ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಪಿಂಕ್ ಬಾಲ್ ಟೆಸ್ಟ್: ಯಾರ ಮುಡಿಗೆ ಗೆಲುವಿನ ಗುಲಾಬಿ?

ಕೋಲ್ಕತ್ತದಲ್ಲಿ ಹಗಲು–ರಾತ್ರಿ ಟೆಸ್ಟ್‌ ಇಂದಿನಿಂದ; ಭಾರತ–ಬಾಂಗ್ಲಾ ಹಣಾಹಣಿ
Last Updated 22 ನವೆಂಬರ್ 2019, 10:25 IST
ಅಕ್ಷರ ಗಾತ್ರ

ಕೋಲ್ಕತ್ತ: ಕ್ರಿಕೆಟ್ ಲೋಕದ ಕಣ್ಣುಗಳು ಈಗ ಈಡನ್ ಗಾರ್ಡನ್‌ನತ್ತ ನೆಟ್ಟಿವೆ. ಅವರೆಲ್ಲರ ದೃಷ್ಟಿ ನೆಟ್ಟಿರುವುದು ನಸುಗೆಂಪು ಚೆಂಡಿನ ಮೇಲೆ ಇದೆ. ಭಾರತದ ನೆಲದಲ್ಲಿ ನಡೆಲಿರುವ ಪ್ರಪ್ರಥಮ ಪಿಂಕ್ ಬಾಲ್ ಟೆಸ್ಟ್ ಪಂದ್ಯ ಈಗ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ.

1934ರಿಂದ 2017ರವರೆಗೆ ಇಲ್ಲಿ ನಡೆದ ಟೆಸ್ಟ್‌ ಪಂದ್ಯಗಳಲ್ಲಿ ಹಲವಾರು ಮಹತ್ವದ ದಾಖಲೆಗಳು ಕ್ರಿಕೆಟ್ ಇತಿಹಾಸದ ಪುಸ್ತಕಗಳಲ್ಲಿ ಸುವರ್ಣಾಕ್ಷರಗಳಲ್ಲಿ ಅಚ್ಚಾಗಿವೆ. ಶುಕ್ರವಾರ ಇಲ್ಲಿ ಆರಂಭವಾಗಲಿರುವ ಟೆಸ್ಟ್ ಪಂದ್ಯ ಹೊಸ ಅಧ್ಯಾಯವಾಗಿ ಸೇರ್ಪಡೆಗೊಳ್ಳಲಿದೆ. ಭಾರತ ಮತ್ತು ಬಾಂಗ್ಲಾದೇಶ ತಂಡಗಳಿಗೆ ಇದು ಮೊದಲ ಹಗಲು–ರಾತ್ರಿ ಟೆಸ್ಟ್ ಪಂದ್ಯವಾಗಿದೆ. ಇದೊಂದೇ ವಿಷಯದಲ್ಲಿ ಉಭಯ ತಂಡಗಳು ಸಮಬಲಶಾಲಿಗಳು. ಆದರೆ. ಆಟಗಾರರ ಸಾಮರ್ಥ್ಯ, ಅನುಭವ ಮತ್ತು ಆತ್ಮವಿಶ್ವಾಸದಲ್ಲಿ ಭಾರತವೇ ಫೆವರಿಟ್.

2015ರಲ್ಲಿ ಆಸ್ಟ್ರೇಲಿಯಾದಲ್ಲಿ ಮೊಟ್ಟಮೊದಲ ಪಿಂಕ್ ಬಾಲ್ ಟೆಸ್ಟ್ ನಡೆದಿತ್ತು. ಆಗಿನಿಂದಲೂ ಭಾರತವೂ ಹಗಲು ರಾತ್ರಿ ಪಂದ್ಯದಲ್ಲಿ ಆಡಬೇಕು ಎಂಬ ಐಸಿಸಿಯ ಒತ್ತಾಸೆ ಇತ್ತು. ಆದರೆ, ಹಲವಾರು ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿದ್ದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಒಪ್ಪಿರಲಿಲ್ಲ. ಆದರೆ ಹೋದ ತಿಂಗಳು ಹಿರಿಯ ಕ್ರಿಕೆಟಿಗ ಸೌರವ್ ಗಂಗೂಲಿ ಬಿಸಿಸಿಐ ಅಧ್ಯಕ್ಷರಾದ ಕೂಡಲೇ ತೆಗೆದುಕೊಂಡ ನಿರ್ಧಾರದ ಫಲವಾಗಿ ಈ ಪಂದ್ಯ ನಡೆಯುತ್ತಿದೆ. ಅದೂ ಅವರ ತವರೂರಿನ ಕ್ರೀಡಾಂಗಣದಲ್ಲಿ.

ಎರಡು ಪಂದ್ಯಗಳ ಈ ಸರಣಿಯಲ್ಲಿ ಭಾರತ 1–0ಯಿಂದ ಮುಂದಿದೆ. ಇಂದೋರ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯವನ್ನು ಕೇವಲ ಮೂರು ದಿನಗಳಲ್ಲಿ ಭಾರತ ಗೆದ್ದಿತ್ತು. ಕನ್ನಡಿಗ ಮಯಂಕ್ ಅಗರವಾಲ್ ದ್ವಿಶತಕ ಹೊಡೆದು ಮಿಂಚಿದ್ದರು. ಮೊಹಮ್ಮದ್ ಶಮಿ, ಆರ್. ಅಶ್ವಿನ್ ಬೌಲಿಂಗ್‌ನಲ್ಲಿ ಮೆರೆದಿದ್ದರು. ಆದರೆ ಅಲ್ಲಿ ಕೆಂಪು ಚೆಂಡಿನ ಆಟ ನಡೆದಿತ್ತು.

ಆದರೆ, ಈಡನ್ ಅಂಗಳದಲ್ಲಿ ನಸುಗೆಂಪು ವರ್ಣದ ಚೆಂಡಿನ ಆಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಕಾದು ನೋಡಬೇಕಿದೆ. ಬೇಗನೆ ಸೂರ್ಯಾಸ್ತವಾಗುವ ಈ ಊರಿನಲ್ಲಿ ಇಬ್ಬನಿಯ ಪ್ರಭಾವವೂ ಮುಖ್ಯವಾಗಲಿದೆ. ಕೈಯಿಂದ ಜಾರಿ ಹೋಗುವ ಚೆಂಡಿನ ಮೇಲೆ ಹಿಡಿತ ಸಾಧಿಸುವ ಬೌಲರ್‌ಗಳು ತಮ್ಮ ತಂಡದ ಜಯ ಕೈತಪ್ಪದಂತೆ ನೋಡಿಕೊಳ್ಳಬಲ್ಲರು. ಪಿಚ್‌ ನೋಡಿದರೆ ಮಧ್ಯಮವೇಗಿಗಳಿಗೆ ಹೆಚ್ಚು ನೆರವು ನೀಡುವ ಲಕ್ಷಣಗಳಿವೆ. ಆದ್ದರಿಂದ ಸ್ಥಳೀಯ ಹೀರೊ ಶಮಿ, ‘ವಿದರ್ಭ ಎಕ್ಸ್‌ಪ್ರೆಸ್’ ಉಮೇಶ್ ಯಾದವ್ ಅವರ ಆಟ ಪ್ರಮುಖವಾಗಲಿದೆ. ರವೀಂದ್ರ ಜಡೇಜ, ಅಶ್ವಿನ್ ಜೊತೆಗೆ ಮೂರನೇ ಸ್ಪಿನ್ನರ್‌ಗೆ ಅವಕಾಶ ನೀಡುವ ಸಾಧ್ಯತೆ ಕಡಿಮೆ ಇದೆ.

ಬಾಂಗ್ಲಾ ತಂಡದಲ್ಲಿ ಅಬು ಜಯೆದ್ ಮತ್ತು ಇಬಾದತ್ ಹುಸೇನ್ ಪರಿಣಾಮಕಾರಿ ಬೌಲರ್‌ಗಳಾಗಿದ್ದಾರೆ. ಹೊನಲು ಬೆಳಕಿನಲ್ಲಿ ಇವರ ರಿವರ್ಸ್‌ ಸ್ವಿಂಗ್ ಪ್ರಯೋಗಕ್ಕೆ ಭಾರತದ ಇನ್‌ ಫಾರ್ಮ್‌ ಬ್ಯಾಟ್ಸ್‌ಮನ್‌ಗಳು ಉತ್ತರ ಕೊಡಲು ಸಿದ್ಧರಾಗಿದ್ದಾರೆ. ಹೋದ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ್ದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಅವರು ಲಯಕ್ಕೆ ಮರಳುವ ವಿಶ್ವಾಸವಿದೆ. ಭರ್ಜರಿ ಫಾರ್ಮನ್‌ನಲ್ಲಿರುವ ಮಯಂಕ್ ಅಗರವಾಲ್ ಅವರಿಗೆ ಟೆಸ್ಟ್ ಕ್ರಿಕೆಟ್‌ನಲ್ಲಿ ಸಾವಿರ ರನ್ ಪೂರೈಸಲು ಇನ್ನೂ 142 ರನ್‌ಗಳು ಅಗತ್ಯವಿದೆ. ಇದುವರೆಗೆ ಅವರು ಆಡಿರುವ ಎಂಟು ಟೆಸ್ಟ್‌ಗಳಲ್ಲಿ 858 ರನ್‌ಗಳನ್ನು ಹೊಡೆದಿದ್ದಾರೆ. ಅದರಲ್ಲಿ ಎರಡು ದ್ವಿಶತಕಗಳು ಇವೆ. ಈ ಐತಿಹಾಸಿಕ ಟೆಸ್ಟ್‌ನಲ್ಲಿ ಅವರು ಮತ್ತೊಂದು ಹೆಜ್ಜೆಗುರುತು ಮೂಡಿಸುವ ಭರವಸೆ ಗರಿಗೆದರಿದೆ.

ಆದರೆ, ಭಾರತ ಪೇರಿಸುವ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟುವ ಅಥವಾ ಮೊದಲು ಬ್ಯಾಟಿಂಗ್ ಮಾಡಿದಾಗ ದೊಡ್ಡ ಮೊತ್ತ ಪೇರಿಸಿ ಸವಾಲೊಡ್ಡಲು ಬಾಂಗ್ಲಾದ ಬ್ಯಾಟ್ಸ್‌ಮನ್‌ಗಳು ತಾಳ್ಮೆಯಿಂದ ಆಡುವ ಅನಿವಾರ್ಯತೆ ಇದೆ.

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್.

ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಶಾದಮನ್ ಇಸ್ಲಾಂ, ಇಮ್ರುಲ್ ಕಯಸ್, ಮುಷ್ಫಿಕುರ್ ರಹೀಮ್, ಮಹಮುದುಲ್ಲಾ. ಮೊಹಮ್ಮದ್ ಮಿಥುನ್, ಲಿಟನ್ ದಾಸ್ (ವಿಕೆಟ್‌ಕೀಪರ್), ಮಹದಿ ಹಸನ್, ತೈಜುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್, ಅಬು ಜಯದ್, ಇಬಾದತ್ ಹುಸೇನ್, ಅಲ್ ಅಮಿನ್ ಹುಸೇನ್.

ಅಂಪೈರ್: ಮರಾಯಿಸ್ ಎರಸ್ಮಸ್ (ದಕ್ಷಿಣ ಆಫ್ರಿಕಾ), ರಾಡ್ ಟಕ್ಕರ್ (ಆಸ್ಟ್ರೇಲಿಯಾ), ಟಿ.ವಿ. ಅಂಪೈರ್: ಜೋಲ್ ವಿಲ್ಸನ್(ವೆಸ್ಟ್ ಇಂಡೀಸ್), ರೆಫರಿ: ರಂಜನ್ ಮದುಗಲೆ (ಶ್ರೀಲಂಕಾ), ಕಾಯ್ದಿಟ್ಟ ಅಂಪೈರ್: ನಂದನ್ (ಭಾರತ).

ಪಿಂಕ್ ಬಾಲ್ ಟೆಸ್ಟ್ ಆಡಿರುವ ದೇಶಗಳು


ಪ್ರಮುಖ ಅಂಶಗಳು


ಈಡನ್ ಗಾರ್ಡನ್ ಕ್ರೀಡಾಂಗಣದಲ್ಲಿ ಭಾರತ ಸಾಧನೆ

ಪಂದ್ಯ: 41

ಜಯ: 12

ಸೋಲು: 09

ಡ್ರಾ: 20

ಪಂದ್ಯದ ಸಮಯ

ಮೊದಲ ಅವಧಿ: ಮಧ್ಯಾಹ್ನ 1ರಿಂದ 3

ಎರಡನೇ ಅವಧಿ: ಮಧ್ಯಾಹ್ನ 3.40 ರಿಂದ ಸಂಜೆ 5.40

ಮೂರನೇ ಅವಧಿ: ಸಂಜೆ 6 ರಿಂದ 8

(ವಿರಾಮ: 3 ರಿಂದ 3.40 ಊಟ; 5.40 ರಿಂದ 6 ಚಹಾ)

ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಮಯಂಕ್ ಅಗರವಾಲ್, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ (ಉಪನಾಯಕ), ರವೀಂದ್ರ ಜಡೇಜ, ವೃದ್ಧಿಮಾನ್ ಸಹಾ (ವಿಕೆಟ್‌ಕೀಪರ್), ಆರ್. ಅಶ್ವಿನ್, ಇಶಾಂತ್ ಶರ್ಮಾ, ಉಮೇಶ್ ಯಾದವ್, ಮೊಹಮ್ಮದ್ ಶಮಿ, ಕುಲದೀಪ್ ಯಾದವ್.

ಬಾಂಗ್ಲಾದೇಶ: ಮೊಮಿನುಲ್ ಹಕ್ (ನಾಯಕ), ಶಾದಮನ್ ಇಸ್ಲಾಂ, ಇಮ್ರುಲ್ ಕಯಸ್, ಮುಷ್ಫಿಕುರ್ ರಹೀಮ್, ಮಹಮುದುಲ್ಲಾ. ಮೊಹಮ್ಮದ್ ಮಿಥುನ್, ಲಿಟನ್ ದಾಸ್ (ವಿಕೆಟ್‌ಕೀಪರ್), ಮಹದಿ ಹಸನ್, ತೈಜುಲ್ ಇಸ್ಲಾಂ, ಮುಸ್ತಫಿಜುರ್ ರೆಹಮಾನ್, ಅಬು ಜಯದ್, ಇಬಾದತ್ ಹುಸೇನ್, ಅಲ್ ಅಮಿನ್ ಹುಸೇನ್.

ಅಂಪೈರ್: ಮರಾಯಿಸ್ ಎರಸ್ಮಸ್ (ದಕ್ಷಿಣ ಆಫ್ರಿಕಾ), ರಾಡ್ ಟಕ್ಕರ್ (ಆಸ್ಟ್ರೇಲಿಯಾ), ಟಿ.ವಿ. ಅಂಪೈರ್: ಜೋಲ್ ವಿಲ್ಸನ್(ವೆಸ್ಟ್ ಇಂಡೀಸ್), ರೆಫರಿ: ರಂಜನ್ ಮದುಗಲೆ (ಶ್ರೀಲಂಕಾ), ಕಾಯ್ದಿಟ್ಟ ಅಂಪೈರ್: ನಂದನ್ (ಭಾರತ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT