ಭಾನುವಾರ, ಮೇ 22, 2022
22 °C
ಮಹಿಳಾ ಟ್ವೆಂಟಿ–20 ಚಾಲೆಂಜ್‌

ಜೆಮಿಮಾ ‘ಸೂಪರ್‌’ ಆಟ: ಫೈನಲ್‌ ‍ಪ್ರವೇಶಿಸಿದ ಹರ್ಮನ್‌ಪ್ರೀತ್‌ ಪಡೆ

ಪಿಟಿಐ Updated:

ಅಕ್ಷರ ಗಾತ್ರ : | |

ಜೈಪುರ: ಯುವ ಆಟಗಾರ್ತಿ ಜೆಮಿಮಾ ರಾಡ್ರಿಗಸ್‌ (ಔಟಾಗದೆ 77; 48ಎ, 10ಬೌಂ, 1ಸಿ) ಗುರುವಾರ ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬೌಂಡರಿ, ಸಿಕ್ಸರ್‌ಗಳ ಚಿತ್ತಾರ ಬಿಡಿಸಿ ಅಭಿಮಾನಿಗಳನ್ನು ಮುದಗೊಳಿಸಿದರು.

ಜೆಮಿಮಾ ಅವರ ಅಜೇಯ ಅರ್ಧಶತಕದ ಬಲದಿಂದ ಸೂಪರ್‌ನೋವಾಸ್‌ ತಂಡ ಮಹಿಳಾ ಟ್ವೆಂಟಿ–20 ಚಾಲೆಂಜ್‌ನಲ್ಲಿ ಫೈನಲ್‌ ಪ್ರವೇಶಿಸಿತು.

ಗುರುವಾರದ ನಿರ್ಣಾಯಕ ಹಣಾಹಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್ ಸಾರಥ್ಯದ ಸೂಪರ್‌ನೋವಾಸ್‌ 12 ರನ್‌ಗಳಿಂದ ಮಿಥಾಲಿ ರಾಜ್‌ ಮುಂದಾಳತ್ವದ ವೆಲೋಸಿಟಿ ಎದುರು ಗೆದ್ದಿತು.

ಈ ಪಂದ್ಯದಲ್ಲಿ ಸೋತರೂ ಉತ್ತಮ ರನ್‌ರೇಟ್‌ ಆಧಾರದಲ್ಲಿ ಮಿಥಾಲಿ ಪಡೆಯು ‍ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿತು. ಫೈನಲ್ ‍ಪಂದ್ಯ ಶನಿವಾರ ನಿಗದಿಯಾಗಿದೆ.

ಮೊದಲು ಬ್ಯಾಟ್‌ ಮಾಡಿದ ಸೂಪರ್‌ನೋವಾಸ್‌ 20 ಓವರ್‌ಗಳಲ್ಲಿ 3 ವಿಕೆಟ್‌ಗೆ 142ರನ್‌ ಗಳಿಸಿತು. ಈ ಗುರಿಯನ್ನು ವೆಲೋಸಿಟಿ ಸುಲಭವಾಗಿ ಮುಟ್ಟಲಿದೆ ಎಂಬ ನಿರೀಕ್ಷೆ ಹುಸಿಯಾಯಿತು. ಈ ತಂಡವು 3 ವಿಕೆಟ್‌ಗೆ 130ರನ್‌ ಗಳಿಸಲಷ್ಟೇ ಶಕ್ತವಾಯಿತು.

ನಾಯಕಿ ಮಿಥಾಲಿ (ಔಟಾಗದೆ 40; 42ಎ, 3ಬೌಂ) ಮತ್ತು ವೇದಾ ಕೃಷ್ಣಮೂರ್ತಿ (ಔಟಾಗದೆ 30; 29ಎ, 3ಬೌಂ) ಕೊನೆಯವರೆಗೂ ಹೋರಾಡಿದರು. ಹೀಗಿದ್ದರೂ ತಂಡವನ್ನು ಗೆಲುವಿನ ದಡ ಮುಟ್ಟಿಸಲು ಆಗಲಿಲ್ಲ. ಮಂದಗತಿಯಲ್ಲಿ ಆಡಿದ ಈ ಜೋಡಿ ಮುರಿಯದ ನಾಲ್ಕನೇ ವಿಕೆಟ್‌ಗೆ 53ರನ್‌ ಸೇರಿಸಿತು.

ಗುರಿ ಬೆನ್ನಟ್ಟಿದ ಮಿಥಾಲಿ ಪಡೆ ಮೂರನೇ ಓವರ್‌ನಲ್ಲಿ ಆಘಾತ ಕಂಡಿತು. ರಾಧಾ ಯಾದವ್‌ ಹಾಕಿದ ಮೊದಲ ಎಸೆತದಲ್ಲಿ ಶಫಾಲಿ ವರ್ಮಾ (2) ಬೌಲ್ಡ್‌ ಆದರು. ಅನುಜಾ ಪಾಟೀಲ್‌ ಬೌಲ್ ಮಾಡಿದ ನಾಲ್ಕನೇ ಓವರ್‌ನಲ್ಲಿ ಹೇಲಿ ಮ್ಯಾಥ್ಯೂಸ್‌ (11) ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು.

ಡೇನಿಯಲ್‌ ವ್ಯಾಟ್‌ (43; 33ಎ, 4ಬೌಂ, 2ಸಿ) ಅಬ್ಬರದ ಬ್ಯಾಟಿಂಗ್ ಮಾಡಿ ತಂಡದ ಮೊತ್ತ ಹೆಚ್ಚಿಸಲು ಪ್ರಯತ್ನಿಸಿದರು.

ಜೆಮಿಮಾ ಮೋಡಿ: ಆರಂಭಿಕರಾದ ಪ್ರಿಯಾ ಪೂನಿಯಾ (16; 16ಎ, 2ಬೌಂ) ಮತ್ತು ಚಾಮರಿ ಅಟ್ಟಪಟ್ಟು (31; 38ಎ, 5ಬೌಂ) ಸೂಪರ್‌ನೋವಾಸ್‌ ಪರ ತಾಳ್ಮೆಯ ಬ್ಯಾಟಿಂಗ್ ಮಾಡಿದರು. ತಂಡದ ಮೊತ್ತ 29 ರನ್ ಆಗಿದ್ದಾಗ ಪ್ರಿಯಾ, ಶಿಖಾ ಪಾಂಡೆಗೆ ವಿಕೆಟ್‌ ನೀಡಿದರು.

ಚಾಮರಿ ಅವರ ಜೊತೆಗೂಡಿದ ಜೆಮಿಮಾ ಬೌಲರ್‌ಗಳನ್ನು ಕಾಡಿದರು. ಚಾಮರಿ ಕೂಡ ನಿಧಾನವಾಗಿ ಆಟಕ್ಕೆ ಕುದುರಿಕೊಂಡರು. ಎರಡನೇ ವಿಕೆಟ್‌ಗೆ ಈ ಜೋಡಿ 55 ರನ್ ಕಲೆ ಹಾಕಿತು. ಚಾಮರಿ ಪೆವಿಲಿಯನ್‌ ಸೇರಿದ  ನಂತರ ಜೆಮಿಮಾ ಏಕಾಂಗಿಯಾಗಿ ತಂಡದ ಇನಿಂಗ್ಸ್ ಮುನ್ನಡೆಸುವ ಜವಾಬ್ದಾರಿ ಹೊತ್ತುಕೊಂಡರು. 14 ಎಸೆತಗಳಲ್ಲಿ ಕೇವಲ ಒಂಬತ್ತು ರನ್ ಗಳಿಸಿದ ಸೋಫಿ ಡಿವೈನ್ ಜೊತೆಗೆ 50 ರನ್‌ ಸೇರಿಸಿದರು. ಕೊನೆಗೂ ಔಟಾಗದೇ ಉಳಿದರು.

ವೆಲೋಸಿಟಿ ತಂಡದ ಅಮೆಲಿಯಾ ಕೇರ್ ಎರಡು ವಿಕೆಟ್ ಕಬಳಿಸಿ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಸೂಪರ್‌ನೋವಾಸ್: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 142 (ಪ್ರಿಯಾ ಪೂನಿಯಾ 16, ಚಾಮರಿ ಅಟ್ಟಪಟ್ಟು 31, ಜೆಮಿಮಾ ರಾಡ್ರಿಗಸ್‌ ಅಜೇಯ 77; ಶಿಖಾ ಪಾಂಡೆ 17ಕ್ಕೆ1, ಅಮೆಲಿಯಾ ಕೆರ್‌ 21ಕ್ಕೆ2).

ವೆಲೋಸಿಟಿ: 20 ಓವರ್‌ಗಳಲ್ಲಿ 3 ವಿಕೆಟ್‌ಗೆ 130 (ಹೇಲಿ ಮ್ಯಾಥ್ಯೂಸ್‌ 11, ಡೇನಿಯಲ್‌ ವ್ಯಾಟ್‌ 43, ಮಿಥಾಲಿ ರಾಜ್‌ ಔಟಾಗದೆ 40, ವೇದಾ ಕೃಷ್ಣಮೂರ್ತಿ ಔಟಾಗದೆ 30; ರಾಧಾ ಯಾದವ್‌ 30ಕ್ಕೆ1, ಅನುಜಾ ಪಾಟೀಲ್‌ 28ಕ್ಕೆ1, ಪೂನಮ್‌ ಯಾದವ್‌ 13ಕ್ಕೆ1).

ಫಲಿತಾಂಶ: ಸೂಪರ್‌ನೋವಾಸ್‌ಗೆ 12ರನ್‌ ಗೆಲುವು.

ಪಂದ್ಯಶ್ರೇಷ್ಠ: ಜೆಮಿಮಾ ರಾಡ್ರಿಗಸ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು