ಟ್ವೆಂಟಿ–20 ಪಂದ್ಯ: ಸೋಲಿನ ಸರಪಳಿ ಕಳಚುವುದೇ ಭಾರತ?

ಮಂಗಳವಾರ, ಮಾರ್ಚ್ 26, 2019
33 °C

ಟ್ವೆಂಟಿ–20 ಪಂದ್ಯ: ಸೋಲಿನ ಸರಪಳಿ ಕಳಚುವುದೇ ಭಾರತ?

Published:
Updated:
Prajavani

ಗುವಾಹಟಿ: ಚುಟುಕು ಮಾದರಿಯಲ್ಲಿ ಸತತ ಐದು ಪಂದ್ಯಗಳಲ್ಲಿ ಸೋತು ಸೊರಗಿರುವ ಭಾರತ ಮಹಿಳಾ ತಂಡ ಈಗ ಗೆಲುವಿನ ಹಾದಿಗೆ ಮರಳಲು ಸಜ್ಜಾಗಿದೆ.

ಗುರುವಾರ ನಡೆಯುವ ಟ್ವೆಂಟಿ–20 ಕ್ರಿಕೆಟ್‌ ಸರಣಿಯ ತನ್ನ ಎರಡನೇ ಪಂದ್ಯದಲ್ಲಿ ಸ್ಮೃತಿ ಮಂದಾನ ಬಳಗ ಇಂಗ್ಲೆಂಡ್‌ ಸವಾಲು ಎದುರಿಸಲಿದೆ. ಮೊದಲ ‍ಪಂದ್ಯದಲ್ಲಿ 41ರನ್‌ಗಳಿಂದ ಆಂಗ್ಲರ ನಾಡಿಗೆ ಮಣಿದಿದ್ದ ಭಾರತ, ಹಿಂದಿನ ಸೋಲಿಗೆ ಮುಯ್ಯಿ ತೀರಿಸಿಕೊಳ್ಳಲು ಕಾತರವಾಗಿದೆ.

ಸ್ಮೃತಿ ಬಳಗಕ್ಕೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ಒಂದೊಮ್ಮೆ ಸೋತರೆ ಸರಣಿಯು ಪ್ರವಾಸಿ ಪಡೆಯ ಪಾಲಾಗಲಿದೆ.

ಮೊದಲ ಹಣಾಹಣಿಯಲ್ಲಿ 161ರನ್‌ಗಳ ಗೆಲುವಿನ ಗುರಿ ಬೆನ್ನಟ್ಟಿದ್ದ ಆತಿಥೇಯರು 119ರನ್‌ಗಳಿಗೆ ಹೋರಾಟ ಮುಗಿಸಿದ್ದರು.

ಅಗ್ರ ಕ್ರಮಾಂಕದ ಬ್ಯಾಟ್ಸ್‌ವುಮನ್‌ಗಳಾದ ಹರ್ಲೀನ್‌ ಡಿಯೊಲ್‌, ಮಂದಾನ, ಜೆಮಿಮಾ ರಾಡ್ರಿಗಸ್‌ ಮತ್ತು ಅನುಭವಿ ಆಟಗಾರ್ತಿ ಮಿಥಾಲಿ ರಾಜ್‌ ರನ್‌ ಗಳಿಸಲು ಪರದಾಡಿದ್ದರು. ಸ್ಫೋಟಕ ಆಟಗಾರ್ತಿ ಹರ್ಮನ್‌ಪ್ರೀತ್‌ ಕೌರ್‌ ಅವರ ಅನುಪಸ್ಥಿತಿ ತಂಡಕ್ಕೆ ಹಿನ್ನಡೆಯಾಗಿ ಪರಿಣಮಿಸಿತ್ತು.

ಹರ್ಲೀನ್‌, ಮಂದಾನ, ಜೆಮಿಮಾ ಮತ್ತು ಮಿಥಾಲಿ ಅವರು ಈ ಪಂದ್ಯದಲ್ಲಿ ಲಯ ಕಂಡುಕೊಂಡು ಆಡುವುದು ಅಗತ್ಯ. ಕರ್ನಾಟಕದ ವೇದಾ ಕೃಷ್ಣಮೂರ್ತಿ ಕೂಡಾ ಅಬ್ಬರಿಸಬೇಕಿದೆ.

ಮೊದಲ ಪಂದ್ಯದಲ್ಲಿ ಮಿಂಚಿದ್ದ ಶಿಖಾ ಪಾಂಡೆ, ದೀಪ್ತಿ ಶರ್ಮಾ ಮತ್ತು ಅರುಂಧತಿ ರೆಡ್ಡಿ ಗುರುವಾರವೂ ಆಂಗ್ಲರ ನಾಡಿನ ಬೌಲರ್‌ಗಳನ್ನು ಕಾಡುವ ಹುಮ್ಮಸ್ಸಿನಲ್ಲಿದ್ದಾರೆ.

ಬೌಲಿಂಗ್‌ನಲ್ಲೂ ಭಾರತ ತಂಡದಿಂದ ಪರಿಣಾಮಕಾರಿ ಸಾಮರ್ಥ್ಯ ಮೂಡಿಬರಬೇಕಿದೆ. ಹೊಸ ಚೆಂಡಿನೊಂದಿಗೆ ದಾಳಿಗಿಳಿಯುವ ಶಿಖಾ ಪಾಂಡೆ, ಆರಂಭದಲ್ಲೇ ವಿಕೆಟ್‌ ಉರುಳಿಸಿ ಎದುರಾಳಿಗಳ ಮೇಲೆ ಒತ್ತಡ ಹೇರಬೇಕಿದೆ. ದೀಪ್ತಿ, ಅರುಂಧತಿ, ರಾಧಾ ಯಾದವ್‌ ಹಾಗೂ ಪೂನಮ್‌ ಯಾದವ್‌ ಅವರೂ ಕೈ ಚಳಕ ತೋರುವುದು ಅಗತ್ಯ.

ಇಂಗ್ಲೆಂಡ್‌ ತಂಡ ಈ ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಟಾಮಿ ಬ್ಯೂಮೊಂಟ್‌, ನಾಯಕಿ ಹೀದರ್‌ ನೈಟ್‌ ಮತ್ತು ಡೇನಿಯಲ್‌ ವೈಟ್‌ ಅವರು ಬ್ಯಾಟಿಂಗ್‌ನಲ್ಲಿ ಪ್ರವಾಸಿ ತಂಡದ ಆಧಾರ ಸ್ಥಂಭಗಳಾಗಿದ್ದಾರೆ. ಟಾಮಿ ಅವರು ಆರಂಭಿಕ ಹಣಾಹಣಿಯಲ್ಲಿ 57 ಎಸೆತಗಳಲ್ಲಿ 62ರನ್‌ ಬಾರಿಸಿ ಗಮನ ಸೆಳೆದಿದ್ದರು.

ಬೌಲಿಂಗ್‌ನಲ್ಲೂ ಆಂಗ್ಲರ ನಾಡಿನ ತಂಡ ಬಲಯುತವಾಗಿದೆ. ನಟಾಲಿಯಾ ಶೀವರ್‌, ಅನ್ಯ ಶ್ರುಬ್‌ಸೋಲ್‌, ಕ್ಯಾಥರಿನಾ ಬ್ರುಂಟ್‌ ಮತ್ತು ಲಿನ್ಸೆ ಸ್ಮಿತ್‌ ಅವರು ಭಾರತದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡುವ ಸಾಮರ್ಥ್ಯ ಹೊಂದಿದ್ದು ಮೊದಲ ಪಂದ್ಯದಲ್ಲಿ ಇದನ್ನು ಸಾಬೀತು ಪಡಿಸಿದ್ದಾರೆ.

ಆರಂಭ: ಬೆಳಿಗ್ಗೆ 11.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !