ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೆಸ್ಟ್‌ ಕ್ರಿಕೆಟ್: ಆರಂಭಿಕ ಆಟಗಾರನ ಸ್ಥಾನಕ್ಕೆ ರೋಹಿತ್‌ ಶರ್ಮಾ?

ಕೆ.ಎಲ್‌.ರಾಹುಲ್‌ ಫಾರ್ಮ್‌ ಕಳೆದುಕೊಂಡದ್ದೇ ಕಾರಣ
Last Updated 10 ಸೆಪ್ಟೆಂಬರ್ 2019, 13:17 IST
ಅಕ್ಷರ ಗಾತ್ರ

ನವದೆಹಲಿ: ಕೆ.ಎಲ್‌.ರಾಹುಲ್‌ ಅವರ ಫಾರ್ಮ್‌ ‘ಕಳವಳಕ್ಕೆ ಕಾರಣ’ವಾಗಿರುವ ಸಮಯದದಲ್ಲೇ, ರೋಹಿತ್‌ ಶರ್ಮಾ ಅವರನ್ನು ಭಾರತ ಟೆಸ್ಟ್‌ ಇಲೆವನ್‌ನಲ್ಲಿಸೇರ್ಪಡೆ ಮಾಡಿಕೊಳ್ಳುವ ಸುಳಿವನ್ನು ರಾಷ್ಟ್ರೀಯ ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ನೀಡಿದ್ದಾರೆ.

ಏಕದಿನ ತಂಡದಲ್ಲಿ ಉಪನಾಯಕರಾಗಿರುವ ರೋಹಿತ್‌ ಉತ್ತಮ ಫಾರ್ಮ್‌ನಲ್ಲಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಟೆಸ್ಟ್‌ಗಳ ಸರಣಿಯಲ್ಲಿ ಅವರು ತಂಡದಲ್ಲಿದ್ದರೂ, ಆಡುವ ಅವಕಾಶ ಪಡೆದಿರಲಿಲ್ಲ.

ಟೆಸ್ಟ್‌ಗಳಲ್ಲಿ ರೋಹಿತ್‌ ಸಾಮಾನ್ಯವಾಗಿ ಮಧ್ಯಮ ಕ್ರಮಾಂಕದಲ್ಲಿ ಆಡುತ್ತಾರೆ. ಆದರೆ ಕೆರಿಬಿಯನ್‌ ಪ್ರವಾಸದ ವೇಳೆ ಅಜಿಂಕ್ಯ ರಹಾನೆ ಮತ್ತು ಹನುಮ ವಿಹಾರಿ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದರಿಂದ ರೋಹಿತ್‌ ಇಲ್ಲೂ ಆರಂಭ ಆಟಗಾರನ ಪಾತ್ರ ವಹಿಸಬೇಕಾಗುತ್ತದೆ.

‘ವೆಸ್ಟ್‌ ಇಂಡೀಸ್‌ ಪ್ರವಾಸದ ನಂತರ ಆಯ್ಕೆ ಸಮಿತಿ ಸಭೆ ಸೇರಿಲ್ಲ. ಆದರೆ ಮುಂದೆ ನಾವು ಸೇರುವಾಗ ಈ ವಿಷಯ ಖಂಡಿತವಾಗಿ (ಆರಂಭ ಆಟಗಾರನಾಗಿ ರೋಹಿತ್‌) ಚರ್ಚಿಸುತ್ತೇವೆ’ ಎಂದು ಭಾರತ ತಂಡದ ಮಾಜಿ ವಿಕೆಟ್‌ ಕೀಪರ್‌ ಕೂಡ ಆಗಿರುವ ಪ್ರಸಾದ್‌ ‘ಇಂಡಿಯಾ ಟುಡೇ’ಗೆ ತಿಳಿಸಿದ್ದಾರೆ.

‘ಕೆ.ಎಲ್‌.ರಾಹುಲ್‌ ಪ್ರತಿಭಾನ್ವಿತ ಎಂಬುದರಲ್ಲಿ ಅನುಮಾನವಿಲ್ಲ. ಟೆಸ್ಟ್‌ ಕ್ರಿಕೆಟ್‌ನಲ್ಲಿ ಈಗ ಅವರು ಪರದಾಡುತ್ತಿದ್ದಾರೆ. ಅವರ ಫಾರ್ಮ್‌ ಬಗ್ಗೆ ಚಿಂತೆಯಿದೆ. ಅವರು ಬೇರೂರಿ ಲಯ ಕಂಡುಕೊಳ್ಳಬೇಕಾಗಿದೆ’ ಎಂದು ಅವರು ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ವಿರುದ್ಧ ಎರಡು ಟೆಸ್ಟ್‌ಗಳಲ್ಲಿ ರಾಹುಲ್‌ 13, 6, 44 ಮತ್ತು 38 ರನ್ ಗಳಿಸಿದ್ದಾರೆ.

ಇತ್ತೀಚಿನ ವೆಸ್ಟ್‌ ಇಂಡೀಸ್‌ ಸರಣಿಯಲ್ಲಿ ಮತ್ತು ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧ ಟಿ–20 ಸರಣಿಯಲ್ಲಿ ಕುಲದೀಪ್‌ ಯಾದವ್‌ ಮತ್ತು ಯಜವೇಂದ್ರ ಚಾಹಲ್‌ ಅವಕಾಶ ಪಡೆಯದೇ ಇರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಮಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ–20 ವಿಶ್ವಕಪ್‌ಗೆ ನಮ್ಮ ಗಮನದಲ್ಲಿರುವ ತಂಡದಲ್ಲಿ ಅವರೂ ಇದ್ದಾರೆ’ ಎಂದರು.

ದಕ್ಷಿಣ ಆಫ್ರಿಕ ವಿರುದ್ಧ ಟಿ–20 ಸರಣಿಯಲ್ಲಿ ರಾಹುಲ್ ಚಾಹರ್‌ ಮತ್ತು ವಾಷಿಂಗ್ಟನ್‌ ಸುಂದರ್‌ ಅವಕಾಶ ಪಡೆದಿದ್ದಾರೆ. ಸರಣಿಯ ಮೊದಲ ಪಂದ್ಯ ಧರ್ಮಶಾಲಾದಲ್ಲಿ ಇದೇ 15ರಂದು ನಡೆಯಲಿದೆ. ಈ ಇಬ್ಬರೂ ಕೆರಿಬಿಯನ್‌ ಪ್ರವಾಸ ಮಾಡಿದ ತಂಡದಲ್ಲೂ ಇದ್ದರು.

‘ಸ್ಪಿನ್ ಬೌಲಿಂಗ್ ವಿಭಾಗದಲ್ಲಿ ವೈವಿಧ್ಯತೆ ಕಂಡುಕೊಳ್ಳಲು ನಾವು ಯುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದೇವೆ. ಚಾಹಲ್‌ ಮತ್ತು ಕುಲದೀಪ್‌ ಕಳೆದ ಎರಡು ವರ್ಷಗಳಿಂದ ಚುಟುಕು ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ನಾವು ಇತರ ಕೆಲವು ಆಯ್ಕೆಗಳನ್ನು ಪರಿಶೀಲಿಸುತ್ತಿದ್ದೇವೆ, ಅಷ್ಟೇ’ ಎಂದು ಪ್ರಸಾದ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT