ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್‌, ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಇಂದು

ಶುಕ್ರವಾರ, ಜೂಲೈ 19, 2019
22 °C
ಜೇಸನ್‌ ರಾಯ್‌ ಅಲಭ್ಯ; ಚೇತರಿಕೆ ಯತ್ನದಲ್ಲಿರುವ ಇಂಗ್ಲೆಂಡ್‌ ತಂಡಕ್ಕೆ ಆಸ್ಟ್ರೇಲಿಯಾದ ಸತ್ವಪರೀಕ್ಷೆ

ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್‌, ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಇಂದು

Published:
Updated:
Prajavani

ಲಂಡನ್‌: ಸಾಂಪ್ರದಾಯಿಕ ಎದುರಾಳಿಗಳಾದ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ತಂಡಗಳು ಮಂಗಳವಾರ ಲಾರ್ಡ್ಸ್‌ನಲ್ಲಿ ನಡೆಯುವ ಮುಖಾಮುಖಿಯಾಗಲಿದ್ದು, ಈ ವಿಶ್ವಕಪ್‌ ಪಂದ್ಯ ಕುತೂಹಲ ಕೆರಳಿಸಿದೆ. ಶ್ರೀಲಂಕಾ ವಿರುದ್ಧ ಅನಿರೀಕ್ಷಿತ ಸೋಲಿನಿಂದ ಆಘಾತ ಅನುಭವಿಸಿರುವ ಆತಿಥೇಯರು ಈ ಪಂದ್ಯದ ಮೂಲಕ ಗೆಲುವಿನ ಹಳಿಗೆ ಮರಳಲು ಕಾತರರಾಗಿದ್ದಾರೆ.

ಮೂರು ದಿನಗಳ ಹಿಂದೆ ಸಿಂಹಳೀಯರ ವಿರುದ್ಧ 233 ರನ್‌ಗಳ ಸವಾಲನ್ನು ಎದುರಿಸಿದ್ದ ಇಂಗ್ಲೆಂಡ್‌ 212 ರನ್‌ಗಳಿಗೆ ಪತನ ಕಂಡಿತ್ತು. ಮೊದಲು ಪಾಕಿಸ್ತಾನಕ್ಕೆ, ನಂತರ ಕೊನೆಯ ಪಂದ್ಯದಲ್ಲಿ ಶ್ರೀಲಂಕಾಕ್ಕೆ ಸೋತರೂ ಇಂಗ್ಲೆಂಡ್‌ ತಂಡದ  ಸೆಮಿಫೈನಲ್‌ ಬಾಗಿಲು ಇನ್ನೂ ತೆರೆದೇ ಇದೆ.

ಮೊದಲ ಬಾರಿ ವಿಶ್ವಕಪ್‌ ಗೆಲ್ಲಲು ಯತ್ನಿಸುತ್ತಿರುವ ಆತಿಥೇಯರು, ಗುಂಪಿನ ಹಂತದಲ್ಲಿ ಇನ್ನಷ್ಟು ಹಿನ್ನಡೆ ಕಾಣದಂತೆ ಎಚ್ಚರಿಕೆ ವಹಿಸಬೇಕಾದ ಅನಿವಾರ್ಯತೆಯಲ್ಲಿದ್ದಾರೆ. ಲೀಗ್‌ ಹಂತದಲ್ಲಿ ಉಳಿದ ಮೂರು ಪಂದ್ಯಗಳಲ್ಲಿ ಆಸ್ಟ್ರೇಲಿಯಾ, ಭಾರತ ಮತ್ತು ನ್ಯೂಜಿಲೆಂಡ್‌ ವಿರುದ್ಧ ಆಡಬೇಕಾಗಿದೆ. ವಿಶೇಷವೆಂದರೆ 1992ರ ನಂತರದ ವಿಶ್ವಕಪ್‌ ಟೂರ್ನಿಗಳಲ್ಲಿ ಈ ಮೂರು ತಂಡಗಳನ್ನು ಮಣಿಸಲು ಇಂಗ್ಲೆಂಡ್‌ಗೆ ಸಾಧ್ಯವಾಗಿಲ್ಲ.

2015ರ ವಿಶ್ವಕಪ್‌ನಲ್ಲಿ ಮೊದಲ ಸುತ್ತಿನಲ್ಲೇ ಹೊರಬಿದ್ದ ಇಂಗ್ಲೆಂಡ್‌, ನಂತರ ಚೇತರಿಸಿಕೊಂಡು ಆಕ್ರಮಣಕಾರಿ ಬ್ಯಾಟಿಂಗ್‌ನಿಂದಾಗಿ ಏಕದಿನ ಪಂದ್ಯಗಳ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದೆ. ಅತ್ಯಧಿಕ ಮೊತ್ತದವಿಶ್ವದಾಖಲೆಯೂ (6 ವಿಕೆಟ್‌ಗೆ 481) ಇಂಗ್ಲೆಂಡ್‌ ಹೆಸರಿನಲ್ಲಿದೆ. ಒಂದು ವರ್ಷದ ಹಿಂದೆ ಟ್ರೆಂಟ್‌ ಬ್ರಿಜ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧವೇ ಈ ಮೊತ್ತ ಗಳಿಸಿತ್ತು.

ಅನುಮಾನ: ಆದರೆ ಬ್ಯಾಟ್ಸ್‌ಮನ್‌ ಸ್ನೇಹಿಯಲ್ಲದ ಪಿಚ್‌ಗಳಲ್ಲಿ ಇಂಗ್ಲೆಂಡ್‌ ಸಾಮರ್ಥ್ಯದ ಬಗ್ಗೆ ಅನುಮಾನಗಳೆದ್ದಿವೆ. ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಸಿಕ್ಸರ್‌ ಎತ್ತಿ 100ನೇ ಪಂದ್ಯದ ಸಂಭ್ರಮ ಆಚರಿಸಿದ್ದ ಮೊಯಿನ್‌ ಅಲಿ, ಮರು ಎಸೆತದಲ್ಲೇ ಅಂಥದ್ದೇ ಹೊಡೆತಕ್ಕೆ ಕೈಹಾಕಿ ಕ್ಯಾಚ್‌ ಕೊಟ್ಟ ಪರಿಣಾಮ ಇಂಗ್ಲೆಂಡ್‌ ಸ್ಥಿತಿ (170ಕ್ಕೆ 6) ಪರದಾಡುವ ಹಂತಕ್ಕೆ ಹೋಗಿತ್ತು. 

‘ಕ್ರಿಕ್‌ ವಿಝ್‌’ ನಡೆಸಿದ ಅಧ್ಯಯನ ಕುತೂಹಲಕರವಾಗಿದೆ. 2017ರಲ್ಲಿ ಕಾರ್ಡಿಫ್‌ನ ಮಂದಗತಿಯ ಪಿಚ್‌ನಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್‌ ಪಂದ್ಯದಲ್ಲಿ ‌ಇಂಗ್ಲೆಂಡ್‌, ಪಾಕಿಸ್ತಾನಕ್ಕೆ ಶರಣಾಗಿತ್ತು. ನಂತರ, ಬ್ಯಾಟಿಂಗ್‌ಗೆ ಸವಾಲಾದ 11 ಪಿಚ್‌ಗಳಲ್ಲಿ ಆಡಿರುವ ಇಂಗ್ಲೆಂಡ್‌ ಐದರಲ್ಲಿ ಸೋತಿದೆ. ಆದರೆ ಬ್ಯಾಟ್ಸ್‌ಮನ್‌ ಸ್ನೇಹಿ 11 ಪಿಚ್‌ಗಳಲ್ಲಿ ಆಡಿದ ವೇಳೆ ಮಾರ್ಗನ್‌ ಬಳಗ 9ರಲ್ಲಿ ಜಯಗಳಿಸಿದೆ. ಮೊಣಕಾಲಿನ ಸ್ನಾಯುರಜ್ಜು ನೋವಿನ ಕಾರಣ ಕಳೆದ ಎರಡು ಪಂಧ್ಯಗಳಿಂದ ಜೇಸನ್‌ ರಾಯ್‌ ಆಡುತ್ತಿಲ್ಲ. ಇದು  ಇಂಗ್ಲೆಂಡ್‌ ಸಮಸ್ಯೆ ಹೆಚ್ಚಿಸಿದೆ. ಕಾಂಗರೂ ಪಡೆಯ ವಿರುದ್ಧವೂ ಅವರು ಕಣಕ್ಕಿಳಿಯುತ್ತಿಲ್ಲ.

‘ಸಾಕಷ್ಟು ಆಕ್ರಮಣಕಾರಿಯಾಗದಿರುವುದೇ ನಮ್ಮ ಸಮಸ್ಯೆಗೆ ಕಾರಣ’ ಎಂದು ಜೋಸ್‌ ಬಟ್ಲರ್‌, ಕಳೆದ ಪಂದ್ಯದ ಬಗ್ಗೆ ವಿಶ್ಲೇಷಿಸಿದ್ದಾರೆ. ‘ನಾವು ಬರೇ ಬೌಂಡರಿ, ಸಿಕ್ಸರ್ ಹೊಡೆಯಬೇಕೆಂದು ಅರ್ಥವಲ್ಲ. ಆದರೆ ಸ್ವಲ್ಪ ಆಕ್ರಮಣಕಾರಿಯಾಗಿ ಆಡಿ ಬೌಲರ್‌ಗಳ ಮೇಲೆ
ಒತ್ತಡ ಹಾಕಬೇಕಾಗಿತ್ತು’ ಎಂದಿದ್ದಾರೆ ಬಟ್ಲರ್‌.

ಇನ್ನೊಂದೆಡೆ ಆಸ್ಟ್ರೇಲಿಯಾ, ನಾಯಕ ಆ್ಯರನ್‌ ಫಿಂಚ್‌ ಮತ್ತು ಡೇವಿಡ್‌ ವಾರ್ನರ್‌ ಅವರ ಅಮೋಘ ಜೊತೆಯಾಟಗಳಿಂದ ಉತ್ತಮ ಮೊತ್ತ ಗಳಿಸುತ್ತಿದೆ. ಆರು ಪಂದ್ಯಗಳಲ್ಲಿ ಐದನ್ನು ಗೆದ್ದು ಎರಡನೇ ಸ್ಥಾನದಲ್ಲಿದೆ.

ಮಿಚೆಲ್‌ ಸ್ಟಾರ್ಕ್‌ ಈ ವಿಶ್ವಕಪ್‌ನಲ್ಲಿ 15 ವಿಕೆಟ್‌ಗಳೊಡನೆ, ಜಂಟಿ ಅಗ್ರಸ್ಥಾನದಲ್ಲಿದ್ದಾರೆ. ಜೋಫ್ರಾ ಅರ್ಚರ್‌ (ಇಂಗ್ಲೆಂಡ್‌) ಮತ್ತು ಮೊಹಮ್ಮದ್‌ ಅಮೀರ್‌ (ಪಾಕಿಸ್ತಾನ) ಕೂಡ ಇಷ್ಟೇ ವಿಕೆಟ್‌ ಪಡೆದಿದ್ದಾರೆ. ಆದರೆ ಎಡಗೈ ವೇಗಿ ಮಿಷೆಲ್‌ ಬಿಟ್ಟರೆ ಉಳಿದ ಬೌಲರ್‌ಗಳು ಅಂಥ ಪರಿಣಾಮಕಾರಿಯಾಗಿಲ್ಲ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !