ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಪಾಲಿಗೆ ಜೋಫ್ರಾ ಇಂಗ್ಲಿಷ್ ವ್ಯಕ್ತಿ: ಹೋಲ್ಡರ್

Last Updated 17 ಜೂನ್ 2020, 8:50 IST
ಅಕ್ಷರ ಗಾತ್ರ

ಲಂಡನ್: ಇಂಗ್ಲೆಂಡ್‌ ತಂಡದಲ್ಲಿ ಆಡುತ್ತಿರುವ ಜೋಫ್ರಾ ಆರ್ಚರ್ ಅವರನ್ನು ನಾವು ಇಂಗ್ಲೆಂಡ್ ವ್ಯಕ್ತಿಯೆಂದೇ ಪರಿಗಣಿಸಿದ್ದೇವೆ. ಅವರನ್ನು ಅದೇ ದೃಷ್ಟಿಯಿಂದ ನೋಡುತ್ತೇವೆ ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.

ಜುಲೈ 8ರಿಂದ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿಯಲ್ಲಿ ಆಡಲು ಹೋದ ವಾರ ವಿಂಡೀಸ್ ತಂಡವು ಮ್ಯಾಂಚೆಸ್ಟರ್‌ಗೆ ಬಂದಿದೆ. ಜೋಫ್ರಾ ಅವರು ಮೂಲತಃ ವಿಂಡೀಸ್‌ನ ಬಾರ್ಬಡೀಸ್‌ನವರು. 2014ರಲ್ಲಿ ವೆಸ್ಟ್‌ ಇಂಡೀಸ್‌ನ 19 ವರ್ಷದೊಳಗಿನ ತಂಡದಲ್ಲಿ ಆಡಿದ್ದರು. 2018ರಿಂದ ವೇಗಿ ಜೋಫ್ರಾ ಅವರು ಇಂಗ್ಲೆಂಡ್ ತಂಡದಲ್ಲಿ ಆಡುತ್ತಿದ್ದಾರೆ.

‘ಆರ್ಚರ್ ಈಗ ಇಂಗ್ಲೆಂಡ್ ವ್ಯಕ್ತಿ. ಕ್ರೀಡಾಂಗಣದ ಹೊರಗೆ ನಾವೆಲ್ಲ ಗೆಳೆಯರು. ಆದರೆ ಸ್ಪರ್ಧಾಕಣದಲ್ಲಿ ಎದುರಾಳಿಗಳು. ಜೋಫ್ರಾ ಕೂಡ ನಮ್ಮನ್ನು ಅದೇ ರೀತಿ ನೋಡುತ್ತಾರೆ ಎಂಬ ಭರವಸೆ ಇದೆ’ ಎಂದು ಹೋಲ್ಡರ್ ಹೇಳಿದ್ದಾರೆ.

ಈಚೆಗೆ ಟಿವಿ ಸಂದರ್ಶನದಲ್ಲಿ ವಿಂಡೀಸ್ ಆಟಗಾರ ಕೆಮರ್ ರೋಚ್ ಕೂಡ ’ಆಟದಲ್ಲಿ ಜೋಫ್ರಾ ಗೆಳೆಯನಲ್ಲ’ ಎಂದು ಹೇಳಿದ್ದರು. ಅದನ್ನು ಹೋಲ್ಡರ್ ಸಮರ್ಥಿಸಿಕೊಂಡಿದ್ದಾರೆ.

ವೆಸ್ಟ್ ಇಂಡೀಸ್ ತಂಡವು ಇಂಗ್ಲೆಂಡ್ ವಿರುದ್ಧ ಮೂರು ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಕೋವಿಡ್ –19 ಹಾವಳಿಯಿಂದಾಗಿ ಸ್ತಬ್ಧವಾಗಿದ್ದ ಕ್ರಿಕೆಟ್ ಚಟುವಟಿಕೆಗೆ ಈ ಸರಣಿಯ ಮೂಲಕ ಚಾಲನೆ ದೊರೆಯಲಿದೆ.

ಅಮೆರಿಕದಲ್ಲಿ ಆಫ್ರಿಕಾ ಮೂಲದ ಜಾರ್ಜ್‌ ಫ್ಲಾಯ್ಡ್‌ ಸಾವಿನ ಹಿನ್ನೆಲೆಯಲ್ಲಿ ಭುಗಿಲೆದ್ದಿರುವ ಪ್ರತಿಭಟನೆಗಳ ಕುರಿತು ಮತ್ತು ಬ್ಲ್ಯಾಕ್‌ಲೈವ್ಸ್‌ ಮ್ಯಾಟರ್ಸ್‌ ಅಭಿಯಾನದ ಕುರಿತು ಮಾತನಾಡಿದ ಹೋಲ್ಡರ್, ‘ಈ ವಿಷಯವನ್ನು ಬಹಳ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಈ ಸಮಸ್ಯೆಯ ಪರಿಹಾರಕ್ಕೆ ಏನು ಮಾಡಬಹುದು ಎಂದು ಯೋಚಿಸುತ್ತಿದ್ದೇನೆ. ಬದಲಾವಣೆ ತರಲು ಇದು ಸೂಕ್ತ ಕಾಲ. ಎಲ್ಲರೂ ಒಗ್ಗಟ್ಟಿನಿಂದ ಮುಂದಡಿ ಇಟ್ಟರೆ ಯಶಸ್ಸು ದೊರೆಯುತ್ತದೆ. ಒಂದು ತಂಡವಾಗಿ ನಾವು ಈ ಅಭಿಯಾನವನ್ನು ಸಮರ್ಥಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT