ಸ್ಕ್ವಾಷ್ ತಂಡಕ್ಕೆ ಇನ್ನೂ ಇಲ್ಲ ಕೋಚ್‌

ಭಾನುವಾರ, ಜೂಲೈ 21, 2019
28 °C

ಸ್ಕ್ವಾಷ್ ತಂಡಕ್ಕೆ ಇನ್ನೂ ಇಲ್ಲ ಕೋಚ್‌

Published:
Updated:

ನವದೆಹಲಿ: ಭಾರತ ಸ್ಕ್ವಾಷ್ ರ‍್ಯಾಕೆಟ್ ಫೆಡರೇಷನ್‌ಗೆ (ಎಸ್‌ಆರ್‌ಎಫ್‌ಐ) ಇನ್ನೂ ಪೂರ್ಣಪ್ರಮಾಣದ ಕೋಚ್ ನೇಮಕ ಮಾಡಲು ಆಗಲಿಲ್ಲ. ಹೀಗಾಗಿ ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ಭಾರತ ಸ್ಕ್ವಾಷ್‌ ತಂಡದ ಅಭ್ಯಾಸಕ್ಕೆ ಗ್ರಹಣ ಬಡಿದಿದೆ.

ಈಜಿಪ್ಟ್‌ನ ಅಚ್ರಫ್ ಎಲ್‌. ಕರಾರ್ಗುಯಿ ಅವರು ಕಾಮನ್‌ವೆ‌ಲ್ತ್ ಕ್ರೀಡಾಕೂಟಕ್ಕೆ ಕೆಲವೇ ದಿನಗಳು ಉಳಿದಿದ್ದಾಗ ತಂಡವನ್ನು ತೊರೆದಿದ್ದರು. ಎಸ್‌ಆರ್‌ಎಫ್‌ಐ ವೃತ್ತಿಪರವಾಗಿಲ್ಲ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದ್ದರು.

ತಂಡವನ್ನು ತೊರೆದು ಹೋದ ನಂತರ ಈವರೆಗೂ ಭಾರತ ತಂಡದ ಪೂರ್ಣಪ್ರಮಾಣದ ಕೋಚ್ ಇಲ್ಲದೇ ಅಭ್ಯಾಸ ನಡೆಸುತ್ತಿದೆ. ಸೌರವ್ ಘೋಷಾಲ್‌, ಹರೀಂದರ್ ಪಾಲ್ ಸಂಧು ಮತ್ತು ಜೋಷ್ನಾ ಚಿಣ್ಣಪ್ಪ ಇಂಗ್ಲೆಂಡ್‌ನಲ್ಲಿ ವಿಭಿನ್ನ ಕೋಚ್‌ಗಳಿಂದ ತರಬೇತಿ ಪಡೆಯುತ್ತಿದ್ದಾರೆ. ಇದರ ವೆಚ್ಚವನ್ನು ಸರ್ಕಾರವೇ ಭರಿಸುತ್ತಿದೆ. ದೀಪಿಕಾ ಪಳ್ಳಿಕ್ಕಲ್‌ ಈಜಿಪ್ಟ್‌ನಲ್ಲಿ ಕರಾರ್ಗುಯಿ ಅವರ ಬಳಿ ತರಬೇತಿ ಪಡೆಯುತ್ತಿದ್ದಾರೆ.

‘ಎಲ್ಲ ಆಟಗಾರರು ಒಬ್ಬರ ಕೈಕೆಳಗೆ, ಒಂದೇ ಸೂರಿನಡಿ ತರಬೇತಿ ಪಡೆದರೆ ಉತ್ತಮ. ಆದರೆ ಈಗ ಇದಕ್ಕೆ ಅವಕಾಶ ಇಲ್ಲ. ಇದು ಬೇಸರದ ವಿಷಯ’ ಎಂದು ಸುದ್ದಿಸಂಸ್ಥೆಗೆ ಘೋಷಾಲ್ ತಿಳಿಸಿದರು.

ಸೈರಸ್‌ ಪೂಂಚಾ ಮತ್ತು ಭುವನೇಶ್ವರಿ ಕುಮಾರಿ ಸದ್ಯ ಕೋಚ್‌ಗಳಾಗಿ ಭಾರತ ತಂಡದೊಂದಿಗೆ ಜಕಾರ್ತಾಗೆ ತೆರಳಲಿದ್ದಾರೆ. ಇದರಿಂದ ತಂಡಕ್ಕೆ ಪ್ರಯೋಜನ ಆಗದು ಎಂಬುದು ಆಟಗಾರರ ಅನಿಸಿಕೆ.

ಘೋಷಾಲ್, ಸಂಧು, ಪಳ್ಳಿಕ್ಕಲ್‌ ಮತ್ತು ಚಿಣ್ಣಪ್ಪ ಅವರೊಂದಿಗೆ ಸುನಯನ ಕುರುವಿಳ, ತನ್ವಿ ಖನ್ನ, ರಮಿತ್‌ ಟಂಡನ್‌ ಮತ್ತು ಮಹೇಶ್‌ ಮಂಗಾವ್ಕರ್‌ ಅವರೂ ತಂಡದಲ್ಲಿದ್ದಾರೆ. ಇಂಚೇನ್ ಕೂಟದಲ್ಲಿ ಭಾರತ ಪುರುಷರ ತಂಡ ಚೊಚ್ಚಲ ಚಿನ್ನ ಗೆದ್ದಿದ್ದರೆ ಮಹಿಳೆಯರ ತಂಡ ಮೊದಲ ಬಾರಿ ಬೆಳ್ಳಿ ಗೆದ್ದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !