ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾರಾಯಣ ಗುರು ಸ್ಮರಣೆ

Last Updated 20 ಮಾರ್ಚ್ 2018, 19:40 IST
ಅಕ್ಷರ ಗಾತ್ರ

ಪಡುಬಿದ್ರಿ (ಉಡುಪಿ ಜಿಲ್ಲೆ): ‘ಬಿಜೆಪಿ, ರಾಜಕೀಯ ಲಾಭ ಪಡೆಯಲು ಧರ್ಮ, ಧರ್ಮಗಳ ಮಧ್ಯೆ ದ್ವೇಷ ಹುಟ್ಟು ಹಾಕಿರುವ ನೆಲದಲ್ಲಿ ಬ್ರಹ್ಮಶ್ರೀ ನಾರಾಯಣಗುರು ಜೀವನ, ತತ್ವ ಪ್ರೇರಣೆ ಆಗಬೇಕು’ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮಂಗಳವಾರ ಆಶಿಸಿದರು.

ಉತ್ತರ ಕರ್ನಾಟಕದಲ್ಲಿ ಜನಾಶೀರ್ವಾದ ಯಾತ್ರೆಯುದ್ದಕ್ಕೂ ಬಸವಣ್ಣನ ವಚನದ ಸಾರಗಳನ್ನು ಉದ್ಧರಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮಾತಿನಿಂದ ಚುಚ್ಚಿದ್ದ ರಾಹುಲ್, ಕರಾವಳಿಯಲ್ಲಿ ಈ ಭಾಗದ ಸಮಾಜ ಸುಧಾರಕ ನಾರಾಯಣಗುರುವಿನ ಆದರ್ಶಗಳನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕರನ್ನು ಕೆಣಕಿದರು.

‘ಇದು ನಾರಾಯಣಗುರುಗಳ ಕರ್ಮಭೂಮಿ. ನಾವೆಲ್ಲರೂ ಒಂದೇ ಎಂಬುದು ಗುರುಗಳ ಮಂತ್ರ. ಎಲ್ಲರನ್ನೂ ಒಟ್ಟಾಗಿ ಕರೆದೊಯ್ದ ಅವರ ಬೋಧನೆ ನಮಗೆ ಪ್ರೇರಣೆ ಆಗಬೇಕು’ ಎಂದು ಬಣ್ಣಿಸಿದರು.

‘ಬಸವಣ್ಣ ಮತ್ತು ನಾರಾಯಣಗುರು ಬೋಧನೆಗಳನ್ನು ಪ್ರಸ್ತಾಪಿಸುವ ಪ್ರಧಾನಿ ಅದನ್ನು ಪಾಲಿಸುತ್ತಿಲ್ಲ, ಬಡವರು, ಶೋಷಿತರ ಬಗ್ಗೆ ಮೋದಿಗೆ ಕಾಳಜಿ ಇಲ್ಲ. ದೊಡ್ಡ ಉದ್ಯಮಿಗಳ ₹ 2.5 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಅವರು, ರೈತರ ಸಾಲದಲ್ಲಿ ಒಂದು ರೂಪಾಯಿ ಕೂಡಾ ಮನ್ನಾ ಮಾಡಿಲ್ಲ’ ಎಂದು ದೂರಿದರು.

‘ಬಸವಣ್ಣ ಮತ್ತು ನಾರಾಯಣಗುರು ಬಗ್ಗೆ ಮಾತಾಡುವ ನೀವ್ಯಾಕೆ ಬಡವರು ಮತ್ತು ಶ್ರೀಮಂತರ ಮಧ್ಯೆ  ತಾರತಮ್ಯ ಮಾಡುತ್ತೀರಿ. ಮೋದಿಜೀ ನೀವು ನುಡಿದಂತೆ ನಡೆಯಿರಿ’ ಎಂದು ಕುಟುಕಿದರು.

‘ಕಳೆದ 70 ವರ್ಷಗಳಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ ಎಂದು ಮೋದಿ ಹೇಳುತ್ತಾರೆ. ಆ ಮೂಲಕ ಅವರು ನಮ್ಮ ಹಿರಿಯರನ್ನು ಅವಮಾನಿಸಿದ್ದಾರೆ. ರೈತರು, ಸಣ್ಣ‍ಪುಟ್ಟ ವರ್ತಕರನ್ನು ಅವಮಾನಿಸುವ ಯಾವುದೇ ಹಕ್ಕು ಮೋದಿಗಿಲ್ಲ. ಅವರೆಲ್ಲ ಈ ದೇಶದ ಅಭಿವೃದ್ಧಿಗಾಗಿ 70 ವರ್ಷಗಳಿಂದ ತಮ್ಮ ಜೀವನವನ್ನೇ ತ್ಯಾಗ ಮಾಡಿದ್ದಾರೆ. ಈ ದೇಶಕ್ಕಾಗಿ ರಕ್ತ ಹರಿಸಿದ್ದಾರೆ’ ಎಂದು ರಾಹುಲ್‌ ಹೇಳಿದರು.

‘ಒಬ್ಬ ವ್ಯಕ್ತಿಯಿಂದ ಈ ದೇಶವನ್ನು ಮುಂದೆ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ ರಾಹುಲ್, 120 ಕೋಟಿ ಭಾರತೀಯರಿಂದ ಈ ದೇಶ ಅಭಿವೃದ್ಧಿಯಾಗಿದೆ. ಕಾಂಗ್ರೆಸ್ ಎಲ್ಲರನ್ನೂ ಜೊತೆಯಲ್ಲಿ ಕರೆದೊಯ್ದಿದೆ’ ಎಂದರು.

‘ಈ ಇಬ್ಬರು ಸಮಾಜ ಸುಧಾರಕರು ದ್ವೇಷ ಹರಡಲಿಲ್ಲ. ಅವರ ಹಾದಿಯಲ್ಲೇ ಕಾಂಗ್ರೆಸ್ ನಡೆಯಲಿದೆ. ನಾವೂ ದ್ವೇಷ ಹರಡುವುದಿಲ್ಲ. ಅವರ ತತ್ವಗಳನ್ನು ಪಾಲಿಸುತ್ತೇವೆ’ ಎಂದು ಕಾಂಗ್ರೆಸ್‌ ಅಧ್ಯಕ್ಷರು ಭರವಸೆ ನೀಡಿದರು.

‘ಉಡುಪಿಯಲ್ಲಿ ನಾಲ್ಕು ಬ್ಯಾಂಕುಗಳು ಹುಟ್ಟಿಕೊಂಡಿವೆ. ಈ ಬ್ಯಾಂಕ್‌ಗಳನ್ನು ಕಾಂಗ್ರೆಸ್ ದೇಶಕ್ಕೇ ವಿಸ್ತರಿಸುವ ಮಹತ್ವದ ಕೆಲಸ ಮಾಡಿದೆ. ಬಿಜೆಪಿ ಸರ್ಕಾರ ಬ್ಯಾಂಕ್ ವ್ಯವಸ್ಥೆಯನ್ನು ಕುಲಗೆಡಿಸಿದೆ’ ಎಂದು ರಾಹುಲ್ ವಾಗ್ದಾಳಿ ನಡೆಸಿದರು.

ಬಿಲ್ಲವರೇ ನಿರ್ಣಾಯಕ:

ಬಿಲ್ಲವರೇ ನಿರ್ಣಾಯಕರಾಗಿರುವ ಈ ಭಾಗದಲ್ಲಿ ಆ ಸಮುದಾಯದ ಗಮನ ಸೆಳೆಯಲು ನಾರಾಯಣಗುರುಗಳ ವಾಕ್ಯಗಳನ್ನು ಪದೇಪದೇ ರಾಹುಲ್‌ ವೇದಿಕೆಗಳಲ್ಲಿ ಬಳಸಿಕೊಂಡರು. ಅಲ್ಲದೆ, ಮಧ್ಯಾಹ್ನದ ಊಟಕ್ಕೆ ಮುನ್ನ ಹೆಜಮಾಡಿಯ ನಾರಾಯಣ ಗುರು ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ಯಾತ್ರೆ ಸಾಗಿಬಂದ ಉಡುಪಿ, ಕಾಪು, ಮೂಡುಬಿದ್ರೆ, ಸುರತ್ಕಲ್, ಮಂಗಳೂರು ವಿಧಾನಸಭಾ ಕ್ಷೇತ್ರಗಳಲ್ಲಿ ಹಾಲಿ ಕೈ ಶಾಸಕರಿದ್ದು, ಈ ಕ್ಷೇತ್ರ ಉಳಿಸಿಕೊಳ್ಳುವುದು ಕಾಂಗ್ರೆಸ್‌ ಪ್ರಯತ್ನಿಸುತ್ತಿದೆ. ಇಂಥಾ ಸಂದರ್ಭದಲ್ಲಿ  ನಾರಾಯಣ ಗುರುಗಳನ್ನು ರಾಹುಲ್ ಪ್ರಚಾರ ಸಭೆಗಳಲ್ಲಿ ಬಳಸುವ ಮೂಲಕ ಬಿಲ್ಲವರ ಬೆಂಬಲ ಗಳಿಸಲು ಕಸರತ್ತು ನಡೆಸುತ್ತಿದ್ದಾರೆ.

* ಧರ್ಮ ಸಂಘರ್ಷದ ಲಾಭ ಪಡೆಯಲು ಬಿಜೆಪಿ ಹವಣಿಸುತ್ತಿದೆ. ಕರಾವಳಿಯನ್ನು ಕೋಮುವಾದದ ಪ್ರಯೋಗಾಲಯ ಮಾಡಿದೆ

–ಸಿದ್ದರಾಮಯ್ಯ, ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT