ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಲ್‌ರೌಂಡರ್ ಜಡೇಜಗೆ ಸ್ಪಿನ್ನರ್ ಚಾಹಲ್ ಸಮವೇ: ಮೊಯಿಸಸ್ ಹೆನ್ರಿಕ್ಸ್ ಪ್ರಶ್ನೆ

ಭಾರತ ತಂಡದ ಕಂಕಷನ್ ಪಾಲನೆ ಬಗ್ಗೆ ಆಸ್ಟ್ರೇಲಿಯಾ ತಂಡದಲ್ಲಿ ಅಸಮಾಧಾನ
Last Updated 4 ಡಿಸೆಂಬರ್ 2020, 16:05 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಕಂಕಷನ್ ನಿಯಮದಡಿಯಲ್ಲಿ ಕಣಕ್ಕಿಳಿದ ಬದಲೀ ಆಟಗಾರ ಯಜುವೇಂದ್ರ ಚಾಹಲ್ ಆಸ್ಟ್ರೇಲಿಯಾದ ಸೋಲಿಗೆ ಕಾರಣವಾದರು.

ಇದೀಗ ಈ ವಿಷಯವು ಆತಿಥೇಯ ಬಳಗದಲ್ಲಿ ಭಾರಿ ಅಸಮಾಧಾನಕ್ಕೆ ಕಾರಣವಾಗಿದೆ. ಕಂಕಷನ್ ನಿಯಮವನ್ನು ಭಾರತ ತಂಡವು ಸರಿಯಾಗಿ ಪಾಲನೆ ಮಾಡಿಲ್ಲವೆಂಬ ಟೀಕೆ ವ್ಯಕ್ತವಾಗುತ್ತಿದೆ.

’ರವೀಂದ್ರ ಜಡೇಜ ಹೆಲ್ಮೆಟ್‌ಗೆ ಬೌನ್ಸರ್‌ ಅಪ್ಫಳಿಸಿದ್ದು ನಿಜ. ಅದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಕಂಕಷನ್ ನಿಯಮದಡಿಯಲ್ಲಿ ಅವರಿಗೆ ಫೀಲ್ಡಿಂಗ್ ಗೆ ಇಳಿಯದಂತೆ ವಿಶ್ರಾಂತಿ ನೀಡಿದ್ದು ಕೂಡ ಸರಿಯಾದ ನಿರ್ಧಾರ. ಬದಲೀ ಆಟಗಾರನನ್ನು ತೆಗೆದುಕೊಳ್ಳುವ ಹಕ್ಕು ಕೂಡ ತಂಡಕ್ಕೆ ಇದೆ. ಆದರೆ, ಇಲ್ಲಿ ಪ್ರಶ್ನೆ ಇರುವುದು ಆಲ್‌ರೌಂಡರ್ ಆಗಿರುವ ಜಡೇಜ ಬದಲಿಗೆ ಪೂರ್ಣಪ್ರಮಾಣದ ಸ್ಪಿನ್ ಬೌಲರ್‌ ಆಗಿರುವ ಚಾಹಲ್ ಹೇಗೆ ಸರಿಸಮನಾದ ಬದಲೀ ಆಟಗಾರನಾಗುತ್ತಾರೆಂಬುದು. ಅಷ್ಟಕ್ಕೂ ಜಡೇಜ ತಮ್ಮ ಬ್ಯಾಟಿಂಗ್ ಮುಗಿಸಿದ್ದರಲ್ಲವೇ’ ಎಂದು ಆಸ್ಟ್ರೇಲಿಯಾ ತಂಡದ ಆಲ್‌ರೌಂಡರ್ ಮೊಯಿಸಸ್ ಹೆನ್ರಿಕ್ಸ್‌ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪಂದ್ಯದ ನಂತರ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ’ಐಸಿಸಿ ನಿಯಮವು ಚೆನ್ನಾಗಿದೆ. ನಾನಿಲ್ಲಿ ನಿಯಮದ ಬಗ್ಗೆ ಮಾತನಾಡುತ್ತಿಲ್ಲ. ಆದರೆ ಬದಲೀ ಆಟಗಾರನ ಆಯ್ಕೆಯ ಕುರಿತು ತಿಳಿಯಬೇಕಿದೆ. ಈ ವಿಷಯದಲ್ಲಿ ಯಾವ ರೀತಿ ನಿರ್ಧರಿಸಲಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ. ಸರಿಸಮ ಇರುವ ಆಟಗಾರನ ಬದಲಾವಣೆ ಅಗತ್ಯವಲ್ಲವೇ’ ಎಂದು 33 ವರ್ಷದ ಹೆನ್ರಿಕ್ಸ್ ಕೇಳಿದರು.

ಅವರು ಈ ಪಂದ್ಯದಲ್ಲಿ ಮೂರು ವಿಕೆಟ್ ಮತ್ತು 30 ರನ್ ಗಳಿಸಿದರು.

ಹೋದ ವರ್ಷ ರೂಪಿಸಲಾಗಿರುವ ಐಸಿಸಿ ನಿಯಮದಲ್ಲಿ, ’ಹೆಲ್ಮೆಟ್‌ಗೆ ಚೆಂಡು ಬಡಿದ ಆಟಗಾರ ಬದಲಿಗೆ ಸಮಾನವಾದ ಬದಲೀ ಆಟಗಾರನಿಗೆ ಆಡಲು ಅವಕಾಶ ನೀಡಬೇಕು. ಅದನ್ನು ಪಂದ್ಯ ರೆಫರಿಯೇ ನಿರ್ವಹಿಸಬೇಕು‘ ಎಂದು ಉಲ್ಲೇಖಿಸಲಾಗಿದೆ.

ಈ ವಿಷಯದ ಕುರಿತು ಪ್ರತಿಕ್ರಿಯಿಸಿರುವ ಆಸ್ಟ್ರೇಲಿಯಾ ತಂಡದ ನಾಯಕ ಆ್ಯರನ್ ಫಿಂಚ್, ’ಅವರ ತಂಡದ ವೈದ್ಯರು ಜಡೇಜ ಆರೋಗ್ಯಸ್ಥಿತಿಯ ಬಗ್ಗೆ ಸಲಹೆ ನೀಡಿರುತ್ತಾರೆ. ಆ ಪ್ರಕಾರ ತಂಡವು ನಿರ್ಧಾರ ಕೈಗೊಂಡಿರುತ್ತದೆ. ವೈದ್ಯಕೀಯ ಪರಿಣತರ ಸಲಹೆಯನ್ನು ನಾವು ಪ್ರಶ್ನಿಸಲು ಸಾಧ್ಯವಿಲ್ಲ‘ ಎಂದಿದ್ದಾರೆ.

ಈ ಘಟನೆಯ ಕುರಿತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಟಾಮ್ ಮೂಡಿ ಕೂಡ ಪ್ರತಿಕ್ರಿಯಿಸಿದ್ದಾರೆ. ಆದರೆ ಅವರು ಭಾರತ ತಂಡದ ವೈದ್ಯಕೀಯ ಸಿಬ್ಬಂದಿಯನ್ನು ಟೀಕಿಸಿದ್ದಾರೆ.

’ಜಡೇಜ ಬದಲಿಗೆ ಚಾಹಲ್ ಅವರನ್ನು ಕಣಕ್ಕಿಳಿಸಿದ್ದರ ಬಗ್ಗೆ ನನಗೆ ಆಕ್ಷೇಪವಿಲ್ಲ. ಆದರೆ, ಜಡೇಜ ಹೆಲ್ಮೆಟ್‌ಗೆ ಚೆಂಡು ಅಪ್ಪಳಿಸಿದಾಗ ತಂಡದ ವೈದ್ಯ ಮತ್ತು ಫಿಸಿಯೋ ಅವರತ್ತ ಧಾವಿಸದೇ ಇರುವುದು ಅಕ್ಷಮ್ಯ. ಇದು ಶಿಷ್ಟಾಚಾರ ಉಲ್ಲಂಘನೆಯೇ ಸರಿ‘ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT