ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌ ಹೊಸ ದಿಸೆಯತ್ತ

Last Updated 16 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಅದು 2009. ಮಹಿಳೆಯರ ಚೊಚ್ಚಲ ಟ್ವೆಂಟಿ–20 ವಿಶ್ವಕಪ್ ಕ್ರಿಕೆಟ್ ಟೂರ್ನಿ ನಡೆದ ವರ್ಷ. ಭಾರತದ ಮಿಥಾಲಿ ರಾಜ್‌, ಅಂಜುಮ್ ಚೋಪ್ರಾ ಮುಂತಾದವರು ಎದುರಾಳಿ ತಂಡಗಳ ಬೌಲರ್‌ಗಳನ್ನು ದಿಟ್ಟವಾಗಿ ಎದುರಿಸುತ್ತಿದ್ದರು. ರುಮೇಲಿ ಧಾರ್‌ ಮತ್ತು ಪ್ರಿಯಾಂಕಾ ರಾಯ್ ಅವರು ಪ್ರಬಲ ದಾಳಿಯ ಮೂಲಕ ಬ್ಯಾಟ್ಸ್‌ ವುಮನ್‌ಗಳನ್ನು ಕಂಗೆ ಡಿಸುತ್ತಿದ್ದರು. ಅಮಿತಾ ಶರ್ಮಾ ಬ್ಯಾಟ್‌–ಚೆಂಡು ಮೂಲಕ ಅಂಗಣದಲ್ಲಿ ಮಿಂಚುತ್ತಿದ್ದರು. ಆಗ ಅವರನ್ನೆಲ್ಲ ಅಚ್ಚರಿಯಿಂದ ನೋಡುತ್ತಿದ್ದ ಹರ್ಮನ್‌ಪ್ರೀತ್‌ ಕೌರ್‌ ಎಂಬ ಕನಸು ಕಂಗಳ ಹುಡುಗಿಯೂ ತಂಡದಲ್ಲಿದ್ದಳು.

ನ್ಯೂಜಿಲೆಂಡ್‌ನ ಎಮಿ ವಾಕಿನ್ಸ್‌, ಇಂಗ್ಲೆಂಡ್‌ನ ಕ್ಲೇರ್‌ ಟೇಲರ್‌, ಚಾರ್ಲೊಟ್ ಎಡ್ವರ್ಡ್ಸ್‌ ಮುಂತಾದವರ ಸ್ಫೋಟಕ ಬ್ಯಾಟಿಂಗ್‌ ಅನ್ನು ಹರ್ಮನ್‌ಪ್ರೀತ್‌ ಅವರು ಕಣ್ಣು ಮಿಟುಕಿಸದೇ ವೀಕ್ಷಿಸುತ್ತಿದ್ದರು. ಈ ಸಾಧಕರ ಸಾಲಿನಲ್ಲಿ ತಾನೂ ನಿಲ್ಲಬೇಕು ಎಂಬ ಆಸೆ ಹೊತ್ತಿದ್ದರು. ಕಠಿಣ ಶ್ರಮದಿಂದ ಮುಂದಡಿ ಇರಿಸಲು ಪಣ ತೊಟ್ಟರು. ಮುಂದಿನ ಬಾರಿಯ ಟೂರ್ನಿಯಲ್ಲಿ ಅವರಿಗೆ ನಿರೀಕ್ಷಿತ ಫಲ ಸಿಗಲಿಲ್ಲ. ಪೂನಂ ರಾವತ್ ಅವರು ಬಲಿಷ್ಠ ಇಂಗ್ಲೆಂಡ್ ತಂಡದ ಬೌಲಿಂಗ್ ದಾಳಿಯನ್ನು ದಿಟ್ಟವಾಗಿ ಎದುರಿಸಿ ಅರ್ಧ ಶತಕ ಗಳಿಸಿದಾಗ ಹರ್ಮನ್‌ಪ್ರೀತ್‌ ಕೌರ್‌ ಅವರ ಕೆಚ್ಚು ಇನ್ನಷ್ಟು ಹೆಚ್ಚಿತು.

2014ರಲ್ಲಿ ಹರ್ಮನ್‌ಪ್ರೀತ್‌ ಪರಿಪಕ್ವ ಆಟಗಾರ್ತಿಯಾಗಿ ಹೊರ ಹೊಮ್ಮಿದ್ದರು. ಮಿಥಾಲಿ ರಾಜ್ ಜೊತೆಗೆ ಅವರೂ ಹಲವರ ಮನ ಗೆದ್ದರು; ಗಮನ ಸೆಳೆದರು. ಬಾಂಗ್ಲಾದೇಶ ಎದುರಿನ ಪಂದ್ಯದಲ್ಲಿ 59 ಎಸೆತಗಳಲ್ಲಿ 77 ರನ್ ಗಳಿಸಿ ಕ್ರಿಕೆಟ್‌ ಜಗತ್ತು ತನ್ನತ್ತ ನೋಡುವಂತೆ ಮಾಡಿದ್ದರು. ಬೌಲಿಂಗ್‌ನಲ್ಲೂ ಚಾಕಚಕ್ಯತೆ ಮೆರೆದಿದ್ದರು. ಮೂರು ಓವರ್‌ಗಳಲ್ಲಿ ಕೇವಲ 12 ರನ್‌ ನೀಡಿ ಎರಡು ವಿಕೆಟ್ ಉರುಳಿಸಿದ್ದರು. ಮುಂದಿನ ಬಾರಿ ತವರಿನಲ್ಲೇ ನಡೆದಿದ್ದ ಟೂರ್ನಿಯಲ್ಲೂ ಮಿಂಚಿದರು.

ಈ ನಡುವೆ ಕಳೆದ ವರ್ಷ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಅವರು ಭಾರತ ತಂಡದ ಆಧಾರಸ್ತಂಭ ಎಂದು ಹೇಳುವಷ್ಟರ ಮಟ್ಟಕ್ಕೆ ಬೆಳೆದು ನಿಂತರು.

ತಂಡ ಫೈನಲ್‌ ಹಂತಕ್ಕೆ ತಲುಪುವಲ್ಲಿ ಅವರ ಕಾಣಿಕೆ ಮಹತ್ವದ್ದಾಗಿತ್ತು. ಅಷ್ಟೂ ವರ್ಷಗಳ ಅನುಭವ ಅವರನ್ನು ಪರಿಪಕ್ವ ಆಟಗಾರ್ತಿಯನ್ನಾಗಿ ಮಾಡಿದೆ ಎಂಬುದನ್ನು ಈ ಬಾರಿಯ ಟೂರ್ನಿ ಸಾಬೀತು ಮಾಡಿದೆ. ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಮೂರಂಕಿ ಮೊತ್ತ ದಾಟಿದ ಭಾರತದ ಮೊದಲ ಆಟಗಾರ್ತಿ ಎಂಬ ಖ್ಯಾತಿಯನ್ನು ತಮ್ಮದಾಗಿಸಿಕೊಂಡ ಅವರು ಭಾರತಕ್ಕೆ ಭರವಸೆಯ ಆರಂಭ ಒದಗಿಸಿದ್ದರು. ಈ ಆರಂಭ, ತಂಡ ಸುಗಮವಾಗಿ ಮುಂದಿನ ಹಾದಿ ತುಳಿಯಲು ನೆರವಾಯಿತು.

ಹರ್ಮನ್‌ಪ್ರೀತ್‌ ಕೌರ್ ಅವರಂತೆಯೇ ಭಾರತ ತಂಡ ಕೂಡ ಈಗ ಭರವಸೆಯ ಹಾದಿಯಲ್ಲಿ ಹೆಜ್ಜೆ ಇರಿಸಿದೆ. ಸಂಘಟಿತ ಹೋರಾಟ ನಡೆಸುವ ಕಲೆ ತಂಡಕ್ಕೆ ಕರಗತವಾಗಿದೆ.

ಕಳೆದ ಬಾರಿ ತವರಿನಲ್ಲೇ ನಡೆದ ಟೂರ್ನಿಯಲ್ಲಿ ಭಾರತದ ಸಾಧನೆ ‘ಶೂನ್ಯ’ವಾಗಿತ್ತು. ನಾಲ್ಕು ಪಂದ್ಯಗಳಲ್ಲಿ ಒಂದನ್ನಷ್ಟೇ ಗೆದ್ದು ಗುಂಪು ಹಂತದಲ್ಲೇ ಹೊರಬಿದ್ದ ತಂಡದಲ್ಲಿ ಮಿಥಾಲಿ ರಾಜ್‌, ಹರ್ಮನ್‌ಪ್ರೀತ್ ಕೌರ್‌, ಅನುಜಾ ಪಾಟೀಲ್‌, ವೇದಾ ಕೃಷ್ಣಮೂರ್ತಿ, ಏಕ್ತಾ ಬಿಶ್ಟ್‌ ಮುಂತಾದವರು ಉತ್ತಮವಾಗಿ ಆಡಿದ್ದರೂ ಸಾಂಘಿಕವಾಗಿ ಯಾವ ತಂಡದ ಮೇಲೆಯೂ ಪ್ರಭಾವ ಬೀರಲು ಸಾಧ್ಯವಾಗಲಿಲ್ಲ. ಈ ಬಾರಿ ಪರಿಸ್ಥಿತಿ ಹಾಗಿಲ್ಲ. ಯಾವುದೇ ತಂಡವನ್ನು ಮಟ್ಟಹಾಕಲು ಸಾಧ್ಯ ಎಂಬ ನಿರೀಕ್ಷೆ ಮೂಡಿದೆ.

ಯುವ ಮತ್ತು ಅನುಭವಿಗಳ ಮಿಶ್ರಣವೇ ತಂಡದ ಈ ಬಾರಿಯ ಸಾಧನೆಗೆ ಕಾರಣ. 18 ವರ್ಷದ ಜೆಮಿಮಾ ರಾಡ್ರಿಗಸ್‌ ಮತ್ತು ರಾಧಾ ಯಾದವ್‌, 19ರ ಹರಯದ ಪೂಜಾ ವಸ್ತ್ರಕಾರ್‌, 20 ವರ್ಷದ ಅರುಂಧತಿ ರೆಡ್ಡಿ ಅವರೊಂದಿಗೆ 35 ವರ್ಷದ ಮಿಥಾಲಿ ರಾಜ್‌, 32 ವರ್ಷದ ಏಕ್ತಾ ಬಿಶ್ಟ್‌, 29 ವರ್ಷದ ಹರ್ಮನ್‌ಪ್ರೀತ್‌ ಕೌರ್‌, 27 ವರ್ಷದ ಪೂನಂ ಯಾದವ್‌, 26 ವರ್ಷದ ಅನುಜಾ ಪಾಟೀಲ್‌ ಮುಂತಾದವರ ಸಮ್ಮಿಲನ ಈಗ ಭಾರತ ತಂಡದಲ್ಲಿ ಇದೆ.

ಮೊದಲ ಎರಡು ಆವೃತ್ತಿಗಳಲ್ಲಿ ಸೆಮಿಫೈನಲ್‌ ವರೆಗೆ ತಲುಪಿದ್ದರೂ ನಂತರ ಸಪ್ಪೆಯಾದ ತಂಡ ಈಗ ಹಳೆಯ ವೈಭವಕ್ಕೆ ಮರಳಿದೆ. ಭಾರತ ಮಹಿಳಾ ಕ್ರಿಕೆಟ್‌ ಹೊಸ ಎತ್ತರಕ್ಕೆ ಏರುವತ್ತ ಹೆಜ್ಜೆ ಇರಿಸತೊಡಗಿದೆ ಎಂದು ಕ್ರಿಕೆಟ್ ಪಂಡಿತರು ಲೆಕ್ಕ ಹಾಕತೊಡಗಿದ್ದಾರೆ.

ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿರುವ ಮಿಥಾಲಿ ರಾಜ್‌ (2283 ರನ್‌), ಹರ್ಮನ್ ಪ್ರೀತ್ ಕೌರ್‌ (1820), ಸ್ಮೃತಿ ಮಂದಾನ (896), ವೇದಾ ಕೃಷ್ಣಮೂರ್ತಿ (657) ಮುಂತಾದವರು ತಂಡದಲ್ಲಿರುವುದು ಸಂತಸದ ಸಂಗತಿ. ಸದ್ಯ ನಿವೃತ್ತಿಯ ಅಂಚಿನಲ್ಲಿರುವ ಆಟಗಾರ್ತಿಯರು ಮಿಥಾಲಿ ರಾಜ್ ಮತ್ತು ಏಕ್ತಾ ಬಿಶ್ಟ್‌ ಮಾತ್ರ. ಆದ್ದರಿಂದ ತಂಡಕ್ಕೆ ಕೆಲವು ವರ್ಷಗಳ ಕಾಲ ಅನುಭವಿಗಳ ಕೊರತೆ ಕಾಡದು.

ಕೇವಲ 18 ಪಂದ್ಯಗಳನ್ನು ಆಡಿರುವ ಜೆಮಿಮಾ ರಾಡ್ರಿಗಸ್‌ (411 ರನ್) ಅವರೊಂದಿಗೆ ತನಿಯಾ ಭಾಟಿಯಾ, ದಯಾಳನ್ ಹೇಮಲತಾ, ಯಾದವ್‌, ವಸ್ತ್ರಕಾರ್‌, ರೆಡ್ಡಿ ಮೊದಲಾದವರು ನಿರೀಕ್ಷೆಗೆ ತಕ್ಕ ಸಾಮರ್ಥ್ಯ ತೋರುತ್ತಿರುವುದರಿಂದ ಮುಂದಿನ 50 ಓವರ್‌ಗಳ ವಿಶ್ವಕಪ್‌ನಲ್ಲಿ ಪ್ರಶಸ್ತಿ ಎತ್ತಿ ಹಿಡಿಯುವ ಕನಸು ಕಾಣಲು ಇದು ಸೂಕ್ತ ಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT