ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್‌ಗೆ ಮಣಿದ ಭಾರತ

ಮಹಿಳೆಯರ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿ: ಫೈನಲ್‌ಗೆ ಆಸ್ಟ್ರೇಲಿಯಾ
Last Updated 23 ನವೆಂಬರ್ 2018, 19:17 IST
ಅಕ್ಷರ ಗಾತ್ರ

ನಾರ್ತ್‌ ಸೌಂಡ್‌, ಆ್ಯಂಟಿಗ: ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಬಲಿಷ್ಠ ಆಸ್ಟ್ರೇಲಿಯಾವನ್ನು ಮಣಿಸಿ ಭರವಸೆ ಮೂಡಿಸಿದ್ದ ಭಾರತ ತಂಡದವರು ಮಹಿಳೆಯರ ವಿಶ್ವ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಲು ವಿಫಲರಾಗಿದ್ದಾರೆ.

ಸರ್ ವಿವಿಯನ್‌ ರಿಚರ್ಡ್ಸ್‌ ಕ್ರೀಡಾಂಗಣದಲ್ಲಿ ಶುಕ್ರವಾರ ಬೆಳಿಗ್ಗೆ ನಡೆದ ಸೆಮಿಫೈನಲ್‌ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಬಳಗ 8 ವಿಕೆಟ್‌ಗಳಿಂದ ಇಂಗ್ಲೆಂಡ್‌ ಎದುರು ಸೋತಿತು.

ಮೊದಲು ಬ್ಯಾಟ್‌ ಮಾಡಿದ ಭಾರತ 19.3 ಓವರ್‌ಗಳಲ್ಲಿ 112ರನ್‌ಗಳಿಗೆ ಆಲೌಟ್‌ ಆಯಿತು. ಸುಲಭ ಗುರಿಯನ್ನು ಹೀಥರ್‌ ನೈಟ್‌ ಪಡೆ 17.1 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ತಾನಿಯಾ ಭಾಟಿಯಾ (11; 19ಎ) ಮತ್ತು ಸ್ಮೃತಿ ಮಂದಾನ (34;23ಎ, 5ಬೌಂ, 1ಸಿ) ಉತ್ತಮ ಆರಂಭ ನೀಡಿದರು. ಇವರು ಮೊದಲ ವಿಕೆಟ್‌ಗೆ 30 ಎಸೆತಗಳಲ್ಲಿ 43ರನ್‌ ದಾಖಲಿಸಿದರು. ಇವರ ವಿಕೆಟ್‌ ‍ಪತನದ ನಂತರ ಜೆಮಿಮಾ ರಾಡ್ರಿಗಸ್‌ (26; 26ಎ, 3ಬೌಂ) ಮತ್ತು ಹರ್ಮನ್‌ಪ್ರೀತ್‌ (16;20ಎ, 1ಸಿ) ಜವಾಬ್ದಾರಿಯುತ ಆಟ ಆಡಿ ತಂಡವನ್ನು 90ರ ಗಡಿ ದಾಟಿಸಿದರು. ಆದರೆ ಮಧ್ಯಮ ಮತ್ತು ಕೆಳಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಿದ್ದರಿಂದ ದೊಡ್ಡ ಮೊತ್ತ ಕಲೆಹಾಕುವ ತಂಡದ ಕನಸು ಕೈಗೂಡಲಿಲ್ಲ.

ಗುರಿ ಬೆನ್ನಟ್ಟಿದ ಆಂಗ್ಲರ ನಾಡಿನ ತಂಡ ಕೂಡಾ ಆರಂಭಿಕ ಸಂಕಷ್ಟ ಎದುರಿಸಿತು. ಡೇನಿಯಲ್‌ ವ್ಯಾಟ್‌ (8) ಮತ್ತು ಟಾಮೊ ಬ್ಯೂಮೊಂಟ್‌ ಬೇಗನೆ ಔಟಾದರು. ನಂತರ ವಿಕೆಟ್‌ ಕೀಪರ್‌ ಆ್ಯಮಿ ಎಲೆನ್‌ ಜೋನ್ಸ್‌ (ಔಟಾಗದೆ 53; 47ಎ, 3ಬೌಂ, 1ಸಿ) ಮತ್ತು ನಟಾಲಿಯಾ ಶೀವರ್‌ (ಔಟಾಗದೆ 52; 38ಎ, 5ಬೌಂ) ಸುಂದರ ಇನಿಂಗ್ಸ್‌ ಕಟ್ಟಿದರು. ಮುರಿಯದ ಮೂರನೇ ವಿಕೆಟ್‌ ಜೊತೆಯಾಟದಲ್ಲಿ 92 ರನ್‌ ದಾಖಲಿಸಿದ ಈ ಜೋಡಿ ತಂಡವನ್ನು ಗೆಲುವಿನ ದಡ ಮುಟ್ಟಿಸಿ ಸಂಭ್ರಮಿಸಿತು.

ಮಿಥಾಲಿಗೆ ಸಿಗದ ಅವಕಾಶ: ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರಿಗೆ ಸೆಮಿಫೈನಲ್‌ನಲ್ಲಿ ಆಡಲು ಅವಕಾಶ ನೀಡದಿರುವುದು ವಿವಾದಕ್ಕೆ ಕಾರಣವಾಗಿದೆ.

‘ತಂಡದ ಆಡಳಿತ ಮಂಡಳಿ ಮಿಥಾಲಿ ಅವರನ್ನು ಆಡುವ ಬಳಗದಿಂದ ಹೊರಗಿಡುವ ತೀರ್ಮಾನ ಕೈಗೊಂಡಿತ್ತು. ತಂಡದ ಹಿತದೃಷ್ಟಿಯಿಂದ ಈ ನಿರ್ಧಾರ ತಳೆಯಲಾಗಿತ್ತು’ ಎಂದು ಭಾರತ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ ತಿಳಿಸಿದ್ದಾರೆ.

ಸಂಕ್ಷಿಪ್ತ ಸ್ಕೋರ್‌

ಭಾರತ:19.3 ಓವರ್‌ಗಳಲ್ಲಿ 112 (ತಾನಿಯಾ ಭಾಟಿಯಾ 11, ಸ್ಮೃತಿ ಮಂದಾನ 34, ಜೆಮಿಮಾ ರಾಡ್ರಿಗಸ್‌ 26, ಹರ್ಮನ್‌ಪ್ರೀತ್‌ ಕೌರ್‌ 16; ಸೋಫಿ ಎಕ್ಸ್‌ಲೆಸ್ಟೋನ್‌ 22ಕ್ಕೆ2, ಕಿರ್ಸ್ಟಿ ಗೋರ್ಡನ್‌ 20ಕ್ಕೆ2, ಹೀಥರ್‌ ನೈಟ್‌ 9ಕ್ಕೆ3).

ಇಂಗ್ಲೆಂಡ್‌: 17.1 ಓವರ್‌ಗಳಲ್ಲಿ 2 ವಿಕೆಟ್‌ಗೆ 116 (ಆ್ಯಮಿ ಎಲೆನ್‌ ಜೋನ್ಸ್‌ ಔಟಾಗದೆ 53, ನಟಾಲಿಯಾ ಶೀವರ್‌ ಔಟಾಗದೆ 52; ದೀಪ್ತಿ ಶರ್ಮಾ 24ಕ್ಕೆ1, ರಾಧಾ ಯಾದವ್‌ 20ಕ್ಕೆ1). ಫಲಿತಾಂಶ: ಇಂಗ್ಲೆಂಡ್‌ ತಂಡಕ್ಕೆ 8 ವಿಕೆಟ್‌ ಜಯ.

ಆಸ್ಟ್ರೇಲಿಯಾ–ಇಂಗ್ಲೆಂಡ್‌ ನಡುವೆ ಫೈನಲ್‌

ಭಾನುವಾರ ಬೆಳಿಗ್ಗೆ (ಭಾರತೀಯ ಕಾಲಮಾನ 5.30) ನಡೆಯುವ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್‌ ತಂಡಗಳು ಪೈಪೋಟಿ ನಡೆಸಲಿವೆ. ಮೊದಲ ಸೆಮಿಫೈನಲ್‌ ಹೋರಾಟದಲ್ಲಿ ಆಸ್ಟ್ರೇಲಿಯಾ ತಂಡ 71ರನ್‌ಗಳಿಂದ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವನ್ನು ಸೋಲಿಸಿತು.

ಸಂಕ್ಷಿಪ್ತ ಸ್ಕೋರ್‌

ಆಸ್ಟ್ರೇಲಿಯಾ: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 142 (ಅಲಿಸಾ ಹೀಲಿ 46, ಮೆಗ್‌ ಲ್ಯಾನಿಂಗ್‌ 31, ರಚೆಲ್‌ ಹೇನಸ್‌ ಔಟಾಗದೆ 25; ಸ್ಟೆಫಾನಿ ಟೇಲರ್‌ 20ಕ್ಕೆ1).

ವೆಸ್ಟ್‌ ಇಂಡೀಸ್‌: 17.3 ಓವರ್‌ಗಳಲ್ಲಿ 71 (ಸ್ಟೆಫಾನಿ ಟೇಲರ್‌ 16; ಎಲಿಸೆ ಪೆರಿ 2ಕ್ಕೆ2, ಡೆಲಿಸಾ ಕಿಮ್ಮಿನ್ಸ್‌ 17ಕ್ಕೆ2, ಆ್ಯಷ್ಲೆಗ್‌ ಗಾರ್ಡನರ್‌ 15ಕ್ಕೆ2). ಫಲಿತಾಂಶ: ಆಸ್ಟ್ರೇಲಿಯಾ ತಂಡಕ್ಕೆ 71ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT