ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ಕನೇ ಟೆಸ್ಟ್‌: ಡಬ್ಲ್ಯುಟಿಸಿ ಫೈನಲ್ ನಿರೀಕ್ಷೆಯಲ್ಲಿ ಭಾರತ

ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್‌: ಜಸ್‌ಪ್ರೀತ್ ಬೂಮ್ರಾ ಅಲಭ್ಯ; ಉಮೇಶ್ ಯಾದವ್‌ಗೆ ಅವಕಾಶ ಸಾಧ್ಯತೆ
Last Updated 3 ಮಾರ್ಚ್ 2021, 11:33 IST
ಅಕ್ಷರ ಗಾತ್ರ

ಅಹಮದಾಬಾದ್‌: ಸತತ ಎರಡು ಪಂದ್ಯಗಳಲ್ಲಿ ಭರ್ಜರಿ ಜಯ ಗಳಿಸಿರುವ ಭಾರತ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ಸ್ಥಾನ ಭದ್ರಪಡಿಸುವ ಹಾದಿಯಲ್ಲಿದೆ. ಗುರುವಾರ ಇಲ್ಲಿ ಆರಂಭವಾಗಲಿರುವ ಇಂಗ್ಲೆಂಡ್‌ ಎದುರಿನ ನಾಲ್ಕನೇ ಹಾಗೂ ಕೊನೆಯ ಟೆಸ್ಟ್‌ನಲ್ಲಿ ಡ್ರಾ ಮಾಡಿಕೊಂಡರೂ ಭಾರತದ ಕನಸು ನನಸಾಗಲಿದೆ.

ನಾಲ್ಕು ಪಂದ್ಯಗಳ ಸರಣಿಯ ಮೊದಲ ಎರಡು ಪಂದ್ಯಗಳು ಚೆನ್ನೈನಲ್ಲಿ ನಡೆದಿದ್ದವು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ 227 ರನ್‌ಗಳಿಂದ ಗೆಲುವು ಸಾಧಿಸಿತ್ತು. ಮುಂದಿನ ಪಂದ್ಯದಲ್ಲಿ ತಿರುಗೇಟು ನೀಡಿದ್ದ ಭಾರತ 317 ರನ್‌ಗಳ ಭರ್ಜರಿ ಜಯ ಗಳಿಸಿತ್ತು. ಅಹಮದಾಬಾದ್‌ನ ಮೊಟೇರಾದಲ್ಲಿ ನಡೆದ ಮೊದಲ ಪಂದ್ಯದಲ್ಲಿ 10 ವಿಕೆಟ್‌ಗಳಿಂದ ಗೆದ್ದಿರುವ ತಂಡ ಈಗ ಆತ್ಮವಿಶ್ವಾಸದಲ್ಲಿದೆ.

ಎರಡೇ ದಿನಗಳಲ್ಲಿ ಮುಗಿದ ಮೊಟೇರಾ ಪಂದ್ಯ ತೀವ್ರ ಚರ್ಚೆಗೆ ಒಳಗಾಗಿದ್ದು ಅಲ್ಲಿನ ಸ್ಪಿನ್ ಪಿಚ್‌ ಅಚ್ಚರಿಗೆ ಕಾರಣವಾಗಿತ್ತು. ಕೊನೆಯ ಪಂದ್ಯದಲ್ಲೂ ಪಿಚ್‌ ಸ್ಪಿನ್ನರ್‌ಗಳಿಗೆ ನೆರವಾಗಲಿದ್ದು ಇದರ ಲಾಭ ಪಡೆದು ಸರಣಿ ಗೆಲುವಿನೊಂದಿಗೆ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಕ್ಕೂ ವಿರಾಟ್ ಕೊಹ್ಲಿ ಬಳಗ ಪ್ರಯತ್ನಿಸಲಿದೆ. ಈ ಪಂದ್ಯದಲ್ಲಿ ಇಂಗ್ಲೆಂಡ್ ಗೆದ್ದರೆ ಟೆಸ್ಟ್ ಸರಣಿಯನ್ನು ಡ್ರಾ ಮಾಡಿಕೊಳ್ಳುವುದರೊಂದಿಗೆ ಭಾರತವನ್ನು ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್‌ನಿಂದ ಹೊರದಬ್ಬುವಲ್ಲಿ ಯಶಸ್ವಿಗಾಗಲಿದೆ. ಹಾಗಾದರೆ ಆಸ್ಟ್ರೇಲಿಯಾ ಫೈನಲ್ ಪ್ರವೇಶಿಸಲಿದೆ. ನ್ಯೂಜಿಲೆಂಡ್ ಈಗಾಗಲೇ ಪ್ರಶಸ್ತಿ ಸುತ್ತು ತಲುಪಿದೆ.

ಮೊಟೇರಾದ ನರೇಂದ್ರ ಮೋದಿ ಅಂಗಣದಲ್ಲಿ ನಡೆದ ಹಗಲು–ರಾತ್ರಿ ಪಂದ್ಯದಲ್ಲಿ ಸ್ಥಳೀಯ ಹೀರೊ ಅಕ್ಷರ್ ಪಟೇಲ್ ಅವರ ಸ್ಪಿನ್‌ ಅಸ್ತ್ರಕ್ಕೆ ಎದುರಾಳಿಗಳು ಕಂಗೆಟ್ಟಿದ್ದರು. ಯಾವ ಹಂತದಲ್ಲೂ ಭಾರತಕ್ಕೆ ಸಾಟಿಯಾಗಲು ಇಂಗ್ಲೆಂಡ್‌ಗೆ ಸಾಧ್ಯವಾಗಲಿಲ್ಲ. ನಾಲ್ಕನೇ ಪಂದ್ಯದಲ್ಲೂ ಪಿಚ್ ಸ್ಪಿನ್ನರ್‌ಗಳಿಗೆ ನೆರವಾಗುವ ಎಲ್ಲ ಲಕ್ಷಣಗಳೂ ಇವೆ ಎಂದು ಭಾರತದ ಅಜಿಂಕ್ಯ ರಹಾನೆ ಮತ್ತು ಇಂಗ್ಲೆಂಡ್‌ನ ಜ್ಯಾಕ್ ಕ್ರಾವ್ಲಿ ಅಭಿಪ್ರಾಯಪಟ್ಟಿದ್ದಾರೆ.

ನಾಯಕನಾಗಿ ವಿರಾಟ್ ಕೊಹ್ಲಿ ಅವರಿಗೂ ನಾಲ್ಕನೇ ಟೆಸ್ಟ್ ಮಹತ್ವದ್ದಾಗಿದ್ದು ಜಯ ಗಳಿಸಿದರೆ ಭಾರತ ಕಂಡ ಯಶಸ್ವಿ ನಾಯಕ ಎಂಬ ಗರಿಮೆಯನ್ನು ತಮ್ಮದಾಗಿಸಿಕೊಳ್ಳಲು ನೆರವಾಗಲಿದೆ. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್‌ ಮತ್ತು ರವಿಚಂದ್ರನ್ ಅಶ್ವಿನ್ ಮೇಲೆ ಭರವಸೆ ಇರಿಸಿ ಕಣಕ್ಕೆ ಇಳಿಯಲಿದ್ದಾರೆ. ಮೊದಲ ಮೂರು ಟೆಸ್ಟ್‌ಗಳಲ್ಲಿ ಉರುಳಿದ ಇಂಗ್ಲೆಂಡ್‌ನ 60 ವಿಕೆಟ್‌ಗಳ ಪೈಕಿ 49 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾಗಿದ್ದವು.

ಬೌಲರ್‌ಗಳ ಬಗ್ಗೆ ವಿರಾಟ್ ಕೊಹ್ಲಿಗೆ ಯಾವ ಆತಂಕವೂ ಇಲ್ಲ. ಆದರೆ ಸರಣಿಯಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳ ಪೈಕಿ ಹೆಚ್ಚಿನವರು ಈ ವರೆಗೆ ನಿರೀಕ್ಷಿತ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಹಿಂದಿನ ನಾಲ್ಕು ಇನಿಂಗ್ಸ್‌ಗಳಲ್ಲಿ ಇಂಗ್ಲೆಂಡ್‌ನ ಬ್ಯಾಟಿಂಗ್ ಕಳಪೆಯಾಗಿದ್ದ ಕಾರಣ ಭಾರತದ ಗೆಲುವಿನ ಹಾದಿ ಸುಗಮವಾಗಿತ್ತು. ರೋಹಿತ್ ಶರ್ಮಾ ಮೂರು ಪಂದ್ಯಗಳಲ್ಲಿ ಒಟ್ಟು 296 ರನ್ ಕಲೆ ಹಾಕಿದ್ದಾರೆ. ಭಾರತದ ಪರ ಹೆಚ್ಚು ರನ್ ಗಳಿಸಿದವರ ಪಟ್ಟಿಯ ಎರಡನೇ ಸ್ಥಾನದಲ್ಲಿ ಬೌಲರ್‌ ಅಶ್ವಿನ್ (176) ಇದ್ದಾರೆ!

ಎರಡು ಅರ್ಧಶತಕಗಳನ್ನು ಗಳಿಸಿದ್ದು ಬಿಟ್ಟರೆ ವಿರಾಟ್ ಕೊಹ್ಲಿ ಕೂಡ ಸರಣಿಯಲ್ಲಿ ಹೆಚ್ಚು ಮಿಂಚಲಿಲ್ಲ. ಅಜಿಂಕ್ಯ ರಹಾನೆ, ಚೇತೇಶ್ವರ್ ಪೂಜಾರ್ ಮತ್ತು ಶುಭಮನ್ ಗಿಲ್ ಲಯ ಕಂಡುಕೊಳ್ಳಬೇಕಾಗಿದೆ. ಕೊನೆಯ ಪಂದ್ಯಕ್ಕೆ ವೇಗಿ ಜಸ್‌ಪ್ರೀತ್ ಬೂಮ್ರಾ ಲಭ್ಯ ಇಲ್ಲ. ಅವರ ಸ್ಥಾನವನ್ನು ಉಮೇಶ್ ಯಾದವ್ ತುಂಬಲಿದ್ದಾರೆ. ಇಶಾಂತ್ ಶರ್ಮಾ ಮತ್ತು ಮೊಹಮ್ಮದ್ ಸಿರಾಜ್ ಅವರ ಪೈಕಿ ಒಬ್ಬರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ.

ತಂಡದ ಆಯ್ಕೆ ಗೊಂದಲ

ಇಂಗ್ಲೆಂಡ್‌ ಅಂತಿಮ 11ರ ಆಯ್ಕೆಯಲ್ಲೇ ಗೊಂದಲ ಎದುರಿಸುತ್ತಿದೆ. ಹೀಗಾಗಿ ಪಂದ್ಯಗಳಲ್ಲಿ ನೈಜ ಸಾಮರ್ಥ್ಯ ತೋರಲು ತಂಡಕ್ಕೆ ಸಾಧ್ಯವಾಗುತ್ತಿಲ್ಲ. ಜೋ ರೂಟ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದು ಮೊದಲ ಟೆಸ್ಟ್‌ನ ದ್ವಿಶತಕ ಸೇರಿದಂತೆ ಮೂರು ಪಂದ್ಯಗಳಲ್ಲಿ 333 ರನ್‌ ಗಳಿಸಿದ್ದಾರೆ. ಎರಡನೇ ಸ್ಥಾನದಲ್ಲಿರುವ ಬೆನ್ ಸ್ಟೋಕ್ಸ್ ಖಾತೆಯಲ್ಲಿರುವುದು 146 ರನ್ ಮಾತ್ರ. ಹೆಚ್ಚುವರಿ ಸ್ಪಿನ್ನರ್ ಇಲ್ಲದೇ ಇರುವುದು ಕೂಡ ತಂಡ ಹಿನ್ನಡೆಗೆ ಕಾರಣವಾಗಿದೆ. ಆದರೆ ಅಗತ್ಯ ಸಂದರ್ಭದಲ್ಲಿ ಜೋ ರೂಟ್ ತಮ್ಮ ಕೈಚಳಕ ತೋರಬಲ್ಲರು ಎಂಬುದು ಸಮಾಧಾನಕರ ವಿಷಯ. ಹಿಂದಿನ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಜೀವನಶ್ರೇಷ್ಠ 8ಕ್ಕೆ5 ವಿಕೆಟ್ ಕಬಳಿಸಿ ಅವರು ಮಿಂಚಿದ್ದರು. ಒಟ್ಟು 16 ವಿಕೆಟ್ ಉರುಳಿಸಿರುವ ಜ್ಯಾಕ್ ಲೀಚ್‌ ಮೇಲೆಯೂ ತಂಡ ಭರವಸೆ ಇರಿಸಿದೆ.

ತಂಡಗಳು: ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್‌, ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್ ಕೀಪರ್‌), ವಾಷಿಂಗ್ಟನ್ ಸುಂದರ್‌, ರವಿಚಂದ್ರನ್ ಅಶ್ವಿನ್‌, ಅಕ್ಷರ್ ಪಟೇಲ್‌, ಇಶಾಂತ್ ಶರ್ಮಾ, ಉಮೇಶ್ ಯಾದವ್‌, ಮೊಹಮ್ಮದ್ ಸಿರಾಜ್, ವೃದ್ಧಿಮಾನ್ ಸಹಾ (ವಿಕೆಟ್ ಕೀಪರ್‌), ಮಯಂಕ್ ಅಗರವಾಲ್‌, ಹಾರ್ದಿಕ್ ಪಾಂಡ್ಯ, ಕುಲದೀಪ್ ಯಾದವ್‌, ಕೆ.ಎಲ್‌.ರಾಹುಲ್‌.

ಇಂಗ್ಲೆಂಡ್‌: ಜೋ ರೂಟ್ (ನಾಯಕ), ಜೇಮ್ಸ್ ಆ್ಯಂಡರ್ಸನ್‌, ಜೊಫ್ರಾ ಆರ್ಚರ್‌, ಜಾನಿ ಬೆಸ್ಟೊ, ಡೊಮಿನಿಕ್ ಬೆಸ್‌, ಸ್ಟುವರ್ಟ್ ಬ್ರಾಡ್‌, ರೋರಿ ಬರ್ನ್ಸ್‌, ಜ್ಯಾಕ್ ಕ್ರಾವ್ಲಿ, ಬೆನ್ ಫೋಕ್ಸ್‌ (ವಿಕೆಟ್ ಕೀಪರ್‌), ಡ್ಯಾನ್ ಲಾರೆನ್ಸ್‌, ಜ್ಯಾಕ್ ಲೀಚ್‌, ಒಲಿ ಪೋಪ್‌, ಡಾಮ್ ಸಿಬ್ಲಿ, ಬೆನ್ ಸ್ಟೋಕ್ಸ್‌, ಒಲಿ ಸ್ಟೋನ್‌, ಕ್ರಿಸ್ ವೋಕ್ಸ್‌, ಮಾರ್ಕ್‌ ವುಡ್‌.

ಪಂದ್ಯ ಆರಂಭ: ಬೆಳಿಗ್ಗೆ 9.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT