ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ಡರ್‌–ಗಾವಸ್ಕರ್ ಟ್ರೋಫಿ ಕ್ರಿಕೆಟ್: ಹೊಸ ದಶಕದ ’ಟೆಸ್ಟ್‘ನಲ್ಲಿ ಜಯದ ಗುರಿ

ಆಸ್ಟ್ರೇಲಿಯಾ–ಭಾರತ ಹಣಾಹಣಿ ಶುಕ್ರವಾರದಿಂದ
Last Updated 14 ಜನವರಿ 2021, 17:26 IST
ಅಕ್ಷರ ಗಾತ್ರ

ಬ್ರಿಸ್ಟೇನ್: ಭಾರತ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಅವರಿಗೆ ಹೊಸ ಇತಿಹಾಸ ನಿರ್ಮಿಸುವ ಅವಕಾಶ ಈಗ ಕೂಡಿಬಂದಿದೆ.

ಗಾಬಾದಲ್ಲಿ ಶುಕ್ರವಾರ ಆರಂಭವಾಗಲಿರುವ ಆಸ್ಟ್ರೇಲಿಯಾ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಗೆದ್ದರೆ ಸತತ ಎರಡನೇ ಸಲ ಭಾರತಕ್ಕೆ ಬಾರ್ಡರ್‌–ಗಾವಸ್ಕರ್ ಟ್ರೋಫಿ ಒಲಿಯಲಿದೆ. ಒಂದೊಮ್ಮೆ ಈ ಪಂದ್ಯ ಡ್ರಾ ಆದರೂ ಪ್ರಶಸ್ತಿಯನ್ನು ಮತ್ತೊಂದೆರಡು ವರ್ಷಗಳ ಕಾಲ ತನ್ನ ಬಳಿ ಉಳಿಸಿಕೊಳ್ಳಲಿದೆ. ಆದರೆ ಇದಕ್ಕೂ ಮುನ್ನ ಅಜಿಂಕ್ಯ ಮುಂದಿರುವ ಕಠಿಣ ಸವಾಲೆಂದರೆ 11 ಆಟಗಾರರ ಬಳಗವನ್ನು ಆಯ್ಕೆ ಮಾಡುವುದು.

ಪ್ರಮುಖ ಆಟಗಾರರು ಗಾಯಗೊಂಡು ಹೊರಗುಳಿದಿರುವುದು ಅಜಿಂಕ್ಯ ಚಿಂತೆಗೆ ಕಾರಣವಾಗಿದೆ. ಆದ್ದರಿಂದ ಅನುಭವ ಕಮ್ಮಿಯಿರುವ ಹುಡುಗರ ದಂಡನ್ನೇ ಕಟ್ಟಿಕೊಂಡು ಕಣಕ್ಕಿಳಿಯುವ ಸಿದ್ಧತೆಯಲ್ಲಿದ್ದಾರೆ.

1988ರಿಂದ ಇಲ್ಲಿಯವರೆಗೆ ಆಸ್ಟ್ರೇಲಿಯಾವು ಇಲ್ಲಿ ಆಡಿರುವ ಯಾವುದೇ ಟೆಸ್ಟ್‌ನಲ್ಲಿ ಸೋತಿಲ್ಲ. ಆದ್ದರಿಂದ ಅಪಾರ ಆತ್ಮವಿಶ್ವಾಸದಲ್ಲಿದೆ. ಇದು ಕೂಡ ಭಾರತದ ಮುಂದಿರುವ ಕಠಿಣ ಸವಾಲು.

’ಗಾಬಾ ಕ್ರೀಡಾಂಗಣದ ಪಿಚ್‌ ಹೇಗಿದೆ ಎನ್ನುವುದು ನನಗೆ ಗೊತ್ತು. ಆದ್ದರಿಂದ ನಾನು ನೋಡಲು ಹೋಗುವುದಿಲ್ಲ. ಇಲ್ಲಿ ಆಡುವುದೆಂದರೆ ನಮಗೆ ಅಚ್ಚುಮೆಚ್ಚು. ಜಯಿಸುವ ಎಲ್ಲ ಸಾಧ್ಯತೆಗಳೂ ನಮ್ಮದೇ ಆಗಿವೆ‘ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಟಿಮ್ ಪೇನ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಆ ಮೂಲಕ ಭಾರತ ತಂಡದ ಒತ್ತಡ ಹೆಚ್ಚಿಸುವ ತಂತ್ರವನ್ನೂ ಅನುಸರಿಸಿದ್ದಾರೆ. ಆದರೆ, ಸರಣಿಯ ಮೂರನೇ ಟೆಸ್ಟ್‌ನಲ್ಲಿ ಸ್ಟಂಪ್‌ಗಳ ಹಿಂದೆ ಟಿಮ್ ಪೇನ್ ಕೀಟಲೆಗಳು, ಮುಂದೆ ಯಮವೇಗದ ಬೌಲಿಂಗ್ ಮತ್ತು ಪ್ರೇಕ್ಷಕರ ಗ್ಯಾಲರಿಯಿಂದ ಜನಾಂಗೀಯ ನಿಂದನೆಗಳ ಅವಮಾನ ಎದುರಿಸಿಯೂ ಭಾರತ ತಂಡವು ಸೋಲಿನ ದವಡೆಯಿಂದ ತಪ್ಪಿಸಿಕೊಂಡಿತ್ತು. ಅದರೊಂದಿಗೆ ಆಸ್ಟ್ರೇಲಿಯಾದ ಅಹಂಗೆ ಪೆಟ್ಟು ಕೊಟ್ಟಿತ್ತು.

ಆ ಪಂದ್ಯದಲ್ಲಿ ಬಂಡೆಗಲ್ಲಿನಂತೆ ನಿಂತು ತಮ್ಮ ತಾಳ್ಮೆಯ ಬ್ಯಾಟಿಂಗ್‌ನಿಂದ ತಂಡವನ್ನು ಡ್ರಾದತ್ತ ಮುನ್ನಡೆಸಿದ್ದ ಹನುಮವಿಹಾರಿ ಸ್ನಾಯುಸೆಳೆತದಿಂದಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ಅವರೊಂದಿಗೆ ಜೊತೆಯಾಟವಾಡಿದ್ದ ಆರ್. ಅಶ್ವಿನ್‌ಗೆ ಬೆನ್ನುನೋವು ಕಾಡುತ್ತಿದೆ. ಆದರೂ ಕಣಕ್ಕಿಳಿಯುವ ಸಿದ್ಧತೆಯಲ್ಲಿ ಆಫ್‌ಸ್ಪಿನ್ನರ್ ಇದ್ದಾರೆ. ಕೈಬೆರಳಿನ ಮೂಳೆಮುರಿತದಿಂದಾಗಿ ರವೀಂದ್ರ ಜಡೇಜ ಕೂಡ ಲಭ್ಯರಿಲ್ಲ. ಮಯಂಕ್ ಅಗರವಾಲ್ ಕೈಗೆ ಚೆಂಡಿನ ಪೆಟ್ಟಿನಿಂದ ಗಾಯವಾಗಿದೆ.

ಅನುಭವಿ ಮಧ್ಯಮವೇಗಿ ಜಸ್‌ಪ್ರೀತ್ ಬೂಮ್ರಾ ಕೂಡ ಬಹುತೇಕ ಆಡುವುದಿಲ್ಲ. ಆದ್ದರಿಂದ ಶಾರ್ದೂಲ್ ಠಾಕೂರ್ ಅಥವಾ ತಂಗರಸು ನಟರಾಜನ್ ಆಡಬಹುದು. ಶಾರ್ದೂಲ್ ಎರಡು ವರ್ಷಗಳ ಹಿಂದೆ ಟೆಸ್ಟ್ ಪದಾರ್ಪಣೆ ಮಾಡಿದ್ದರು. ಅದರಲ್ಲಿ ಹತ್ತು ಎಸೆತಗಳನ್ನು ಹಾಕಿದ್ದ ಅನುಭವವಷ್ಟೇ ಅವರಿಗಿದೆ. ನಟರಾಜನ್‌ ಪದಾರ್ಪಣೆ ಮಾಡಬೇಕಷ್ಟೇ. ಇವರಲ್ಲಿ ಯಾರೇ ಆದರೂ ಈ ಸರಣಿಯಲ್ಲಿಯೇ ಚೊಚ್ಚಲ ಟೆಸ್ಟ್ ಆಡಿರುವ ಮೊಹಮ್ಮದ್ ಸಿರಾಜ್ ಮತ್ತು ನವದೀಪ್ ಸೈನಿಯೊಂದಿಗೆ ಹೊಣೆ ನಿಭಾಯಿಸಬೇಕು. ಜಡೇಜ ಬದಲು ಆಫ್‌ಸ್ಪಿನ್ನರ್ ವಾಷಿಂಗ್ಟನ್ ಸುಂದರ್ ಆಡುವ ಸಾಧ್ಯತೆ ಹೆಚ್ಚಿದೆ.

ರೋಹಿತ್, ರಹಾನೆ, ಪೂಜಾರ, ಅಶ್ವಿನ್ ಬಿಟ್ಟರೆ, ಅಷ್ಟೇನೂ ಅನುಭವವಿಲ್ಲದ ಆಟಗಾರರೇ ತಂಡದಲ್ಲಿ ಹೆಚ್ಚಲಿದ್ದಾರೆ. ಆದರೆ ಮೆಲ್ಬರ್ನ್ ಗೆಲುವು ಮತ್ತು ಸಿಡ್ನಿಯ ವಿರೋಚಿತ ಹೋರಾಟದ ಆತ್ಮಬಲವು ತಂಡದಲ್ಲಿ ಸಾಧನೆ ಛಲವನ್ನು ಉದ್ದೀಪನಗೊಳಿಸಿದೆ. ಆದ್ದರಿಂದ ಆತಿಥೇಯ ತಂಡವು ಅಜಿಂಕ್ಯ ಬಳಗವನ್ನು ಹಗುರವಾಗಿ ಪರಿಗಣಿಸುವಂತಿಲ್ಲ.

ತಂಡಗಳು:

ಭಾರತ: ಅಜಿಂಕ್ಯ ರಹಾನೆ (ನಾಯಕ), ರೋಹಿತ್ ಶರ್ಮಾ(ಉಪನಾಯಕ), ಶುಭಮನ್ ಗಿಲ್, ಚೇತೆಶ್ವರ್ ಪೂಜಾರ, ಮಯಂಕ್ ಅಗರವಾಲ್, ಪೃಥ್ವಿ ಶಾ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ರಿಷಭ್ ಪಂತ್ (ವಿಕೆಟ್‌ಕೀಪರ್), ಆರ್. ಅಶ್ವಿನ್, ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಟಿ. ನಟರಾಜನ್, ವಾಷಿಂಗ್ಟನ್ ಸುಂದರ್, ಜಸ್‌ಪ್ರೀತ್ ಬೂಮ್ರಾ.

ಆಸ್ಟ್ರೇಲಿಯಾ: ಟಿಮ್ ಪೇನ್ (ನಾಯಕ), ಡೇವಿಡ್ ವಾರ್ನರ್, ಮಾರ್ಕಸ್ ಹ್ಯಾರಿಸ್, ಮಾರ್ನಸ್ ಲಾಬುಷೇನ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಕ್ಯಾಮರಾನ್ ಗ್ರೀನ್, ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ನೇಥನ್ ಲಯನ್, ಜೋಶ್ ಹ್ಯಾಜಲ್‌ವುಡ್.

ಪಂದ್ಯ ಆರಂಭ : ಬೆಳಿಗ್ಗೆ 5

ನೇರಪ್ರಸಾರ: ಸೋನಿ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT