ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಒ ವಿರುದ್ಧ ಲಕ್ಷ್ಮಣ್‌ ಸಿಡಿಮಿಡಿ

ಒಂಬುಡ್ಸ್‌ಮನ್‌ಗೆ ಪತ್ರ ಬರೆದ ಹಿರಿಯ ಕ್ರಿಕೆಟಿಗ
Last Updated 29 ಏಪ್ರಿಲ್ 2019, 17:13 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿಯ (ಬಿಸಿಸಿಐ) ಒಂಬುಡ್ಸ್‌ಮನ್‌ ಡಿ.ಕೆ.ಜೈನ್‌ ಅವರಿಗೆ ಸೋಮವಾರ ಪತ್ರ ಬರೆದಿರುವ ಹಿರಿಯ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌, ಆಡಳಿತಾಧಿಕಾರಿಗಳ ಸಮಿತಿಯ (ಸಿಒಎ) ವಿರುದ್ಧ ಕಿಡಿ ಕಾರಿದ್ದಾರೆ.

ಬಿಸಿಸಿಐ ಕ್ರಿಕೆಟ್‌ ಸಲಹಾ ಸಮಿತಿಯ (ಸಿಎಸಿ) ಸದಸ್ಯರಾಗಿರುವ ಲಕ್ಷ್ಮಣ್‌, ಸನ್‌ರೈಸರ್ಸ್‌ ಹೈದರಾಬಾದ್‌ ತಂಡದ ಸಲಹೆಗಾರರಾಗಿಯೂ ಕೆಲಸ ಮಾಡುತ್ತಿದ್ದಾರೆ. ಈ ಮೂಲಕ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಮಧ್ಯಪ್ರದೇಶ ಕ್ರಿಕೆಟ್‌ ಸಂಸ್ಥೆಯ (ಎಂಪಿಸಿಎ) ಸದಸ್ಯ ಸಂಜೀವ್ ಗುಪ್ತಾ, ಒಂಬುಡ್ಸ್‌ಮನ್‌ಗೆ ದೂರು ನೀಡಿದ್ದರು. ಈ ಸಂಬಂಧ ಜೈನ್‌ ಅವರು ನೀಡಿದ್ದ ನೋಟಿಸ್‌ಗೆ ಲಕ್ಷ್ಮಣ್‌ ಉತ್ತರಿಸಿದ್ದಾರೆ.

‘ಸಿಎಸಿಯಲ್ಲಿ ನಾನು ಹೊಂದಿರುವ ಸ್ಥಾನದ ಅಧಿಕಾರ ವ್ಯಾಪ್ತಿ ಮತ್ತು ಜವಾಬ್ದಾರಿಗಳ ಬಗ್ಗೆ ನಿಖರತೆ ಇಲ್ಲ. ಇದನ್ನು ಸ್ಪಷ್ಟಪಡಿಸುವಂತೆ ಹೋದ ವರ್ಷದ ಡಿಸೆಂಬರ್‌ 7ರಂದು ಸಿಒಎಗೆ ಪತ್ರ ಬರೆದಿದ್ದೆ. ಅದಕ್ಕೆ ಇನ್ನೂ ಉತ್ತರ ಬಂದಿಲ್ಲ. ಈಗ ಸಿಎಸಿ ಅಸ್ತಿತ್ವದಲ್ಲಿದೆಯೊ, ಇಲ್ಲವೊ ಎಂಬುದರ ಬಗ್ಗೆಯೂ ಮಾಹಿತಿ ಇಲ್ಲ’ ಎಂದು ಲಕ್ಷ್ಮಣ್‌ ಅವರು ಪತ್ರದಲ್ಲಿ ಹೇಳಿದ್ದಾರೆ.

‘ಭಾರತದ ಕ್ರಿಕೆಟ್‌ನ ಬೆಳವಣಿಗೆಗೆ ಅಗತ್ಯವಿರುವ ಸಲಹೆ ಮತ್ತು ಮಾರ್ಗದರ್ಶನ ನೀಡಬಹುದು. ಈ ಮೂಲಕಭಾರತವನ್ನು ಕ್ರಿಕೆಟ್‌ನ ಶಕ್ತಿಕೇಂದ್ರವಾಗಿ ರೂಪಿಸಲು ನನ್ನಿಂದಾದ ಸಹಾಯ ಮಾಡಬಹುದು ಎಂಬ ಉದ್ದೇಶದಿಂದ ಸಿಎಸಿ ಸದಸ್ಯನಾಗಲು ಒಪ್ಪಿದ್ದೆ. ಸಿಎಸಿ ಖಾಯಂ ಸಮಿತಿಯಲ್ಲ. ಕೋಚ್‌ ಮತ್ತು ಆಟಗಾರರ ಆಯ್ಕೆಯಲ್ಲಿ ಈಗ ನಾನಂತೂ ಹಸ್ತಕ್ಷೇಪ ಮಾಡುತ್ತಿಲ್ಲ. ಹೀಗಿರುವಾಗ ಹಿತಾಸಕ್ತಿ ಸಂಘರ್ಷಕ್ಕೆ ಸಿಲುಕಲು ಹೇಗೆ ಸಾಧ್ಯ’ ಎಂದು ಪ್ರಶ್ನಿಸಿದ್ದಾರೆ.

‘2018ರ ಡಿಸೆಂಬರ್‌ನಲ್ಲಿ ಭಾರತ ಮಹಿಳಾ ತಂಡಕ್ಕೆ ಕೋಚ್‌ ನೇಮಿಸಲು ಸಿಒಎ ನಿರ್ಧರಿಸಿತ್ತು. ಈ ಸಂಬಂಧ ನಡೆಸಲು ಉದ್ದೇಶಿಸಿದ್ದ ಸಭೆಯಲ್ಲಿ ಭಾಗವಹಿಸಲು ಸಾಧ್ಯವೊ, ಇಲ್ಲವೊ ಎಂಬುದನ್ನು ಖಾತರಿಪಡಿಸಲು ಕೇವಲ ಒಂದು ದಿನ ಸಮಯ ನೀಡಿತ್ತು. ಅದಾಗಲೇ ನಿಗದಿಯಾಗಿದ್ದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕಿದ್ದರಿಂದ ಸಭೆಗೆ ಬರಲಾಗುವುದಿಲ್ಲ ಎಂದು ತಿಳಿಸಿದ್ದೆ. ನಂತರವೂ ಸಿಎಸಿಗೆ ಸಂಬಂಧಿಸಿದ ಯಾವುದೇ ಕೆಲಸದಲ್ಲೂ ಭಾಗಿಯಾಗಿಲ್ಲ’ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT