ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಭಾರತಕ್ಕೆ ಗೆದ್ದು ಗೌರವ ಉಳಿಸಿಕೊಳ್ಳುವ ಸವಾಲು

ನ್ಯೂಜಿಲೆಂಡ್‌ ಎದುರು ಭಾನುವಾರ ಅಂತಿಮ ಟ್ವೆಂಟಿ–20 ಹೋರಾಟ
Last Updated 9 ಫೆಬ್ರುವರಿ 2019, 15:53 IST
ಅಕ್ಷರ ಗಾತ್ರ

ಹ್ಯಾಮಿಲ್ಟನ್‌: ಈಗಾಗಲೇ ಸರಣಿ ಸೋತಿರುವ ಭಾರತ ಮಹಿಳಾ ತಂಡ ನ್ಯೂಜಿಲೆಂಡ್‌ ಎದುರಿನ ಅಂತಿಮ ಟ್ವೆಂಟಿ–20 ‍ಪಂದ್ಯದಲ್ಲಿ ಗೆದ್ದು ಗೌರವ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ.

2–1ರಿಂದ ಏಕದಿನ ಸರಣಿ ಜಯಿಸಿದ್ದ ಹರ್ಮನ್‌ಪ್ರೀತ್‌ ಕೌರ್‌ ಬಳಗ ಚುಟುಕು ಮಾದರಿಯ ಮೊದಲ ಎರಡು ಪಂದ್ಯಗಳಲ್ಲಿ ನಿರಾಸೆ ಕಂಡಿತ್ತು. 2020ರ ಐಸಿಸಿ ವಿಶ್ವ ಟ್ವೆಂಟಿ–20 ಟೂರ್ನಿಗೆ ಬಲಿಷ್ಠ ತಂಡ ಕಟ್ಟುವ ಉದ್ದೇಶದಿಂದ ತಂಡದ ಆಡಳಿತ ಮಂಡಳಿ ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ಅವರನ್ನು ಹೊರಗಿಟ್ಟು ಯುವ ಆಟಗಾರ್ತಿಯರಿಗೆ ಅವಕಾಶ ನೀಡಿತ್ತು. ಈ ಯೋಜನೆ ಎರಡೂ ಪಂದ್ಯಗಳಲ್ಲೂ ಕೈಕೊಟ್ಟಿತ್ತು.

ಮಧ್ಯಮ ಮತ್ತು ಕೆಳ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳ ವೈಫಲ್ಯ ಕೂಡಾ ತಂಡಕ್ಕೆ ಮುಳುವಾಗಿತ್ತು. ಮೊದಲ ಪಂದ್ಯದಲ್ಲಿ 17ರನ್‌ ಗಳಿಸಿದ್ದ ನಾಯಕಿ ಹರ್ಮನ್‌ಪ್ರೀತ್‌, ಎರಡನೇ ಹೋರಾಟದಲ್ಲಿ ಕೇವಲ ಐದು ರನ್‌ಗಳಿಗೆ ವಿಕೆಟ್‌ ಒಪ್ಪಿಸಿದ್ದರು.

ದಯಾಳನ್‌ ಹೇಮಲತಾ, ಪ್ರಿಯಾ ಪೂನಿಯಾ ಕೂಡಾ ರನ್‌ ಗಳಿಸಲು ಪರದಾಡಿದ್ದರು. ಸ್ಮೃತಿ ಮಂದಾನ ಮತ್ತು ಜೆಮಿಮಾ ರಾಡ್ರಿಗಸ್‌ ಉತ್ತಮ ಲಯದಲ್ಲಿದ್ದಾರೆ. ಇದು ತಂಡಕ್ಕೆ ವರವಾಗಿ ಪರಿಣಮಿಸಿದೆ. ಇವರು ಹಿಂದಿನ ಎರಡು ಪಂದ್ಯಗಳಲ್ಲೂ ತಂಡಕ್ಕೆ ಭದ್ರ ಬುನಾದಿ ಹಾಕಿಕೊಟ್ಟಿದ್ದರು.

ಅರುಂಧತಿ ರೆಡ್ಡಿ, ದೀಪ್ತಿ ಶರ್ಮಾ ಮತ್ತು ರಾಧಾ ಯಾದವ್‌ ಅವರು ಹಿಂದಿನ ಪಂದ್ಯದಲ್ಲಿ ದಿಟ್ಟ ಆಟ ಆಡಿದ್ದರು. ಇವರು ಸೆಡನ್‌ ಪಾರ್ಕ್‌ ಅಂಗಳದಲ್ಲೂ ರನ್‌ ಮಳೆ ಹರಿಸಬೇಕಿದೆ. ಆಗ ಮಾತ್ರ ಜಯದ ಕನಸು ಕೈಗೂಡಬಹುದು.

ಬೌಲಿಂಗ್‌ನಲ್ಲಿ ತಂಡ ಶಕ್ತಿಯುತವಾಗಿದೆ. ಮಾನಷಿ ಜೋಶಿ ಮತ್ತು ದೀಪ್ತಿ ಶರ್ಮಾ ಎದುರಾಳಿ ಬ್ಯಾಟ್ಸ್‌ವುಮನ್‌ಗಳನ್ನು ಕಾಡುವ ಸಾಮರ್ಥ್ಯ ಹೊಂದಿದ್ದಾರೆ. ಆದರೆ ಶಿಖಾ ಪಾಂಡೆ ದುಬಾರಿಯಾಗುತ್ತಿರುವುದು ನಾಯಕಿ ಹರ್ಮನ್‌ಪ್ರೀತ್‌ ಚಿಂತೆಗೆ ಕಾರಣವಾಗಿದೆ.

‘ಕ್ಲೀನ್‌ ಸ್ವೀಪ್‌’ ಸಾಧನೆಯ ಗುರಿ: ಈಗಾಗಲೇ ಸರಣಿ ಗೆದ್ದು ಬೀಗುತ್ತಿರುವ ನ್ಯೂಜಿಲೆಂಡ್‌ ವನಿತೆಯರು, ಅಂತಿಮ ಪಂದ್ಯದಲ್ಲೂ ಪ್ರವಾಸಿ ಪಡೆಯನ್ನು ಮಣಿಸಿ ‘ಕ್ಲೀನ್‌ ಸ್ವೀಪ್‌’ ಸಾಧನೆ ಮಾಡುವ ಹಂಬಲದಲ್ಲಿದ್ದಾರೆ.

ಸೋಫಿ ಡಿವೈನ್‌, ಸೂಝಿ ಬೇಟ್ಸ್‌, ಆ್ಯಮಿ ಸಟ್‌ವರ್ಥ್‌ವೇಟ್‌ ಮತ್ತು ಕೇಟಿ ಮಾರ್ಟಿನ್‌ ಅವರು ಬ್ಯಾಟಿಂಗ್‌ನಲ್ಲಿ ಈ ತಂಡದ ಶಕ್ತಿಯಾಗಿದ್ದಾರೆ. ಬೌಲಿಂಗ್‌ನಲ್ಲೂ ತಂಡ ಬಲಿಷ್ಠವಾಗಿದೆ.

ಪಂದ್ಯದ ಆರಂಭ: ಬೆಳಿಗ್ಗೆ 7.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT