ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ತಂಡದ ನಾಯಕತ್ವ ಬದಲಾವಣೆಗೆ ಕಾರಣ ತಿಳಿಸಿದ ಸೌರವ್ ಗಂಗೂಲಿ

Last Updated 9 ಡಿಸೆಂಬರ್ 2021, 15:48 IST
ಅಕ್ಷರ ಗಾತ್ರ

ನವದೆಹಲಿ: ವಿರಾಟ್ ಕೊಹ್ಲಿ ಭಾರತದ ಟಿ20 ಕ್ರಿಕೆಟ್‌ ತಂಡದ ನಾಯಕನಾಗಿಮುಂದುವರಿಯಲು ನಿರಾಕರಿಸಿದ್ದರು. ಹೀಗಾಗಿ ಅವರು ಏಕದಿನ ತಂಡದ ನಾಯಕತ್ವವನ್ನೂ ಬಿಟ್ಟುಕೊಡಬೇಕಾಯಿತು ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ತಿಳಿಸಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಬಿಸಿಸಿಐ ಅಧ್ಯಕ್ಷ ಗಂಗೂಲಿ,'ಟಿ20 ತಂಡದ ನಾಯಕನ ಸ್ಥಾನದಿಂದ ಕೆಳಗಿಳಿಯದಂತೆ ಕೊಹ್ಲಿಗೆ ಮನವಿ ಮಾಡಿದ್ದೆವು. ಆದರೆ, ಅವರು ಮುಂದುವರಿಯಲು ಒಪ್ಪಲಿಲ್ಲ. ಆಯ್ಕೆದಾರರು ನಿಗದಿತ ಓವರ್‌ಗಳ ಮಾದರಿಯ (ಏಕದಿನ ಮತ್ತು ಟಿ20) ತಂಡಗಳಿಗೆ ಇಬ್ಬರು ನಾಯಕರನ್ನು ಹೊಂದಲು ಬಯಸಿರಲಿಲ್ಲ' ಎಂದುತಿಳಿಸಿದ್ದಾರೆ.

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ನಿಗದಿತ ಓವರ್‌ಗಳ ಮಾದರಿಯ ಕ್ರಿಕೆಟ್‌ನಲ್ಲಿ ಒಬ್ಬರಿಗಿಂತ ಹೆಚ್ಚು ನಾಯಕರನ್ನು ಹೊಂದುವುದು ಗೊಂದಲಗಳಿಗೆ ಎಡೆಮಾಡಿಕೊಡುತ್ತದೆ ಎಂದು ಸಲಹೆ ನೀಡಿತ್ತು. ಹೀಗಾಗಿಒಬ್ಬನೇ ನಾಯಕನ ನೇಮಕಕ್ಕೆ ತೀರ್ಮಾನಿಸಲಾಯಿತು ಎಂದು ಹೇಳಿದ್ದಾರೆ.

ದುಬೈನಲ್ಲಿ ಈಚೆಗೆ ಮುಕ್ತಾಯವಾದ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತ ತಂಡ ಗುಂಪು ಹಂತದಲ್ಲೇ ನಿರ್ಗಮಿಸಿತ್ತು. ಅದಾದ ಬಳಿಕ ವಿರಾಟ್ ಚುಟುಕು ಕ್ರಿಕೆಟ್‌ ತಂಡದ ನಾಯಕತ್ವ ತ್ಯಜಿಸಿದ್ದರು. ಅದರ ಬೆನ್ನಲ್ಲೇ ಚುಟುಕು ಕ್ರಿಕೆಟ್‌ ತಂಡದ ಜವಾಬ್ದಾರಿಯನ್ನು ರೋಹಿತ್‌ಗೆ ನೀಡಲಾಗಿತ್ತು.

'ನನಗೆ ಆ (ಗೊಂದಲಗಳ) ಬಗ್ಗೆ ಗೊತ್ತಿಲ್ಲ. ಆದರೆ, ಅವರು ಹಾಗೆ ಭಾವಿಸಿದ್ದಾರೆ. ಹಾಗಾಗಿ ಈನಿರ್ಣಯ ತೆಗೆದುಕೊಳ್ಳಲಾಗಿದೆ. ಇದರಿಂದಾಗಿ ಬಿಳಿ ಚೆಂಡಿನ (ನಿಗದಿತ ಓವರ್‌ಗಳ) ಮಾದರಿಯ ಕ್ರಿಕೆಟ್‌ ತಂಡವನ್ನು ಮುನ್ನಡೆಸಲು ರೋಹಿತ್‌ಗೆ ಅವಕಾಶ ಸಿಕ್ಕಿದೆ. ವಿರಾಟ್ ಅವರನ್ನು ಕೆಂಪು ಚೆಂಡಿನ ಮಾದರಿಯ (ಟೆಸ್ಟ್‌) ತಂಡಕ್ಕೆ ನಾಯಕರಾಗಿ ಮುಂದುವರಿಯಲಿದ್ದಾರೆ' ಎಂದು ಸ್ಪಷ್ಟಪಡಿಸಿದ್ದಾರೆ.

ರೋಹಿತ್ ಏಕದಿನ ಕ್ರಿಕೆಟ್‌ನ ನಾಯಕತ್ವವನ್ನು ಹೇಗೆ ನಿಭಾಯಿಸಬಲ್ಲರು ಎಂದು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸೌರವ್, 'ಅಂದಾಜಿಸುವುದು ಬಹಳ ಕಷ್ಟ. ಅವರಿಗೆ ಶುಭ ಕೋರುತ್ತೇನೆ ಮತ್ತು ಅವರು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸಲಿದ್ದಾರೆ ಎಂಬ ವಿಶ್ವಾಸವಿದೆ' ಎಂದಿದ್ದಾರೆ.

ಭಾರತ ತಂಡವು 2022ರ ಟಿ20 ಹಾಗೂ 2023ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ನೇತೃತ್ವದಲ್ಲಿ ಕಣಕ್ಕಿಳಿಯಲಿದೆ.

2013 ರಿಂದ 2021ರ ವರೆಗೆ ಭಾರತ ತಂಡವನ್ನು 95 ಏಕದಿನ ಪಂದ್ಯಗಳಲ್ಲಿ ಮುನ್ನಡೆಸಿದ್ದ ವಿರಾಟ್ ಕೊಹ್ಲಿ, ಶೇ 70 ರಷ್ಟು (65) ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿದ್ದರು.

ಇಲ್ಲಿಯವರೆಗೆ ಟೆಸ್ಟ್‌ ತಂಡದ ಉಪನಾಯಕರಾಗಿದ್ದ ಅಜಿಂಕ್ಯ ರಹಾನೆ ಅವರಿಗೂ ನ್ಯೂಜಿಲೆಂಡ್ ವಿರುದ್ಧ ಇತ್ತೀಚೆಗೆ ಮುಕ್ತಾಯವಾದ ಟೆಸ್ಟ್ ಸರಣಿ ಬಳಿಕ ಹಿಂಬಡ್ತಿ ನೀಡಲಾಗಿದೆ. ಆ (ಉಪನಾಯಕ) ಸ್ಥಾನವೂ ಇದೀಗ ರೋಹಿತ್ ಪಾಲಾಗಿದೆ. ರಹಾನೆ ಫಾರ್ಮ್‌ ಸಮಸ್ಯೆ ಎದುರಿಸುತ್ತಿರುವುದು ಸ್ಥಾನ ಕಳೆದುಕೊಳ್ಳಲು ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT