ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಏಕದಿನ ಕ್ರಿಕೆಟ್‌: ಭಾರತಕ್ಕೆ ಸುಲಭ ತುತ್ತಾದ ಇಂಗ್ಲೆಂಡ್‌

ಸರಣಿ ಗೆದ್ದ ಮಿಥಾಲಿ ಪಡೆ: ಜೂಲನ್‌, ಶಿಖಾಗೆ ನಾಲ್ಕು ವಿಕೆಟ್‌
Last Updated 25 ಫೆಬ್ರುವರಿ 2019, 16:16 IST
ಅಕ್ಷರ ಗಾತ್ರ

ಮುಂಬೈ: ವೇಗದ ಬೌಲರ್‌ಗಳಾದ ಜೂಲನ್‌ ಗೋಸ್ವಾಮಿ (30ಕ್ಕೆ4) ಮತ್ತು ಶಿಖಾ ಪಾಂಡೆ (18ಕ್ಕೆ4) ಸೋಮವಾರ ಇಂಗ್ಲೆಂಡ್‌ ತಂಡದ ಬ್ಯಾಟ್ಸ್‌ವುಮನ್‌ಗಳಿಗೆ ಸಿಂಹ ಸ್ವ‍ಪ್ನರಾದರು.

ಜೂಲನ್‌ ಮತ್ತು ಶಿಖಾ ಅವರ ಪರಿಣಾಮಕಾರಿ ಬೌಲಿಂಗ್‌ ನೆರವಿನಿಂದ ಭಾರತ ಮಹಿಳಾ ತಂಡ ಎರಡನೇ ಏಕದಿನ ಪಂದ್ಯದಲ್ಲಿ ಏಳು ವಿಕೆಟ್‌ಗಳ ಜಯಭೇರಿ ಮೊಳಗಿಸಿತು. ಇದರೊಂದಿಗೆ ಇನ್ನೊಂದು ಪಂದ್ಯದ ಆಟ ಬಾಕಿ ಇರುವಂತೆಯೇ ಸರಣಿ ಕೈವಶ ಮಾಡಿಕೊಂಡಿತು.

ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಹೀದರ್‌ ನೈಟ್‌ ಸಾರಥ್ಯದ ಆಂಗ್ಲರ ನಾಡಿನ ತಂಡ ಬ್ಯಾಟಿಂಗ್‌ ವೈಫಲ್ಯ ಕಂಡಿತು. ಈ ತಂಡ 43.3 ಓವರ್‌ಗಳಲ್ಲಿ 161ರನ್‌ಗಳಿಗೆ ಆಲೌಟ್‌ ಆಯಿತು.

ನಟಾಲಿಯಾ ಶೀವರ್‌ (85; 109ಎ, 12ಬೌಂ, 1ಸಿ), ಲಾರೆನ್‌ ವಿನ್‌ಫೀಲ್ಡ್‌ (28; 49ಎ, 4ಬೌಂ) ಮತ್ತು ಟಾಮಿ ಬೀಮೊಂಟ್‌ (20; 42ಎ, 3ಬೌಂ) ಮಾತ್ರ ಆತಿಥೇಯರ ದಾಳಿಯನ್ನು ಸಮರ್ಥವಾಗಿ ಎದುರಿಸಿ ನಿಲ್ಲಲು ಪ್ರಯತ್ನಿಸಿದರು.

ನಾಯಕಿ ಹೀದರ್‌ ಸೇರಿದಂತೆ ಒಟ್ಟು ಏಳು ಮಂದಿ ವಿಕೆಟ್‌ ನೀಡಲು ಅವಸರಿಸಿದರು. ಇವರು ಒಂದಕ್ಕಿ ಮೊತ್ತ ಗಳಿಸಲಷ್ಟೇ ಶಕ್ತರಾದರು.

ಸುಲಭ ಗುರಿಯನ್ನು ಮಿಥಾಲಿ ರಾಜ್‌ ಮುಂದಾಳತ್ವದ ಆತಿಥೇಯ ತಂಡ 41.1 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸೊನ್ನೆ ಸುತ್ತಿದ ಜೆಮಿಮಾ: ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಎರಡನೇ ಓವರ್‌ನಲ್ಲಿ ಆನ್ಯ ಶ್ರುಬ್‌ಸೋಲ್‌ ಆಘಾತ ನೀಡಿದರು.

ಐದನೇ ಎಸೆತದಲ್ಲಿ ಜೆಮಿಮಾ ರಾಡ್ರಿಗಸ್‌, ಆ್ಯಮಿ ಅಲೆನ್‌ ಜೋನ್ಸ್‌ಗೆ ಕ್ಯಾಚ್‌ ನೀಡಿದರು. ಹತ್ತು ಎಸೆತಗಳನ್ನು ಆಡಿದ ಜೆಮಿಮಾ (0) ರನ್‌ ಖಾತೆ ತೆರೆಯಲಿಲ್ಲ.

ನಂತರ ಸ್ಮೃತಿ ಮಂದಾನ ಮತ್ತು ಪೂನಮ್‌ ರವುತ್‌ (32; 65ಎ, 4ಬೌಂ) ದಿಟ್ಟ ಆಟ ಆಡಿದರು. ಇಂಗ್ಲೆಂಡ್‌ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ ಈ ಜೋಡಿ ಎರಡನೇ ವಿಕೆಟ್‌ ಪಾಲುದಾರಿಕೆಯಲ್ಲಿ 73ರನ್‌ ದಾಖಲಿಸಿ ಆತಿಥೇಯರ ಗೆಲುವಿನ ಹಾದಿ ಸುಗಮ ಮಾಡಿತು.

20ನೇ ಓವರ್‌ನಲ್ಲಿ ಪೂನಮ್‌, ಜಾರ್ಜಿಯಾ ಎಲ್ವಿಸ್‌ಗೆ ವಿಕೆಟ್‌ ನೀಡಿದರು. ಆಗ ತಂಡದ ಖಾತೆಯಲ್ಲಿ ಇದ್ದದ್ದು 74ರನ್‌.

ಈ ಹಂತದಲ್ಲಿ ಒಂದಾದ ಮಂದಾನ ಮತ್ತು ನಾಯಕಿ ಮಿಥಾಲಿ (ಔಟಾಗದೆ 47; 69ಎ, 8ಬೌಂ) ಸುಂದರ ಇನಿಂಗ್ಸ್‌ ಕಟ್ಟಿದರು. ಎಕ್ಸ್‌ಲೆಸ್ಟೋನ್‌ ಬೌಲ್‌ ಮಾಡಿದ 28ನೇ ಓವರ್‌ನ ಐದನೇ ಎಸೆತವನ್ನು ಡೀಪ್‌ ಬ್ಯಾಕ್‌ವರ್ಡ್‌ ಸ್ಕ್ವೇರ್‌ನತ್ತ ತಳ್ಳಿ ಬೌಂಡರಿ ಗಳಿಸಿದ ಮಂದಾನ ಅರ್ಧಶತಕದ ಸಂಭ್ರಮ ಆಚರಿಸಿದರು. ಇದಕ್ಕಾಗಿ ತೆಗೆದುಕೊಂಡಿದ್ದು 58 ಎಸೆತ. ಅವರು ಏಕದಿನ ಮಾದರಿಯಲ್ಲಿ ಗಳಿಸಿದ 15ನೇ ಅರ್ಧಶತಕ ಇದು.

ಅರ್ಧಶತಕದ ಬಳಿಕ ಸ್ಮೃತಿ ತಾಳ್ಮೆಯ ಆಟಕ್ಕೆ ಮೊರೆ ಹೋದರು. 74 ಎಸೆತಗಳಲ್ಲಿ 7 ಬೌಂಡರಿ ಮತ್ತು ಒಂದು ಸಿಕ್ಸರ್‌ ಸಹಿತ 63ರನ್‌ ಗಳಿಸಿದ್ದ ವೇಳೆ ಅವರು, ಆನ್ಯ ಶ್ರುಬ್‌ಸೋಲ್‌ಗೆ ವಿಕೆಟ್‌ ಒಪ್ಪಿಸಿದರು. ಇದರೊಂದಿಗೆ 66ರನ್‌ಗಳ ಮೂರನೇ ವಿಕೆಟ್‌ ಜೊತೆಯಾಟಕ್ಕೆ ತೆರೆ ಬಿತ್ತು.

ಮಂದಾನ ಔಟಾದಾಗ ಆತಿಥೇಯರ ಗೆಲುವಿಗೆ 22ರನ್‌ಗಳು ಬೇಕಿದ್ದವು. ಅನುಭವಿ ಆಟಗಾರ್ತಿ ಮಿಥಾಲಿ ಅಜೇಯ ಆಟ ಆಡಿ ತಂಡವನ್ನು ಜಯದ ದಡ ಮುಟ್ಟಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT