ಭಾನುವಾರ, 6 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಆ್ಯಷಸ್‌ ಎರಡನೇ ಟೆಸ್ಟ್‌ ಆಸ್ಟ್ರೇಲಿಯಾಕ್ಕೆ ಉತ್ತಮ ಆರಂಭ

Published : 28 ಜೂನ್ 2023, 17:43 IST
Last Updated : 28 ಜೂನ್ 2023, 17:43 IST
ಫಾಲೋ ಮಾಡಿ
Comments

ಲಂಡನ್‌: ಆರಂಭ ಆಟಗಾರ ಡೇವಿಡ್‌ ವಾರ್ನರ್‌ (66), ಮಾರ್ನಸ್‌ ಲಾಬುಷೇನ್‌ (47) ಮತ್ತು ಸ್ಟೀವನ್‌ ಸ್ಮಿತ್‌ (ಅಜೇಯ 55) ಅವರ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೆಲಿಯಾ ತಂಡದವರು ಲಾರ್ಡ್ಸ್‌ನಲ್ಲಿ ಬುಧವಾರ ಆರಂಭವಾದ ಆ್ಯಷಸ್ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಉತ್ತಮ ಸ್ಥಿತಿಗೆ ತಲುಪಿದರು. 65 ಓವರುಗಳ ಆಟದ ನಂತರ ಪ್ರವಾಸಿ ತಂಡ 3 ವಿಕೆಟ್‌ಗೆ 256 ರನ್‌ ಗಳಿಸಿತ್ತು.

ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಆಸ್ಟ್ರೇಲಿಯಾಕ್ಕೆ ವಾರ್ನರ್ ಮತ್ತು ಉಸ್ಮಾನ್‌ ಖ್ವಾಜಾ ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಬಂದ 73 ರನ್‌ಗಳಲ್ಲಿ ಖ್ವಾಜಾ ಪಾಲು ಬರೇ 17. ಆ್ಯಷಸ್‌ ಸರಣಿಗೆ ಪದಾರ್ಪಣೆ ಮಾಡಿದ ಜೋಶ್ ಟಂಗ್‌ ಬೌಲಿಂಗ್‌ನಲ್ಲಿ ಅವರು ಬೌಲ್ಡ್‌ ಆದರು. ಲಂಚ್‌ ನಂತರ ವಾರ್ನರ್‌, ಟಂಗ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆಗಿ ನಿರ್ಗಮಿಸಿದರು. ವಾರ್ನರ್‌, ಆ್ಯಷಸ್‌ ಸರಣಿಯಲ್ಲಿ ಇದುವರೆಗೆ 1,999 ರನ್‌ ಗಳಿಸಿದ್ದಾರೆ. 2,000 ರನ್‌ ಗಳಿಸಿದ ಆಸ್ಟ್ರೇಲಿಯಾದ 18ನೇ ಆಟಗಾರ ಎನಿಸಲು ಎರಡನೇ ಇನಿಂಗ್ಸ್‌ ಆಡಬೇಕಾಗಿದೆ.

ಇಂಗ್ಲೆಂಡ್‌ ಬೌಲರ್‌ಗಳು ಪ್ರವಾಸಿ ಬ್ಯಾಟರ್‌ಗಳಿಗೆ ಅಷ್ಟೇನೂ ಪರೀಕ್ಷೆ ಒಡ್ಡಲಿಲ್ಲ. ಲಾಬುಷೇನ್ ಜೊತೆಗೂಡಿದ ಅನುಭವಿ ಸ್ಮಿತ್‌ ಮೂರನೇ ವಿಕೆಟ್‌ಗೆ 102 ರನ್‌ ಸೇರಿಸಿ ತಂಡದ ಸ್ಥಿತಿಯನ್ನು ಉತ್ತಮಗೊಳಿಸಿದರು.

ಎಚ್ಚರಿಕೆಯ ಆಟವಾಡುತ್ತಿರುವ ಸ್ಮಿತ್‌ 56 ರನ್‌ ಗಳಿಸಿದ್ದರೆ, ಬಿರುಸಿನ ಆಟವಾಡುತ್ತಿರುವ ಟ್ರಾವಿಸ್‌ ಹೆಡ್‌ 44 ರನ್‌ (42 ಎ, 8 ಬೌಂಡರಿ) ಗಳಿಸಿದ್ದಾರೆ.

ಲಂಚ್‌ ನಂತರ ಚೆಂಡನ್ನು ತಡೆಯುವ ಯತ್ನದಲ್ಲಿ ಡೈವ್ ಮಾಡಿದ ಒಲಿ ಪೋಪ್‌ ಅವರಿಗೆ ಬಲಭುಜಕ್ಕೆ ಗಾಯವಾಗಿದ್ದು, ಆತಿಥೇಯ ತಂಡವನ್ನು ಚಿಂತೆಗೆ ದೂಡಿದೆ.

‘ಜಸ್ಟ್‌ ಸ್ಟಾಪ್‌ ಆಯಿಲ್‌’ ಸಂಘಟನೆಯ ಇಬ್ಬರು ಪ್ರತಿಭಟನಾಕಾರರು ಎರಡನೆ ಟೆಸ್ಟ್‌ ಪಂದ್ಯ ಆರಂಭವಾದ ಕೆಲವೇ ಕ್ಷಣಗಳಲ್ಲಿ ಮೈದಾನಕ್ಕೆ ನುಗ್ಗಿದ್ದರು. ಇದರಿಂದಾಗಿ ಪಂದ್ಯಕ್ಕೆ ಐದು ನಿಮಿಷ ಅಡ್ಡಿಯಾಯಿತು.

ಅವರು ಕಿತ್ತಲೆ ಬಣ್ಣದ ಪುಡಿಯನ್ನು ಪಿಚ್‌ನಲ್ಲಿ ಚೆಲ್ಲಲು ಯತ್ನಿಸಿದರು. ಒಬ್ಬ ವ್ಯಕ್ತಿಯನ್ನು ಇಂಗ್ಲೆಂಡ್‌ ವಿಕೆಟ್‌ ಕೀಪರ್‌ ಜಾನಿ ಬೇಸ್ಟೊ ಅವರು ಹಿಡಿದು 50 ಮೀಟರ್ಸ್‌ನಷ್ಟು ದೂರ ಎಳೆದೊಯ್ದು ಭದ್ರತಾ ಸಿಬ್ಬಂದಿಗೆ ಒಪ್ಪಿಸಿದರು. ಬೆನ್‌ ಸ್ಟೋಕ್ಸ್‌ ಮತ್ತು ವಾರ್ನರ್‌ ಇನ್ನೊಬ್ಬನನ್ನು ನಿಭಾಯಿಸಿದರು. ಬೇಸ್ಟೊ ಡ್ರೆಸಿಂಗ್‌ ರೂಮ್‌ಗೆ ತೆರಳಿ ಮೈಗೆ ತಾಗಿದ್ದ ಪುಡಿಯನ್ನು ಸ್ವಚ್ಛಗೊಳಿಸಿ ಮರಳಿದರು.

ಪೊಲೀಸರು ಮೂವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಲಂಡನ್‌ ಮೆಟ್ರೊಪಾಲಿಟನ್‌ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪಳೆಯುಳಿಕೆ ಇಂಧನ ಬಳಕೆಗೆ ಕಡಿವಾಣ ಹೇರಬೇಕು ಎಂಬುದು ಜಸ್ಟ್‌ ಸ್ಟಾಪ್ ಆಯಿಲ್‌ ಸಂಘಟನೆಯ ಧ್ಯೇಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT