ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋಲಿಬಾರ್‌ಗೆ 11 ಬಲಿ

ಸ್ಟೆರ್‌ಲೈಟ್ ಕಾಪರ್ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಹಿಂಸಾಚಾರ * ಪರಿಸ್ಥಿತಿ ನಿಯಂತ್ರಿಸಲು ಗುಂಡು ಹಾರಿಸಿದ ಪೊಲೀಸರು
Last Updated 22 ಮೇ 2018, 19:30 IST
ಅಕ್ಷರ ಗಾತ್ರ

ಚೆನ್ನೈ/ತೂತ್ತುಕುಡಿ: ತಮಿಳುನಾಡಿನ ತೂತ್ತುಕುಡಿಯಲ್ಲಿರುವ ‘ಸ್ಟೆರ್‌ಲೈಟ್’ ತಾಮ್ರ ಸಂಸ್ಕರಣ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಒತ್ತಾಯಿಸಿ ಶಾಂತಿಯುತವಾಗಿ ನಡೆಯುತ್ತಿದ್ದ ಪ್ರತಿಭಟನೆ ಮಂಗಳವಾರ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ 11 ಪ್ರತಿಭಟನಾಕಾರರು ಮೃತಪಟ್ಟಿದ್ದಾರೆ.

‘ಗೋಲಿಬಾರ್‌ನಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ. ಹೀಗಾಗಿ ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ’ ಎಂದು ತಮಿಳುನಾಡು ಪೊಲೀಸ್ ಮಹಾನಿರ್ದೇಶಕ ಟಿ.ಕೆ.ರಾಜೇಂದ್ರನ್ ಮಾಹಿತಿ ನೀಡಿದ್ದಾರೆ.

ತಾಮ್ರ ಸಂಸ್ಕರಣ ಘಟಕದಿಂದ ಹೊರಬರುವ ವಿಷಕಾರಿ ಅನಿಲವು ಸುತ್ತಮುತ್ತಲಿನ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪರಿಸರಕ್ಕೂ ಹಾನಿಯಾಗುತ್ತಿದೆ. ಹೀಗಾಗಿ ಘಟಕವನ್ನು ಮುಚ್ಚಬೇಕು ಎಂದು ಸ್ಥಳೀಯರು ಹಲವು ವರ್ಷಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

‘ಬೇರೆ ವಿಧಿಯೇ ಇರಲಿಲ್ಲ’

ತೂತ್ತುಕುಡಿಯಲ್ಲಿ ಪ್ರತಿಭಟನಾಕಾರರ ಮೇಲೆ ನಡೆದ ಗೋಲಿಬಾರ್ ಅನ್ನು ಸಮರ್ಥಿಸಿಕೊಳ್ಳಲು ತಮಿಳುನಾಡು ಸರ್ಕಾರ ಮುಂದಾಗಿದೆ.

‘20 ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಸರ್ಕಾರಿ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ, ಜಿಲ್ಲಾಧಿಕಾರಿ ಕಚೇರಿಯ ಮೇಲೆ ಕಲ್ಲು ತೂರಿದ್ದರು. ವಿಧಿಯೇ ಇಲ್ಲದೆ ಪೊಲೀಸರು ಗುಂಡು ಹಾರಿಸಿದ್ದಾರೆ’ ಎಂದು ತಮಿಳುನಾಡು ಮುಖ್ಯಮಂತ್ರಿ ಈಡಪ್ಪಾಡಿ ಕೆ. ಪಳನಿಸ್ವಾಮಿ ಗೋಲಿಬಾರ್‌ ಅನ್ನು ಸಮರ್ಥಿಸಿಕೊಂಡಿದ್ದಾರೆ.

‘ಘಟಕ ಹೊರಸೂಸುವ ವಿಷಾನಿಲಗಳಿಂದ ಜನರ ಆರೋಗ್ಯ ಹಾಳಾಗುತ್ತಿದೆ ಎಂಬ ಕೂಗು ವ್ಯಾಪಕವಾಗಿದ್ದರೂ, ಸ್ಟೆರ್‌ಲೈಟ್ ತನ್ನ ಘಟಕವನ್ನು ವಿಸ್ತರಿಸಲು ಮುಂದಾಗಿತ್ತು. ಹೀಗಾಗಿ ವಿಸ್ತರಣಾ ಕಾರ್ಯವನ್ನು ಸ್ಥಗಿತಗೊಳಿಸುವಂತೆ ಮತ್ತು ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ಸ್ಥಳೀಯರು ಹಲವು ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಪ್ರತಿಭಟನೆ ಮಂಗಳವಾರ 100ನೇ ದಿನಕ್ಕೆ ಕಾಲಿರಿಸಿತ್ತು. ಅದರ ಅಂಗವಾಗಿ ತೂತ್ತುಕುಡಿಯ ಎಸ್‌ಎವಿ ಮೈದಾನದಲ್ಲಿ ಪ್ರತಿಭಟನಾಕಾರರು ಭಾರಿ ಸಮ್ಮೇಳನ ಆಯೋಜಿಸಿದ್ದರು. ಅಲ್ಲದೆ, ತೂತ್ತುಕುಡಿಯಲ್ಲಿ ಒಂದು ದಿನದ ಬಂದ್‌ಗೂ ಕರೆ ನೀಡಲಾಗಿತ್ತು. ನಗರದ ಬಹುತೇಕ ಎಲ್ಲ ಅಂಗಡಿಗಳು ಮುಚ್ಚಿದ್ದವು. ಪ್ರತಿಭಟನಾಕಾರರು ಮೈದಾನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ಹೊರಟಾಗ ಹಿಂಸಾಚಾರ ನಡೆದಿದೆ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಮೈದಾನದಲ್ಲಿ ಪ್ರತಿಭಟನಾ ಸಮ್ಮೇಳನ ನಡೆಸಲು ಮಾತ್ರ ಅನುಮತಿ ನೀಡಲಾಗಿತ್ತು. ಮೆರವಣಿಗೆ ನಡೆಸದಂತೆ ಎಚ್ಚರಿಕೆ ನೀಡಲಾಗಿತ್ತು. ನಿಷೇದಾಜ್ಞೆಯನ್ನೂ ಜಾರಿ ಮಾಡಲಾಗಿತ್ತು. ಅದರ ಹೊರತಾಗಿಯೂ ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿಯತ್ತ ಮೆರವಣಿಗೆ ಆರಂಭಿಸಿದರು’ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

‘ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸದಂತೆ ಪ್ರತಿಭಟನಾಕಾರರನ್ನು ತಡೆಯಲಾಯಿತು. ಅಷ್ಟರಲ್ಲೇ ಅವರು ಕಚೇರಿ ಮತ್ತು ಪೊಲೀಸರತ್ತ ಕಲ್ಲು ತೂರಲು ಆರಂಭಿಸಿದರು. ಕಚೇರಿಯ ಗಾಜುಗಳನ್ನು ಒಡೆದು ಹಾಕಿದರು. ಸ್ಥಳದಲ್ಲೇ ಇದ್ದ ವಾಹನಗಳಿಗೆ ಬೆಂಕಿ ಹಚ್ಚಿದರು. ಜಿಲ್ಲಾಧಿಕಾರಿ ಕಚೇರಿಗೂ ಬೆಂಕಿ ಹಚ್ಚಲು ಪ್ರಯತ್ನಿಸಿದರು. ಪರಿಸ್ಥಿತಿ ಕೈಮೀರಿದ್ದರಿಂದ ಪ್ರತಿಭಟನಾಕಾರರತ್ತ ಗುಂಡು ಹಾರಿಸಬೇಕಾಯಿತು’ ಎಂದು ಪೊಲೀಸ್ ಮಹಾನಿರ್ದೇಶಕ ರಾಜೇಂದ್ರನ್ ವಿವರಣೆ ನೀಡಿದ್ದಾರೆ.

ಸಂಸ್ಕರಣ ಘಟಕದಿಂದ ಸದಾ ವಿಷಾನಿಲ ಸೋರಿಕೆ: ಪ್ರತಿಭಟನಾಕಾರರ ಆರೋಪ

ಘಟಕ ಮುಚ್ಚುವಂತೆ ನಡೆಯುತ್ತಿದ್ದ ಪ್ರತಿಭಟನೆ 100ನೇ ದಿನಕ್ಕೆ

ಗೋಲಿಬಾರ್‌ನಲ್ಲಿ ಹಲವರಿಗೆ ಗಾಯ, ಸಾವಿನ ಸಂಖ್ಯೆ ಏರುವ ಸಾಧ್ಯತೆ

ಹಲವಾರು ವಾಹನಗಳಿಗೆ ಬೆಂಕಿ

₹ 10 ಲಕ್ಷ ಮೃತರ ಕುಟುಂಬಕ್ಕೆ ಸರ್ಕಾರ ಘೋಷಿಸಿರುವ ಪರಿಹಾರ

ಮೃತರ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ನೌಕರಿ ಕೊಡುವುದಾಗಿ ಘೋಷಿಸಲಾಗಿದೆ

* ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಹಿಂಸಾಚಾರವನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪರಿಸ್ಥಿತಿ ಕೈಮೀರಿದ್ದರಿಂದ ಗೋಲಿಬಾರ್ ನಡೆಸಬೇಕಾಯಿತು. ಗುಂಡು ಹಾರಿಸದೆ ಪೊಲೀಸರಿಗೆ ಬೇರೆ ಆಯ್ಕೆಯೇ ಇರಲಿಲ್ಲ

-ಡಿ.ಜಯಕುಮಾರ್, ತಮಿಳುನಾಡು ಮೀನುಗಾರಿಕೆ ಸಚಿವ

ಪೊಲೀಸರ ಈ ಕ್ರಮವನ್ನು ನಾನು ಪ್ರಬಲವಾಗಿ ಖಂಡಿಸುತ್ತೇನೆ. ಜನರ ಮೇಲೆ ಗುಂಡಿನ ಮಳೆಗರೆಯುವ ಬದಲು ಪೊಲೀಸರು, ಪ್ರತಿಭಟನಾಕಾರರನ್ನು ಬೇರೆ ರೀತಿ ನಿಯಂತ್ರಿಸಬೇಕಾಗಿತ್ತು

-ಎಂ.ಕೆ.ಸ್ಟಾಲಿನ್, ವಿರೋಧ ಪಕ್ಷ ಡಿಎಂಕೆಯ ಮುಖ್ಯಸ್ಥ

ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಸಿದ ಜನರನ್ನು ಕೊಲೆ ಮಾಡಲಾಗಿದೆ. ಒಂಬತ್ತು ಜನರನ್ನು ಗುಂಡಿಕ್ಕಿ ಕೊಂದಿರುವುದು ಸರ್ಕಾರಿ ಪ್ರಾಯೋಜಿತ ಭಯೋತ್ಪಾದನೆಯೇ ಸರಿ

-ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT