ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್‌ಗೆ ಸಮಾನವಾದ ಜವಾಬ್ದಾರಿ ವಹಿಸಿಕೊಳ್ಳುವಂತೆ ಕೊಹ್ಲಿಗೆ ಸೆಹ್ವಾಗ್ ಸಲಹೆ

Last Updated 10 ನವೆಂಬರ್ 2021, 13:24 IST
ಅಕ್ಷರ ಗಾತ್ರ

ನವದೆಹಲಿ: ಭಾರತೀಯ ಟ್ವೆಂಟಿ-20 ಕ್ರಿಕೆಟ್ ತಂಡದ ನಾಯಕ ಸ್ಥಾನವನ್ನು ತೊರೆದಿರುವ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ಅವರಿಗೆ ಸಮಾನವಾದ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದು ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

'ಹಲವಾರು ನಾಯಕರ ಅಡಿಯಲ್ಲಿ ಆಡಿರುವ ಸಚಿನ್ ತೆಂಡೂಲ್ಕರ್ ಹೇಗೆ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರೊಂದಿಗೆ ತಮ್ಮ ಆಲೋಚನೆಗಳನ್ನು ಹಂಚಿಕೊಂಡಿದ್ದರೋ ಅದೇ ರೀತಿಯ ಪಾತ್ರವನ್ನು ವಿರಾಟ್ ಕೊಹ್ಲಿ ನಿಭಾಯಿಸಬಹುದಾಗಿದೆ' ಎಂದು ಸಲಹೆ ಮಾಡಿದ್ದಾರೆ.

'ಭಾರತ ತಂಡವು ಹೊಸ ಕಪ್ತಾನ ಹಾಗೂ ಉಪನಾಯಕರನ್ನು ಪಡೆದಿದ್ದು, ವಿರಾಟ್ ಕೊಹ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಬಹುದಾಗಿದೆ. ನೋಡಿ, ಹಲವಾರು ನಾಯಕರ ಅಡಿಯಲ್ಲಿ ಆಡಿರುವ ಸಚಿನ್ ತೆಂಡೂಲ್ಕರ್ ಅದನ್ನೇ ಮಾಡಿದ್ದರು' ಎಂದು ಹೇಳಿದರು.

'ಪ್ರತಿ ಸಲವೂ ಕೊಹ್ಲಿ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳಬಹುದಾಗಿದೆ. ಆನಂತರ ಅದನ್ನು ಕಾರ್ಯಗತಗೊಳಿಸುವುದು ನಾಯಕನಿಗೆ ಬಿಟ್ಟ ವಿಚಾರ' ಎಂದು ಹೇಳಿದರು.

ಯುವ ಆಟಗಾರನನ್ನು ಉಪನಾಯಕರಾಗಿ ನೇಮಕಗೊಳಿಸುವ ಅಗತ್ಯದಬಗ್ಗೆಯೂ ಸೆಹ್ವಾಗ್ ಪ್ರತಿಪಾದಿಸಿದರು.

'ಧೋನಿ ನಾಯಕನಾದಾಗ ನನ್ನನ್ನು ಉಪನಾಯಕನನ್ನಾಗಿ ಮಾಡಲಾಯಿತು. ನಾನು ಉಪನಾಯಕ ಅಲ್ಲದಿದ್ದರೂ ನನ್ನ ಜವಾಬ್ದಾರಿಯನ್ನು ನಿರ್ವಹಿಸುತ್ತೇನೆ ಎಂದು ಆಯ್ಕೆದಾರರು ಹಾಗೂ ಮಂಡಳಿಗೆ ತಿಳಿಸಿದ್ದೆ. ಹಾಗಾಗಿ ಯುವ ಆಟಗಾರನಿಗೆ ಉಪನಾಯಕ ಸ್ಥಾನ ವಹಿಸುವುದು ಉತ್ತಮ ಎಂದು ತಿಳಿಸಿದ್ದೆ. ಆದರೆ ನನ್ನ ಸಲಹೆ ಆಲಿಸಲಿಲ್ಲ. ಈಗ ಕೊಹ್ಲಿ ಅಂತಹ ಮಾತುಗಳನ್ನುಹೇಳಿರುವುದು ಒಳ್ಳೆಯ ಅಂಶವಾಗಿದೆ' ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT