ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ನರ್‌ ಅಬ್ಬರದ ಬ್ಯಾಟಿಂಗ್: ಶ್ರೀಲಂಕಾ ಎದುರು ಆಸ್ಟ್ರೇಲಿಯಾಗೆ 7 ವಿಕೆಟ್ ಜಯ

ಟಿ20 ಸರಣಿ ಕ್ಲೀನ್‌ಸ್ವೀಪ್‌
Last Updated 2 ನವೆಂಬರ್ 2019, 5:57 IST
ಅಕ್ಷರ ಗಾತ್ರ

ಮೆಲ್ಬರ್ನ್‌ (ಎಎಫ್‌ಪಿ): ಡೇವಿಡ್‌ ವಾರ್ನರ್ ಮತ್ತೊಮ್ಮೆ ಮಿಂಚಿದರು. ಅವರ ಅರ್ಧಶತಕದ (ಔಟಾಗದೆ 57) ನೆರವಿನಿಂದ ಆಸ್ಟ್ರೇಲಿಯ ತಂಡ, ಶ್ರೀಲಂಕಾ ತಂಡವನ್ನು ಮೂರನೇ ಟ್ವೆಂಟಿ–20 ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಮಣಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 3–0ಯೊಂದಿಗೆ ವಶಪಡಿಸಿಕೊಂಡಿತು.

ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಲಂಕಾ, ಆರು ವಿಕೆಟ್‌ ಕಳೆದುಕೊಂಡು 142 ರನ್‌ ಗಳಿಸಿತು. ಮಿಷೆಲ್‌ ಸ್ಟಾರ್ಕ್‌, ಕೇನ್‌ ರಿಚರ್ಡ್‌ಸನ್‌ ಹಾಗೂ ಪ್ಯಾಟ್‌ ಕಮಿನ್ಸ್ (ತಲಾ 2 ವಿಕೆಟ್‌) ಪ್ರವಾಸಿ ತಂಡದ ರನ್‌ ಗಳಿಕೆಗೆ ಕಡಿವಾಣ ಹಾಕಿದರು. ಕುಶಾಲ್‌ ಪೆರೇರ (57 ರನ್‌, 4 ಬೌಂಡರಿ, 1 ಸಿಕ್ಸರ್‌) ಲಂಕಾ ಪರ ಪ್ರತಿರೋಧ ತೋರಿದರು.

ಸಾಧಾರಣ ಗುರಿ ಬೆನ್ನತ್ತಿದ ಆಸ್ಟ್ರೇಲಿಯ ತಂಡಕ್ಕೆ ಲಸಿತ್‌ ಮಾಲಿಂಗ ನೇತೃತ್ವದ ಲಂಕಾ ಬೌಲಿಂಗ್‌ ಪಡೆ ಸವಾಲಾಗಲೇ ಇಲ್ಲ. 14 ಎಸೆತಗಳು ಬಾಕಿ ಇರುವಂತೆಯೇ ಆತಿಥೇಯ ತಂಡ ಜಯದ ನಗು ಬೀರಿತು. ವಾರ್ನರ್‌ ಬ್ಯಾಟ್‌ನಿಂದ ನಾಲ್ಕು ಬೌಂಡರಿ, 1 ಸಿಕ್ಸರ್‌ ಸಿಡಿದವು.

ಆ್ಯರನ್‌ ಫಿಂಚ್‌ (37 ರನ್‌,1 ಬೌಂಡರಿ, 3 ಸಿಕ್ಸರ್‌) ಅವರು ವಾರ್ನರ್‌ಗೆ ಉತ್ತಮ ಬೆಂಬಲ ನೀಡಿದರು.

ಮೂರೂ ಪಂದ್ಯಗಳು ಸೇರಿ 217 ರನ್‌ ಕಲೆ ಹಾಕಿದ ವಾರ್ನರ್‌, ಒಂದು ಪಂದ್ಯದಲ್ಲೂ ವಿಕೆಟ್‌ ಒಪ್ಪಿಸಲಿಲ್ಲ.

ಆತಿಥೇಯ ತಂಡ ಮೊದಲ ಪಂದ್ಯವನ್ನು 134 ರನ್‌ಗಳಿಂದ ಗೆದ್ದುಕೊಂಡರೆ, ಎರಡನೇ ಪಂದ್ಯದಲ್ಲಿ 9 ವಿಕೆಟ್‌ಗಳ ಜಯಭೇರಿ ಮೊಳಗಿಸಿತ್ತು.

ಸಂಕ್ಷಿಪ್ತ ಸ್ಕೋರು:

ಶ್ರೀಲಂಕಾ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 142 (ಕುಶಾಲ್‌ ಪೆರೇರ 57, ಆವಿಷ್ಕಾ ಫರ್ನಾಂಡೊ 20; ಪ್ಯಾಟ್‌ ಕಮಿನ್ಸ್ 23ಕ್ಕೆ 2, ಕೇನ್‌ ರಿಚರ್ಡ್‌ಸನ್‌ 25ಕ್ಕೆ 2)

ಆಸ್ಟ್ರೇಲಿಯ 17.4 ಓವರ್‌ಗಳಲ್ಲಿ 3 ವಿಕೆಟ್‌ಗೆ 145 ( ಡೇವಿಡ್‌ ವಾರ್ನರ್‌ ಔಟಾಗದೆ 57, ಆ್ಯರನ್‌ ಫಿಂಚ್‌ 37; ನುವಾನ್‌ ಪ್ರದೀಪ್‌ 20ಕ್ಕೆ 1)

ಫಲಿತಾಂಶ: ಆಸ್ಟ್ರೇಲಿಯಾಕ್ಕೆ 7 ವಿಕೆಟ್‌ ಜಯ, 3–0ಯಿಂದ ಸರಣಿ ವಶ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT