ಸೋಮವಾರ, ಅಕ್ಟೋಬರ್ 21, 2019
21 °C

ಮಹಿಳಾ ಅಂತರರಾಷ್ಟ್ರೀಯ ಕ್ರಿಕೆಟ್: ಪ್ರಿಯಾ ಮಿಂಚು– ಭಾರತಕ್ಕೆ ಜಯ

Published:
Updated:
Prajavani

ವಡೋದರ: ಸ್ಮೃತಿ ಮಂದಾನ ಗಾಯಾಳಾದ ಕಾರಣ ಆಡುವ ಅವಕಾಶ ಪಡೆದ ಪ್ರಿಯಾ ಪೂನಿಯಾ ಅದ‌‌ನ್ನು ಸರ್ಮರ್ಥವಾಗಿಯೇ ಬಳಸಿಕೊಂಡರು. ಪದಾರ್ಪಣೆ ಪಂದ್ಯದಲ್ಲೇ ಅವರ ಅಜೇಯ ಅರ್ಧಶತಕದ ನೆರವಿನಿಂದ ಭಾರತ ಮಹಿಳಾ ತಂಡ ಬುಧವಾರ ನಡೆದ ಮೊದಲ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಎಂಟು ವಿಕೆಟ್‌ಗಳಿಂದ ಸುಲಭವಾಗಿ ಮಣಿಸಿತು.

ರಿಲಯನ್ಸ್ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದು ಬ್ಯಾಟ್‌ ಮಾಡಲು ನಿರ್ಧರಿಸಿದ ದಕ್ಷಿಣ ಆಫ್ರಿಕ, ಭಾರತದ ಬೌಲರ್‌ಗಳ ಸಾಂಘಿಕ ಪ್ರದರ್ಶನದ ಎದುರು ಪರದಾಡಿ 45.1 ಓವರುಗಳಲ್ಲಿ 164 ರನ್‌ಗಳಿಗೆ ಕುಸಿಯಿತು.

ಜೂಲನ್‌ ಗೋಸ್ವಾಮಿ (33ಕ್ಕೆ3), ಶಿಖಾ ಪಾಂಡೆ (38ಕ್ಕೆ2), ಏಕ್ತಾ ಬಿಷ್ತ್‌ (28ಕ್ಕೆ2) ಮತ್ತು ಪೂನಮ್‌ ಯಾದವ್‌ (33ಕ್ಕೆ2) ವಿಕೆಟ್‌ಗಳನ್ನು ಹಂಚಿಕೊಂಡರು.

ಭಾರತ 41.4 ಓವರುಗಳಲ್ಲಿ 2 ವಿಕೆಟ್‌ ನಷ್ಟದಲ್ಲಿ ಗುರಿ ತಲುಪಿತು. ಆರಂಭ ಆಟಗಾರ್ತಿ ಪೂನಿಯಾ (124 ಎಸೆತಗಳಲ್ಲಿ ಔಟಾಗದೇ 75) ಮತ್ತು ಜೆಮಿಮಾ ರಾಡ್ರಿಗಸ್‌ (65 ಎಸೆತಗಳಲ್ಲಿ 55) ಭದ್ರ ಅಡಿಪಾಯ ಹಾಕಿಕೊಟ್ಟರು. ಕಾಲಿನ ಬೆರಳಿಗೆ ಆದ ಗಾಯದಿಂದ ಮಂದಾನಾ ಆಡಿರಲಿಲ್ಲ. ಜೈಪುರದ 23 ವರ್ಷದ ಆಟಗಾರ್ತಿ ಪ್ರಿಯಾ ‌ಅಜೇಯ ಇನಿಂಗ್ಸ್‌ನಲ್ಲಿ ಎಂಟು ಬೌಂಡರಿಗಳನ್ನು ಬಾರಿಸಿದರು.

ಇದಕ್ಕೆ ಹಿಂದಿನ ಐದು ಪಂದ್ಯಗಳ ಟಿ–20 ಸರಣಿಯಲ್ಲಿ ವಿಫಲರಾಗಿದ್ದ ಜೆಮಿಮಾ ಲಯಕ್ಕೆ ಮರಳಿದರಲ್ಲದೇ, ಪೂನಿಯಾ ಜೊತೆ 83 ರನ್‌ ಸೇರಿಸಿದರು. ಅವರ ಆಟದಲ್ಲಿ ಏಳು ಬೌಂಡರಿಗಳು ಇದ್ದವು.

ಇದಕ್ಕೆ ಮೊದಲು ದಕ್ಷಿಣ ಆಫ್ರಿಕ ಪರ ಮರಿಝಾನೆ ಕಾಪ್‌ 64 ಎಸೆತಗಳಲ್ಲಿ 54 ರನ್‌ ಬಾರಿಸಿದ್ದರು. ಒಂದು ಹಂತದಲ್ಲಿ 7 ವಿಕೆಟ್‌ಗೆ 115 ರನ್‌ ಗಳಿಸಿದ್ದ ಹರಿಣಗಳ ತಂಡ 160ರ ಗಡಿ ದಾಟಲು ಅವರ ಆಟ ನೆರವಾಯಿತು.

ಮೂರು ಪಂದ್ಯಗಳ ಸರಣಿಯ ಇನ್ನೆರಡು ಪಂದ್ಯಗಳು ಇದೇ ಕ್ರೀಡಾಂಗಣದಲ್ಲಿ ಕ್ರಮವಾಗಿ ಅ. 11 ಮತ್ತು 14ರಂದು ನಡೆಯಲಿದೆ.

ಸಂಕ್ಷಿಪ್ತ ಸ್ಕೋರು: ದಕ್ಷಿಣ ಆಫ್ರಿಕ: 45.1 ಓವರುಗಳಲ್ಲಿ 164 (ಲಾರಾ ವೊಲ್ವಾರ್ಟ್‌ 39, ಮರಿಜಾನ್‌ ಕಾಪ್‌ 64; ಜೂಲನ್‌ ಗೋಸ್ವಾಮಿ 33ಕ್ಕೆ3, ಶಿಖಾ ಪಾಂಡೆ 38ಕ್ಕೆ2, ಏಕ್ತಾ ಬಿಷ್ತ್‌ 28ಕ್ಕೆ2, ಪೂನಮ್‌ ಯಾದವ್‌ 33ಕ್ಕೆ2); ಭಾರತ: 41.4 ಓವರುಗಳಲ್ಲಿ 2 ವಿಕೆಟ್‌ಗೆ 165 (ಪ್ರಿಯಾ ಪೂನಿಯಾ ಔಟಾಗದೇ 75, ಜೆಮಿಮಾ ರಾಡ್ರಿಗಸ್‌ 55, ಮಿಥಾಲಿ ರಾಜ್‌ ಔಟಾಗದೇ 11).

 

Post Comments (+)