ಸೋಮವಾರ, ಸೆಪ್ಟೆಂಬರ್ 27, 2021
22 °C

ಕ್ರಿಕೆಟ್: ಪಾಕ್ ಎದುರು ವೆಸ್ಟ್‌ ಇಂಡೀಸ್‌ಗೆ ಇನಿಂಗ್ಸ್ ಮುನ್ನಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಿಂಗ್ಸಟನ್: ನಾಯಕ ಕ್ರೇಗ್‌ ಬ್ರಾಥ್‌ವೇಟ್ ಕೇವಲ ಮೂರು ರನ್‌ಗಳಿಂದ ಶತಕ ತಪ್ಪಿಸಿಕೊಂಡರು.

ಆದರೆ, ಅವರು ಹಾಕಿದ ಅಡಿಪಾಯದ ಮೇಲೆ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನದ ವಿರುದ್ಧದ ಟೆಸ್ಟ್‌ ಪಂದ್ಯದ ಎರಡನೇ ದಿನ ಮೊದಲ ಇನಿಂಗ್ಸ್‌ ಮುನ್ನಡೆ ಗಳಿಸಿತು.

ಪಾಕ್ ತಂಡವು ಮೊದಲ ಇನಿಂಗ್ಸ್‌ನಲ್ಲಿ ಗಳಿಸಿದ 217 ರನ್‌ಗಳಿಗೆ ಉತ್ತರವಾಗಿ ದಿನದಾಟದ ಅಂತ್ಯಕ್ಕೆ ಆತಿಥೇಯ ತಂಡವು 87 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 251 ರನ್ ಗಳಿಸಿತು. 

ಪಾಕ್ ವೇಗಿ ಮೊಹಮ್ಮದ್ ಅಬ್ಬಾಸ್ ವಿಂಡೀಸ್‌ ಬಳಗಕ್ಕೆ ಆರಂಭದಲ್ಲಿಯೇ ಪೆಟ್ಟುಕೊಟ್ಟರು. ಮೂರನೇ ಓವರ್‌ನಲ್ಲಿ ಕೀರನ್ ಪೊವೆಲ್ ಮತ್ತು ಎನ್‌ಕ್ರುಮಾ ಬಾನರ್ ಅವರಿಗೆ ಖಾತೆ ತೆರೆಯಲು ಬಿಡದ ಅಬ್ಬಾಸ್ ಮಿಂಚಿದರು. ಉಳಿದ ಬೌಲರ್‌ಗಳು ಉತ್ತಮ ಬೌಲಿಂಗ್ ಮಾಡಿದ್ದರಿಂದ ವಿಂಡೀಸ್ ತಂಡವು 100 ರನ್‌ಗಳಿಗೆ ಐದು ವಿಕೆಟ್‌ಗಳನ್ನು ಕಳೆದುಕೊಂಡಿತು.

ಕ್ರೀಸ್‌ನಲ್ಲಿ ಏಕಾಂಗಿ ಹೋರಾಟ ನಡೆಸಿದ್ದ ಕ್ರೆಗ್ (97;221ಎ,12ಬೌಂಡರಿ) ಜೊತೆಗೂಡಿದ ಜೇಸನ್ ಹೋಲ್ಡರ್ (58; 108ಎ, 10ಬೌಂ) ಇನಿಂಗ್ಸ್‌ಗೆ ಜೀವ ತುಂಬಿದರು. ಆರನೇ ವಿಕೆಟ್ ಜೊತೆಯಾಟದಲ್ಲಿ 96 ರನ್‌ ಸೇರಿಸಿದರು.

ಫಾಹೀಮ್ ಅಶ್ರಫ್ ಬೌಲಿಂಗ್‌ನಲ್ಲಿ ಹೋಲ್ಡರ್ ಔಟಾಗುವುದರೊಂದಿಗೆ ಜೊತೆಯಾಟ ಮುರಿಯಿತು.

ಆದರೆ, ಕ್ರೇಗ್ ಮಾತ್ರ ವಿಂಡೀಸ್ ಮುನ್ನಡೆ ತೆಗೆದುಕೊಳ್ಳುವವರೆಗೂ ತಮ್ಮ ಬ್ಯಾಟಿಂಗ್ ಮುಂದುವರಿಸಿದರು. ಶತಕದ ಸನಿಹ ಸಾಗಿದ್ದ ಅವರು 78ನೇ ಓವರ್‌ನಲ್ಲಿ ರನೌಟ್‌ ಆದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಪಾಕಿಸ್ತಾನ: 70.3 ಓವರ್‌ಗಳಲ್ಲಿ 217, ವೆಸ್ಟ್‌ ಇಂಡೀಸ್: 87 ಓವರ್‌ಗಳಲ್ಲಿ 8ಕ್ಕೆ251 (ಕ್ರೇಗ್ ಬ್ರಾಥ್‌ವೇಟ್ 97, ರೋಸ್ಟನ್ ಚೇಸ್ 21, ಜರ್ಮೈನ್ ಬ್ಲ್ಯಾಕ್‌ವುಡ್ 22, ಜೇಸನ್ ಹೋಲ್ಡರ್ 58, ಜೊಶುವಾ ಡ ಸಿಲ್ವಾ ಬ್ಯಾಟಿಂಗ್ 20, ಮೊಹಮ್ಮದ್ ಅಬ್ಬಾಸ್ 42ಕ್ಕೆ3, ಶಾಹೀನ್  ಆಫ್ರಿದಿ 59ಕ್ಕೆ2)

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು