ಮಂಗಳವಾರ, ಅಕ್ಟೋಬರ್ 27, 2020
28 °C

PV Web Exclusive| IPL 2020: ಈ ಬಾರಿ ಎಡಗೈ ಆಟಗಾರರದ್ದೇ ತಾಕತ್ತು

ವಿಕ್ರಂ ಕಾಂತಿಕೆರೆ Updated:

ಅಕ್ಷರ ಗಾತ್ರ : | |

Prajavani

‘ಈ ಆಟಗಾರನ ಬ್ಯಾಟಿಂಗ್ ನೋಡುವುದರಲ್ಲೇ ಇದೆ ಖುಷಿ. ಆತ ಪ್ರತಿಭಾವಂತ. ಚೆಂಡಿನ ಗತಿ ಗಮನಿಸಿ ಹೊಡೆತವನ್ನು ಆಯ್ಕೆ ಮಾಡಿಕೊಳ್ಳುವ ಬಗೆ ಅಮೋಘ. ಹಾಗೆ ನೋಡಿದರೆ ಎಡಗೈ ಆಟಗಾರರು ವಿಶಿಷ್ಟ. ಅವರ ಬ್ಯಾಟಿಂಗಿಗೆ ವಿಶೇಷ ಸೊಬಗು ಇದೆ....’

ಸ್ವತಃ ಎಡಚರಾಗಿರುವ, ವಿಶ್ವ ಕ್ರಿಕೆಟ್‌ನಲ್ಲಿ ವಿಶೇಷ ಛಾಪು ಒತ್ತಿರುವ ದೆಹಲಿಯ ಗೌತಮ್ ಗಂಭೀರ್ ಆಡಿರುವ ಮಾತು ಇದು. ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಕ್ರಿಕೆಟ್ ಟೂರ್ನಿಯ 13ನೇ ಆವೃತ್ತಿಯ ಮೂರನೇ ಪಂದ್ಯದಲ್ಲಿ ರಾಯಲ್ ಚಾಲೆಂಜ‌ರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆರಂಭಿಕ ಬ್ಯಾಟ್ಸ್‌ಮನ್ ದೇವದತ್ತ ಪಡಿಕ್ಕಲ್ ಅವರ ಬ್ಯಾಟಿಂಗ್ ವೈಭವಕ್ಕೆ ಮೆಚ್ಚುಗೆ ಸೂಚಿಸಿ ಗೌತಮ್ ಹೀಗೆ ಹೇಳಿದ್ದರು.  

ಹೌದು, ಅವರ ಮಾತಿನಲ್ಲಿ ಹುರುಳು ಇದೆ. ವಿಶ್ವ ಕ್ರಿಕೆಟ್‌ನಲ್ಲಿ ಎಡಗೈ ಆಟಗಾರರು ಮಾಡಿರುವ ಸಾಧನೆ ಅಂಥದ್ದು. ಎಡಗೈಯನ್ನು ಬಳಸುವವರಿಗೆ ಬಲಗೈ ಮೇಲೆ ಸ್ವಾಧೀನ ಇರುವವರಿಗಿಂತ ಹೆಚ್ಚು ಬಲ ಇರುತ್ತದೆ ಎಂಬ ಮಾತೊಂದು ಇದೆ. ಕೆಲವು ಸಂದರ್ಭದಲ್ಲಿ ಇದು ನಿಜ ಎಂದು ಎನಿಸುವುದೂ ಉಂಟು. ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲೇ ಇದಕ್ಕೆ ಸಾಕಷ್ಟು ಪುರಾವೆಗಳು ಸಿಗುತ್ತವೆ. ವಿಶೇಷವಾಗಿ, ಎಡಗೈ ಬ್ಯಾಟ್ಸ್‌ಮನ್‌ಗಳು ರನ್‌ಗಳನ್ನು ಗುಡ್ಡ ಹಾಕಿದ್ದು ಎದ್ದು ಕಾಣುತ್ತದೆ. 

ಐಪಿಎಲ್‌ನ ಅಂಕಿ ಅಂಶಗಳ ಮೇಲೊಮ್ಮೆ ಕಣ್ಣಾಡಿಸಿದರೆ, ಅತಿಹೆಚ್ಚು ರನ್ ಕಲೆ ಹಾಕಿದವರ ಪಟ್ಟಿಯಲ್ಲಿ ಎಡಗೈ ಆಟಗಾರರು ಪ್ರಮುಖ ಸ್ಥಾನಗಳಲ್ಲಿದ್ದಾರೆ. ಈ ಪಟ್ಟಿಯ ಮೊದಲ ಸ್ಥಾನದಲ್ಲಿ ಬಲಗೈ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಇದ್ದಾರೆ. ಆದರೆ ಅಗ್ರ ಹತ್ತು ಮಂದಿಯಲ್ಲಿ ಐವರು ಎಡಗೈ ಆಟಗಾರರು. ಸಿಕ್ಸರ್‌ ಮತ್ತು ಬೌಂಡರಿ ಸಿಡಿಸಿರುವವರಲ್ಲೂ ಈ ಐದು ಮಂದಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಬಲಗೈ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಬಿ ಡಿವಿಲಿಯರ್ಸ್‌, ಮಹೇಂದ್ರ ಸಿಂಗ್ ಧೋನಿ ಮತ್ತು ರಾಬಿನ್ ಉತ್ತಪ್ಪ (ಅಕ್ಟೋಬರ್ ಮೂರರ ವರೆಗೆ) ಕ್ರಮವಾಗಿ 192, 204, 219, 213 ಮತ್ತು 156 ಸಿಕ್ಸರ್‌ ಗಳಿಸಿದ್ದರೆ, ಎಡಗೈ ಆಟಗಾರರಾದ ಸುರೇಶ್ ರೈನಾ, ಡೇವಿಡ್ ವಾರ್ನರ್, ಶಿಖರ್ ಧವನ್, ಕ್ರಿಸ್ ಗೇಲ್ ಮತ್ತು ಗೌತಮ್ ಗಂಭೀರ್ ಕ್ರಮವಾಗಿ 194, 184, 99, 326 ಮತ್ತು 59 ಬಾರಿ ಚೆಂಡನ್ನು ಬೌಂಡರಿ ಗೆರೆಯ ಆಚೆ ಎತ್ತಿದ್ದಾರೆ. 

ಬೌಂಡರಿಗಳ ಸಂಖ್ಯೆಗಳ ಮೇಲೆ ಕಣ್ಣಾಡಿಸಿದರೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಎಬಿ ಡಿವಿಲಿಯರ್ಸ್‌, ಮಹೇಂದ್ರ ಸಿಂಗ್ ಧೋನಿ ಮತ್ತು ರಾಬಿನ್ ಉತ್ತಪ್ಪ ಕ್ರಮವಾಗಿ 487, 444, 370, 303 ಹಾಗೂ 438 ಬೌಂಡರಿ ಗಳಿಸಿದ್ದು ಸುರೇಶ್ ರೈನಾ, ಡೇವಿಡ್ ವಾರ್ನರ್, ಶಿಖರ್ ಧವನ್, ಕ್ರಿಸ್ ಗೇಲ್ ಮತ್ತು ಗೌತಮ್ ಗಂಭೀರ್ ಕ್ರಮವಾಗಿ 493, 467, 533, 369 ಹಾಗೂ 491 ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸಿದ್ದಾರೆ. 

ಹೆಚ್ಚು ರನ್ ಗಳಿಸಿದ ಒಟ್ಟು 100 ಮಂದಿಯ ಪಟ್ಟಿಯನ್ನು ಇಣುಕಿ ನೋಡಿದರೂ ಎಡಚರ ಸಂಖ್ಯೆ ಕಡಿಮೆಯೇನೂ ಇಲ್ಲ. 28 ಮಂದಿ ಅಲ್ಲೂ ಸಿಗುತ್ತಾರೆ. ಬೌಲರ್‌ಗಳ ಸಂಖ್ಯೆಯಲ್ಲಿ ಮಾತ್ರ ಎಡಗೈ ಆಟಗಾರರು ಕಡಿಮೆ. ಈ ಪಟ್ಟಿಯ ಅಗ್ರ 10 ಮಂದಿಯಲ್ಲಿ ಒಬ್ಬರೇ ಒಬ್ಬರು ಇದ್ದಾರೆ, ಅವರು ಭಾರತದ ರವೀಂದ್ರ ಜಡೇಜ. 100 ಮಂದಿಯ ಪಟ್ಟಿಯಲ್ಲೂ ಎಡಗೈ ಬೌಲರ್‌ಗಳ ಸಂಖ್ಯೆ ತುಂಬಾ ಕಡಿಮೆ; ಅಂದರೆ, 20ರ ಒಳಗೆ. ಈ ಪೈಕಿ ವೇಗಿಗಳ ಸಂಖ್ಯೆ ಐದರಷ್ಟೂ ಇಲ್ಲ ಎಂಬುದು ಮತ್ತೊಂದು ವಿಶೇಷ.  

ಐಪಿಎಲ್‌ ಟೂರ್ನಿಯಲ್ಲಿ ಗಮನ ಸೆಳೆದ ಪ್ರಮುಖ ಎಡಗೈ ಆಟಗಾರರ ಪಟ್ಟಿ ಮಾಡುವಾಗ ಗೌತಮ್ ಗಂಭೀರ್, ಜಹೀರ್ ಖಾನ್, ಸೊಹೇಲ್ ತನ್ವೀರ್, ಸುರೇಶ್ ರೈನಾ ಅವರನ್ನು ನೆನೆಯಲೇಬೇಕು. ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಡೇರ್ ಡೆವಿಲ್ಸ್ (ಈಗ ಡೆಲ್ಲಿ ಕ್ಯಾಪಿಟಲ್ಸ್‌) ತಂಡಗಳಿಗಾಗಿ ಆಡಿರುವ ಗೌತಮ್ ಗಂಭೀರ್ 154 ಪಂದ್ಯಗಳಲ್ಲಿ 4217 ರನ್ ಕಲೆ ಹಾಕಿದ್ದಾರೆ. 36 ಅರ್ಧಶತಕಗಳು ಅವರ ಖಾತೆಯಲ್ಲಿವೆ. 

ಐಪಿಎಲ್‌ನಲ್ಲಿ 100ಕ್ಕೂ ಹೆಚ್ಚು ವಿಕೆಟ್ ಕಬಳಿಸಿದವರು 14 ಮಂದಿ ಮಾತ್ರ. ಅವರಲ್ಲಿ ಮೂವರು ಎಡಗೈ ಆಟಗಾರರ ಪೈಕಿ ಒಬ್ಬರು, ಜಹೀರ್ ಖಾನ್. 100ಕ್ಕೂ ಹೆಚ್ಚು ಪಂದ್ಯ ಆಡಿದ ಮತ್ತು 100 ವಿಕೆಟ್ ಪಡೆದಿರುವ ಎರಡನೇ ಎಡಗೈ ಬೌಲರ್. ಮುಂಬೈ ಇಂಡಿಯನ್ಸ್‌, ಆರ್‌ಸಿಬಿ ಮತ್ತು ಡೆಲ್ಲಿ ಪರ ಆಡಿರುವ ಅವರು ಈಗ ಮುಂಬೈ ತಂಡದ ಬೌಲಿಂಗ್ ಸಲಹೆಗಾರ. 

ಪಾಕಿಸ್ತಾನದವರಾದ, ಸಾಂಪ್ರದಾಯಿಕ ಶೈಲಿಯ ಬೌಲರ್ ಸೊಹೇಲ್ ತನ್ವೀರ್ 2008ರಲ್ಲಿ ನಡೆದ ಚೊಚ್ಚಲ ಐಪಿಎಲ್‌ನಲ್ಲಿ ಕ್ರಿಕೆಟ್‌ ಜಗತ್ತಿನ ಗಮನ ಸೆಳೆದಿದ್ದರು. ಆ ಆವೃತ್ತಿಯ 11 ಪಂದ್ಯಗಳಲ್ಲಿ ಅವರು 22 ವಿಕೆಟ್ ಕಬಳಿಸಿ ರಾಜಸ್ಥಾನ ರಾಯಲ್ಸ್‌ಗೆ ಪ್ರಶಸ್ತಿ ತಂದುಕೊಡುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಒಂದು ಪಂದ್ಯದಲ್ಲಿ 14 ರನ್‌ಗಳಿಗೆ ಆರು ವಿಕೆಟ್‌ ಉರುಳಿಸಿದ್ದರು. ಐಪಿಎಲ್‌ನ ಒಂದೇ ಪಂದ್ಯದಲ್ಲಿ ಶ್ರೇಷ್ಠ ಬೌಲಿಂಗ್ ಸಾಧನೆ ಮಾಡಿದವರ ಪಟ್ಟಿಯಲ್ಲಿ ಈಗಲೂ ಅವರು ಎರಡನೇ ಸ್ಥಾನದಲ್ಲಿದ್ದಾರೆ.

ಈ ಬಾರಿ ದಿಢೀರ್ ಆಗಿ ಐಪಿಎಲ್‌ನಿಂದ ದೂರ ಸರಿದಿರುವ ಸುರೇಶ್ ರೈನಾ ಕೂಡ ಈ ವರೆಗೆ ಐಪಿಎಲ್‌ನಲ್ಲಿ ಅಮೋಘ ಸಾಧನೆ ಮಾಡಿದ್ದಾರೆ. 2008ರಿಂದ 2019ರ ವರೆಗೆ ಎಲ್ಲ ಆವೃತ್ತಿಗಳಲ್ಲೂ ಅವರು ಆಡಿದ್ದಾರೆ. ಯಾವ ಆವೃತ್ತಿಯಲ್ಲೂ ಅವರು ಗಳಿಸಿದ ಒಟ್ಟು ರನ್‌ಗಳ ಸಂಖ್ಯೆ 400ಕ್ಕಿಂತ ಕಡಿಮೆ ಆಗಲಿಲ್ಲ ಎಂಬುದು ಐಪಿಎಲ್‌ನ ಇತಿಹಾಸದಲ್ಲಿ ಅಪರೂಪದ ಸಾಧನೆ. ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳ ಪಾಲಿಗೆ ‘ಚಿನ್ನ ತಲ’ ಆಗಿರುವ ಅವರು 193 ಪಂದ್ಯಗಳಲ್ಲಿ 5368 ರನ್ ಗಳಿಸಿದ್ದು ಐಪಿಎಲ್‌ನಲ್ಲಿ 5000 ರನ್‌ಗಳ ಗಡಿ ದಾಟಿದ ಮೂವರ ಪೈಕಿ ಒಬ್ಬರು. 

ಯುವ ಆಟಗಾರರ ತಾಕತ್ತು

ಕ್ರಿಸ್ ಗೇಲ್‌ಗೂ ಐಪಿಎಲ್‌ಗೂ ನಡುವಿನ ನಂಟು ಅವಿನಾಭಾವ. ಹೆಚ್ಚಿನವರು ಐಪಿಎಲ್ ಎಂದರೆ ಕ್ರಿಸ್ ಗೇಲ್ ಎಂದೇ ಹೇಳುವುದುಂಟು. ಅಂಥ ಆಟಗಾರನಿಗೆ ಈ ಆವೃತ್ತಿಯಲ್ಲಿ ಇದುವರೆಗೆ ಒಂದು ಪಂದ್ಯದಲ್ಲೂ ಕಣಕ್ಕೆ ಇಳಿಯುವ ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲಿ ಅತಿಹೆಚ್ಚು ಶತಕ, ವೇಗದ ಶತಕ, ಅತಿ ಹೆಚ್ಚು ಸಿಕ್ಸರ್‌, ಒಂದೇ ಇನಿಂಗ್ಸ್‌ನಲ್ಲಿ ಹೆಚ್ಚು ಸಿಕ್ಸರ್‌, ಇನಿಂಗ್ಸ್‌ನಲ್ಲಿ ಗರಿಷ್ಠ ಸ್ಕೋರ್‌ ಮುಂತಾದ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆಸಿಕೊಂಡಿದ್ದಾರೆ ಗೇಲ್‌. 

ಅವರ ಜೊತೆ ಡೇವಿಡ್ ವಾರ್ನರ್, ಶಿಖರ್ ಧವನ್, ಏಯಾನ್ ಮಾರ್ಗನ್‌, ರವೀಂದ್ರ ಜಡೇಜ, ಕ್ವಿಂಟನ್ ಡಿ ಕಾಕ್, ಅಕ್ಷರ್ ಪಟೇಲ್ ಮತ್ತಿತರರು ಈ ಬಾರಿಯೂ ಟೂರ್ನಿಯಲ್ಲಿ ಇದ್ದಾರೆ. ಆದರೆ ಯುವ ಎಡಗೈ ಆಟಗಾರರು ಕಣದಲ್ಲಿ ಮಿಂಚುತ್ತಿದ್ದಾರೆ. ಇವರ ಪೈಕಿ ದೇವದತ್ತ ಪಡಿಕ್ಕಲ್, ಇಶಾನ್ ಕಿಶನ್, ರಿಷಭ್ ಪಂತ್‌, ಶಿವಂ ದುಬೆ, ರಾಹುಲ್ ತೇವಾಟಿಯಾ ಪ್ರಮುಖರು. ಪಂದ್ಯಗಳನ್ನು ಗೆಲ್ಲಿಸುವಂಥ ಇನಿಂಗ್ಸ್ ಕಟ್ಟಬಲ್ಲ ಇವರು ಐಪಿಎಲ್ ಮತ್ತು ಭಾರತ ಕ್ರಿಕೆಟ್‌ನ ಭರವಸೆ ಎನಿಸಿದ್ದಾರೆ. ಐಪಿಎಲ್ ಹಬ್ಬ ಇನ್ನೂ ಒಂದು ತಿಂಗಳು ಇದೆ. ಅಲ್ಲಿಯ ವರೆಗೆ ಅನುಭವಿ ಮತ್ತು ಹೊಸ ತಲೆಮಾರಿನ ಎಡಚರ ಆಟದ ಸೊಬಗು ಸವಿಯೋಣ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು