ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳೀಯ ಟಿ20 ಲೀಗ್‌ ಮೇಲೆ ನಿಯಂತ್ರಣ?

ಬಿಸಿಸಿಐ ಅಪೆಕ್ಸ್ ಸಮಿತಿ ಸಭೆ: ಮಹಿಳಾ ತಂಡಕ್ಕೆ ಸಿಬ್ಬಂದಿ ನೇಮಕ ವಿಷಯ ಚರ್ಚೆ ಸಾಧ್ಯತೆ
Last Updated 7 ಏಪ್ರಿಲ್ 2021, 14:28 IST
ಅಕ್ಷರ ಗಾತ್ರ

ನವದೆಹಲಿ: ಅನುಮತಿ ಇಲ್ಲದೇ ಟಿ20 ಕ್ರಿಕೆಟ್ ಟೂರ್ನಿ ಆಯೋಜಿಸಿದ ಬಿಹಾರ ಕ್ರಿಕೆಟ್ ಸಂಸ್ಥೆಯ(ಬಿಸಿಎ) ಮೇಲೆ ಬೇಸರಗೊಂಡಿರುವ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸ್ಥಳೀಯ ಟೂರ್ನಿಗಳ ಮೇಲೆ ನಿಯಂತ್ರಣ ಹೇರಲು ಬಿಗಿ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆ ಇದೆ.

ಇದೇ 16ರಂದು ನಡೆಯಲಿರುವ ಅಪೆಕ್ಸ್ ಸಮಿತಿ ಸಭೆಯಲ್ಲಿ ಈ ವಿಷಯ ಚರ್ಚೆಗೆ ಬರಲಿದ್ದು ರಾಷ್ಟ್ರೀಯ ಮಹಿಳಾ ತಂಡದ ನೆರವು ಸಿಬ್ಬಂದಿ ನೇಮಕಕ್ಕೆ ಸಂಬಂಧಿಸಿಯೂ ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ.

ಬಿಹಾರ ಕ್ರಿಕೆಟ್ ಸಂಸ್ಥೆ ಬಿಸಿಸಿಐನ ಅನುಮತಿ ಪಡೆಯದೇ ಕಳೆದ ತಿಂಗಳಲ್ಲಿ ಬಿಸಿಎಲ್‌ ಆಯೋಜಿಸಿತ್ತು. ಟೂರ್ನಿಯನ್ನು ಸ್ಥಗಿತಗೊಳಿಸುವಂತೆ ಬಿಸಿಸಿಐ ನೀಡಿದ ನಿರ್ದೇಶನಕ್ಕೆ ಬಿಸಿಎ ಬೆಲೆ ನೀಡಲಿಲ್ಲ. ಐಪಿಎಲ್‌ ಟೂರ್ನಿಯ ಯಶಸ್ಸಿನ ನಂತರ ದೇಶದ ಮೂಲೆಮೂಲೆಗಳಲ್ಲಿ ಕ್ರಿಕೆಟ್ ಲೀಗ್‌ಗಳು ನಡೆಯತೊಡಗಿವೆ. ಹೆಚ್ಚಿನವುಗಳಲ್ಲಿ ಬೆಟ್ಟಿಂಗ್ ನಡೆಯುತ್ತಿರುವ ಆರೋಪ ಕೇಳಿಬಂದಿದೆ. ಇದು ಬಿಸಿಸಿಐನ ಭ್ರಷ್ಟಾಚಾರ ತಡೆ ಘಟಕಕ್ಕೆ ತಲೆನೋವು ಉಂಟುಮಾಡಿದೆ.

ಮಹಿಳಾ ತಂಡಕ್ಕೆ ಸಿಬ್ಬಂದಿ ನೇಮಕ ಮಾಡುವುದು ಮತ್ತು ಅಂತರರಾಷ್ಟ್ರೀಯ ಟೂರ್ನಿಗಳಿಗೆ ತಂಡವನ್ನು ಸಜ್ಜುಗೊಳಿಸುವುದು ಕೂಡ ಅಪೆಕ್ಸ್‌ ಸಮಿತಿ ಸಭೆಯ ಪ್ರಮುಖ ಅಂಶಗಳಲ್ಲಿ ಒಂದಾಗಿದೆ. ಆರು ವರ್ಷಗಳ ನಂತರ ಭಾರತ ಮಹಿಳಾ ತಂಡ ಮೊದಲ ಬಾರಿ ಟೆಸ್ಟ್ ಪಂದ್ಯ ಆಡಲು ಸಿದ್ಧವಾಗುತ್ತಿದೆ. ಈ ವರ್ಷಾಂತ್ಯದಲ್ಲಿ ತಂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದೆ. ಹೀಗಾಗಿ ಸಿಬ್ಬಂದಿ ನೇಮಕದ ವಿಷಯ ಮಹತ್ವ ಪಡೆದುಕೊಂಡಿದೆ.

ಟಿ20 ವಿಶ್ವಕಪ್‌ ಟೂರ್ನಿ ಭಾರತದಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ತೆರಿಗೆ ಮತ್ತು ವಿಸಾಗೆ ಸಂಬಂಧಿಸಿದ ವಿಷಯವೂ ಚರ್ಚೆಗೆ ಬರಲಿದೆ. ಮುಂದಿನ ವರ್ಷದ ದೇಶಿ ಟೂರ್ನಿಗಳನ್ನು ಆಯೋಜಿಸುವ ಬಗ್ಗೆಯೂ ಚರ್ಚೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT