ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ‘ವಿಶ್ವ’ ಗೆಲ್ಲುವ ಕನಸು ಕಾಣುತ್ತಾ..

Last Updated 14 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಭಾರತ ಪುರುಷರ ಕ್ರಿಕೆಟ್ ತಂಡ ಏಷ್ಯಾಕಪ್‌ ಪ್ರಶಸ್ತಿ ಗೆದ್ದಾಯಿತು. ಕಿರಿಯರ ತಂಡ ಏಷ್ಯಾಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಾಯಿತು. ಈಗ ಎಲ್ಲರ ಗಮನ ಮಹಿಳಾ ಕ್ರಿಕೆಟಿಗರ ಕಡೆಗೆ ನೆಟ್ಟಿದೆ. ನವೆಂಬರ್‌ ಒಂಬತ್ತರಿಂದ 24ರ ವರೆಗೆ ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಭಾರತದ ಮಹಿಳೆಯರ ತಂಡ ಯಾವ ಮಟ್ಟದ ಸಾಧನೆ ಮಾಡಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ.

ಟ್ವೆಂಟಿ–20 ವಿಶ್ವಕಪ್‌ನಲ್ಲಿ ಭಾರತ ಮಹಿಳೆಯರು ಈ ವರೆಗೆ ಮಹತ್ವದ್ದೇನನ್ನೂ ಮಾಡಲಿಲ್ಲ. 2009 ಮತ್ತು 2010ರಲ್ಲಿ ಸೆಮಿಫೈನಲ್‌ ಪ್ರವೇಶಿಸಿದ್ದು ತಂಡದ ಗರಿಷ್ಠ ಸಾಧನೆ. ಕಳೆದ ಬಾರಿಯ ಟೂರ್ನಿ ಭಾರತದಲ್ಲೇ ನಡೆದಿದ್ದರೂ ಆತಿಥೇಯರು ನಾಕೌಟ್ ಹಂತಕ್ಕೂ ತಲುಪದೆ ನಿರಾಸೆಗೆ ಒಳಗಾಗಿದ್ದರು.

ಆದರೆ ನಂತರ ಭಾರತ ತಂಡದಲ್ಲಿ ಸಾಕಷ್ಟು ಬದಲಾವಣೆಗಳು ಆಗಿವೆ. ಕಳೆದ ವರ್ಷ ನಡೆದಿದ್ದ 50 ಓವರ್‌ಗಳ ವಿಶ್ವಕಪ್ ಟೂರ್ನಿಯಂತೂ ತಂಡದ ಛಾಯೆಯನ್ನೇ ಬದಲಿಸಿದೆ. ವಿಶ್ವಕಪ್‌ನಲ್ಲಿ ಫೈನಲ್‌ಗೆ ತಲುಪಿದ್ದರಿಂದ ಆಟಗಾರ್ತಿಯರ ಹುಮ್ಮಸ್ಸು ಹೆಚ್ಚಾಗಿದೆ. ಈಗ ಯಾವುದೇ ಎದುರಾಳಿಯನ್ನು ಸಮರ್ಥವಾಗಿ ಎದುರಿಸುವ ಛಾತಿಯೂ ಮೂಡಿದೆ.

ಮೂರು ಬಾರಿ ಟ್ವೆಂಟಿ–20 ವಿಶ್ವಕಪ್‌ನಲ್ಲಿ ನಾಯಕಿಯಾಗಿದ್ದ ಮಿಥಾಲಿ ರಾಜ್‌ ಬದಲಿಗೆ ಈ ಬಾರಿ ಹರ್ಮನ್‌ಪ್ರೀತ್‌ ಕೌರ್‌ ತಂಡವನ್ನು ಮುನ್ನಡೆಸುತ್ತಿದ್ದಾರೆ. ಆಕ್ರಮಣಕಾರಿ ಆಟಕ್ಕೆ ಹೆಸರಾಗಿರುವ ಅವರು ಕೆರಿಬಿಯನ್‌ ನೆಲದಲ್ಲಿ ಭಾರತಕ್ಕೆ ಚೊಚ್ಚಲ ಪ್ರಶಸ್ತಿ ಗೆದ್ದುಕೊಡಬಲ್ಲರೇ ಎಂಬುದನ್ನು ಕಾದುನೋಡಬೇಕಿದೆ.

ವಿಶ್ವಕಪ್ ನಂತರ....

ವಿಶ್ವಕಪ್‌ ಕ್ರಿಕೆಟ್‌ ನಂತರದ ಆರು ತಿಂಗಳು ಭಾರತದ ಆಟಗಾರ್ತಿಯರಿಗೆ ಪೂರ್ಣ ವಿಶ್ರಾಂತಿ ಲಭಿಸಿತ್ತು. ವಿಶ್ವಕಪ್‌ ಮತ್ತು ಅದಕ್ಕೂ ಮುನ್ನ ನಿರಂತರ ಪಂದ್ಯಗಳನ್ನು ಆಡಿದವರಿಗೆ ಇದರ ಅಗತ್ಯವೂ ಇತ್ತು. ವಿರಾಮದ ನಂತರ ಕಣಕ್ಕೆ ಇಳಿದ ಆಟಗಾರ್ತಿಯರು ಹೊಸ ಹುಮ್ಮಸ್ಸಿನಿಂದ ಆಡಿ ಸಾಧನೆಯ ಹಾದಿಯನ್ನು ತುಳಿದಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಏಕದಿನ ಮತ್ತು ಟ್ವೆಂಟಿ–20 ಸರಣಿಯಲ್ಲಿ ಅಮೋಘ ಸಾಮರ್ಥ್ಯ ತೋರಿ ಕ್ರಮವಾಗಿ 2–1 ಮತ್ತು 3–1ರಿಂದ ಗೆಲುವು ಸಾಧಿಸಿದ್ದಾರೆ. ಆ ಜಯ, ವೆಸ್ಟ್ ಇಂಡೀಸ್‌ನಲ್ಲಿ ನಡೆಯಲಿರುವ ವಿಶ್ವಕಪ್‌ ಮೇಲೆ ಪ್ರಭಾವ ಬೀರುವುದು ಖಚಿತ ಎಂಬುದು ಕ್ರಿಕೆಟ್ ಪಂಡಿತರ ಅನಿಸಿಕೆ.

ಹರ್ಮನ್‌ಪ್ರೀತ್ ಕೌರ್‌ ಅವರ 150ನೇ ಪಂದ್ಯಕ್ಕೆ ಸಾಕ್ಷಿಯಾದ, ಸ್ಮೃತಿ ಮಂದಾನ ಅವರ ಜೀವನಶ್ರೇಷ್ಠ ಏಕದಿನ ಮೊತ್ತವಾದ 135 ರನ್‌ ಗಳಿಸಲು ನೆರವಾದ, ಜೆಮಿಮಾ ರಾಡ್ರಿಗಸ್, ಪೂಜಾ ವಸ್ತ್ರಕಾರ್ ಅವರಂಥ ಯುವ ಆಟಗಾರ್ತಿಯರ ‘ಉದಯ’ಕ್ಕೆ ವೇದಿಕೆಯಾದ ದಕ್ಷಿಣ ಆಫ್ರಿಕಾ ಪ್ರವಾಸ ತಂಡದ ಮೇಲೆ ಬೀರಿರುವ ಪ್ರಭಾವ ಕಡಿಮೆಯೇನಲ್ಲ.

ಇದರ ನಂತರ ಬಾಂಗ್ಲಾದೇಶ ‘ಎ’ ತಂಡದ ವಿರುದ್ಧ ನಡೆದ ಸರಣಿ ಹಾಗೂ ದೇಶಿ ಕ್ರಿಕೆಟ್‌ನಲ್ಲಿ ನಡೆದ ಬ್ಲೂ, ಗ್ರೀನ್ ಮತ್ತು ರೆಡ್‌ ತಂಡಗಳ ಸೆಣಸಾಟ ಆಟಗಾರ್ತಿಯರಿಗೆ ತಮ್ಮ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಮತ್ತು ಆಯ್ಕೆ ಸಮಿತಿಯ ಮನಗೆಲ್ಲಲು ನೆರವಾಗಿದೆ. ಹೊಸ ಕೋಚ್‌ ರಮೇಶ್ ಪೊವಾರ್‌ ಅವರ ಪಾಲಿಗೂ ಈ ಟೂರ್ನಿ ಮಹತ್ವದ್ದಾಗಿರುವುದರಿಂದ ಭರವಸೆ ಮತ್ತಷ್ಟು ಹೆಚ್ಚಿದೆ.

ಏಕೈಕ ಕನ್ನಡತಿ

ವಿಶ್ವಕಪ್‌ ಟೂರ್ನಿಗಳಲ್ಲಿ ಆಡುವ ಭಾರತ ಮಹಿಳಾ ತಂಡದಲ್ಲಿರುವ ಕನ್ನಡಿಗರ ಸಂಖ್ಯೆ ಕಡಿಮೆಯೇ. ಈ ವರೆಗಿನ ಐದು ಟೂರ್ನಿಗಳ ಪೈಕಿ ಎರಡರಲ್ಲಿ ಮಾತ್ರ ಕನ್ನಡದ ಆಟಗಾರ್ತಿಯರು ಸ್ಥಾನ ಗಳಿಸಿದ್ದಾರೆ. ಕಳೆದ ಬಾರಿ ಮೂವರು ಆಡಿದ್ದರೆ ಈ ವರ್ಷ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ವುಮನ್‌ ವೇದಾ ಕೃಷ್ಣಮೂರ್ತಿ ಮಾತ್ರ ತಂಡದಲ್ಲಿದ್ದಾರೆ.

ಹೆಚ್ಚಿದ ‘ಹಿಂಬಾಲಕರ’ ಸಂಖ್ಯೆ

50 ಓವರ್‌ಗಳ ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ ನಂತರ ಭಾರತ ತಂಡದ ಆಟಗಾರ್ತಿಯರು ಸಾಮಾಜಿಕ ತಾಣಗಳಲ್ಲೂ ಪ್ರಸಿದ್ಧಿ ಪಡೆಯುತ್ತಿದ್ದಾರೆ. ವಿವಿಧ ತಾಣಗಳಲ್ಲಿ ಅವರ ಹಿಂಬಾಲಕರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. ಸ್ಫೋಟಕ ಆಟಗಾರ್ತಿ ಸ್ಮೃತಿ ಮಂದಾನ ಈ ಸಾಲಿನಲ್ಲಿ ಮುಂಚೂಣಿಯಲ್ಲಿದ್ದಾರೆ. ವಿಶ್ವಕಪ್‌ಗಿಂತ ಮೊದಲು 30599 ಇದ್ದ ಅವರ ಹಿಂಬಾಲಕರ ಸಂಖ್ಯೆ ವಿಶ್ವಕಪ್‌ ನಂತರ 604011ಕ್ಕೆ ಏರಿದೆ. ವಿಶ್ವಕಪ್‌ ಕಳೆದು ಒಂದು ವರ್ಷದ ಅವಧಿಯಲ್ಲಿ ಈ ಸಂಖ್ಯೆ 1883967ಕ್ಕೆ ಏರಿತ್ತು.

ಹರ್ಮನ್ ಪ್ರೀತ್ ಕೌರ್‌, ವೇದಾ ಕೃಷ್ಣಮೂರ್ತಿ ಮತ್ತು ಸುಷ್ಮಾ ವರ್ಮಾ ಅವರು ಪಟ್ಟಿಯಲ್ಲಿ ಕ್ರಮವಾಗಿ ಎರಡು, ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ವಿಶ್ವಕಪ್‌ ಟೂರ್ನಿಯ ಒಂದು ವರ್ಷದ ನಂತರ ಇವರ ಹಿಂಬಾಲಕರ ಸಂಖ್ಯೆ ಕ್ರಮವಾಗಿ 781160, 468024 ಹಾಗೂ 375424 ಆಗಿತ್ತು.

**

ಮಹಿಳೆಯರ ಟ್ವೆಂಟಿ–20 ವಿಶ್ವಕಪ್‌ನಲ್ಲಿ ಪ್ರತಿ ಬಾರಿಯೂ ಪ್ರಬಲ ಪೈಪೋಟಿ ಕಂಡುಬರುತ್ತದೆ. ಈ ಬಾರಿಯ ಲೀಗ್‌ ಪಂದ್ಯಗಳು ರೋಮಾಂಚಕಾರಿಯಾಗಲಿವೆ. ಕಳೆದ ಬಾರಿ ವಿಶ್ವಕಪ್‌ ಕ್ರಿಕೆಟ್‌ನ ಫೈನಲ್ ಪ್ರವೇಶಿಸಿದ್ದರಿಂದ ನಮ್ಮ ತಂಡದ ಮೇಲೆ ನಿರೀಕ್ಷೆಯ ಭಾರವಿದೆ. ಕ್ರಿಕೆಟ್‌ ಪ್ರೇಮಿಗಳಿಗೆ ನಿರಾಸೆಯಾಗದಂತೆ ನಾವು ಆಡಲು ಶ್ರಮಿಸಲಿದ್ದೇವೆ. ವೆಸ್ಟ್ ಇಂಡೀಸ್‌ನಲ್ಲಿ ಆಡಲು ಕಾತರರಾಗಿದ್ದೇವೆ.
ಹರ್ಮನ್‌ಪ್ರೀತ್‌ ಕೌರ್‌, ಭಾರತ ತಂಡದ ನಾಯಕಿ

**
ವಿಶ್ವಕಪ್‌ಗೆ ನಮ್ಮ ದೇಶ ಆತಿಥ್ಯ ವಹಿಸುತ್ತಿರುವುದು ಖುಷಿಯ ವಿಷಯ. ಟೂರ್ನಿ ಯಶಸ್ವಿಯಾಗಲು ಬೇಕಾದ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಕುಟುಂಬ ಸದಸ್ಯರು ಮತ್ತು ಗೆಳೆಯರು ನಮ್ಮ ತಂಡದ ಆಟವನ್ನು ಹತ್ತಿರದಿಂದ ನೋಡಲಿದ್ದಾರೆ ಎಂಬುದು ಸಂತಸದ ವಿಷಯ. ವಿಶ್ವಕಪ್‌ ಇಲ್ಲಿನ ಕ್ರಿಕೆಟ್‌ ಪ್ರೇಮಿಗಳನ್ನು ನಿಜಕ್ಕೂ ಸಂತಸದ ಅಲೆಯಲ್ಲಿ ತೇಲಿಸಲಿದೆ.
ಜೆನಿಫರ್ ಟೇಲರ್‌, ವೆಸ್ಟ್ ಇಂಡೀಸ್ ತಂಡದ ನಾಯಕಿ

**
ಕ್ರೀಡೆ, ಸಂಸ್ಕೃತಿ ಮತ್ತು ಮೋಜಿಗೆ ಅತ್ಯಂತ ಸೂಕ್ತ ದೇಶ ವೆಸ್ಟ್ ಇಂಡೀಸ್‌, ಇಂಥ ಕಡೆ ಈ ಬಾರಿ ವಿಶ್ವಕಪ್‌ ಟೂರ್ನಿ ನಡೆಯುತ್ತಿರುವುದು ಸಂಭ್ರಮ. ಕ್ರಿಕೆಟ್‌, ಇಲ್ಲಿನ ಜನರ ನರನಾಡಿಯಲ್ಲಿ ಸೇರಿಕೊಂಡಿದೆ ಎಂಬುದು ಈ ಬಾರಿಯ ಟೂರ್ನಿಯ ಸಂದರ್ಭದಲ್ಲಿ ಸಾಬೀತಾಗಲಿದೆ.
ಜೆನಿಫರ್ ನೀರೊ, ಟೂರ್ನಿಯ ನಿರ್ದೇಶಕಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT