ಭಾನುವಾರ, ಜೂನ್ 13, 2021
21 °C

ಅಭ್ಯಾಸದ ಅನುಕೂಲಕ್ಕಾಗಿ ಮಹಿಳಾ ವಿಶ್ವಕಪ್ ಮುಂದೂಡಿಕೆ: ಸಿಇಒ ಆ್ಯಂಡ್ರೆ ನೆಲ್ಸನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಆಕ್ಲೆಂಡ್: ಕಡಿಮೆ ಅವಧಿಯಲ್ಲಿ ಆಟಗಾರ್ತಿಯರಿಗೆ ಅಭ್ಯಾಸ ಮಾಡಲು ಸಾಧ್ಯವೇ ಎಂಬ ಸಂದೇಹದಿಂದ ವಿಶ್ವಕಪ್ ಟೂರ್ನಿಯನ್ನು ಮುಂದೂಡಲಾಗಿದೆಯೇ ಹೊರತು ನ್ಯೂಜಿಲೆಂಡ್‌ನಲ್ಲಿ ಕೋವಿಡ್–19ಕ್ಕೆ ಸಂಬಂಧಿಸಿದ ಸುರಕ್ಷತೆಯ ಆತಂಕ ಇಲ್ಲ ಎಂದು ಟೂರ್ನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆ್ಯಂಡ್ರೆ ನೆಲ್ಸನ್ ಅಭಿಪ್ರಾಯಪಟ್ಟಿದ್ದಾರೆ.

2021ರ ಫೆಬ್ರುವರಿಯಲ್ಲಿ ಆರಂಭಗೊಳ್ಳಬೇಕಾದ ಟೂರ್ನಿಯನ್ನು ಒಂದು ವರ್ಷದ ಅವಧಿಗೆ ಮುಂದೂಡಲು ಇತ್ತೀಚೆಗೆ ಅಂತರರಾಷ್ಟ್ರೀಯ ಕ್ರಿಕೆಟ್ ಸಮಿತಿ ನಿರ್ಧರಿಸಿತ್ತು. ಟೂರ್ನಿಗೆ ಆತಿಥ್ಯ ವಹಿಸುವ ನ್ಯೂಜಿಲೆಂಡ್‌ ಕೋವಿಡ್‌–19ರ ವಿರುದ್ಧದ ಹೋರಾಟದಲ್ಲಿ ಯಶಸ್ಸು ಗಳಿಸಿದೆ. ಮೂರು ತಿಂಗಳ ಹಿಂದೆ ಅಲ್ಲಿ 1569 ಪ್ರಕರಣಗಳು ದೃಢವಾಗಿದ್ದವು. ಈ ಪೈಕಿ ಬಹುತೇಕರು ಗುಣಮುಖರಾಗಿ ಮನೆ ಸೇರಿದ್ದಾರೆ. ಕೋವಿಡ್‌ನಿಂದ ವಿಶ್ವದಲ್ಲೇ ಅತಿ ಕಡಿಮೆ ಹಾನಿಗೆ ಒಳಗಾದ ರಾಷ್ಟ್ರಗಳಲ್ಲಿ ಒಂದು ನ್ಯೂಜಿಲೆಂಡ್‌.

‘ಟೂರ್ನಿಯನ್ನು ಮುಂದೂಡಿದ್ದರಿಂದ ಅರ್ಹತಾ ಟೂರ್ನಿಯಲ್ಲಿ ಆಟಗಾರ್ತಿಯರು ಉತ್ತಮ ಸಾಮರ್ಥ್ಯ ತೋರುವುದಕ್ಕೂ ಸಾಧ್ಯವಿದೆ‘ ಎಂದು ಸ್ಥಳೀಯ ಮಾಧ್ಯಮ ಸಂಸ್ಥೆಯಾದ ಎನ್‌ಝಡ್ಎಂಇಗೆ ನೀಡಿರುವ ಸಂದರ್ಶನದಲ್ಲಿ ನೆಲ್ಸನ್ ಹೇಳಿದ್ದಾರೆ. ಜುಲೈನಲ್ಲಿ ನಡೆಯಬೇಕಾಗಿದ್ದ ಅರ್ಹತಾ ಸುತ್ತಿನ ಪಂದ್ಯಗಳನ್ನು ಕೊರೊನಾ ಹಾವಳಿಯ ಕಾರಣ ಮುಂದೂಡಲಾಗಿದೆ.

ಆತಿಥೇಯ ನ್ಯೂಜಿಲೆಂಡ್ ಜೊತೆ ಭಾರತ, ಇಂಗ್ಲೆಂಡ್‌, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡಗಳು ಈಗಾಗಲೇ ಟೂರ್ನಿಗೆ ಅರ್ಹತೆ ಗಳಿಸಿವೆ. ಟೂರ್ನಿಯನ್ನು ಮುಂದೂಡಿದ್ದರೂ ಈ ತಂಡಗಳ ಅರ್ಹತೆಗೆ ಧಕ್ಕೆಯಾಗಲಿಲ್ಲ. ಆದರೆ ಉಳಿದಿರುವ ಮೂರು ತಂಡಗಳನ್ನು ಅರ್ಹತಾ ಟೂರ್ನಿಯ ಮೂಲಕವೇ ನಿರ್ಧರಿಸಲು ತೀರ್ಮಾನಿಸಲಾಗಿದೆ.

’ಸದ್ಯದ ಪರಿಸ್ಥಿತಿಯಲ್ಲಿ ಅರ್ಹತಾ ಟೂರ್ನಿಯನ್ನು ಆರಂಭಿಸುವುದು ಕಷ್ಟಸಾಧ್ಯ. ವಿಶ್ವಕಪ್‌ ಟೂರ್ನಿಯನ್ನು ಈ ಹಿಂದೆ ನಗದಿ ಮಾಡಿದ ದಿನಾಂಕಗಳಲ್ಲೇ ನಡೆಸಿದ್ದರೆ  ಅರ್ಹತಾ ಸುತ್ತಿನ ಪಂದ್ಯಗಳಲ್ಲಿ ಪಾಲ್ಗೊಂಡ ತಂಡಗಳು ಮತ್ತೆ ಕೆಲವೇ ದಿನಗಳಲ್ಲಿ ಮುಖ್ಯ ಸುತ್ತಿನಲ್ಲಿ ಆಡಲು ಸಜ್ಜಾಗಬೇಕಾಗಿತ್ತು. ಇದರಿಂದ ಅವರಿಗೆ ವಿಶ್ರಾಂತಿ ಇಲ್ಲದಂತಾಗುತ್ತಿತ್ತು. ಆದ್ದರಿಂದ ಟೂರ್ನಿಯನ್ನು ಮುಂದೂಡುವುದಕ್ಕೆ ನಿರ್ಧರಿಸಲಾಯಿತು’ ಎಂದು ನೆಲ್ಸನ್ ವಿವರಿಸಿದರು.

’ಮಹಿಳಾ ವಿಶ್ವಕಪ್‌ನಲ್ಲಿ ಪಾಲ್ಗೊಳ್ಳುವ ಕೆಲವು ತಂಡಗಳು ಒಂದೇ ಕಡೆ ಸೇರುವಂಥ ಅಥವಾ ಅಭ್ಯಾಸ ನಡೆಸುವಂಥ ಪರಿಸ್ಥಿತಿಯಲ್ಲಿಲ್ಲ. ವೆಸ್ಟ್ ಇಂಡೀಸ್‌ ತಂಡವನ್ನೇ ತೆಗೆದುಕೊಳ್ಳಿ, ಅಲ್ಲಿ ಆಟಗಾರ್ತಿಯರು ವಿವಿಧ ದ್ವೀಪಗಳಿಂದ ಬಂದು ಒಂದು ಕಡೆ ಸೇರಬೇಕು. ಆದರೆ ಅದಕ್ಕೆ ಅನುಕೂಲಕರ ವಾತಾವರಣ ಈಗ ಇಲ್ಲ. ಇಂಥ ಸಂದರ್ಭದಲ್ಲಿ ಅಭ್ಯಾಸ ಮಾಡಿ ಎಂದು ಒತ್ತಾಯ ಮಾಡುವುದು ಎಷ್ಟು ಸರಿ’ ಎಂದು ನೆಲ್ಸನ್ ಪ್ರಶ್ನಿಸಿದರು.

ಇಂಗ್ಲೆಂಡ್ ತಂಡದ ನಾಯಕಿ ಹೀಥರ್ ನೈಟ್ ಮತ್ತು ಆಸ್ಟ್ರೇಲಿಯಾದ ವಿಕೆಟ್ ಕೀಪರ್ ಅಲಿಸಾ ಹೀಲಿ ಅವರು ಟೂರ್ನಿಯನ್ನು ಮುಂದೂಡಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪರೋಕ್ಷವಾಗಿ ಉತ್ತರಿಸಿದ ನೆಲ್ಸನ್ ಒಂದು ವರ್ಷ ಮುಂದೂಡಿದ್ದರಿಂದ ಎಲ್ಲ ತಂಡಗಳ ಅಭ್ಯಾಸಕ್ಕೂ ಅನುಕೂಲ ಆಗಲಿದೆ ಎಂದರು.

‘2022ರಲ್ಲಿ ಟೂರ್ನಿ ನಡೆಯಲಿರುವುದರಿಂದ ಅಭ್ಯಾಸ ಮಾಡಲು, ಸಜ್ಜುಗೊಳ್ಳಲು ಮತ್ತು ಒತ್ತಡವಿಲ್ಲದೆ ಟೂರ್ನಿಯಲ್ಲಿ ಭಾಗವಹಿಸಲು ಉತ್ತಮ ಅವಕಾಶ ಲಭಿಸಿದಂತಾಗಿದೆ’ ಎಂದು ಅವರು ಅಭಿಪ್ರಾಯಪಟ್ಟರು. ಮುಂದೂಡಿದ್ದರಿಂದ ಟೂರ್ನಿಯನ್ನು ಸುಸಜ್ಜಿತವಾಗಿ ನಡೆಸಲು ಸಾಧ್ಯ ಎಂಬ ವಿಶ್ವಾಸವಿದೆ’ ಎಂದು ಅವರು ನುಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು