ಮಂಗಳವಾರ, ಜೂನ್ 15, 2021
26 °C

ಡಬ್ಲ್ಯುಟಿಸಿ ಫೈನಲ್ ನಂತರ ವಾಟ್ಲಿಂಗ್ ನಿವೃತ್ತಿ

ಪಿಟಿಐ‌ Updated:

ಅಕ್ಷರ ಗಾತ್ರ : | |

Prajavani

ವೆಲಿಂಗ್ಟನ್: ನ್ಯೂಜಿಲೆಂಡ್ ತಂಡದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ ಬಿ.ಜೆ.ವಾಟ್ಲಿಂಗ್ ಮುಂದಿನ ತಿಂಗಳು ಇಂಗ್ಲೆಂಡ್‌ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ ನಂತರ ಕ್ರಿಕೆಟ್‌ನ ಎಲ್ಲ ಮಾದರಿಯಿಂದ ನಿವೃತ್ತರಾಗಲಿದ್ದಾರೆ. ಈ ವಿಷಯವನ್ನು ಗುರುವಾರ ಅವರು ಬಹಿರಂಗ ಮಾಡಿದ್ದಾರೆ.

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ ಜೂನ್ 18ರಂದು ಸೌತಾಂಪ್ಟನ್‌ನಲ್ಲಿ ಅರಂಭವಾಗಲಿದೆ. ಇದಕ್ಕೂ ಮೊದಲು ಇಂಗ್ಲೆಂಡ್ ವಿರುದ್ಧ ನ್ಯೂಜಿಲೆಂಡ್ ಎರಡು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಈ ವಾರಾಂತ್ಯದಲ್ಲಿ ಪ್ರಕಟವಾಗಲಿರುವ ಗುತ್ತಿಗೆ ನವೀಕರಣದ ಪಟ್ಟಿಯಲ್ಲಿ ವಾಟ್ಲಿಂಗ್ ಹೆಸರನ್ನು ಕೈಬಿಡುವ ಸಾಧ್ಯತೆ ಇದೆ ಎನ್ನಲಾಗಿದ್ದು ಇದರ ಬೆನ್ನಲ್ಲೇ ಅವರು ನಿವೃತ್ತಿ ನಿರ್ಧಾರ ಪ್ರಕಟಿಸಿದ್ದಾರೆ.

2009ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ವಾಟ್ಲಿಂಗ್ ಒಂದು ದಶಕದಿಂದ ತಂಡದ ಪ್ರಮುಖ ಆಟಗಾರನಾಗಿದ್ದಾರೆ. ವಿಶ್ವ ದರ್ಜೆಯ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಗುರುತಿಸಿಕೊಂಡಿರುವ ಅವರು 73 ಟೆಸ್ಟ್ ಪಂದ್ಯಗಳನ್ನು ಆಡಿದ್ದು ಅನೇಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಅವರಿಗೆ ಈಗ 35 ವರ್ಷ ವಯಸ್ಸು. 

‘ನಿವೃತ್ತಿಗೆ ಇದು ಸರಿಯಾದ ಸಮಯ. ಕ್ರಿಕೆಟ್‌ನ ನಿಜವಾದ ರೋಚಕತೆ ಇರುವುದು ಟೆಸ್ಟ್ ಪಂದ್ಯಗಳಲ್ಲಿ. ಈ ಮಾದರಿಯನ್ನು ನಾನು ತುಂಬ ಪ್ರೀತಿಸುತ್ತೇನೆ. ಉತ್ತಮ ಸಾಧನೆ ಮಾಡಿದ ದಿನಗಳಲ್ಲಿ ಸಹ ಆಟಗಾರರ ಜೊತೆಗೂಡಿ ಬಿಯರ್ ಕುಡಿಯುವ ಅವಕಾಶ ಇನ್ನು ಸಿಗುವುದಿಲ್ಲವಲ್ಲ ಎಂಬುದು ತುಂಬ ಬೇಸರದ ವಿಷಯ’ ಎಂದು ಅವರು ಹೇಳಿದ್ದಾರೆ. 

ವಾರಾಂತ್ಯದಲ್ಲಿ ವಿಲಿಯಮ್ಸನ್‌ ಇಂಗ್ಲೆಂಡ್‌ಗೆ 

ಭಾರತದಲ್ಲಿ ನಡೆದ ಐಪಿಎಲ್‌ ಟೂರ್ನಿಯಲ್ಲಿ ಆಡಿದ ನ್ಯೂಜಿಲೆಂಡ್‌ ಆಟಗಾರರು ಈ ವಾರಾಂತ್ಯದಲ್ಲಿ ಇಂಗ್ಲೆಂಡ್‌ಗೆ ಪ್ರಯಾಣಿಸುವ ಸಾಧ್ಯತೆ ಇದೆ ಎಂದು ಕೋಚ್ ಗ್ಯಾರಿ ಸ್ಟಡ್‌ ತಿಳಿಸಿದ್ದಾರೆ. ಕೋವಿಡ್‌ನಿಂದಾಗಿ ಐಪಿಎಲ್ ಟೂರ್ನಿಯನ್ನು ಅರ್ಧಕ್ಕೆ ಮೊಟಕುಗೊಳಿಸಲಾಗಿದ್ದು ಟೆಸ್ಟ್ ಪಂದ್ಯಗಳಲ್ಲಿ ಆಡಲಿರುವ ಕೆಲವು ಆಟಗಾರರು ಮಾಲ್ಡಿವ್ಸ್‌ನಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.

ನಾಯಕ ಕೇನ್ ವಿಲಿಯಮ್ಸನ್‌, ಬೌಲರ್‌ಗಳಾದ ಮಿಷೆಲ್ ಸ್ಯಾಂಟ್ನರ್‌, ಕೈಲ್ ಜೆಮೀಸನ್‌ ಮತ್ತು ಫಿಜಿಯೊ ಟಾಮಿ ಸಿಮ್ಸೆಕ್ ಅವರು ಸದ್ಯ ಮಾಲ್ಡಿವ್ಸ್‌ನಲ್ಲಿದ್ದಾರೆ. ಟ್ರೆಂಟ್ ಬೌಲ್ಟ್‌ ತವರಿಗೆ ಮರಳಿದ್ದು ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಮಾತ್ರ ಲಭ್ಯವಿರುವ ಸಾಧ್ಯತೆ ಇದೆ ಎಂದು ಸ್ಟಡ್ ವಿವರಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು