ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್‌ ತಂಡಕ್ಕೆ ಮರಳಿದ ಸುನೀಲ್‌, ಪೊಲ್ಲಾರ್ಡ್‌

‌ಭಾರತ ವಿರುದ್ಧ ಟಿ–20 ಸರಣಿಗೆ ತಂಡ ಪ್ರಕಟ
Last Updated 23 ಜುಲೈ 2019, 11:30 IST
ಅಕ್ಷರ ಗಾತ್ರ

ಸೇಂಟ್‌ ಜಾನ್ಸ್‌, ಆ್ಯಂಟೀಗಾ (ಪಿಟಿಐ): ಭಾರತ ವಿರುದ್ಧ ಮೂರು ಪಂದ್ಯಗಳ ಟಿ–20 ಸರಣಿಯಲ್ಲಿ ಆಡುವ ಮೊದಲ ಎರಡು ಪಂದ್ಯಗಳಿಗೆ ವೆಸ್ಟ್‌ ಇಂಡೀಸ್‌ ತಂಡವನ್ನು ಪ್ರಕಟಿಸಲಾಗಿದೆ. ಹಿರಿಯ ಆಟಗಾರರಾದ ಸುನೀಲ್‌ ನಾರಾಯಣ್‌ ಮತ್ತು ಕೀರನ್‌ ಪೊಲ್ಲಾರ್ಡ್‌ ಅವರನ್ನು ಮರಳಿ ಕರೆಸಿಕೊಳ್ಳಲಾಗಿದೆ.

ಕಾರ್ಲೋಸ್‌ ಬ್ರಾತ್‌ವೇಟ್‌ ನಾಯಕತ್ವದ 14 ಮಂದಿಯ ತಂಡವನ್ನು ಮಂಗಳವಾರ ಪ್ರಕಟಿಸಲಾಯಿತು. ವಿಕೆಟ್‌ ಕೀಪರ್‌– ಬ್ಯಾಟ್ಸ್‌ಮನ್‌ ಅಂಥೋನಿ ಬ್ರಾಂಬಲ್ ತಂಡದಲ್ಲಿರುವ ಏಕೈಕ ಹೊಸಮುಖ. 28 ವರ್ಷದ ಬ್ರಾಂಬಲ್‌, ನಿಕೋಲಸ್‌ ಪೂರನ್‌ಗೆ ಬ್ಯಾಕ್‌ಅಪ್‌ ವಿಕೆಟ್‌ ಕೀಪರ್ ಆಗಿದ್ದಾರೆ.

ಮೊದಲ ಎರಡು ಪಂದ್ಯಗಳು ಆಗಸ್ಟ್‌ 3 ಮತ್ತು 4ರಂದು ಅಮೆರಿಕದ ಫ್ಲಾರಿಡಾದ ಲಾಡರ್‌ಹಿಲ್‌ನ ಬ್ರೊವಾರ್ಡ್‌ ಕೌಂಟಿ ಸ್ಟೇಡಿಯಂನಲ್ಲಿ ನಡೆಯಲಿವೆ. ಗಯಾನಾದ ನ್ಯಾಷನಲ್‌ ಸ್ಟೇಡಿಯಂನಲ್ಲಿ ಆಗಸ್ಟ್‌ 6ರಂದು ಅಂತಿಮ ಪಂದ್ಯ ನಡೆಯಲಿದೆ ಎಂದು ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ ತಿಳಿಸಿದೆ. ಈ ಸರಣಿಯ ಬಳಿಕಮೂರು ಏಕದಿನ ಮತ್ತು ಎರಡು ಟೆಸ್ಟ್‌ ಪಂದ್ಯಗಳ ಸರಣಿ ಆಡಬೇಕಿದೆ.

ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ ತಂಡದಲ್ಲಿ ಅವಕಾಶ ಪಡೆದರೂ, ಅವರು ದೈಹಿಕ ಕ್ಷಮತೆ ಪರೀಕ್ಷೆ ತೇರ್ಗಡೆ ಆಗಬೇಕಾಗಿದೆ. ಇತ್ತೀಚಿನ ವಿಶ್ವಕಪ್‌ ಸಂದರ್ಭದಲ್ಲಿ ರಸೆಲ್‌, ಎಡ ಮಂಡಿ ನೋವು ಕಾಡುತ್ತಿದ್ದ ಪರಿಣಾಮ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಅರ್ಧದಲ್ಲೇ ಸ್ವದೇಶಕ್ಕೆ ಮರಳಿದ್ದರು.

ಕೀರನ್‌ ಪೊಲ್ಲಾರ್ಡ್‌
ಕೀರನ್‌ ಪೊಲ್ಲಾರ್ಡ್‌

ಅನುಭವಿ ಓಪನರ್‌ ಕ್ರಿಸ್‌ ಗೇಲ್‌, ಕೆನಡಾದಲ್ಲಿ ಜಿಟಿ–20 ಟೂರ್ನಿಯಲ್ಲಿ ಆಡಬೇಕಾಗಿರುವ ಕಾರಣ ಈ ಸರಣಿಗೆ ಲಭ್ಯವಿರುವುದಿಲ್ಲ ಎಂದು ಆಯ್ಕೆ ಸಮಿತಿಗೆ ತಿಳಿಸಿದ್ದಾಗಿ ಸಮಿತಿಯ ಹಂಗಾಮಿ ಅಧ್ಯಕ್ಷ ರಾಬರ್ಟ್‌ ಹೇನ್ಸ್‌ ತಿಳಿಸಿದರು.

ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಗೆ ಸಿದ್ಧತೆಯ ಉದ್ದೇಶ ದೃಷ್ಟಿಯಲ್ಲಿಟ್ಟುಕೊಂಡು ಎಡಗೈ ಆರಂಭ ಆಟಗಾರ ಜಾನ್‌ ಕ್ಯಾಂಪ್‌ಬೆಲ್‌ ಮತ್ತು ಎಡಗೈ ಸ್ಪಿನ್ನರ್‌ ಖಾರಿ ಪಿಯರೆ ಅವರನ್ನೂ ಸೇರ್ಪಡೆ ಮಾಡಲಾಗಿದೆ.

‘ತಂಡ ಅನುಭವಿ ಮತ್ತು ಯುವಮುಖಗಳೊಂದಿಗೆ ಸಂತುಲಿತವಾಗಿದೆ. ಇದು ಭಾರತ ವಿರುದ್ಧ ಸರಣಿ ಉದ್ದೇಶದಿಂದ ಮಾತ್ರ ಆಯ್ಕೆ ಮಾಡಿದ ತಂಡವಲ್ಲ. ಮುಂದಿನ ಟಿ–20 ವಿಶ್ವಕಪ್‌ಗೆ ತಂಡ ಸಂಯೋಜನೆ ಮಾಡುವ ಉದ್ದೇಶವೂ ಇದರಲ್ಲಿದೆ’ ಎಂದು ಅವರು ಹೇಳಿದರು.

‘ತಂಡಕ್ಕೆ ಆಯ್ಕೆಯಾಗಿರುವ ಹೆಚ್ಚಿನ ಆಟಗಾರರು ಐಪಿಎಲ್‌ ಆಡಿದವರು. ಅವರು ಭಾರತದ ಆಟಗಾರರನ್ನು ಚೆನ್ನಾಗಿ ಬಲ್ಲರು. ಸ್ವದೇಶದಲ್ಲೇ ಆಡುವುದರಿಂದ ನಮಗೆ ಸ್ವಲ್ಪ ಅನುಕೂಲವಿದೆ. ಆದರೆ ಅಂತಿಮವಾಗಿ ತಂಡದ ಆಟಗಾರರು ಗೆಲ್ಲಿಸುವುದು ಮುಖ್ಯವಾಗುತ್ತದೆ’ ಎಂದರು.

ಆಫ್‌ ಬ್ರೇಕ್‌ ಬೌಲರ್ ಸುನೀಲ್‌ ನಾರಾಯಣ್‌, ಎರಡು ವರ್ಷದ ಹಿಂದೆ ಇಂಗ್ಲೆಂಡ್‌ ಪ್ರವಾಸದ ವೇಳೆ ಕೊನೆಯ ಬಾರಿ ಟಿ–20 ಅಂತರರಾಷ್ಟ್ರೀಯ ಪಂದ್ಯ ಆಡಿದ್ದರು. ಪೊಲ್ಲಾರ್ಡ್‌, ಕಳೆದ ನವೆಂಬರ್‌ನಲ್ಲಿ ಭಾರತ ಪ್ರವಾಸದ ವೇಳೆ ಕೊನೆಯ ಬಾರಿ ಟಿ–20 ಪಂದ್ಯ ಆಡಿದ್ದರು.

ತಂಡ ಇಂತಿದೆ:ಕಾರ್ಲೋಸ್‌ ಬ್ರಾತ್‌ವೇಟ್‌ (ಕ್ಯಾಪ್ಟನ್‌), ಸುನೀಲ್‌ ನಾರಾಯಣ್‌, ಕೀಮೊ ಪಾಲ್‌, ಖಾರಿ ಪಿಯರೆ, ಕೀರನ್‌ ಪೊಲ್ಲಾರ್ಡ್‌, ನಿಕೋಲಸ್‌ ಪೂರನ್‌ (ವಿಕೆಟ್‌ ಕೀಪರ್‌), ರೊವ್‌ಮನ್‌ ಪೊವೆಲ್‌, ಆ್ಯಂಡ್ರೆ ರಸೆಲ್‌, ಒಷಾನೆ ಥಾಮಸ್‌, ಆಂಥೋನಿ ಬ್ರಾಂಬಲ್‌ (ವಿಕೆಟ್‌ ಕೀಪರ್‌), ಜಾನ್‌ ಕ್ಯಾಂಪ್‌ಬೆಲ್‌, ಶೆಲ್ಟನ್‌ ಕಾಟ್ರೆಲ್‌, ಶಿಮ್ರಾನ್‌ ಹೆಟ್ಮೆಯರ್‌, ಎವಿನ್‌ ಲೂಯಿಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT