ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಇಂಗ್ಲೆಂಡ್‌ ‘ಸೂಪರ್‌’ ಆಟ

Last Updated 1 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಕ್ಯಾನ್‌ಬೆರಾ: ಭಾರತ ಮತ್ತು ನ್ಯೂಜಿಲೆಂಡ್‌ ಪುರುಷರ ತಂಡಗಳ ನಡುವಣ ಟ್ವೆಂಟಿ–20 ಸರಣಿಯಲ್ಲಿ ಸತತ ಎರಡು ‘ಸೂಪರ್‌ ಓವರ್‌’ ಹೋರಾಟಗಳನ್ನು ಕಣ್ತುಂಬಿಕೊಂಡಿದ್ದ ಕ್ರಿಕೆಟ್‌ ಪ್ರಿಯರಿಗೆ ಶನಿವಾರ ಮತ್ತೊಂದು ‘ಸೂಪರ್‌’ ಪೈಪೋಟಿ ವೀಕ್ಷಿಸುವ ಅವಕಾಶ ಲಭಿಸಿತು.

ಇಲ್ಲಿನ ಮನುಕಾ ಓವಲ್‌ ಮೈದಾನದಲ್ಲಿ ನಡೆದ ಮಹಿಳೆಯರ ತ್ರಿಕೋನ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ನಡುವಣ ಹಣಾಹಣಿಯ ಫಲಿತಾಂಶವೂ ‘ಸೂಪರ್‌ ಓವರ್‌’ನಲ್ಲಿ ನಿರ್ಧರಿತವಾಯಿತು. ಈ ಪಂದ್ಯದಲ್ಲಿ ಇಂಗ್ಲೆಂಡ್‌ ವನಿತೆಯರು ಜಯದ ತೋರಣ ಕಟ್ಟಿದರು.

ಮೊದಲು ಬ್ಯಾಟ್‌ ಮಾಡಿದ ಹೀಥರ್‌ ನೈಟ್‌ ಸಾರಥ್ಯದ ಇಂಗ್ಲೆಂಡ್‌ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 156ರನ್‌ ಕಲೆಹಾಕಿತು. ಗುರಿ ಬೆನ್ನಟ್ಟಿದ ಮೆಗ್‌ ಲ್ಯಾನಿಂಗ್‌ ಬಳಗ 8 ವಿಕೆಟ್‌ ಕಳೆದುಕೊಂಡು ಇಷ್ಟೇ ರನ್‌ ಪೇರಿಸಿತು.

ಸೂಪರ್‌ ಓವರ್‌ನಲ್ಲಿ ಆಸ್ಟ್ರೇಲಿಯಾ ಮೊದಲು ಬ್ಯಾಟ್‌ ಮಾಡಿತು. ಸೋಫಿ ಎಕ್ಸ್ಲೆಸ್ಟೋನ್‌ ಹಾಕಿದ ಓವರ್‌ನ ಮೊದಲ ಮೂರು ಎಸೆತಗಳಲ್ಲಿ ಮೂರು ರನ್‌ಗಳು ಬಂದವು. ನಾಲ್ಕನೇ ಎಸೆತವನ್ನು ಅಲಿಸಾ ಹೀಲಿ ಬೌಂಡರಿಗಟ್ಟಿದರು. ನಂತರದ ಎರಡು ಎಸೆತಗಳಲ್ಲಿ ಕೇವಲ ಒಂದು ರನ್‌ ಬಿಟ್ಟುಕೊಟ್ಟ ಸೋಫಿ, ಎದುರಾಳಿ ತಂಡವನ್ನು ಎಂಟು ರನ್‌ಗೆ ನಿಯಂತ್ರಿಸಿದರು.

ಗುರಿ ಬೆನ್ನಟ್ಟಿದ ಇಂಗ್ಲೆಂಡ್‌ ತಂಡ ಎಲಿಸೆ ಪೆರಿ ಬೌಲ್‌ ಮಾಡಿದ ಓವರ್‌ನ ಮೊದಲ ಎರಡು ಎಸೆತಗಳಲ್ಲಿ ಎರಡು ರನ್‌ ಗಳಿಸಿತು. ಮೂರು ಮತ್ತು ನಾಲ್ಕನೇ ಎಸೆತಗಳಲ್ಲಿ ಬೌಂಡರಿ ಬಾರಿಸಿದ ಹೀಥರ್‌ ನೈಟ್‌, ತಂಡದ ಸಂಭ್ರಮಕ್ಕೆ ಕಾರಣರಾದರು.

ಸಂಕ್ಷಿಪ್ತ ಸ್ಕೋರ್‌: ಇಂಗ್ಲೆಂಡ್‌; 20 ಓವರ್‌ಗಳಲ್ಲಿ 4 ವಿಕೆಟ್‌ಗೆ 156 (ಹೀಥರ್‌ ನೈಟ್‌ 78, ಫ್ರಾನ್‌ ವಿಲ್ಸನ್‌ ಔಟಾಗದೆ 39; ಎಲಿಸೆ ಪೆರಿ 9ಕ್ಕೆ1). ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 8 ವಿಕೆಟ್‌ಗೆ 156 (ಬೆಥ್‌ ಮೂನಿ 65, ಎಲಿಸೆ ಪೆರಿ 18, ಅನಾಬೆಲ್‌ ಸದರ್ಲೆಂಡ್‌ ಔಟಾಗದೆ 22, ಡೆಲಿಶಾ ಕಿಮ್ಮಿನ್ಸ್‌ ಔಟಾಗದೆ 15; ನಟಾಲಿಯಾ ಶೀವರ್ 23ಕ್ಕೆ3, ಸಾರಾ ಗ್ಲೆನ್‌ 28ಕ್ಕೆ3). ಫಲಿತಾಂಶ: ಸೂಪರ್‌ ಓವರ್‌ನಲ್ಲಿ ಇಂಗ್ಲೆಂಡ್‌ ತಂಡಕ್ಕೆ ಗೆಲುವು.

ಇಂದಿನ ಪಂದ್ಯ: ಭಾರತ– ಆಸ್ಟ್ರೇಲಿಯಾ

ಆರಂಭ: ಬೆಳಿಗ್ಗೆ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT