ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1992: ಪಾಕ್‌ಗೆ ಭಾರತ ನೀಡಿದ ‘ಮೊದಲ’ ಆಘಾತ

Last Updated 8 ಮೇ 2019, 16:32 IST
ಅಕ್ಷರ ಗಾತ್ರ

ಈ ವಿಶ್ವಕಪ್‌ ಟೂರ್ನಿಯ ಲೀಗ್‌ ಹಂತದಲ್ಲಿ ಎಲ್ಲರ ಗಮನ ಸೆಳೆದ ಪಂದ್ಯ ಭಾರತ–ಪಾಕ್‌ ನಡುವಿನದ್ದು. ವಿಶೇಷವೆಂದರೆ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿಗಳು ಮೊದಲ ಬಾರಿ ಮುಖಾಮುಖಿಯಾಗಿದ್ದವು. ಆ ಜಯದ ಬಳಿಕ ಪ್ರಮುಖ ಟೂರ್ನಿಯಲ್ಲಿ ಪಾಕ್‌ ಎದುರು ಭಾರತದ ಗೆಲುವಿನ ನಾಗಾಲೋಟ ಮುಂದುವರಿದಿದೆ.

*ಇದಕ್ಕೂ ಮೊದಲಿನ ನಾಲ್ಕು ವಿಶ್ವಕಪ್‌ಗಳಲ್ಲಿ ಭಾರತ–ಪಾಕ್‌ ಬೇರೆ ಬೇರೆ ಗುಂಪುಗಳಲ್ಲಿ ಸ್ಥಾನ ಪಡೆದಿದ್ದ ಕಾರಣ ಮುಖಾಮುಖಿಯಾಗಲು ಸಾಧ್ಯವಾಗಿರಲಿಲ್ಲ.

* ಉಭಯ ದೇಶಗಳ ಅಭಿಮಾನಿಗಳು ಎದುರು ನೋಡುತ್ತಿದ್ದ ಸಮಯ 1992ರ ಮಾರ್ಚ್‌ 4ರಂದು ಬಂದೇಬಿಟ್ಟಿತು. ಅದಕ್ಕೆ ಸಿಡ್ನಿ ಕ್ರೀಡಾಂಗಣ ವೇದಿಕೆ ಕಲ್ಪಿಸಿತು.

* ಟಾಸ್‌ ಗೆದ್ದ ಭಾರತ ತಂಡದ ನಾಯಕ ಮೊಹಮ್ಮದ್‌ ಅಜರುದ್ದೀನ್‌ ಮೊದಲು ಬ್ಯಾಟ್‌ ಮಾಡಲು ಹಿಂದೆಮುಂದೆ ನೋಡಲಿಲ್ಲ. 46 ರನ್ ಗಳಿಸಿದ ಅಜಯ್‌ ಜಡೇಜ ಉತ್ತಮ ಅಡಿಪಾಯ ಹಾಕಿಕೊಟ್ಟರು. ತಂಡದ ಮೊತ್ತವನ್ನು 200ರ ಗಡಿ ದಾಟಿಸಿದ್ದು ಸಚಿನ್‌ ತೆಂಡೂಲ್ಕರ್‌ (ಔಟಾಗದೆ 56) ಹಾಗೂ ಕಪಿಲ್‌ ದೇವ್ (35). ಪರಿಣಾಮ ಭಾರತ 7 ವಿಕೆಟ್‌ಗೆ 216 ರನ್‌ ಗಳಿಸಿತು.

* ಅಮೀರ್‌ ಸೊಹೇಲ್‌ (62) ಉತ್ತಮ ಆಟದ ಹೊರತಾಗಿಯೂ ಪಾಕ್‌ 173 ರನ್‌ಗಳಿಗೆ ಆಲ್‌ಔಟಾಯಿತು. ಕಪಿಲ್‌ ದೇವ್‌, ಕನ್ನಡಿಗ ಜಾವಗಲ್‌ ಶ್ರೀನಾಥ್‌ ಹಾಗೂ ಮನೋಜ್‌ ಪ್ರಭಾಕರ್‌ ತಲಾ ಎರಡು ವಿಕೆಟ್‌ ಪಡೆದರು. ಭಾರತ 43 ರನ್‌ಗಳಿಂದ ಗೆದ್ದು ಬೀಗಿತು. ಒಂದು ವಿಕೆಟ್‌ ಪಡೆದು ಆಲ್‌ರೌಂಡ್‌ ಆಟವಾಡಿದ ಸಚಿನ್‌ ‘ಪಂದ್ಯಶ್ರೇಷ್ಠ’ರಾದರು.

* ಲೀಗ್‌ ಹಂತದಲ್ಲಿ ಆತಿಥೇಯ ನ್ಯೂಜಿಲೆಂಡ್‌ ಅಕ್ಷರಶಃ ಆರ್ಭಟಿಸಿತು. ಉತ್ತಮ ಫಾರ್ಮ್‌ನಲ್ಲಿದ್ದ ಈ ತಂಡದ ಮೇಲೆ ಅಭಿಮಾನಿಗಳಲ್ಲಿದ್ದ ವಿಶ್ವಾಸವೂ ಹೆಚ್ಚಾಯಿತು.

* ಮತ್ತೊಂದು ಆತಿಥ್ಯ ರಾಷ್ಟ್ರ ಹಾಗೂ ಚಾಂಪಿಯನ್‌ ಆಸ್ಟ್ರೇಲಿಯಾ ಮಾತ್ರ ನಿರೀಕ್ಷಿತ ಮಟ್ಟದ ಪ್ರದರ್ಶನ ತೋರಲಿಲ್ಲ.

* ಇಮ್ರಾನ್‌ ಖಾನ್‌ ಬಳಗದವರು ಆರಂಭಿಕ ಐದು ಪಂದ್ಯಗಳಲ್ಲಿ ಕೇವಲ ಒಂದರಲ್ಲಿ ಗೆದ್ದು ಟೂರ್ನಿಯಿಂದ ಹೊರಬೀಳುವ ಅಪಾಯಕ್ಕೆ ಸಿಲುಕಿದ್ದರು.

* ಆಸ್ಟ್ರೇಲಿಯಾ ವಿರುದ್ಧದ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡದ ನಾಯಕ ಮಾರ್ಟಿನ್‌ ಕ್ರೋವ್‌ ಆಫ್‌ ಸ್ಪಿನ್ನರ್‌ ದೀಪಕ್‌ ಪಟೇಲ್‌ ಅವರನ್ನು ಆರಂಭಿಕ ಬೌಲರ್‌ ಆಗಿ ಕಣಕ್ಕಿಳಿಸಿ ಜಾಣ್ಮೆ ಮೆರೆದರು. ಅವರು ಕಾಂಗರೂ ಪಡೆ ನಾಯಕ ಅಲನ್‌ ಬಾರ್ಡರ್‌ ವಿಕೆಟ್‌ ಪಡೆದರು. ಅಷ್ಟೇ ಅಲ್ಲ; ಮುಂದಿನ ಪಂದ್ಯಗಳಲ್ಲಿ ಮಾರ್ಕ್‌ ಗ್ರೇಟ್‌ಬ್ಯಾಚ್‌ ಅವರನ್ನು ಆರಂಭಿಕ ಆಟಗಾರನಾಗಿ ಕಣಕ್ಕಿಳಿಸಿದ್ದು ಕೂಡ ಕಿವೀಸ್‌ ಬಳಗಕ್ಕೆ ಯಶಸ್ಸು ನೀಡಿತು. ಅವರು ದಕ್ಷಿಣ ಆಫ್ರಿಕಾ, ವೆಸ್ಟ್‌ಇಂಡೀಸ್‌, ಭಾರತ ವಿರುದ್ಧ ಅರ್ಧ ಶತಕ ಗಳಿಸಿದರು.

*ತಂಡವೊಂದು ಮೊದಲ ಬಾರಿ 300 ರನ್‌ಗಳಿಗಿಂತ ಹೆಚ್ಚಿನ ಗುರಿಯನ್ನು ಬೆನ್ನಟ್ಟಿ ಗೆಲುವು ಸಾಧಿಸಿದ್ದು ಈ ವಿಶ್ವಕಪ್‌ನಲ್ಲಿ. ಜಿಂಬಾಬ್ವೆ ನೀಡಿದ 313 ರನ್‌ಗಳ ಗುರಿಯನ್ನು ಶ್ರೀಲಂಕಾ ತಂಡದವರು ಇನ್ನೂ ನಾಲ್ಕು ಎಸೆತ ಬಾಕಿ ಇರುವಾಗ ಯಶಸ್ವಿಯಾಗಿ ತಲುಪಿದರು. ಪದಾರ್ಪಣೆ ಪಂದ್ಯದಲ್ಲಿ ಆ್ಯಂಡಿ ಫ್ಲವರ್‌ ಗಳಿಸಿದ 115 ರನ್‌ ವ್ಯರ್ಥವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT