ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2007ರ ವಿಶ್ವಕಪ್‌ : ಸಿಹಿ–ಕಹಿ ನೆನಪುಗಳೊಂದಿಗೆ ಮುಗಿದ ಟೂರ್ನಿ

Last Updated 20 ಮೇ 2019, 19:38 IST
ಅಕ್ಷರ ಗಾತ್ರ

2007ರ ವಿಶ್ವಕಪ್‌ ಟೂರ್ನಿ ಸಿಹಿ–ಕಹಿ ನೆನಪುಗಳೊಂದಿಗೆ ಮುಕ್ತಾಯವಾಯಿತು. ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡ ಮತ್ತೊಮ್ಮೆ ಪ್ರಾಬಲ್ಯ ಮೆರೆಯಿತು. ರಿಕಿ ಪಾಂಟಿಂಗ್‌ ಬಳಗವು ಟ್ರೋಫಿ ಗೆದ್ದು ಬೀಗಿತು. ಈ ಮೂಲಕ ‘ಹ್ಯಾಟ್ರಿಕ್‌’ ಸಾಧನೆಯನ್ನೂ ಮಾಡಿತು.

*ಭಾರತ ಮತ್ತು ಪಾಕಿಸ್ತಾನ ಗುಂ‍ಪು ಹಂತದಲ್ಲೇ ಹೊರಬಿದ್ದಿದ್ದರಿಂದ ಟೂರ್ನಿಯ ಜನಪ್ರಿಯತೆ ಕುಗ್ಗಿತ್ತು.

*ಪಾಕಿಸ್ತಾನ ತಂಡವು ಐರ್ಲೆಂಡ್‌ ಎದುರು ಆಘಾತ ಕಂಡ ಮರುದಿನ ಆ ತಂಡದ ಮುಖ್ಯ ಕೋಚ್‌ ಬಾಬ್‌ ವೂಲ್ಮರ್‌ ಹೋಟೆಲ್‌ ಕೋಣೆಯಲ್ಲಿ ಶಂಕಾಸ್ಪದವಾಗಿ ಸಾವನ್ನಪ್ಪಿದ್ದು ದೊಡ್ಡ ಸುದ್ದಿಯಾಗಿತ್ತು. ಅದು ಕೊಲೆ ಎಂದು ಹಲವರು ದೂರಿದ್ದರು.

*ಆ ಘಟನೆಯು ಟೂರ್ನಿಗೆ ಕಪ್ಪು ಚುಕ್ಕೆಯಾಗಿ ಪರಿಣಮಿಸಿತ್ತು.

*ಬ್ರಯಾನ್‌ ಲಾರಾ ಸಾರಥ್ಯದ ವೆಸ್ಟ್‌ ಇಂಡೀಸ್‌, ಸೂಪರ್‌–8 ಹಂತದಲ್ಲೇ ನಿರ್ಗಮಿಸಿತ್ತು. ಲಾರಾ ಪಾಲಿನ ಕೊನೆಯ ವಿಶ್ವಕಪ್‌ ಇದಾಗಿತ್ತು.

*ಬಾಂಗ್ಲಾದೇಶ ತಂಡವು ಸೂಪರ್‌–8 ಹಂತದಲ್ಲೂ ಅಚ್ಚರಿಯ ಫಲಿತಾಂಶಕ್ಕೆ ಕಾರಣವಾಗಿತ್ತು.

*ಗಯಾನದ ಜಾರ್ಜ್‌ಟೌನ್‌ನಲ್ಲಿ ಏಪ್ರಿಲ್‌ 7ರಂದು ನಡೆದಿದ್ದ ಹಣಾಹಣಿಯಲ್ಲಿ ಹಬೀಬುಲ್‌ ಬಷರ್‌ ಬಳಗವು ದಕ್ಷಿಣ ಆಫ್ರಿಕಾಕ್ಕೆ ಆಘಾತ ನೀಡಿತ್ತು.

*252ರನ್‌ಗಳ ಗುರಿ ಬೆನ್ನಟ್ಟಿದ್ದ ದಕ್ಷಿಣ ಆಫ್ರಿಕಾವು 48.4 ಓವರ್‌ಗಳಲ್ಲಿ 184ರನ್‌ಗಳಿಗೆ ಆಲೌಟ್‌ ಆಗಿತ್ತು.

*ನಾಯಕ ಗ್ರೇಮ್‌ ಸ್ಮಿತ್‌, ಎಬಿ ಡಿವಿಲಿಯರ್ಸ್‌, ಜಾಕ್‌ ಕಾಲಿಸ್‌, ಜಸ್ಟಿನ್‌ ಕೆಂಪ್‌, ಆ್ಯಸ್ವೆಲ್‌ ಪ್ರಿನ್ಸ್‌, ಮಾರ್ಕ್‌ ಬೌಷರ್‌ ಅವರಂತಹ ಘಟಾನುಘಟಿಗಳು ರನ್‌ ಗಳಿಸಲು ಪರದಾಡಿದ್ದರು.

*ಐರ್ಲೆಂಡ್‌ ತಂಡವು ಬಾಂಗ್ಲಾದೇಶವನ್ನು ಮಣಿಸಿದ್ದು ಟೂರ್ನಿಯ ಮತ್ತೊಂದು ಅಚ್ಚರಿ.

*ಏಪ್ರಿಲ್‌ 28ರಂದು ಬ್ರಿಜ್‌ಟೌನ್‌ನಲ್ಲಿ ನಡೆದಿದ್ದ ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ಎದುರಾಗಿದ್ದವು. 20 ಸಾವಿರ ಮಂದಿ ಪಂದ್ಯಕ್ಕೆ ಸಾಕ್ಷಿಯಾಗಿದ್ದರು.

*ಮಳೆಯ ಕಾರಣ ಈ ಹೋರಾಟವನ್ನು 38 ಓವರ್‌ಗಳಿಗೆ ಸೀಮಿತಗೊಳಿಸಲಾಗಿತ್ತು.

*ಮೊದಲು ಬ್ಯಾಟ್‌ ಮಾಡಿದ್ದ ಆಸ್ಟ್ರೇಲಿಯಾ 4 ವಿಕೆಟ್‌ಗೆ 281ರನ್‌ ದಾಖಲಿಸಿತು.

*ವಿಕೆಟ್‌ ಕೀಪರ್‌ ಆ್ಯಡಮ್‌ ಗಿಲ್‌ಕ್ರಿಸ್ಟ್‌, ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಉಣಬಡಿಸಿದ್ದರು. ಅವರು 104 ಎಸೆತಗಳಲ್ಲಿ 149ರನ್‌ ಗಳಿಸಿದ್ದರು.

*ಬೌಂಡರಿ (13) ಮತ್ತು ಸಿಕ್ಸರ್‌ಗಳ (8) ಮೂಲಕವೇ ಶತಕ ದಾಖಲಿಸಿದ್ದರು!

*ಮ್ಯಾಥ್ಯೂ ಹೇಡನ್‌ (38), ಪಾಂಟಿಂಗ್‌ (37) ಮತ್ತು ಆ್ಯಂಡ್ರ್ಯೂ ಸೈಮಂಡ್ಸ್‌ (ಔಟಾಗದೆ 23) ತಂಡದ ಮೊತ್ತ ಹೆಚ್ಚಿಸಲು ನೆರವಾಗಿದ್ದರು.

*36 ಓವರ್‌ಗಳಲ್ಲಿ 269ರನ್‌ಗಳ ಪರಿಷ್ಕೃತ ಗುರಿ ಪಡೆದಿದ್ದ ಶ್ರೀಲಂಕಾ 8 ವಿಕೆಟ್‌ಗೆ 215ರನ್‌ ಗಳಿಸಲಷ್ಟೇ ಶಕ್ತವಾಗಿತ್ತು.

*ಕುಮಾರ ಸಂಗಕ್ಕಾರ (54) ಮತ್ತು ಸನತ್‌ ಜಯಸೂರ್ಯ (63) ಅವರನ್ನು ಹೊರತುಪಡಿಸಿ ಉಳಿದವರು ದೊಡ್ಡ ಮೊತ್ತ ಪೇರಿಸಲು ವಿಫಲರಾದರು.

*33ನೇ ಓವರ್‌ನ ವೇಳೆ ಮಂದ ಬೆಳಕು ಕಾಡಿತ್ತು. ಇದರ ನಡುವೆಯೇ ಕೊನೆಯ ಮೂರು ಓವರ್‌ಗಳ ಆಟವೂ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT