು ಕಾಡಾನೆಗಳ ದಾಳಿಗೆ ಜೀವ ಕಳೆದುಕೊಂಡಿದ್ದರು. ಇದರಿಂದ ಬೇಸತ್ತ ಗ್ರಾಮಸ್ಥರು ಆನೆಗಳನ್ನು ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದು, ರಸ್ತೆ ಮಧ್ಯೆ ಶವವಿಟ್ಟು ಪ್ರತಿಭಟನೆಯನ್ನೂ ನಡೆಸಿದ್ದರು.

ಕಾಡಾನೆಗಳ ದಾಳಿಯಿಂದ ಆಗುತ್ತಿರುವ ಬೆಳೆ ನಷ್ಟ ಹಾಗೂ ಅಮಾಯಕರ ಸಾವು ತಪ್ಪಿಸಲು ಅರಣ್ಯ ಇಲಾಖೆ 20 ಪುಂಡಾನೆ ಸೆರೆ ಹಿಡಿದು ಸ್ಥಳಾಂತರ ಮಾಡಲು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಕೇವಲ ಎರಡು ಆನೆ ಸೆರೆ ಹಿಡಿದು ಬೇರೆಡೆ ಸಾಗಿಸಲು ಅನುಮತಿ ಸಿಕ್ಕಿದೆ. ಹಾಗಾಗಿ ಮಳೆ ಬಿಡುವು ನೀಡುವವರೆಗೂ ಕಾರ್ಯಾಚರಣೆ ಕಷ್ಟ ಸಾಧ್ಯವಾಗಿದೆ.

ವಡೂರು, ಕಿರುಹುಣಸೆ ಬಾಳ್ಳುಪೇಟೆ, ಹೊಂಕರವಳ್ಳಿ ಮೊದಲಾದ ಕಡೆ ಒಂಟಿ ಸಲಗ ಓಡಾಡುವುದು ಅರಣ್ಯ ಇಲಾಖೆ ಗಮನಕ್ಕೆ ಬಂದಿದೆ. ಕ್ಷಿಪ್ರ ಕಾರ್ಯಪಡೆ ಗಸ್ತು ತಿರುಗುತ್ತಿದೆ. ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಆನೆ ಚಲನವಲನ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ.

ಡಿಸೆಂಬರ್‌ನಲ್ಲಿ ಸಕಲೇಶಪುರ ಭಾಗದಲ್ಲಿ ಎರಡು ಪುಂಡಾನೆ ಸೆರೆ ಹಿಡಿದು ದುಬಾರೆ ಮತ್ತು ಶಿವಮೊಗ್ಗದ ಸಕ್ಕರೆಬೈಲು ಶಿಬಿರಕ್ಕೆ ಬಿಡಲಾಗಿತ್ತು.

‘ಕಾರ್ಯಾಚರಣೆಗೆ ನಾಗರಹೊಳೆಯಿಂದ ಐದು ಸಾಕಾನೆ ಆನೆ, ಅವುಗಳ 10 ಸಿಬ್ಬಂದಿ ಸೇರಿ ಸುಮಾರು 40 ಮಂದಿ ಬಳಕೆ ಮಾಡಿಕೊಳ್ಳಲಾಗುವುದು. ಆನೆ ಸೆರೆಗೆ ತುರ್ತಾಗಿ ಬೇಕಾಗಿರುವ ಅರಿವಳಿಕೆ ಚುಚ್ಚುಮದ್ದು ಅನ್ನು ಬೇರೆ ಕಡೆಯಿಂದ ತರಿಸಿಕೊಳ್ಳಲಾಗಿದೆ. ಸದ್ಯ ಬಳಸುತ್ತಿರುವ ಔಷಧ ಪೂರ್ಣ ಪರಿಣಾಮಕಾರಿಯಾಗಿಲ್ಲ. ತುರ್ತು ಸಂದರ್ಭದಲ್ಲಿ ಮಾತ್ರ ಇದನ್ನು ಬಳಸಲಾಗುತ್ತದೆ’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿವರಾಂ ಬಾಬು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಗುಂಪಿನಿಂದ ಪ್ರತ್ಯೇಕವಾಗಿ ಓಡಾಡುವ ಆನೆ ಹೆಚ್ಚು ದಾಂದಲೆ ಮಾಡುತ್ತವೆ. ಒಂದೇ ಕಡೆ ವಾಸ್ತವ್ಯ ಇರುವುದಿಲ್ಲ. ಅರಣ್ಯ ಸಿಬ್ಬಂದಿ ಮತ್ತು ಸ್ಥಳೀಯರು ಗಮನ ಇರಿಸಿದ್ದಾರೆ. ಕಾಫಿ ತೋಟ, ಆನೆ ಮಹಲ್ ಕಡೆ ಹೆಚ್ಚು ಕಂಡು ಬಂದಿವೆ. ವಡೂರು, ಕಿರುಹುಣಸೆ ಬಾಳ್ಳುಪೇಟೆ ಭಾಗದಲ್ಲಿ ಕಾರ್ಯಾಚರಣೆ ಸುಲಭವಾಗುತ್ತದೆ. ಸೆರೆ ಹಿಡಿದ ಆನೆಗಳನ್ನು ಎಲ್ಲಿಗೆ ಬಿಡಬೇಕು ಎಂಬುದನ್ನು ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ನಿರ್ಧರಿಸುತ್ತಾರೆ’ ಎಂದು ವಿವರಿಸಿದರು.

ರೆಡಿಯೊ ಕಾಲರ್‌
ಗುಂಪು ಗುಂಪಾಗಿ ಆನೆಗಳು ಓಡಾಡುವುದನ್ನು ಪತ್ತೆ ಹಚ್ಚಲು ಮೂರು ಆನೆಗಳಿಗೆ ರೆಡಿಯೊ ಕಾಲರ್‌ ಅಳವಡಿಸಲು ತೀರ್ಮಾನಿಸಲಾಗಿದೆ. ‘ಮೊದಲಿಗೆ ಹೆಣ್ಣಾನೆಗಳಿಗೆ ಸಾಧನ ಅಳವಡಿಸಲಾಗುವುದು. ಇದರಿಂದ ಅವುಗಳ ಚಲನವಲನಗಳು ಗೊತ್ತಾಗಲಿದೆ. ಇದಕ್ಕಾಗಿ ಪ್ರತ್ಯೇಕ ಆ್ಯಪ್‌ ರೂಪಿಸಲಾಗಿದ್ದು, ಈ ಆ್ಯಪ್‌ ಅನ್ನು ಗ್ರಾಮದ ಮುಖಂಡರು ಹಾಗೂ ಅರಣ್ಯ ಸಿಬ್ಬಂದಿ ಮಾತ್ರ ಬಳಸುತ್ತಾರೆ. ಗಜಪಡೆ ಯಾವುದಾದರೂ ಗ್ರಾಮದ ಬಳಿ ಅಥವಾ ಜನಸಂಚಾರ ಇರುವ ಜಾಗದಲ್ಲಿ ಇರುವ ಬಗ್ಗೆ ಮಾಹಿತಿ ದೊರೆತಲ್ಲಿ ಅವುಗಳನ್ನು ಮರಳಿ ಕಾಡಿಗೆ ಅಟ್ಟಲು ಸಹಕಾರಿಯಾಗಲಿದೆ’ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹರೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT