ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಯದ ಕಲೆ ಕರಗತ, ವಿದೇಶಗಳಲ್ಲೂ ಸಾಕಷ್ಟು ಸರಣಿ ಜಯಿಸಲಿದೆ ಭಾರತ: ವಿವಿಎಸ್ ಲಕ್ಷ್ಮಣ್

Last Updated 23 ಜನವರಿ 2020, 13:32 IST
ಅಕ್ಷರ ಗಾತ್ರ

ನವದೆಹಲಿ: ವಿರಾಟ್‌ ಕೊಹ್ಲಿ ನೇತೃತ್ವದಭಾರತ ತಂಡವು ವಿದೇಶಗಳಲ್ಲಿಯೂ ಸಾಕಷ್ಟು ಸರಣಿ ಜಯಿಸಲಿದೆ ಎಂದು ಮಾಜಿ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ತಂಡದ ಬೌಲಿಂಗ್ ಮಾತ್ರವಲ್ಲ, ಬ್ಯಾಟಿಂಗ್‌ ವಿಭಾಗಕ್ಕೂ ಸಾಕಷ್ಟು ಅನುಭವವಿದೆ. ಕೊಹ್ಲಿ ಪಡೆಯು ಇತರ ತಂಡಗಳಿಗೆ ನಿಜವಾಗಿಯೂ ಸವಾಲಾಗಲಿದ್ದಾರೆ. ವಿದೇಶಗಳಲ್ಲಿ ಸಾಕಷ್ಟು ಸರಣಿ ಗೆಲ್ಲಲಿದೆ. ಅದರಲ್ಲೂ ಟೆಸ್ಟ್‌ನಲ್ಲಿ ಕ್ರಿಕೆಟ್‌ನಲ್ಲಿ ಇದು ಸಾಧ್ಯವಾಗಲಿದೆ. ನ್ಯೂಜಿಲೆಂಡ್‌ನಲ್ಲಿಯೇಜಯದ ಆರಂಭವಾಗಲಿದೆ. ನಾನು ಭಾರತವನ್ನು ಬೆಂಬಲಿಸಲಿದ್ದೇನೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್–ಗವಾಸ್ಕರ್‌ ಟೆಸ್ಟ್ ಸರಣಿಯನ್ನು 2–1 ಅಂತರದಿಂದ ಭಾರತ ಗೆದ್ದುಕೊಂಡಿತ್ತು. ಆ ಮೂಲಕ, ಈ ಸಾಧನೆ ಮಾಡಿದ ಏಷ್ಯಾದ ಮೊದಲತಂಡ ಎನಿಸಿತ್ತು. ಆ ಸರಣಿಯಲ್ಲಿ ಮೊಹಮದ್‌ ಶಮಿ, ಜಸ್‌ಪ್ರೀತ್‌ ಬೂಮ್ರಾ, ಇಶಾಂತ್ ಶರ್ಮಾ, ಚೇತೇಶ್ವರ ಪೂಜಾರ ಮತ್ತು ವಿರಾಟ್‌ ಕೊಹ್ಲಿ ಅಮೋಘ ಪ್ರದರ್ಶನ ನೀಡಿದ್ದರು.

ಶಮಿ, ಬೂಮ್ರಾ, ಇಶಾಂತ್, ಉಮೇಶ್ ಯಾದವ್ ಇಂದೆಂದಿಗಿಂತಲೂ ಉತ್ತಮ ಫಾರ್ಮ್‌ನಲ್ಲಿದ್ದಾರೆ ಎಂದಿರುವ ಲಕ್ಷ್ಮಣ್‌, ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ವೇಗಿಗಳು, ಭಾರತ ತಂಡದ ಬೆನ್ನೆಲುಬಾಗಿದ್ದಾರೆ. ಬ್ಯಾಟ್ಸ್‌ಮನ್‌ಗಳಿಗೆ ವಿದೇಶಗಳಲ್ಲಿ ಆಡಿದ ಅನುಭವ ಇರುವುದೂ ಅಪಾರವಾಗಿ ನೆರವಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಎಂ.ಎಸ್‌. ಧೋನಿ ನಾಯಕತ್ವದಲ್ಲಿ 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ ತಂಡ ಬಳಿಕ ಇದುವರೆಗೆ ಐಸಿಸಿಯ ಪ್ರಮುಖ ಪ್ರಶಸ್ತಿಗಳನ್ನು ಗೆದ್ದಿಲ್ಲ. ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಭಾರತ ನ್ಯೂಜಿಲೆಂಡ್‌ ವಿರುದ್ಧ 17 ರನ್‌ ಅಂತರದಿಂದ ಮುಗ್ಗರಿಸಿತ್ತು. ಅದರ ಹೊರತಾಗಿಯೂ ತಂಡವನ್ನು ಬೆಂಬಲಿಸಿರುವ ಲಕ್ಷ್ಮಣ್‌, ತಂಡಕ್ಕೀಗ ಜಯದ ಕಲೆ ಕರಗತವಾಗಿದೆ ಎಂದಿದ್ದಾರೆ.

‘ತಂಡದಲ್ಲಿ ಈಗಾಗಲೇ ಚಾಂಪಿಯನ್‌ ಮನೋಭಾವವಿದೆ. ಇದು ಮತ್ತಷ್ಟು ಟ್ರೋಫಿಗಳನ್ನು ಗೆಲ್ಲಲು ನೆರವಾಗಲಿದೆ. ಅದರಲ್ಲಿ ಅನುಮಾನವೇ ಇಲ್ಲ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT