ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಪಿಎಲ್: ಪ್ರೇಕ್ಷಕರಿಗೆ ಪ್ರವೇಶ ನೀಡಲು ಯುಎಇ ಚಿಂತನೆ

Last Updated 31 ಜುಲೈ 2020, 15:01 IST
ಅಕ್ಷರ ಗಾತ್ರ

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಟ್ವೆಂಟಿ–20 ಪಂದ್ಯಗಳನ್ನು ವೀಕ್ಷಿಸಲು ಕ್ರೀಡಾಂಗಣದಲ್ಲಿ ಗ್ಯಾಲರಿ ಸಾಮರ್ಥ್ಯದ ಶೇ 30–50ರಷ್ಟು ಪ್ರೇಕ್ಷಕರಿಗೆ ಪ್ರವೇಶ ನೀಡಲು ಯುನೈಟೆಡ್ ಅರಬ್ ಎಮಿರೆಟ್ಸ್‌ (ಯುಎಇ) ಕ್ರಿಕೆಟ್ ಸಂಸ್ಥೆ ಚಿಂತನೆ ನಡೆಸಿದೆ.

ಸೆಪ್ಟೆಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ನಡೆಸುವುದಾಗಿ ಈಚೆಗೆ ಪ್ರಕಟಿಸಿದ್ದ ಐಪಿಎಲ್ ಆಡಳಿತ ಸಮಿತಿ ಮುಖ್ಯಸ್ಥ ಬ್ರಿಜೇಶ್ ಪಟೇಲ್, ’ಪಂದ್ಯಗಳಿಗೆ ಪ್ರೇಕ್ಷಕರಿಗೆ ಪ್ರವೇಶ ನೀಡುವುದು ಅಥವಾ ಬಿಡುವುದು ಯುಎಇಗೆ ಬಿಟ್ಟ ವಿಷಯ‘ ಎಂದಿದ್ದರು.

ಈ ಕುರಿತು ಪ್ರತಿಕ್ರಿಯಿಸಿರುವ ಯುಎಇ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಮುಬಾಶೀರ್ ಉಸ್ಮಾನಿ, ’ಬಿಸಿಸಿಐ ನಮಗಿನ್ನೂ ಅಧಿಕೃತವಾಗಿ ಏನೂ ಹೇಳಿಲ್ಲ. ಅವರೂ ಕೂಡ ಭಾರತದ ಕೇಂದ್ರ ಸರ್ಕಾರದ ಸೂಚನೆಗಾಗಿ ಕಾಯುತ್ತಿದ್ದಾರೆ. ಒಂದೊಮ್ಮೆ ಬಿಸಿಸಿಐ ಪ್ರಸ್ತಾವ ಸಲ್ಲಿಸಿದರೆ, ಮಾರ್ಗಸೂಚಿಗಳು, ವೇಳಾಪಟ್ಟಿ ಮತ್ತಿತರ ದಾಖಲೆಪತ್ರಗಳೊಂದಿಗೆ ನಮ್ಮ ಸರ್ಕಾರಕ್ಕೆ ಮನವಿ ಸಲ್ಲಿಸುತ್ತೇವೆ‘ ಎಂದಿದ್ದಾರೆ.

’ನಮ್ಮವರಿಗೆ ಈ ಪ್ರತಿಷ್ಠಿತ ಟೂರ್ನಿಯ ಆಯೋಜನೆಯ ಅನುಭವ ಸಿಕ್ಕರೆ ಒಳ್ಳೆಯದು. ಆದರೆ, ಸರ್ಕಾರದ ನಿರ್ಧಾರವೇ ಅಂತಿಮ. ಇಲ್ಲಿ ನಡೆಯುತ್ತಿರುವ ಬೇರೆ ಬೇರೆ ಕಾರ್ಯಕ್ರಮಗಳಿಗೆ ಶೇ 30–50ರಷ್ಟು ಪ್ರೇಕ್ಷಕರಿಗೆ ಅವಕಾಶ ನೀಡಲಾಗುತ್ತಿದೆ. ಅದರಿಂದಾಗಿ ಕ್ರಿಕೆಟ್ ಪಂದ್ಯಗಳಿಗೂ ಅಷ್ಟೇ ಸಂಖ್ಯೆಯ ಜನರಿಗೆ ಅವಕಾಶ ನೀಡಬಹುದು. ನಮ್ಮ ಸರ್ಕಾರವು ಅದಕ್ಕೆ ಅನುಮತಿ ನೀಡುವ ವಿಶ್ವಾಸವಿದೆ‘ ಎಂದು ಉಸ್ಮಾನಿ ಅಭಿಪ್ರಾಯಪಟ್ಟರು.

’ಕೊರೊನಾ ಸೋಂಕಿಗೆ ಕಡಿವಾಣ ಹಾಕುವಲ್ಲಿ ಇಲ್ಲಿಯ ಸರ್ಕಾರವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಆದ್ದರಿಂದಾಗಿಯೇ ಇಲ್ಲಿ ಸೋಂಕು ಪ್ರಕರಣಗಳು ಕಡಿಮೆಯಾಗಿವೆ. ಕೆಲವು ಶಿಷ್ಟಾಚಾರಗಳು ಮತ್ತು ನಿಯಮಗಳೊಂದಿಗೆ ಸಹಜ ಜೀವನ ನಡೆಯುತ್ತಿದೆ‘ ಎಂದು ಹೇಳಿದ್ದಾರೆ.

ಯುಎಇಯಲ್ಲಿ ಇದುವರೆಗೆ ಆರು ಸಾವಿರಕ್ಕೂ ಹೆಚ್ಚು ಕೋವಿಡ್–19 ಸೋಂಕಿತರು ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಭಾನುವಾರ ಐಪಿಎಲ್ ಆಡಳಿತ ಸಮಿತಿಯ ಸಭೆಯು ನಡೆಯಲಿದೆ. ಅದರಲ್ಲಿ ವೇಳಾಪಟ್ಟಿ ಮತ್ತು ಪಂದ್ಯ ನಡೆಯುವ ಸ್ಥಳಗ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT