ಬುಧವಾರ, ಡಿಸೆಂಬರ್ 2, 2020
23 °C
ವಿಶ್ವಕಪ್‌ ಕ್ರಿಕೆಟ್‌

ಪಾಕ್–ಅಫ್ಗಾನ್‌ ಪಂದ್ಯದಲ್ಲಿ ಅಭಿಮಾನಿಗಳ ಗುದ್ದಾಟ; ಆಗಸದಲ್ಲಿ ಬಲೂಚಿಸ್ತಾನದ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲೀಡ್ಸ್‌: ಶನಿವಾರ ಪಾಕಿಸ್ತಾನ–ಅಫ್ಗಾನಿಸ್ತಾನ ಪಂದ್ಯ ನಡೆಯುತ್ತಿದ್ದ ಹೆಡಿಂಗ್ಲೆ ಮೈದಾನದಲ್ಲಿ ಉಭಯ ರಾಷ್ಟ್ರಗಳ ಅಭಿಮಾನಿಗಳು ಕಿತ್ತಾಡಿಕೊಂಡಿರುವುದು ಹಾಗೂ ಮೈದಾನದ ಮೇಲಿನ ಆಗಸದಲ್ಲಿ ಬಲೂಚಿಸ್ತಾನವನ್ನು ಬೆಂಬಲಿಸಿದ ಬ್ಯಾನರ್‌ ಕಟ್ಟಿಕೊಂಡು ಹಾರಾಡಿದ ವಿಮಾನ ಚರ್ಚೆಗೆ ಗ್ರಾಸವಾಗಿದೆ. 

ಮೈದಾನದಲ್ಲಿದ್ದ ಕ್ರೀಡಾಭಿಮಾನಿಗಳು ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯುವಂತೆ ಹಾರಾಟ ನಡೆಸಿದ ವಿಮಾನ, ಬಾಲದಲ್ಲಿ ’ಜಸ್ಟಿಸ್‌ ಫಾರ್‌ ಬಲೂಚಿಸ್ತಾನ’ ಎಂಬ ಬರಹ ಹೊಂದಿದ ದೊಡ್ಡ ಬ್ಯಾನರ್‌ ಕಟ್ಟಿಕೊಂಡಿತ್ತು. ಮತ್ತೆ ಕೆಲವೇ ಸಮಯದಲ್ಲಿ ಕಾಣಿಸಿಕೊಂಡ ವಿಮಾನದ ಬಾಲಂಗೋಚಿ ’ಪಾಕಿಸ್ತಾನದಲ್ಲಿ ಹಠಾತ್‌ ಕಣ್ಮರೆಯಾಗುವುದನ್ನು ಕೊನೆ ಮಾಡಲು ಸಹಕರಿಸಿ(ಹೆಲ್ಪ್ ಎಂಡ್ ಡಿಸ್‌ಅಪಿಯರೆನ್ಸಸ್‌ ಇನ್ ಪಾಕಿಸ್ತಾನ್‌)’ ಎಂಬ ಸಂದೇಶವನ್ನು ಹೊತ್ತು ಹಾರಾಟ ನಡೆಸಿತ್ತು. 

ಈ ಘಟನೆ ಅಂತರರಾಷ್ಟ್ರೀಯ ಮಾಧ್ಯಮಗಳ ಗಮನ ಸೆಳೆಯಿತು, ಆದರೆ ಐಸಿಸಿಗೆ ಇದು ಇರುಸು ಮುರುಸು ತರಿಸಿದ ಸಂದರ್ಭವಾಯಿತು. 

’ಸ್ಥಳೀಯ ಪೊಲೀಸರೊಂದಿಗೆ ಈ ಕುರಿತು ಚರ್ಚಿಸಿದ್ದು, ದೇಶದಲ್ಲಿ ಇಂಥ ಘಟನೆಗಳು ಮರುಕಳಿಸದಂತೆ ತಡೆಯಲು ಸೂಕ್ತ ಕ್ರಮವಹಿಸುವಂತೆ ಕೋರಿದ್ದೇವೆ. ಐಸಿಸಿ ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ರಾಜಕೀಯ ಸಂಬಂಧಿತ ಸಂದೇಶಗಳನ್ನು ಮನ್ನಿಸುವುದಿಲ್ಲ’ ಎಂದು ಐಸಿಸಿ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಇಎಸ್‌ಪಿಎನ್‌ ಕ್ರಿಕ್‌ಇನ್ಫೊ ವರದಿ ಮಾಡಿದೆ. 

ಪಾಕಿಸ್ತಾನದ ಕಳೆದ ಎರಡು ಪಂದ್ಯಗಳಲ್ಲಿ ಮೈದಾನದಲ್ಲಿಯೇ ಖಲಿಸ್ತಾನದ ಪರವಾಗಿ ಘೋಷಣೆಗಳು ಕೇಳಿಬಂದವು ಹಾಗೂ ಬ್ಯಾನರ್‌ಗಳನ್ನೂ ಪ್ರದರ್ಶಿಸಲಾಗಿದೆ. ಮೈದಾನ ಪ್ರವೇಶದ ವೇಳೆ ಹಾಗೂ ಸ್ಥಳದ ಕಾರಣಗಳಿಂದ ಅಭಿಮಾನಿಗಳ ನಡುವಿನ ಗದ್ದಲವೂ ಜೋರಾಗಿಯೇ ನಡೆಯಿತು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು