ಟೆಸ್ಟ್ ಕ್ರಿಕೆಟ್: ಫಾಲೋ ಆನ್ ಭೀತಿಯಲ್ಲಿ ವಿಂಡೀಸ್

7
ವಿರಾಟ್, ಜಡೇಜ ಶತಕದ ಮಿಂಚು; ಭಾರತದ ಬೃಹತ್ ಮೊತ್ತ

ಟೆಸ್ಟ್ ಕ್ರಿಕೆಟ್: ಫಾಲೋ ಆನ್ ಭೀತಿಯಲ್ಲಿ ವಿಂಡೀಸ್

Published:
Updated:

ರಾಜ್‌ಕೋಟ್: ಸೌರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಅಂಗಳದಲ್ಲಿ ಶುಕ್ರವಾರ ಸಂಜೆಯ ವೇಳೆಗೆ ಭಾರತದ ಪಾಳೆಯದಲ್ಲಿ ‘ವಿಜಯೋತ್ಸವ’ದ ವಾತಾವರಣ ಮನೆ ಮಾಡಿತ್ತು.

ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ ಪಂದ್ಯದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವ ಆತಿಥೇಯರು ಸುಲಭ ಜಯದ ಕನಸು ಕಾಣುತ್ತಿದ್ದಾರೆ. ನಾಯಕ ವಿರಾಟ್ ಕೊಹ್ಲಿ (139; 230ಎಸೆತ, 10ಬೌಂಡರಿ ) ಮತ್ತು ರವೀಂದ್ರ ಜಡೇಜ (100; 132ಎಸೆತ, 5ಬೌಂಡರಿ, 5ಸಿಕ್ಸರ್) ಅವರ ಶತಕಗಳ ಬಲದಿಂದ ಭಾರತವು 149.5 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 649 ರನ್‌ ಗಳಿಸಿ ಡಿಕ್ಲೆರ್‌ ಮಾಡಿಕೊಂಡಿತು. ರಿಷಭ್ ಪಂತ್ (92 ರನ್) ಕೇವಲ ಎಂಟು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡರು.

ಬ್ಯಾಟಿಂಗ್ ಆರಂಭಿಸಿದ ವಿಂಡೀಸ್ ತಂಡಕ್ಕೆ ಬೌಲರ್‌ಗಳು ಪೆಟ್ಟು ನೀಡಿದರು. ಇದರಿಂದಾಗಿ ದಿನದಾಟದ ಕೊನೆಗೆ 29 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 94 ರನ್‌ ಗಳಿಸಿತು. ಮೊದಲ ಇನಿಂಗ್ಸ್‌ನ ಮೊತ್ತವನ್ನು ಚುಕ್ತಾ ಮಾಡಲು ವಿಂಡೀಸ್ ಬಳಗವು ಇನ್ನೂ 555 ರನ್‌ಗಳನ್ನು ಗಳಿಸಬೇಕು.

ಮಧ್ಯಮವೇಗಿ ಮೊಹಮ್ಮದ್ ಶಮಿ (11ಕ್ಕೆ2) ಆರಂಭದಲ್ಲಿಯೇ ಪ್ರವಾಸಿ ಬಳಗಕ್ಕೆ  ಆಘಾತ ನೀಡಿದರು.  ನಾಯಕ ಕ್ರೇಗ್‌ ಬ್ರೇಥ್‌ವೈಟ್ ಮತ್ತು ಕೀರನ್ ಪೊವೆಲ್ ಅವರ ವಿಕೆಟ್‌ಗಳನ್ನು ಕಬಳಿಸಿದರು.

ನಂತರದ ಅವಧಿಯಲ್ಲಿ  ಸ್ಪಿನ್ನರ್‌ಗಳು ಮಿಂಚಿದರು. ಆರ್. ಆಶ್ವಿನ್, ರವೀಂದ್ರ ಜಸೇಜ ಮತ್ತು ಕುಲದೀಪ್ ಯಾದವ್ ತಲಾ ಒಂದು ವಿಕೆಟ್ ಪಡೆದರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಹೇಟ್ಮೆಯರ್ ಅವರು ರವೀಂದ್ರ ಜಡೇಜ ಅವರ ನಿಖರ ಥ್ರೋಗೆ ರನ್‌ಔಟ್ ಆದರು.

ಜಡೇಜ ಮಿಂಚು: ರಾಜ್‌ಕೋಟ್‌ನ ರವೀಂದ್ರ ಜಡೇಜ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಬಾರಿಸಿದರು. ಅದರಲ್ಲೂ ತಾವು  ಜೂನಿಯರ್ ಹಂತದಿಂದ ಆಡಿ ಬೆಳೆದ ಊರಿನಲ್ಲಿ ಈ ಸಾಧನೆ ಮಾಡಿದರು. ಅವರಿಗೆ ಇದು 38ನೇ ಟೆಸ್ಟ್ ಪಂದ್ಯ. ಅವರು ಈಚೆಗೆ ಇಂಗ್ಲೆಂಡ್‌ನಲ್ಲಿಯೂ ತಮ್ಮ ಆಲ್‌ರೌಂಡ್  ಆಟದಿಂದ ಗಮನ ಸೆಳೆದಿದ್ದರು.  ಅಲ್ಲಿ ಕೊನೆಯ ಪಂದ್ಯದಲ್ಲಿ 90 ರನ್‌ ಗಳಿಸಿದ್ದರು. ಕೇವಲ 10 ರನ್‌ಗಳಿಂದ ಶತಕ ವಂಚಿತರಾದರು.

ಏಳನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಜಡೇಜ ಅವರು ವಿಂಡೀಸ್ ಬೌಲರ್‌ಗಳ ಎಸೆತಗಳನ್ನು ಮನಬಂದಂತೆ ದಂಡಿಸಿದರು. ಪಂದ್ಯದ ಮೊದಲ ದಿನ ಪೃಥ್ವಿ ಶಾ, ಚೇತೇಶ್ವರ್ ಪೂಜಾರ, ಎರಡನೇ ದಿನ ವಿರಾಟ್, ರಿಷಭ್ ಪಂತ್ ಅವರ ಅಬ್ಬರದ ಬ್ಯಾಟಿಂಗ್‌ಗೆ ಬಸವಳಿದಿದ್ದ ಬೌಲರ್‌ಗಳನ್ನು ಜಡೇಜ ಮತ್ತಷ್ಟು ಕಾಡಿದರು.

ವಿರಾಟ್–ರಿಷಭ್ ಜೊತೆಯಾಟ: ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ 24ನೇ ಶತಕವನ್ನು ಬಾರಿಸಿದ ವಿರಾಟ್ ಕೊಹ್ಲಿ ಅವರು ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಮೀರಿ ನಿಂತರು. ಕಡಿಮೆ ಇನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ ವಿಶ್ವದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು. ಸಚಿನ್ ಮೂರನೇ ಸ್ಥಾನದಲ್ಲಿದ್ದಾರೆ. ಮೊದಲ ಸ್ಥಾನದಲ್ಲಿ ಡಾನ್‌ ಬ್ರಾಡ್ಮನ್ ಇದ್ದಾರೆ.

ವಿರಾಟ್ ಮತ್ತು ಅವರ ದೆಹಲಿ ಗೆಳೆಯ ರಿಷಭ್ ಪಂತ್ 5ನೇ ವಿಕೆಟ್‌ಗೆ 133 ರನ್‌ಗಳ ಜೊತೆಯಾಟವನ್ನು ಆಡಿದರು ಆದರೆ ರಿಷಭ್ ತಮ್ಮ ಟೆಸ್ಟ್ ಕ್ರಿಕೆಟ್‌ನ ಎರಡನೇ ಶತಕವನ್ನು ಪೂರೈಸುವಲ್ಲಿ ಎಡವಿದರು. 92 ರನ್‌ ಗಳಿಸಿದ ಅವರು ಔಟಾದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !