ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟೆಸ್ಟ್ ಕ್ರಿಕೆಟ್: ಮಳೆ ಕಾಡಿದ ಪಂದ್ಯದಲ್ಲಿ ಬೆಳಗಿದ ಸ್ಮೃತಿ ಮಂದಾನ

ಆಸ್ಟ್ರೇಲಿಯಾ ಮಹಿಳಾ ತಂಡದ ಎದುರಿನ ಪಿಂಕ್ ಬಾಲ್‌ ಟೆಸ್ಟ್‌: ಮಿಥಾಲಿ ಬಳಗದ ಉತ್ತಮ ಆರಂಭ
Last Updated 30 ಸೆಪ್ಟೆಂಬರ್ 2021, 13:24 IST
ಅಕ್ಷರ ಗಾತ್ರ

ಗೋಲ್ಡ್‌ ಕೋಸ್ಟ್‌, ಆಸ್ಟ್ರೇಲಿಯಾ: ಪ್ರಭಾವಿ ವೇಗದ ದಾಳಿಯನ್ನು ಒಳಗೊಂಡಿರುವ ಆಸ್ಟ್ರೇಲಿಯಾ ಎದುರು ಭಾರತದ ಸ್ಮೃತಿ ಮಂದಾನ ದಿಟ್ಟ ಆಟವಾಡಿದರು. ಮಳೆ ಕಾಡಿದ ಪಂದ್ಯದಲ್ಲಿ ಸ್ಮೃತಿ ಮತ್ತು ಶಫಾಲಿ ವರ್ಮಾ ಅವರ 93 ರನ್‌ಗಳ ಮೊದಲ ವಿಕೆಟ್ ಜೊತೆಯಾಟದ ನೆರವಿನಿಂದ ಭಾರತ ಉತ್ತಮ ಆರಂಭ ಪಡೆಯಿತು.

ಗುರುವಾರ ಇಲ್ಲಿ ಆರಂಭಗೊಂಡ ಆತಿಥೇಯ ಆಸ್ಟ್ರೇಲಿಯಾ ಮಹಿಳಾ ತಂಡದ ಎದುರಿನ ಭಾರತ ಮಹಿಳಾ ತಂಡದ ಹಗಲು ರಾತ್ರಿ ಟೆಸ್ಟ್ ಪಂದ್ಯದ ದಿನದಾಟವನ್ನು ಮಳೆಯ ಕಾರಣದಿಂದ 44.1 ಓವರ್‌ಗೇ ಮುಕ್ತಾಯಗೊಳಿಸಲಾಯಿತು. ಭಾರತ ಮೊದಲ ಇನಿಂಗ್ಸ್‌ನಲ್ಲಿ ಒಂದು ವಿಕೆಟ್ ಕಳೆದುಕೊಂಡು 132 ರನ್ ಗಳಿಸಿದೆ. ಅಮೋಘ ಆಟವಾಡಿದ ಸ್ಮೃತಿ ಮಂದಾನ 80 (144 ಎಸೆತ, 15 ಬೌಂಡರಿ, 1 ಸಿಕ್ಸರ್‌) ರನ್ ಗಳಿಸಿ ಕ್ರೀಸ್‌ನಲ್ಲಿದ್ದು 16 ರನ್‌ ಗಳಿಸಿರುವ ಪೂನಂ ರಾವತ್ ಕೂಡ ಮಂದಾನ ಜೊತೆ ಇದ್ದಾರೆ.

ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕಿ ಮೆಗ್‌ ಲ್ಯಾನಿಂಗ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಏಕದಿನ ಸರಣಿಯಲ್ಲಿ ಭಾರತದ ಬ್ಯಾಟರ್‌ಗಳು ರನ್ ಗಳಿಸಲು ಪರದಾಡಿದ್ದರು. ಹೀಗಾಗಿ ಟೆಸ್ಟ್‌ನಲ್ಲೂ ಎದುರಾಳಿಗಳನ್ನು ಬೇಗನೇ ಔಟ್ ಮಾಡಬಹುದು ಎಂಬುದು ಅವರ ಲೆಕ್ಕಾಚಾರ ಆಗಿತ್ತು. ಆದರೆ ಸ್ಮೃತಿ ಮಂದಾನ ಮತ್ತು ಶಫಾಲಿ ವರ್ಮಾ ಅವರು ದಿಟ್ಟ ಆಟವಾಡಿದರು. ಭಾರತಕ್ಕೆ ಎರಡನೇ ಓವರ್‌ನಿಂದಲೇ ರನ್‌ ಹರಿದು ಬರಲು ಆರಂಭವಾಯಿತು.

ವೇಗಿಗಳಾದ ಎಲಿಸ್ ಪೆರಿ ಮತ್ತು ಡಾರ್ಸಿ ಬ್ರೌನ್ ಅವರ ಎಸೆತಗಳನ್ನು ನಿರಾತಂಕವಾಗಿ ಎದುರಿಸಿದ ಸ್ಮೃತಿ–ಶಫಾಲಿ ಜೋಡಿ ನಂತರ ಸ್ಟೆಲ್ಲಾ ಕ್ಯಾಂಬೆಲ್, ತಹಲಿಯಾ ಮೆಗ್ರಾ, ಸೋಫಿ ಮೋಲಿನೆಕ್ಸ್‌ ಅವರನ್ನೂ ದಂಡಿಸಿದರು. 67 ಎಸೆತಗಳಲ್ಲಿ 50 ರನ್ ಸೇರಿಸಿದ ಅವರು 15ನೇ ಓವರ್ ಪೂರ್ಣಗೊಂಡಾಗ ತಂಡದ ಮೊತ್ತವನ್ನು 70 ರನ್‌ಗಳಿಗೆ ಏರಿಸಿದರು. ಸ್ಮೃತಿ ಮಂದಾನ ನಾಲ್ಕು ಬೌಂಡರಿಗಳೊಂದಿಗೆ 51 ಎಸೆತಗಳಲ್ಲಿ 50 ರನ್ ಪೂರೈಸಿದರು.

ಶತಕದ ಜೊತೆಯಾಟದತ್ತ ಸಾಗಿದ್ದ ಜೊತೆಯಾಟವನ್ನು 26ನೇ ಓವರ್‌ನಲ್ಲಿ ಮೋಲಿನೆಕ್ಸ್ ಮುರಿದರು. ಶಫಾಲಿ ವರ್ಮಾ (31; 64 ಎ, 4 ಬೌಂ) ಮೆಗ್ರಾ ಅವರಿಗೆ ಕ್ಯಾಚ್ ನೀಡಿ ಮರಳಿದರು. ಪೂನಂ ರಾವತ್ ಜೊತೆಗೂಡಿಸ್ಮೃತಿ ತಮ್ಮ ಬ್ಯಾಟಿಂಗ್ ವೈಭವ ಮುಂದುವರಿಸಿದರು. 35ನೇ ಓವರ್‌ನಲ್ಲಿ ತಂಡದ ಮೊತ್ತ ಮೂರಂಕಿ ದಾಟಿತು. ‘ಡಿನ್ನರ್’ ನಂತರದ ಏಳನೇ ಓವರ್‌ ವೇಳೆ ಮಳೆ ಸುರಿಯಲು ಆರಂಭವಾಯಿತು. ಎರಡನೇ ಅವಧಿಯಲ್ಲಿ ಪದೇ ಪದೇ ಮಳೆ ಕಾಡಿತು. ಸ್ಮೃತಿ ಜೀವನಶ್ರೇಷ್ಠ 80 ರನ್ ಗಳಿಸಿ ಅಜೇಯರಾಗಿ ಉಳಿದರು. ಇದಕ್ಕೂ ಮೊದಲು ಟೆಸ್ಟ್‌ನಲ್ಲಿ ಅವರ ಗರಿಷ್ಠ ಮೊತ್ತ 78 ರನ್ ಆಗಿತ್ತು.

ಭಾರತ ಇನಿಂಗ್ಸ್‌ನ ಮೊದಲ 16 ಓವರ್‌ಗಳಲ್ಲಿ 16 ಬೌಂಡರಿಗಳು ಹರಿದು ಬಂದಿದ್ದವು. ಇವುಗಳ ಪೈಕಿ ಹೆಚ್ಚಿನವು ಸ್ಮೃತಿ ಬ್ಯಾಟ್‌ನಿಂದ ಮೂಡಿದ್ದವು. ತಹಲಿಯಾ ಮೆಗ್ರಾ ಅವರ ಎಸೆತವನ್ನು ಡೀಪ್ ಸ್ಕ್ವೇರ್ ಲೆಗ್ ಮೇಲಿಂದ ಸಿಕ್ಸರ್‌ಗೆ ಎತ್ತಿದ ಸ್ಮೃತಿ ಎರಡನೇ ವಿಕೆಟ್‌ಗೆ ರಾವತ್ ಅವರೊಂದಿಗೆ 39 ರನ್ ಸೇರಿಸಿದರು.

ಏಳು ಬೌಲರ್‌ಗಳ ಬಳಕೆ

ಭಾರತದ ಬ್ಯಾಟರ್‌ಗಳು ನಿರಾಯಾಸವಾಗಿ ರನ್ ಗಳಿಸುತ್ತಿದ್ದಂತೆ ಮೆಗ್ ಲ್ಯಾನಿಂಗ್ ಬೌಲರ್‌ಗಳನ್ನು ಬದಲಿಸುತ್ತ ಸಾಗಿದರು. ಒಟ್ಟು ಏಳು ಬೌಲರ್‌ಗಳನ್ನು ಅವರು ಬಳಸಿಕೊಂಡರು. ಆಕ್ರಮಣಕಾರಿ ಆಟಗಾರ್ತಿ ಶಫಾಲಿ ತಾಳ್ಮೆಯಿಂದ ಆಡಿ ಸಹ ಆಟಗಾರ್ತಿಗೆ ಹೆಚ್ಚು ಅವಕಾಶಗಳನ್ನು ನೀಡಿದರು. ಪದಾರ್ಪಣೆ ಪಂದ್ಯ ಆಡಿದ ಡಾರ್ಸಿ ಬ್ರೌನ್ ಹೆಚ್ಚು ದಂಡನೆಗೆ ಒಳಗಾದರು. ಕೆಲವು ಕ್ಯಾಚ್‌ಗಳನ್ನು ಕೈಚೆಲ್ಲಿದ್ದು ಕೂಡ ಭಾರತಕ್ಕೆ ಅನುಕೂಲವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT